ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಎರಡು ಕಂಚಿನ ಪದಕ ಗೆದ್ದಿರುವ ಶೂಟರ್ ಮನು ಭಾಕರ್ ಅವರು ಒಲಿಂಪಿಕ್ ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ಭಾರತದ ಧ್ವಜಧಾರಿಯಾಗಿ ಆಯ್ಕೆಯಾಗಿದ್ದಾರೆ. ಸಮಾರೋಪ ಸಮಾರಂಭ ಆಗಸ್ಟ್ 11 ರಂದು ಫ್ರೆಂಚ್ ರಾಜಧಾನಿಯಲ್ಲಿ ನಡೆಯಲಿದೆ. ಮನು ಒಂದೇ ಒಲಿಂಪಿಕ್ಸ್‌ನಲ್ಲಿ ಎರಡು ಕಂಚಿನ ಪದಕ ಗೆದ್ದು ಇತಿಹಾಸ ನಿರ್ಮಿಸಿದ್ದು, ಸ್ವಾತಂತ್ರ್ಯಾ ನಂತರ ಭಾರತದ ಕ್ರೀಡಾಪಟುವೊಬ್ಬರು ಮೊದಲ ಬಾರಿಗೆ ಒಲಿಂಪಿಕ್ಸ್‌ನಲ್ಲಿ ಎರಡು ಪದಕ ಗೆದ್ದ ದಾಖಲೆಯನ್ನು ನಿರ್ಮಿಸಿದ್ದಾರೆ.
ಹರಿಯಾಣದ 22 ವರ್ಷದ ಮನು ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ಭಾರತದ ಪದಕ ಖಾತೆ ತೆರೆದಿದ್ದರು. ಇದರ ನಂತರ, ಅವರು ಸರಬ್ಜಿತ್ ಸಿಂಗ್ ಅವರೊಂದಿಗೆ 10 ಮೀಟರ್ ಏರ್ ಪಿಸ್ತೂಲ್ ಮಿಶ್ರ ತಂಡ ಸ್ಪರ್ಧೆಯಲ್ಲಿ ಎರಡನೇ ಕಂಚಿನ ಪದಕಕ್ಕೆ ಕೊರಳೊಡ್ಡಿದ್ದರು. ಆ ಬಳಿಕ ನಡೆದ ಮಹಿಳೆಯರ 25 ಮೀಟರ್ ಪಿಸ್ತೂಲ್ ಸ್ಪರ್ಧೆಯಲ್ಲೂ ಮನುಗೆ ಪದಕ ಗೆಲ್ಲುವ ಅವಕಾಶವಿತ್ತು. ಆದರೆ ಕೂದಲೆಳೆ ಅಂತರದಲ್ಲಿ ಪದಕದಿಂದ ವಂಚಿತರಾಗಿ, ನಾಲ್ಕನೇ ಸ್ಥಾನ ಪಡೆಯುವ ಮೂಲಕ ಸ್ಪರ್ಧೆ ಮುಗಿಸಿದರು.
ಮನು ಭಾಕರ್ ಅವರು ಧ್ವಜಧಾರಿಯಾಗಿ ಆಯ್ಕೆಯಾಗಿರುವ ಬಗ್ಗೆ ಮಾಹಿತಿ ನೀಡಿರುವ IOA ಅಧ್ಯಕ್ಷೆ ಡಾ.ಪಿ.ಟಿ.ಉಷಾ ಮತ್ತು ಮುಖ್ಯ ತಂಡದ ಪ್ರತಿನಿಧಿ ಗಗನ್ ನಾರಂಗ್, ಸಮಾರೋಪ ಸಮಾರಂಭದಲ್ಲಿ ಪಿಸ್ತೂಲ್ ಶೂಟರ್ ಮನು ಭಾಕರ್ ಭಾರತದ ಧ್ವಜಧಾರಿಯಾಗಲಿದ್ದಾರೆ ಎಂದು ಘೋಷಿಸಿದ್ದಾರೆ. ಅಲ್ಲದೆ ಪುರುಷ ಧ್ವಜಧಾರಿಯನ್ನು ಆ ನಂತರ ಆಯ್ಕೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಇನ್ನು ನಾಳೆ ಅಂದರೆ ಆಗಸ್ಟ್ 6 ರಂದು ಒಲಿಂಪಿಕ್ಸ್‌ನಲ್ಲಿ ಭಾರತ ಹಲವು ಸ್ಪರ್ಧೆಗಿಳಿಯುತ್ತಿದ್ದು, ಭಾರತಕ್ಕೆ ಚಿನ್ನದ ಭರವಸೆಯಾಗಿರುವ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಕೂಡ ನಾಳೆ ಅಖಾಡಕ್ಕಿಳಿಯುತ್ತಿದ್ದಾರೆ. ಇವರಲ್ಲದೇ ವಿನೇಶ್ ಫೋಗಟ್ ಕೂಡ ಕುಸ್ತಿ ಅಂಗಳಕ್ಕಿಳಿಯಲ್ಲಿದ್ದಾರೆ. ವಿನೇಶ್ ಫೋಗಟ್ ಕುಸ್ತಿಯಲ್ಲಿ ಮಹಿಳೆಯರ ಫ್ರೀಸ್ಟೈಲ್ 50 ಕೆಜಿ ವಿಭಾಗದಲ್ಲಿ 16 ರ ಸುತ್ತಿನಲ್ಲಿ ಸ್ಪರ್ಧಿಸಲಿದ್ದು, ಈ ಪಂದ್ಯ ಮಧ್ಯಾಹ್ನ 3:00 ಗಂಟೆಗೆ ಆರಂಭವಾಗಲಿದೆ. ಹಾಗೆಯೇ ಮಧ್ಯಾಹ್ನ 3:20ಕ್ಕೆ ಸ್ಟಾರ್ ಆಟಗಾರ ನೀರಜ್ ಚೋಪ್ರಾ ಅವರು ಅಥ್ಲೆಟಿಕ್ಸ್‌ನಲ್ಲಿ ಪುರುಷರ ಜಾವೆಲಿನ್ ಥ್ರೋ ಅರ್ಹತೆ ಸುತ್ತಿನಲ್ಲಿ ಭಾಗವಹಿಸಲಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:25 pm, Mon, 5 August 24