ಭಾರತೀಯ ಅಥ್ಲೀಟ್‌ಗಳ ‘ಕಠಿಣ ಪರಿಶ್ರಮ ಮತ್ತು ಸಾಧನೆಗಳನ್ನು’ ಶ್ಲಾಘಿಸಿದ ಪ್ರಧಾನಿ ಮೋದಿ
Asian Games: ಈ ಬಾರಿಯ ಏಷ್ಯನ್ ಗೇಮ್ಸ್‌ನಲ್ಲಿ ಭಾರತ ನೂರಕ್ಕೂ ಅಧಿಕ ಪದಕಗಳನ್ನು ಗೆದ್ದು ಹೊಸ ಇತಿಹಾಸ ನಿರ್ಮಿಸಿದೆ. ಚೀನಾದಲ್ಲಿ ನಡೆದ ಈ ಕ್ರೀಡಾಕೂಟದಲ್ಲಿ ಭಾರತೀಯ ಕ್ರೀಡಾಪಟುಗಳು 28 ಚಿನ್ನದ ಪದಕಗಳನ್ನು ಒಳಗೊಂಡಂತೆ ಒಟ್ಟು 107 ಪದಕಗಳನ್ನು ಗೆದ್ದಿದ್ದಾರೆ.
ನವದೆಹಲಿಯಲ್ಲಿ ಮಂಗಳವಾರ ನಡೆದ ಏಷ್ಯನ್ ಗೇಮ್ಸ್ 2022 ರಲ್ಲಿ ಭಾಗವಹಿಸಿದ ಭಾರತೀಯ ಅಥ್ಲೀಟ್‌ಗಳ ತಂಡದೊಂದಿಗೆ ಪ್ರಧಾನಿ ನರೇಂದ್ರ ಮೋದಿ ಸಂವಾದ ನಡೆಸಿದರು. 140 ಕೋಟಿ ಭಾರತೀಯರ ಪರವಾಗಿ ನಾನು ನಿಮ್ಮೆಲ್ಲರನ್ನು (ಕ್ರೀಡಾಪಟುಗಳನ್ನು) ಸ್ವಾಗತಿಸುತ್ತೇನೆ. ನಿಮ್ಮ ಪರಿಶ್ರಮ ಮತ್ತು ಸಾಧನೆಯಿಂದಾಗಿ ದೇಶದೆಲ್ಲೆಡೆ ಸಂಭ್ರಮದ ವಾತಾವರಣವಿದೆ ಎಂದು ಪ್ರಧಾನಿ ಹೊಗಳಿದರು.
ನಮ್ಮ ದೇಶದಲ್ಲಿ ನಾವು ಎಂದಿಗೂ ಪ್ರತಿಭೆಗಳ ಕೊರತೆಯನ್ನು ಹೊಂದಿರಲಿಲ್ಲ. ಆದರೆ ಹಲವಾರು ಅಡೆತಡೆಗಳಿಂದಾಗಿ, ನಮ್ಮ ಕ್ರೀಡಾಪಟುಗಳು ತಮ್ಮ ಪ್ರತಿಭೆಯನ್ನು ಪದಕಗಳಾಗಿ ಪರಿವರ್ತಿಸಲು ಸಾಧ್ಯವಾಗಲಿಲ್ಲ ಎಂದು ಅವರು ತಮ್ಮ ಭಾಷಣದಲ್ಲಿ ಹೇಳಿದರು.
ಸಾಧಕರಿಗೆ ವಿಶೇಷ ಆತಿಥ್ಯ:
ಏಷ್ಯನ್ ಗೇಮ್ಸ್‌ನಲ್ಲಿ ಅವರ ಅತ್ಯುತ್ತಮ ಸಾಧನೆಗಳಿಗಾಗಿ ಮತ್ತು ಭವಿಷ್ಯದ ಸ್ಪರ್ಧೆಗಳಿಗೆ ಅವರನ್ನು ಪ್ರೇರೇಪಿಸಲು ಪ್ರಧಾನ ಮಂತ್ರಿಗಳು ಕ್ರೀಡಾಪಟುಗಳಿಗೆ ವಿಶೇಷ ಆತಿಥ್ಯ ನೀಡಿದರು. ಇದೇ ವೇಳೆ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಕ್ರೀಡಾಪಟುಗಳು ಅತ್ಯುತ್ತಮವಾದುದನ್ನು ಖಚಿತಪಡಿಸಿಕೊಳ್ಳಲು ಸರ್ಕಾರವು ಎಲ್ಲಾ ರೀತಿಯ ನೆರವುಗಳನ್ನು ನೀಡಲಿದೆ.
ಈ ಬಾರಿಯ ಏಷ್ಯನ್ ಗೇಮ್ಸ್‌ನಲ್ಲಿ ನೀವು 100 ಪದಕಗಳನ್ನು ದಾಟಿದ್ದೀರಿ. ಮುಂದಿನ ಬಾರಿ, ನಾವು ಈ ದಾಖಲೆಯನ್ನು ಮೀರಿ ಹೋಗುತ್ತೇವೆ ಎಂಬ ವಿಶ್ವಾಸವಿದೆ. ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ನಿಮ್ಮ ಅತ್ಯುತ್ತಮ ಪ್ರದರ್ಶನ ನೀಡಿ ಎಂದು ಕ್ರೀಡಾಪಟುಗಳನ್ನು ಹುರಿದುಂಬಿಸಿದರು.
ಏಷ್ಯನ್ ಗೇಮ್ಸ್ ದೇಶದ ಕ್ರೀಡೆಯ ಭವಿಷ್ಯಕ್ಕೆ ಉತ್ತಮ ಹೆಜ್ಜೆಗುರುತಾಗಿ ಪರಿಣಮಿಸಿದೆ. ಪದಕ ವಿಜೇತರು “ಹೊಸ ಮಾರ್ಗಗಳನ್ನು” ತೆರೆದಿದ್ದಾರೆ. ಇದು ಇಡೀ “ಹೊಸ ಪೀಳಿಗೆಯನ್ನು” ಪ್ರೇರೇಪಿಸುತ್ತದೆ ಎಂದು ಪ್ರಧಾನಿ ಮೋದಿ ಹೇಳಿದರು. ನಾವು ಯಾವುದೇ ಸ್ಪರ್ಧಿಸಿದ ವಿಭಾಗಗಳಲ್ಲಿ ಪದಕಗಳನ್ನು ಗೆಲ್ಲುತ್ತಿದ್ದೇವೆ. ಇದು ಉತ್ತಮ ಬೆಳವಣಿಗೆ. ಅಲ್ಲದೆ ಭಾರತದ ಕ್ರೀಡಾ ಬೆಳವಣಿಗೆಗೆ ಇದು ಉತ್ತಮ ಸೂಚನೆಯಾಗಿದೆ. ಮುಂದಿನ ವರ್ಷ ನಡೆಯಲಿರುವ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲೂ ಇದು ಹೊಸ ಪ್ರೇರಣೆಯನ್ನು ನೀಡುತ್ತದೆ ಎಂದು ಮೋದಿ ಹೇಳಿದರು.
ನಮ್ಮ ಮಹಿಳೆಯರು ಅದ್ಭುತ ಪ್ರದರ್ಶನ ನೀಡಿದ್ದಾರೆ. ಅವರು ದೇಶದ ಮಹಿಳೆಯರ ಶಕ್ತಿಯನ್ನು ಪ್ರದರ್ಶಿಸಿದ್ದಾರೆ. ಏಷ್ಯನ್ ಗೇಮ್ಸ್‌ನಲ್ಲಿ ಗೆದ್ದ ಅರ್ಧದಷ್ಟು ಪದಕಗಳನ್ನು ಮಹಿಳೆಯರೇ ಗೆದ್ದಿದ್ದಾರೆ. ಟ್ರ್ಯಾಕ್ ಮತ್ತು ಫೀಲ್ಡ್‌ನಲ್ಲಿ, ಅವರು ಚಿನ್ನದ ಪದಕಕ್ಕಿಂತ ಕಡಿಮೆ ಏನನ್ನೂ ಗೆಲ್ಲಲು ಸಿದ್ಧರಿರಲಿಲ್ಲ ಎಂದು ನನಗನಿಸಿದೆ. ಈ ಎಲ್ಲಾ ಸಾಧನೆಯ ಹಿಂದೆ ಕ್ರೀಡಾ ಸಚಿವಾಲಯದ ಪ್ರಮುಖ ಕಾರ್ಯಕ್ರಮವಾದ ಖೇಲೋ ಇಂಡಿಯಾ ಕೊಡುಗೆ ಕೂಡ ಇದೆ. ಹೀಗಾಗಿ ಈ ಬಾರಿ ದೊಡ್ಡ ಯಶಸ್ಸನ್ನು ಕಂಡಿದೆ ಎಂದರು.
ಈ ಬಾರಿಯ ಏಷ್ಯನ್ ಗೇಮ್ಸ್‌ನಲ್ಲಿ ಕಾಣಿಸಿಕೊಂಡ ಸ್ಪರ್ಧಿಗಳಲ್ಲಿ 125 ಕ್ರೀಡಾಪಟುಗಳು ಖೇಲೋ ಇಂಡಿಯಾ ಕಾರ್ಯಕ್ರಮದ ಮೂಲಕ ಬೆಳಕಿಗೆ ಬಂದ ಪ್ರತಿಭೆಗಳು. ಇವರು 40 ಪದಕಗಳನ್ನು ಗೆದ್ದಿದ್ದಾರೆ. ಇದು ಖೇಲೋ ಇಂಡಿಯಾ ಸರಿಯಾದ ದಿಕ್ಕಿನಲ್ಲಿ ಮುನ್ನಡೆಯುತ್ತಿದೆ ಎಂಬುದನ್ನು ಇದು ತೋರಿಸುತ್ತದೆ ಎಂದು ಇದೇ ವೇಳೆ ಪ್ರಧಾನಿ ಮೋದಿ ಹೇಳಿದರು.
ಖೇಲೋ ಇಂಡಿಯಾ ಅಡಿಯಲ್ಲಿ 3,000 ಕ್ಕೂ ಹೆಚ್ಚು ಕ್ರೀಡಾಪಟುಗಳು ತರಬೇತಿ ಪಡೆಯುತ್ತಿದ್ದಾರೆ. ಕ್ರೀಡಾಪಟುಗಳಿಗೆ ಒಟ್ಟು 25 ಸಾವಿರ ಕೋಟಿ ನೆರವು ನೀಡಲಾಗುತ್ತಿದೆ. ಮುಂದಿನ ಐದು ವರ್ಷಗಳಲ್ಲಿ ಸರ್ಕಾರವು ಕ್ರೀಡಾಪಟುಗಳಿಗೆ ಹೆಚ್ಚುವರಿಯಾಗಿ 3000 ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಿದೆ ಮತ್ತು ಹೆಚ್ಚಿನ ಮೂಲಸೌಕರ್ಯಗಳನ್ನು ಸೃಷ್ಟಿಸಲಾಗುವುದು ಎಂದು ಪ್ರಧಾನಿ ಮೋದಿ ಭರವಸೆ ನೀಡಿದರು.
ಇದನ್ನೂ ಓದಿ: Virat Kohli: ದಾಖಲೆಗಳ ಮೇಲೆ ದಾಖಲೆ ಬರೆದ ಕಿಂಗ್ ಕೊಹ್ಲಿ
ಏಷ್ಯನ್ ಗೇಮ್ಸ್‌ನಲ್ಲಿ ಶತಕದ ಸಾಧನೆ:
ಈ ಬಾರಿಯ ಏಷ್ಯನ್ ಗೇಮ್ಸ್‌ನಲ್ಲಿ ಭಾರತ ನೂರಕ್ಕೂ ಅಧಿಕ ಪದಕಗಳನ್ನು ಗೆದ್ದು ಹೊಸ ಇತಿಹಾಸ ನಿರ್ಮಿಸಿದೆ. ಚೀನಾದಲ್ಲಿ ನಡೆದ ಈ ಕ್ರೀಡಾಕೂಟದಲ್ಲಿ ಭಾರತೀಯ ಕ್ರೀಡಾಪಟುಗಳು 28 ಚಿನ್ನದ ಪದಕಗಳನ್ನು ಒಳಗೊಂಡಂತೆ ಒಟ್ಟು 107 ಪದಕಗಳನ್ನು ಗೆದ್ದಿದ್ದಾರೆ. ಇದು ಏಷ್ಯನ್ ಗೇಮ್ಸ್‌ನಲ್ಲಿ ಗೆದ್ದ ಒಟ್ಟು ಪದಕಗಳ ಸಂಖ್ಯೆಗೆ ಸಂಬಂಧಿಸಿದಂತೆ ಭಾರತದ ಅತ್ಯುತ್ತಮ ಪ್ರದರ್ಶನವಾಗಿದೆ. ಇದೇ ಕಾರಣದಿಂದಾಗಿ ಪದಕ ವಿಜೇತರಿಗೆ ಪ್ರಧಾನಿ ಮೋದಿ ವಿಶೇಷ ಆತಿಥ್ಯ ನೀಡಿ ಗೌರವಿಸಿದ್ದಾರೆ.