Paralympics 2024: ಇಂದಿನಿಂದ ಪ್ಯಾರಾಲಿಂಪಿಕ್ಸ್ ಶುರು
Paris Paralympics 2024: ಟೋಕಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ ಕಣಕ್ಕಿಳಿದಿದ್ದ ಭಾರತೀಯರು ಒಟ್ಟು 19 ಪದಕಗಳನ್ನು ಗೆದ್ದಿದ್ದರು. ಇದೀಗ ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತದ ಒಟ್ಟು 84 ಕ್ರೀಡಾಪಟುಗಳು ಕಣಕ್ಕಿಳಿಯುತ್ತಿದ್ದಾರೆ. ಈ ಕ್ರೀಡಾಳುಗಳು ಒಟ್ಟು 12 ಕ್ರೀಡೆಗಳಲ್ಲಿ ಸ್ಪರ್ಧಿಸುತ್ತಿದ್ದು, ಹೀಗಾಗಿ ಕಳೆದ ಬಾರಿಗಿಂತ ಈ ಸಲ ಹೆಚ್ಚಿನ ಪದಕಗಳನ್ನು ನಿರೀಕ್ಷಿಸಲಾಗುತ್ತಿದೆ.
ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಆತಿಥ್ಯವಹಿಸಿದ್ದ ಪ್ಯಾರಿಸ್ನಲ್ಲಿ ಇಂದಿನಿಂದ 17ನೇ ಆವೃತ್ತಿಯ ಪ್ಯಾರಾಲಿಂಪಿಕ್ಸ್ ಶುರುವಾಗಲಿದೆ. ಬುಧವಾರದಿಂದ (ಆ.28) ಆರಂಭವಾಗಲಿರುವ ವಿಕಲಚೇತನರ ಈ ಕ್ರೀಡಾಕೂಟವು ಸೆಪ್ಟೆಂಬರ್ 8 ರವರೆಗೆ ನಡೆಯಲಿದೆ. ಈ ಬಾರಿಯ ಕ್ರೀಡಾಕೂಟದಲ್ಲಿ 184 ದೇಶಗಳ 4400 ಕ್ಕೂ ಹೆಚ್ಚಿನ ಕ್ರೀಡಾಳುಗಳು ಭಾಗವಹಿಸಲಿದ್ದಾರೆ. ಇವರಲ್ಲಿ ಭಾರತದ 84 ಕ್ರೀಡಾಪಟುಗಳಿರುವುದು ವಿಶೇಷ.
2020 ರಲ್ಲಿ ನಡೆದ ಟೋಕಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತದ 54 ಕ್ರೀಡಾಪಟುಗಳು ಭಾಗವಹಿಸಿದ್ದರು. ಈ ವೇಳೆ 5 ಚಿನ್ನದ ಪದಕ, 8 ಬೆಳ್ಳಿ ಪದಕ ಮತ್ತು 6 ಕಂಚಿನ ಪದಕ ಗೆಲ್ಲುವಲ್ಲಿ ಭಾರತೀಯರು ಯಶಸ್ವಿಯಾಗಿದ್ದರು. ಈ ಬಾರಿ 84 ಕ್ರೀಡಾಪಟುಗಳು ಭಾಗವಹಿಸುತ್ತಿರುವುದರಿಂದ ಭಾರತವು ಹೆಚ್ಚಿನ ಪದಕಗಳ ನಿರೀಕ್ಷೆಯಲ್ಲಿದೆ.
12 ಕ್ರೀಡೆಗಳಲ್ಲಿ ಸ್ಪರ್ಧೆ:
84 ಭಾರತೀಯ ಸ್ಪರ್ಧಿಗಳು ಈ ಬಾರಿ 12 ಕ್ರೀಡೆಗಳಲ್ಲಿ ಸ್ಪರ್ಧಿಸಲಿದ್ದಾರೆ. ಇದರಲ್ಲಿ 38 ಸ್ಪರ್ಧಿಗಳು ಅಥ್ಲೆಟಿಕ್ಸ್ನಲ್ಲಿ ಕಣಕ್ಕಿಳಿಯಲಿರುವುದು ವಿಶೇಷ. ಇದಲ್ಲದೆ, ಆರ್ಚರಿ, ಈಜು, ಟೇಬಲ್ ಟೆನಿಸ್, ಬ್ಯಾಡ್ಮಿಂಟನ್, ಸೈಕ್ಲಿಂಗ್, ಪವರ್‌ಲಿಫ್ಟಿಂಗ್, ರೋಯಿಂಗ್, ಶೂಟಿಂಗ್, ಜುಡೋ, ಪ್ಯಾರಾಕೆನೋಯಿಂಗ್, ಟೆಕ್ವಾಂಡೋ ಕ್ರೀಡೆಗಳಲ್ಲಿ ಭಾರತೀಯರು ಪದಕಕ್ಕಾಗಿ ಪೈಪೋಟಿ ನಡೆಸಲಿದ್ದಾರೆ.
ಉದ್ಘಾಟನಾ ಸಮಾರಂಭ ಎಷ್ಟು ಗಂಟೆಗೆ?
ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟವು ಆಗಸ್ಟ್ 28 ರ ಬುಧವಾರ ರಾತ್ರಿ 11:30 PM IST ಗೆ ಶುರುವಾಗಲಿದೆ.
ಪ್ಯಾರಾಲಿಂಪಿಕ್ಸ್ ಲೈವ್ ವೀಕ್ಷಿಸುವುದು ಹೇಗೆ?
ಈ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದ ನೇರ ಪ್ರಸಾರವನ್ನು ಸ್ಪೋರ್ಟ್ಸ್ 18 ಚಾನೆಲ್ನಲ್ಲಿ ವೀಕ್ಷಿಸಬಹುದು. ಹಾಗೆಯೇ ಜಿಯೋ ಸಿನಿಮಾ ಆ್ಯಪ್ನಲ್ಲೂ ಉಚಿತ ಲೈವ್ ಸ್ಟ್ರೀಮಿಂಗ್ ಇರಲಿದೆ.
19 ಪದಕ ಗೆದ್ದಿದ್ದ ಭಾರತೀಯರು:
ಟೋಕಿಯೋದಲ್ಲಿ ನಡೆದ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತೀಯರು ಒಟ್ಟು 19 ಪದಕಗಳನ್ನು ಗೆಲ್ಲುವ ಮೂಲಕ ಅಂಕ ಪಟ್ಟಿಯಲ್ಲಿ 24ನೇ ಅಲಂಕರಿಸಿದ್ದರು. ಟೋಕಿಯೋದಲ್ಲಿ ಭಾರತದ ಕೀರ್ತಿ ಪಾತಾಕೆಯನ್ನು ಮುಗಿಲೆತ್ತರಕ್ಕೇರಿಸಿದ ಕ್ರೀಡಾಪಟುಗಳ ಸಂಪೂರ್ಣ ಪಟ್ಟಿ ಇಲ್ಲಿದೆ..
ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತೀಯ ಪದಕ ವಿಜೇತರು | ||
ಹೆಸರು | ಕ್ರೀಡೆ | ಪದಕ |
ಭಾವಿನಾ ಪಟೇಲ್ | ಮಹಿಳೆಯರ ಸಿಂಗಲ್ಸ್ ಟೇಬಲ್ ಟೆನ್ನಿಸ್ ವರ್ಗ 4 ವಿಭಾಗ | ಬೆಳ್ಳಿ |
ನಿಶಾದ್ ಕುಮಾರ್ | ಪುರುಷರ ಎತ್ತರ ಜಿಗಿತ T47 | ಬೆಳ್ಳಿ |
ಅವನಿ ಲೇಖನಾ | ಮಹಿಳೆಯರ 10ಮೀ ಏರ್ ರೈಫಲ್ ಶೂಟಿಂಗ್/ 50ಮೀ ರೈಫಲ್ ಶೂಟಿಂಗ್ | ಚಿನ್ನ, ಕಂಚು |
ದೇವೇಂದ್ರ ಝಝಾರಿಯಾ | ಪುರುಷರ ಜಾವೆಲಿನ್ ಎಸೆತ F46 | ಬೆಳ್ಳಿ |
ಸುಂದರ್ ಸಿಂಗ್ ಗುರ್ಜರ್ | ಪುರುಷರ ಜಾವೆಲಿನ್ ಎಸೆತ F46 | ಕಂಚು |
ಯೋಗೇಶ್ ಕಥುನಿಯಾ | ಪುರುಷರ ಡಿಸ್ಕಸ್ ಥ್ರೋ F56 | ಬೆಳ್ಳಿ |
ಸುಮಿತ್ ಅಂತಿಲ್ | ಪುರುಷರ ಜಾವೆಲಿನ್ ಎಸೆತ F64 | ಚಿನ್ನ |
ಸಿಂಗ್ರಾಜ್ ಅಧಾನ | ಪುರುಷರ 10ಮೀ ಏರ್ ಪಿಸ್ತೂಲ್ ಶೂಟಿಂಗ್ SH1 | ಕಂಚು |
ಮರಿಯಪ್ಪನ್ ತಂಗವೇಲು | ಪುರುಷರ ಎತ್ತರ ಜಿಗಿತ T42 | ಬೆಳ್ಳಿ |
ಶರದ್ ಕುಮಾರ್ | ಪುರುಷರ ಎತ್ತರ ಜಿಗಿತ T42 | ಕಂಚು |
ಪ್ರವೀಣ್ ಕುಮಾರ್ | ಪುರುಷರ ಎತ್ತರ ಜಿಗಿತ T64 | ಬೆಳ್ಳಿ |
ಕೃಷ್ಣ ನಗಾರ್ | ಪುರುಷರ ಸಿಂಗಲ್ಸ್ ಬ್ಯಾಡ್ಮಿಂಟನ್ SH6 | ಚಿನ್ನ |
ಹರ್ವಿಂದರ್ ಸಿಂಗ್ | ಪುರುಷರ ವೈಯಕ್ತಿಕ ರಿಕರ್ವ್ -ಬಿಲ್ಲುಗಾರಿಕೆ | ಕಂಚು |
ಮನೀಶ್ ನರ್ವಾಲ್ | ಪುರುಷರ 50 ಮೀ ಪಿಸ್ತೂಲ್ SH1 | ಚಿನ್ನ |
ಸಿಂಗ್ರಾಜ್ ಅಧಾನ | ಪುರುಷರ 50 ಮೀ ಪಿಸ್ತೂಲ್ SH1 | ಬೆಳ್ಳಿ |
ಪ್ರಮೋದ್ ಭಗತ್ | ಪುರುಷರ ಸಿಂಗಲ್ಸ್ ಬ್ಯಾಡ್ಮಿಂಟನ್ SL3 | ಚಿನ್ನ |
ಮನೋಜ್ ಸರ್ಕಾರ್ | ಪುರುಷರ ಸಿಂಗಲ್ಸ್ ಬ್ಯಾಡ್ಮಿಂಟನ್ SL3 | ಕಂಚು |
ಸುಹಾಸ್ ಯತಿರಾಜ್ | ಪುರುಷರ ಸಿಂಗಲ್ಸ್ ಬ್ಯಾಡ್ಮಿಂಟನ್ SL4 | ಬೆಳ್ಳಿ |