Beijing Olympics 2008: ಚಿನ್ನಕ್ಕೆ ಗುರಿ ಇಟ್ಟಿದ್ದ ಬಿಂದ್ರಾ; ಭಾರತಕ್ಕೆ ಐತಿಹಾಸಿಕವಾಗಿತ್ತು ಬೀಜಿಂಗ್ ಒಲಿಂಪಿಕ್ಸ್

Beijing Olympics 2008: 1900 ರಲ್ಲಿ ಪ್ರಾರಂಭವಾದ ಒಲಿಂಪಿಕ್ ಕ್ರೀಡಾಕೂಟದಲ್ಲಿ 2008 ರ ಬೀಜಿಂಗ್ ಒಲಿಂಪಿಕ್ಸ್ ಭಾರತಕ್ಕೆ ಅತ್ಯಂತ ಯಶಸ್ವಿಯಾಗಿತ್ತು. ಇದರಲ್ಲಿ ಮೊದಲ ಬಾರಿಗೆ ಭಾರತೀಯ ಅಥ್ಲೀಟ್ ಒಬ್ಬರು ವೈಯಕ್ತಿಕ ಕ್ರೀಡೆಯಲ್ಲಿ ಚಿನ್ನದ ಪದಕ ಗೆದ್ದು ಇತಿಹಾಸ ನಿರ್ಮಿಸಿದ್ದರು. ಒಟ್ಟಾರೆ ಈ ಒಲಿಂಪಿಕ್ಸ್​ನಲ್ಲಿ ಭಾರತ 1 ಚಿನ್ನ ಹಾಗೂ 2 ಕಂಚಿನ ಪದಕ ಸೇರಿದಂತೆ ಒಟ್ಟು 3 ಪದಕಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿತ್ತು.

Beijing Olympics 2008: ಚಿನ್ನಕ್ಕೆ ಗುರಿ ಇಟ್ಟಿದ್ದ ಬಿಂದ್ರಾ; ಭಾರತಕ್ಕೆ ಐತಿಹಾಸಿಕವಾಗಿತ್ತು ಬೀಜಿಂಗ್ ಒಲಿಂಪಿಕ್ಸ್
ಅಭಿನವ್ ಬಿಂದ್ರಾ
Follow us
|

Updated on:Jul 25, 2024 | 3:55 PM

2016ರ ರಿಯೊ ಒಲಿಂಪಿಕ್ಸ್‌ನಲ್ಲಿ ನಿರಾಶಾದಾಯಕ ಪ್ರದರ್ಶನ ನೀಡಿದ್ದ ಭಾರತೀಯ ಅಥ್ಲೀಟ್‌ಗಳು 2020ರ ಟೋಕಿಯೊ ಒಲಿಂಪಿಕ್ಸ್‌ನಲ್ಲಿ 7 ಪದಕಗಳನ್ನು ಗೆದ್ದು ಇತಿಹಾಸ ನಿರ್ಮಿಸಿದ್ದರು. ಭಾರತಕ್ಕೆ ಇದುವರೆಗಿನ ಅತ್ಯಂತ ಯಶಸ್ವಿ ಒಲಿಂಪಿಕ್ಸ್ ಆಗಿದೆ. ಇದೀಗ ನಡೆಯುತ್ತಿರುವ 33ನೇ ಆವೃತ್ತಿಯ ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ಪದಕ ಭೇಟೆಗಾಗಿ ಭಾರತದಿಂದ ಒಟ್ಟು 117 ಸ್ಪರ್ಧಿಗಳು ಕ್ರೀಡಾ ಗ್ರಾಮಕ್ಕೆ ತೆರಳಿದ್ದಾರೆ. ಜುಲೈ 26ರಿಂದ ಆರಂಭವಾಗಲಿರುವ ಈ ಕೂಟದಲ್ಲಿ ಭಾರತೀಯ ಆಟಗಾರರು ಹೊಸ ದಾಖಲೆ ನಿರ್ಮಿಸಲಿ ಎಂಬುದು ಇಡೀ ದೇಶದ ಆಶಯವಾಗಿದೆ. ಆದರೆ ಇದಕ್ಕೂ ಮುನ್ನ ಭಾರತಕ್ಕೆ ಹಲವು ರೀತಿಯಲ್ಲಿ ಐತಿಹಾಸಿಕವಾಗಿದ್ದ 2008ರ ಬೀಜಿಂಗ್ ಒಲಿಂಪಿಕ್ಸ್ ಬಗ್ಗೆ ತಿಳಿದುಕೊಳ್ಳೋಣ.

ಭಾರತಕ್ಕೆ ಐತಿಹಾಸಿಕವಾಗಿದ್ದ ಬೀಜಿಂಗ್ ಒಲಿಂಪಿಕ್ಸ್

ಬೀಜಿಂಗ್‌ನಲ್ಲಿ ಭಾರತದ ಅಥ್ಲೀಟ್‌ಗಳು ಐತಿಹಾಸಿಕ ಪ್ರದರ್ಶನ ನೀಡಿದ್ದರು. 1900 ರಲ್ಲಿ ಪ್ರಾರಂಭವಾದ ಒಲಿಂಪಿಕ್ ಕ್ರೀಡಾಕೂಟದಲ್ಲಿ 2008 ರ ಬೀಜಿಂಗ್ ಒಲಿಂಪಿಕ್ಸ್ ಭಾರತಕ್ಕೆ ಅತ್ಯಂತ ಯಶಸ್ವಿಯಾಗಿತ್ತು. ಇದರಲ್ಲಿ ಮೊದಲ ಬಾರಿಗೆ ಭಾರತೀಯ ಅಥ್ಲೀಟ್ ಒಬ್ಬರು ವೈಯಕ್ತಿಕ ಕ್ರೀಡೆಯಲ್ಲಿ ಚಿನ್ನದ ಪದಕ ಗೆದ್ದಿದ್ದರು. ಇದಕ್ಕೂ ಮೊದಲು, ರಾಜ್ಯವರ್ಧನ್ ಸಿಂಗ್ ರಾಥೋಡ್ 2004 ಅಥೆನ್ಸ್ ಒಲಿಂಪಿಕ್ಸ್‌ನಲ್ಲಿ ವೈಯಕ್ತಿಕ ಕ್ರೀಡೆಯಲ್ಲಿ ಬೆಳ್ಳಿ ಪದಕ ಗೆದ್ದಿದ್ದರು ಮತ್ತು ನಾರ್ಮನ್ ಪ್ರಿಚರ್ಡ್ 1900 ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ವೈಯಕ್ತಿಕ ಕ್ರೀಡೆಯಲ್ಲಿ ಬೆಳ್ಳಿ ಪದಕ ಗೆದ್ದಿದ್ದರು. ಇದಲ್ಲದೇ 1952ರ ಹೆಲ್ಸಿಂಕಿ ಒಲಿಂಪಿಕ್ಸ್‌ ನಂತರ ಸುಶೀಲ್‌ ಕುಮಾರ್‌ ಮೊದಲ ಬಾರಿಗೆ ಕುಸ್ತಿಯಲ್ಲಿ ಪದಕ ಗೆದ್ದಿದ್ದರು.

ವಿಜೇಂದರ್ ಸಿಂಗ್ ಬಾಕ್ಸಿಂಗ್‌ನಲ್ಲಿ ಕಂಚಿನ ಪದಕ ಗೆದ್ದು ಇತಿಹಾಸ ನಿರ್ಮಿಸಿದ್ದರು. ಬಾಕ್ಸಿಂಗ್‌ನಲ್ಲಿ ಪದಕ ಗೆದ್ದ ಭಾರತದ ಮೊದಲ ಕ್ರೀಡಾಪಟು. ಅಷ್ಟೇ ಅಲ್ಲ, ಭಾರತ ತನ್ನ ಒಲಿಂಪಿಕ್ ಇತಿಹಾಸದಲ್ಲಿ 1 ಚಿನ್ನ ಮತ್ತು 2 ಕಂಚಿನೊಂದಿಗೆ ಅತಿ ಹೆಚ್ಚು ಪದಕ ಗೆದ್ದ ದಾಖಲೆಯನ್ನೂ ಮಾಡಿತ್ತು. ಇದಕ್ಕೂ ಮುನ್ನ ಭಾರತ 1900 ಮತ್ತು 1952ರಲ್ಲಿ ತಲಾ ಎರಡು ಪದಕಗಳನ್ನು ಗೆದ್ದಿತ್ತು. ಆದರೆ, 2012ರ ಲಂಡನ್ ಒಲಿಂಪಿಕ್ಸ್‌ನಲ್ಲೂ ಈ ದಾಖಲೆ ಮುರಿದಿದ್ದು, ಇದರಲ್ಲಿ ಭಾರತೀಯ ಅಥ್ಲೀಟ್‌ಗಳು 2 ಬೆಳ್ಳಿ ಮತ್ತು 4 ಕಂಚು ಸೇರಿದಂತೆ ಒಟ್ಟು 6 ಪದಕಗಳನ್ನು ಗೆದ್ದಿದ್ದಾರೆ.

ಇತಿಹಾಸ ನಿರ್ಮಿಸಿದ್ದ ಅಭಿನವ್ ಬಿಂದ್ರಾ

ಅಷ್ಟಕ್ಕೂ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಭಾರತದ ಚಿನ್ನದ ಪದಕದ ಬರವನ್ನು ನೀಗಿಸಿದ್ದ ಅಥ್ಲೀಟ್‌ ಎಂದರೆ ಅದು ಅಭಿನವ್ ಬಿಂದ್ರಾ. 10 ಮೀಟರ್ ಏರ್ ರೈಫಲ್​ನಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಬಿಂದ್ರಾ, ಭಾರತದ ಪದಕದ ಖಾತೆ ತೆರೆದಿದ್ದರು. ಈ ಮೂಲಕ ಕೊನೆಗೂ 28 ವರ್ಷಗಳ ನಂತರ ಭಾರತಕ್ಕೆ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ನೋಡುವ ಭಾಗ್ಯ ಸಿಕ್ಕಿತ್ತು. ಇದಕ್ಕೂ ಮುನ್ನ ಭಾರತ ಹಾಕಿ ತಂಡ 1980ರಲ್ಲಿ ಚಿನ್ನದ ಪದಕ ಜಯಿಸಿತ್ತು.

ಪದಕದ ಸಮೀಪದಲ್ಲಿ ಎಡವಿದ್ದ ಕೆಲವರು

ಅಭಿನವ್ ಬಿಂದ್ರಾ, ಸುಶೀಲ್ ಕುಮಾರ್ ಮತ್ತು ವಿಜೇಂದರ್ ಸಿಂಗ್ ಈ ಮೂವರು ಅಥ್ಲೀಟ್‌ಗಳು ಬೀಜಿಂಗ್ ಒಲಿಂಪಿಕ್ಸ್‌ನ ಪೋಸ್ಟರ್ ಬಾಯ್ಸ್ ಆಗಿ ಸಾಕಷ್ಟು ಸುದ್ದಿ ಮಾಡಿದ್ದರು. ಆದರೆ, ಕೆಲವು ಅಥ್ಲೀಟ್‌ಗಳು ಪದಕದ ಸಮೀಪ ಬಂದರೂ ಅದನ್ನು ಸಾಧಿಸಲು ಸಾಧ್ಯವಾಗಲಿಲ್ಲ. ಡೋಲಾ ಬ್ಯಾನರ್ಜಿ, ಬೊಂಬೆಲಾ ದೇವಿ ಮತ್ತು ಪ್ರಣಿತಾ ವರ್ಧನೇನಿ ಅವರನ್ನೊಳಗೊಂಡ ಭಾರತದ ಆರ್ಚರಿ ತಂಡವು ಕ್ವಾರ್ಟರ್‌ಫೈನಲ್‌ಗೆ ತಲುಪಿತ್ತು, ಆದರೆ ಸೆಮಿಫೈನಲ್‌ಗೆ ಪ್ರವೇಶಿಸಲು ಸಾಧ್ಯವಾಗಲಿಲ್ಲ. ಇವರಲ್ಲದೆ, ಗೀತಾ ಮಂಜಿತ್ ಕೌರ್, ಸೀನಿ ಜೋಸ್, ಚಿತ್ರಾ ಸೋಮನ್ ಮತ್ತು ಮಂದೀಪ್ ಕೌರ್ ಅವರು 400 ಮೀಟರ್ಸ್ ಮತ್ತು ರಿಲೇ ಓಟದ ಸೆಮಿಫೈನಲ್‌ಗೆ ಅರ್ಹತೆ ಪಡೆಯಲು ಸಾಧ್ಯವಾಗಲಿಲ್ಲ.

ಕ್ವಾರ್ಟರ್ ಫೈನಲ್​ನಲ್ಲೇ ಪಯಣ ಅಂತ್ಯ

ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಭಾರತದ ಹಲವು ಅಥ್ಲೀಟ್‌ಗಳ ಪಯಣ ಕ್ವಾರ್ಟರ್‌ಫೈನಲ್ ಪಂದ್ಯದಲ್ಲೇ ಅಂತ್ಯಗೊಂಡಿತ್ತು. ಭಾರತದ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಕ್ವಾರ್ಟರ್ ಫೈನಲ್‌ವರೆಗೂ ಅದ್ಭುತ ಪ್ರದರ್ಶನ ನೀಡಿದ್ದರು. ಕ್ವಾರ್ಟರ್‌ಫೈನಲ್‌ನಲ್ಲಿಯೂ ಸಹ ಅವರು ಉತ್ತಮ ಆರಂಭ ಮಾಡಿದರು, ಆದರೂ ಅವರು ಇಂಡೋನೇಷ್ಯಾದ ಮರಿಯಾ ಕ್ರಿಸ್ಟಿನ್ ವಿರುದ್ಧ ಸೋತರು. ಇವರಲ್ಲದೆ, ಬಾಕ್ಸರ್‌ಗಳಾದ ಜಿತೇಂದ್ರ ಕುಮಾರ್ ಮತ್ತು ಅಖಿಲ್ ಕುಮಾರ್, ಶೂಟರ್ ಗಗನ್ ನಾರಂಗ್ ಮತ್ತು ಟೆನಿಸ್ ಜೋಡಿ ಮಹೇಶ್ ಭೂಪತಿ ಮತ್ತು ಲಿಯಾಂಡರ್ ಪೇಸ್ ಕೂಡ ಕ್ವಾರ್ಟರ್ ಫೈನಲ್‌ನಲ್ಲಿ ಸೋಲನುಭವಿಸಿದರು.

ಹಾಕಿಗೆ ಕೆಟ್ಟ ಒಲಿಂಪಿಕ್ಸ್

ಭಾರತ ಹಾಕಿ ತಂಡ ಒಲಿಂಪಿಕ್ಸ್‌ನಲ್ಲಿ ಪ್ರಾಬಲ್ಯ ಮೆರೆದಿದೆ. ಹಾಕಿ ತಂಡವು ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಗರಿಷ್ಠ ಸಂಖ್ಯೆಯ ಪದಕಗಳನ್ನು ಗೆದ್ದುಕೊಟ್ಟಿದೆ. ಭಾರತೀಯ ಹಾಕಿ ತಂಡವು ಇದುವರೆಗೆ 8 ಚಿನ್ನ ಸೇರಿದಂತೆ ಒಟ್ಟು 12 ಪದಕಗಳನ್ನು ಗೆದ್ದಿದೆ, ಆದರೆ ಬೀಜಿಂಗ್ ಒಲಿಂಪಿಕ್ಸ್​ನಲ್ಲಿ ತಂಡವು ಅತ್ಯಂತ ಕಳಪೆ ಪ್ರದರ್ಶನ ನೀಡಿತ್ತು. 80 ವರ್ಷಗಳಲ್ಲಿ ಮೊದಲ ಬಾರಿಗೆ ಭಾರತ ತಂಡ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಲು ಸಾಧ್ಯವಾಗಲಿಲ್ಲ.

ಇದಲ್ಲದೇ ವೇಟ್ ಲಿಫ್ಟಿಂಗ್​ನಲ್ಲೂ ಭಾರತ ಹಿನ್ನಡೆ ಅನುಭವಿಸಿತ್ತು. 2006 ರ ಕಾಮನ್‌ವೆಲ್ತ್ ಕ್ರೀಡಾಕೂಟದ ನಂತರ, ವೇಟ್‌ಲಿಫ್ಟಿಂಗ್ ಅಸೋಸಿಯೇಷನ್ ​​ಭಾರತೀಯ ವೇಟ್‌ಲಿಫ್ಟರ್ ಮೋನಿಕಾ ದೇವಿ ಮೇಲೆ ಡೋಪಿಂಗ್ ಆರೋಪ ಹೇರಿ, ಎರಡು ವರ್ಷಗಳ ಕಾಲ ಅವರನ್ನು ನಿಷೇಧಿಸಿತು. ಇದರಿಂದಾಗಿ ಆ ಬಾರಿಯ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಲು ಅವರಿಗೆ ಸಾಧ್ಯವಾಗಲಿಲ್ಲ. ಆಗಸ್ಟ್ 9, 2008 ರಂದು, ಅವರು ಈ ಆರೋಪದಲ್ಲಿ ಕ್ಲೀನ್ ಚೀಟ್ ಪಡೆದರು, ಆದರೆ ಆ ಹೊತ್ತಿಗೆ ವೇಟ್ ಲಿಫ್ಟಿಂಗ್ ಸ್ಪರ್ಧೆಯು ಮುಗಿದಿತ್ತು.

Published On - 3:51 pm, Thu, 25 July 24