AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

D Gukesh: ಗುಕೇಶ್ ಸಾಧನೆಯನ್ನು ಕೊಂಡಾಡಿದ ಪ್ರಧಾನಿ ಮೋದಿ, ರಾಷ್ಟ್ರಪತಿ ದ್ರೌಪದಿ ಮುರ್ಮು

D Gukesh: ಭಾರತದ ಗ್ರ್ಯಾಂಡ್‌ಮಾಸ್ಟರ್ ಡಿ. ಗುಕೇಶ್ ಅವರು ಸಿಂಗಾಪುರದಲ್ಲಿ ನಡೆದ ವಿಶ್ವ ಚೆಸ್ ಚಾಂಪಿಯನ್‌ಶಿಪ್‌ನಲ್ಲಿ ಚೀನಾದ ಡಿಂಗ್ ಲಿರೆನ್ ಅವರನ್ನು 7.5-6.5 ಪಾಯಿಂಟ್‌ಗಳ ಅಂತರದಿಂದ ಮಣಿಸಿ ಪ್ರಶಸ್ತಿ ಗೆದ್ದುಕೊಂಡಿದ್ದಾರೆ. ಈ ಮೂಲಕ ವಿಶ್ವ ಚಾಂಪಿಯನ್ ಆದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇದೀಗ ಈ ಸಾಧನೆ ಮಾಡಿದ ಗುಕೇಶ್​ರನ್ನು ರಾಷ್ಟ್ರಪತಿ ಮತ್ತು ಪ್ರಧಾನಮಂತ್ರಿಯವರು ಅಭಿನಂದಿಸಿದ್ದಾರೆ.

D Gukesh: ಗುಕೇಶ್ ಸಾಧನೆಯನ್ನು ಕೊಂಡಾಡಿದ ಪ್ರಧಾನಿ ಮೋದಿ, ರಾಷ್ಟ್ರಪತಿ ದ್ರೌಪದಿ ಮುರ್ಮು
ದ್ರೌಪದಿ ಮುರ್ಮು, ಗುಕೇಶ್, ನರೇಂದ್ರ ಮೋದಿ
ಪೃಥ್ವಿಶಂಕರ
|

Updated on:Dec 12, 2024 | 9:20 PM

Share

ಗುರುವಾರ ಸಿಂಗಾಪುರದಲ್ಲಿ ನಡೆದ ವಿಶ್ವ ಚೆಸ್ ಚಾಂಪಿಯನ್‌ಶಿಪ್‌ನ 14ನೇ ಸುತ್ತಿನ ಪಂದ್ಯದಲ್ಲಿ ಭಾರತದ ಗ್ರ್ಯಾಂಡ್‌ಮಾಸ್ಟರ್ ಡಿ ಗುಕೇಶ್ ಅವರು ಚೀನಾದ ಡಿಂಗ್ ಲಿರೆನ್ ಅವರನ್ನು ಸೋಲಿಸುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. 7.5-6.5 ಪಾಯಿಂಟ್‌ಗಳಿಂದ ಚಾಂಪಿಯನ್‌ಶಿಪ್ ಗೆದ್ದ ಗುಕೇಶ್ ಇದರೊಂದಿಗೆ ಈ ಸಾಧನೆ ಮಾಡಿದ ಅತ್ಯಂತ ಕಿರಿಯ ವಿಶ್ವ ಚಾಂಪಿಯನ್ ಎನಿಸಿಕೊಂಡಿದ್ದಾರೆ. ತಮ್ಮ 18ನೇ ವಯಸ್ಸಿನಲ್ಲಿ ಈ ಸಾಧನೆ ಮಾಡಿರುವ ಗುಕೇಶ್ ಅವರ ಐತಿಹಾಸಿಕ ಗೆಲುವು ಇಡೀ ದೇಶವೇ ಹೆಮ್ಮೆ ಪಡುವಂತೆ ಮಾಡಿದೆ. ಇದೀಗ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಹಿಡಿದು ಪ್ರಧಾನಿ ನರೇಂದ್ರ ಮೋದಿಯವರವರೆಗೆ ಎಲ್ಲರೂ ಈ ಚೆಸ್ ಚತುರನಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ಭಾರತವನ್ನು ಹೆಮ್ಮೆ ಪಡುವಂತೆ ಮಾಡಿದ್ದಾರೆ- ರಾಷ್ಟ್ರಪತಿ

ಗುಕೇಶ್ ಐತಿಹಾಸಿಕ ಗೆಲುವಿನ ಬಳಿಕ ತಮ್ಮ ಎಕ್ಸ್ ಖಾತೆಯಲ್ಲಿ ಅಭಿನಂದನೆ ಸಲ್ಲಿಸಿ ಪೋಸ್ಟ್ ಹಂಚಿಕೊಂಡಿರುವ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು, ‘ವಿಶ್ವ ಚೆಸ್ ಚಾಂಪಿಯನ್‌ಶಿಪ್ ಗೆದ್ದ ಅತ್ಯಂತ ಕಿರಿಯ ಆಟಗಾರನಾಗಿರುವ ಗುಕೇಶ್‌ಗೆ ಹೃತ್ಪೂರ್ವಕ ಅಭಿನಂದನೆಗಳು. ಅವರು ಭಾರತವನ್ನು ಹೆಮ್ಮೆ ಪಡುವಂತೆ ಮಾಡಿದ್ದಾರೆ. ಅವರ ಗೆಲುವು ಚೆಸ್ ಸೂಪರ್ ಪವರ್ ಆಗಿ ಭಾರತದ ಅರ್ಹತೆಯನ್ನು ಪ್ರತಿಬಿಂಬಿಸುತ್ತದೆ. ಗುಕೇಶ್ ಉತ್ತಮ ಕೆಲಸ ಮಾಡಿದ್ದಾರೆ. ಪ್ರತಿಯೊಬ್ಬ ಭಾರತೀಯನ ಪರವಾಗಿ, ನೀವು ಭವಿಷ್ಯದಲ್ಲಿಯೂ ಯಶಸ್ವಿಯಾಗಬೇಕೆಂದು ನಾನು ಬಯಸುತ್ತೇನೆ ಎಂದು ಬರೆದುಕೊಂಡಿದ್ದಾರೆ.

ಅಚಲ ದೃಢಸಂಕಲ್ಪದ ಫಲ- ಪ್ರಧಾನಿ

ರಾಷ್ಟ್ರಪತಿ ಅವರೊಂದಿಗೆ ಪ್ರಧಾನಿ ಮೋದಿ ಕೂಡ ಗುಕೇಶ್ ಅವರನ್ನು ಅಭಿನಂದಿಸಿದ್ದು, ‘ಐತಿಹಾಸಿಕ ಮತ್ತು ಅನುಕರಣೀಯ! ಡಿ ಗುಕೇಶ್ ಅವರ ಗಮನಾರ್ಹ ಸಾಧನೆಗೆ ಅಭಿನಂದನೆಗಳು. ಇದು ಅವರ ಅನನ್ಯ ಪ್ರತಿಭೆ, ಕಠಿಣ ಪರಿಶ್ರಮ ಮತ್ತು ಅಚಲ ದೃಢಸಂಕಲ್ಪದ ಫಲ. ಅವರ ಗೆಲುವು ಚೆಸ್ ಇತಿಹಾಸದಲ್ಲಿ ಅವರ ಹೆಸರನ್ನು ಸ್ಮರಣೀಯಗೊಳಿಸಿರುವುದು ಮಾತ್ರವಲ್ಲದೆ ಲಕ್ಷಾಂತರ ಯುವ ಮನಸ್ಸುಗಳು ದೊಡ್ಡ ಕನಸು ಕಾಣಲು ಪ್ರೇರೇಪಿಸಿದೆ. ಅವರ ಮುಂದಿನ ಪ್ರಯತ್ನಗಳಿಗೆ ನನ್ನ ಶುಭಾಶಯಗಳು ಎಂದು ಬರೆದುಕೊಂಡಿದ್ದಾರೆ.

ಗುಕೇಶ್ ಯಾರು?

ತಮಿಳುನಾಡು ಮೂಲದ ಗುಕೇಶ್ ಮೇ 7, 2006 ರಂದು ಜನಿಸಿದರು. ಅವರ ಪೂರ್ಣ ಹೆಸರು ದೋಮರಾಜು ಗುಕೇಶ್. ಗುಕೇಶ್ ಅವರ ತಂದೆ ವೈದ್ಯರಾಗಿದ್ದರೆ, ಅವರ ತಾಯಿ ವೃತ್ತಿಯಲ್ಲಿ ಮೈಕ್ರೋಬಯಾಲಜಿಸ್ಟ್ ಆಗಿದ್ದಾರೆ. ಗುಕೇಶ್ ಏಳನೇ ವಯಸ್ಸಿನಲ್ಲಿ ಚೆಸ್ ಆಡಲು ಪ್ರಾರಂಭಿಸಿದರು. ಅವರಿಗೆ ಆರಂಭದಲ್ಲಿ ಭಾಸ್ಕರ್ ತರಬೇತಿ ನೀಡುತ್ತಿದ್ದರು. ಇದಾದ ನಂತರ ಸ್ವತಃ ವಿಶ್ವನಾಥನ್ ಆನಂದ್ ಅವರಿಗೆ ಚೆಸ್ ಆಟದ ಬಗ್ಗೆ ತಿಳಿಸಿ ತರಬೇತಿ ನೀಡಿದ್ದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:54 pm, Thu, 12 December 24