ಈ ವರ್ಷ ನಡೆಯಬೇಕಿದ್ದ ಹ್ಯಾಂಗ್‌ಝೌ ಏಷ್ಯನ್ ಗೇಮ್ಸ್ (Asian Games 2022) ಅನ್ನು ಸೆಪ್ಟೆಂಬರ್ 23 ರಿಂದ ಅಕ್ಟೋಬರ್ 8 2023 ರವರೆಗೆ ನಡೆಸಲಾಗುವುದು ಎಂದು ಏಷ್ಯಾದ ಒಲಿಂಪಿಕ್ ಕೌನ್ಸಿಲ್ (OCA) ಮಂಗಳವಾರ ತಿಳಿಸಿದೆ. ಈ ಹಿಂದೆ ಸೆಪ್ಟೆಂಬರ್ 10 ರಿಂದ 25 ರವರೆಗೆ ಏಷ್ಯನ್ ಗೇಮ್ಸ್ ಅನ್ನು ಆಯೋಜಿಸಲು ಉದ್ದೇಶಿಸಲಾಗಿತ್ತು. ಆದರೆ ಕೋವಿಡ್-19 ಕಾರಣದಿಂದಾಗಿ ಟೂರ್ನಿಯನ್ನು ಮೇ ತಿಂಗಳಲ್ಲಿ ಮುಂದೂಡಿದ್ದರು. ಇದೀಗ ಮುಂದಿನ ವರ್ಷ ಏಷ್ಯನ್ ಗೇಮ್ಸ್ ಆಯೋಜಿಸಲು ಒಸಿಎ ನಿರ್ಧರಿಸಿದೆ.
ಕೊರೋನಾ ಭೀತಿ ಹಿನ್ನೆಲೆಯಲ್ಲಿ ಕ್ರೀಡಾಕೂಟದ ಹೊಸ ದಿನಾಂಕಗಳನ್ನು ಅಂತಿಮಗೊಳಿಸಲು ವಿಶೇಷ ಸಮಿತಿಯನ್ನು ರಚಿಸಲಾಗಿತ್ತು. ಅಲ್ಲದೆ ಕಳೆದ ಎರಡು ತಿಂಗಳುಗಳಲ್ಲಿ ಚೀನೀ ಒಲಿಂಪಿಕ್ ಸಮಿತಿ, ಹ್ಯಾಂಗ್‌ಝೌ ಏಷ್ಯನ್ ಗೇಮ್ಸ್ ಆಯೋಜಕ ಸಮಿತಿ ಮತ್ತು ಇತರ ಮಧ್ಯಸ್ಥಗಾರರೊಂದಿಗೆ ವಿಂಡೋ ಬಗ್ಗೆ ವಿವಿಧ ಚರ್ಚೆಗಳನ್ನು ನಡೆಸಲಾಗಿದೆ. ಇದೀಗ ಇತರ ಪ್ರಮುಖ ಅಂತಾರಾಷ್ಟ್ರೀಯ ಕ್ರೀಡಾಕೂಟಗಳೊಂದಿಗೆ ಸಂಘರ್ಷಕ್ಕೆ ಒಳಗಾಗದಂತೆ ಏಷ್ಯನ್ ಗೇಮ್ಸ್ ದಿನಾಂಕವನ್ನು ನಿಗದಿ ಮಾಡಲಾಗಿದೆ ಎಂದು ಏಷ್ಯನ್ ಒಲಿಂಪಿಕ್ ಕೌನ್ಸಿಲ್ ತಿಳಿಸಿದೆ.
ಕಳೆದ ವರ್ಷ ಒಲಿಂಪಿಕ್ಸ್ ನಡೆದಿದ್ದು, ಏಷ್ಯಾನ್ ಗೇಮ್ಸ್ಗೆ ಪೂರ್ವ ತಯಾರಿಯಂತ್ತಿತ್ತು. ಹೀಗಾಗಿ ಭಾರತೀಯ ಕ್ರೀಡಾಪಟುಗಳು ಸೇರಿದಂತೆ ಏಷ್ಯಾದ ಆಟಗಾರರು ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡುವ ವಿಶ್ವಾಸದಲ್ಲಿದ್ದರು. ಆದರೆ ಕೊರೋನಾ ಕಾರಣದಿಂದ ಮುಂದೂಡಿದ್ದರಿಂದ ಈ ನಿರೀಕ್ಷೆಗಳು ಹುಸಿಯಾಗಿದ್ದವು. ಇದಾಗ್ಯೂ ಈ ವರ್ಷವೇ ಕ್ರೀಡಾಕೂಟ ನಡೆಯಲಿದೆ ಎನ್ನಲಾಗಿತ್ತು. ಆದರೆ ಅಂತಾರಾಷ್ಟ್ರೀಯ ಕ್ರೀಡಾಕೂಟಗಳ ದಿನಾಂಕವನ್ನು ಸಹ ಪರಿಗಣನೆಗೆ ತೆಗೆದುಕೊಂಡು ಇದೀಗ ಏಷ್ಯನ್ ಗೇಮ್ಸ್ ಅನ್ನು ಮುಂದಿನ ವರ್ಷಕ್ಕೆ ಮುಂದೂಡಲಾಗಿದೆ.
ಇನ್ನು ಏಷ್ಯನ್ ಗೇಮ್ಸ್ ಟೂರ್ನಿಯಲ್ಲಿ ಭಾರತೀಯ ಹಾಕಿ ತಂಡ ಕಠಿಣ ಸವಾಲೊಡ್ಡುವದರಲ್ಲಿ ಅನುಮಾನವಿಲ್ಲ. ಪದಕ ಗೆಲ್ಲುವ ನೆಚ್ಚಿನ ತಂಡವಾಗಿ ಭಾರತ ಗುರುತಿಸಿಕೊಂಡಿದ್ದರೂ ಜಪಾನ್, ದಕ್ಷಿಣ ಕೊರಿಯಾ, ಮಲೇಶಿಯಾ ಮತ್ತು ಪಾಕಿಸ್ತಾನದಂತಹ ತಂಡಗಳ ಸವಾಲು ಮೀರಿ ನಿಲ್ಲಬೇಕಿದೆ. ಭಾರತ ಏಷ್ಯನ್ ಗೇಮ್ಸ್‌ನಲ್ಲಿ ಕೊನೆಯ ಬಾರಿ ಚಿನ್ನ ಗೆದ್ದುಕೊಂಡಿದ್ದು 2014ರಲ್ಲಿ. ಇದಾಗ್ಯೂ 2021 ರ ಒಲಿಂಪಿಕ್ಸ್ನಲ್ಲಿ ಕಂಚಿನ ಪದಕ ಗೆದ್ದ ಭಾರತ ತಂಡದ ಮೇಲೆ ನಿರೀಕ್ಷೆ ಹೆಚ್ಚಾಗಿತ್ತು. ಆದರೀಗ ದಿನಾಂಕ ಮರು ನಿಗದಿಯಾಗಿರುವ ಕಾರಣ ಮುಂದಿನ ವರ್ಷದವರೆಗೆ ಕಾಯಬೇಕಿದೆ.
Published On - 5:34 pm, Tue, 19 July 22