SAFF Championship 2023: ಪಾಕಿಸ್ತಾನವನ್ನು ಬಗ್ಗು ಬಡಿದ ಭಾರತ

India vs Pakistan: ವಿಶೇಷ ಎಂದರೆ ಈ ಪಂದ್ಯದಲ್ಲಿ ಭಾರತ ತಂಡವು ಶೇ.70 ರಷ್ಟು ಚೆಂಡಿನ ಮೇಲೆ ಹಿಡಿತ ಸಾಧಿಸಿತ್ತು. ಹಾಗೆಯೇ 23 ಬಾರಿ ಗೋಲಿನತ್ತ ಶಾಟ್ ಬಾರಿಸಿದ್ದರು. ಇದೇ ವೇಳೆ ಪಾಕಿಸ್ತಾನ್ ಭಾರತದ ಗೋಲಿನತ್ತ ದಾಳಿ ಮಾಡಿದ್ದು ಕೇವಲ 7 ಬಾರಿ ಮಾತ್ರ.

SAFF Championship 2023: ಪಾಕಿಸ್ತಾನವನ್ನು ಬಗ್ಗು ಬಡಿದ ಭಾರತ
India vs Pakistan
Edited By:

Updated on: Jun 21, 2023 | 10:03 PM

SAFF Championship 2023: ಬೆಂಗಳೂರಿನ ಶ್ರೀ ಕಂಠೀರವ ಸ್ಟೇಡಿಯಂನಲ್ಲಿ ನಡೆದ ಸೌತ್ ಏಷ್ಯನ್ ಫುಟ್ಬಾಲ್ ಫೆಡರೇಶನ್ ಚಾಂಪಿಯನ್‌ಶಿಪ್​ನ (SAFF Championship 2023) ಮೊದಲ ಪಂದ್ಯದಲ್ಲಿ ಪಾಕಿಸ್ತಾನ್ ವಿರುದ್ಧ ಭಾರತ ತಂಡವು (India vs Pakistan)  ಭರ್ಜರಿ ಜಯ ಸಾಧಿಸಿದೆ. ಗ್ರೂಪ್​-ಎ ನಲ್ಲಿ ನಡೆದ ಈ ಪಂದ್ಯದ 10ನೇ ನಿಮಿಷದಲ್ಲೇ ಪಾಕ್ ಗೋಲ್ ಕೀಪರ್​ ಕೈಯಿಂದ ಜಾರಿದ ಚೆಂಡನ್ನು ಗೋಲಾಗಿಸಿ ನಾಯಕ ಸುನಿಲ್ ಛೆಟ್ರಿ (Sunil Chhetri) ಭಾರತ ತಂಡಕ್ಕೆ ಮೊದಲ ಯಶಸ್ಸು ತಂದುಕೊಟ್ಟರು. ಇದರ ಬೆನ್ನಲ್ಲೇ 16ನೇ ನಿಮಿಷದಲ್ಲಿ ಸಿಕ್ಕ ಪೆನಾಲ್ಟಿಯನ್ನು ಗೋಲಾಗಿ ಪರಿವರ್ತಿಸಿದ ಸುನಿಲ್ ಛೆಟ್ರಿ ಗೋಲಿನ ಅಂತರವನ್ನು ಎರಡಕ್ಕೇರಿಸಿದರು. ಇನ್ನು ಮೊದಲಾರ್ಧದ ಮುಕ್ತಾಯದ ವೇಳೆ ಉಭಯ ತಂಡಗಳ ಆಟಗಾರರು ಮೈದಾನದಲ್ಲೇ ಕಿತ್ತಾಡಿಕೊಂಡ ಅಹಿತಕರ ಘಟನೆ ಕೂಡ ನಡೆಯಿತು.

ಪಂದ್ಯದ 44ನೇ ನಿಮಿಷದಲ್ಲಿ ಚೆಂಡು ಸೈಡ್ ಲೈನ್ ದಾಟಿತು. ಈ ವೇಳೆ ಲೈನ್ ಅಂಪೈರ್ ನಿರ್ಧಾರಕ್ಕೂ ಮುನ್ನ ಪಾಕಿಸ್ತಾನ್ ಆಟಗಾರ ಅಬ್ದುಲ್ಲಾ ಇಕ್ಬಾಲ್ ಚೆಂಡನ್ನು ಥ್ರೋ ಇನ್ ಮಾಡಲು ಮುಂದಾದರು. ಇದೇ ವೇಳೆ ಲೈನ್​ನಲ್ಲೇ ಇದ್ದ ಭಾರತ ತಂಡದ ಮ್ಯಾನೇಜರ್ ಇಗೊರ್ ಸ್ಟಿಮ್ಯಾಕ್ ಪಾಕಿಸ್ತಾನಿ ಆಟಗಾರನ ಕೈಯಿಂದ ಚೆಂಡನ್ನು ಎಳೆದರು. ಇದರಿಂದ ಕುಪಿತಗೊಂಡ ಪಾಕ್ ತಂಡದ ಮ್ಯಾನೇಜರ್ ಹಾಗೂ ಆಟಗಾರರು ಭಾರತ ತಂಡದ ಕೋಚ್ ವಿರುದ್ಧ ಜಗಳಕ್ಕಿಳಿದರು. ಇತ್ತ ಟೀಮ್ ಇಂಡಿಯಾ ಆಟಗಾರರೂ ಕೂಡ ಪ್ರತಿರೋಧ ತೋರಿದ್ದರಿಂದ ಪ್ರಕ್ಷುಬ್ಧ ಪರಿಸ್ಥಿತಿ ನಿರ್ಮಾಣವಾಯಿತು.

ಈ ವೇಳೆ ಮಧ್ಯೆಪ್ರವೇಶಿಸಿದ ರೆಫರಿಗಳು ಪರಿಸ್ಥಿತಿಯನ್ನು ತಿಳಿಗೊಳಿಸಿದರು. ಅಲ್ಲದೆ ಟೀಮ್ ಇಂಡಿಯಾ ಮ್ಯಾನೇಜರ್ ಸ್ಟಿಮ್ಯಾಕ್‌ ಅವರಿಗೆ ರೆಫರಿ ರೆಡ್ ಕಾರ್ಡ್ ನೀಡಿದರೆ, ಪಾಕಿಸ್ತಾನದ ಮ್ಯಾನೇಜರ್ ಶಹಜಾದ್ ಅನ್ವರ್‌ಗೆ ಹಳದಿ ಕಾರ್ಡ್ ನೀಡಿದರು.
ಇದಾಗ್ಯೂ ಭಾರತ ತಂಡವು ಮೊದಲಾರ್ಧದ ಮುಕ್ತಾಯದ ವೇಳೆಗೆ 2-0 ಅಂತರದಿಂದ ಮುನ್ನಡೆ ಸಾಧಿಸಿತು.

ದ್ವಿತಿಯಾರ್ಧದಲ್ಲೂ ಅದ್ಭುತ ಹೊಂದಾಣಿಕೆಯ ಆಟ ಪ್ರದರ್ಶಿಸಿದ ಭಾರತೀಯ ಆಟಗಾರರು ಆಕ್ರಮಣಕಾರಿ ಆಟ ಪ್ರದರ್ಶಿಸಿದರು. ಪರಿಣಾಮ ಪಂದ್ಯದ 74ನೇ ನಿಮಿಷದಲ್ಲಿ ಪಾಕ್ ಆಟಗಾರ ಮಾಡಿದ ಫೌಲ್​ನಿಂದಾಗಿ ಭಾರತಕ್ಕೆ ಮತ್ತೊಂದು ಪೆನಾಲ್ಟಿ ಲಭಿಸಿತು. ಈ ಅವಕಾಶವನ್ನು ಸಹ ಗೋಲಾಗಿ ಪರಿವರ್ತಿಸುವಲ್ಲಿ ಸುನಿಲ್ ಛೆಟ್ರಿ ಯಶಸ್ವಿಯಾದರು.

ಸುನಿಲ್ ಛೆಟ್ರಿಯ ಹ್ಯಾಟ್ರಿಕ್ ಗೋಲಿನ ಬೆನ್ನಲ್ಲೇ 81ನೇ ನಿಮಿಷದಲ್ಲಿ ಉದಾಂತ ಸಿಂಗ್ ಕುಮಾಮ್ 4ನೇ ಗೋಲು ದಾಖಲಿಸಿದರು. ಈ ಅಂತರವನ್ನು ಕಾಯ್ದುಕೊಂಡ ಭಾರತ ತಂಡವು ಅಂತಿಮವಾಗಿ 4-0 ಅಂತರದಿಂದ ಭರ್ಜರಿ ಜಯ ಸಾಧಿಸಿತು.

ವಿಶೇಷ ಎಂದರೆ ಈ ಪಂದ್ಯದಲ್ಲಿ ಭಾರತ ತಂಡವು ಶೇ.70 ರಷ್ಟು ಚೆಂಡಿನ ಮೇಲೆ ಹಿಡಿತ ಸಾಧಿಸಿತ್ತು. ಹಾಗೆಯೇ 23 ಬಾರಿ ಗೋಲಿನತ್ತ ಶಾಟ್ ಬಾರಿಸಿದ್ದರು. ಇದೇ ವೇಳೆ ಪಾಕಿಸ್ತಾನ್ ಭಾರತದ ಗೋಲಿನತ್ತ ದಾಳಿ ಮಾಡಿದ್ದು ಕೇವಲ 7 ಬಾರಿ ಮಾತ್ರ. ಇನ್ನು ಭಾರತ ತಂಡವು ತನ್ನ ಮುಂದಿನ ಪಂದ್ಯವನ್ನು ಜೂನ್ 24 ರಂದು ನೇಪಾಳ ವಿರುದ್ಧ ಆಡಲಿದೆ.