AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Saina Nehwal: ನಿವೃತ್ತಿ ಘೋಷಿಸಿದ ಸೈನಾ ನೆಹ್ವಾಲ್

Saina Nehwal Retirement: ಸೈನಾ ನೆಹ್ವಾಲ್ 2015 ರಲ್ಲಿ ವಿಶ್ವದ ನಂ. 1 ಸ್ಥಾನ ಬ್ಯಾಡ್ಮಿಂಟನ್ ತಾರೆಯಾಗಿ ಹೊರಹೊಮ್ಮಿದ್ದರು. ಅಷ್ಟೇ ಅಲ್ಲದೆ 2009 ರಲ್ಲಿ ಅರ್ಜುನ ಪ್ರಶಸ್ತಿ ಮತ್ತು 2010 ರಲ್ಲಿ ಮೇಜರ್ ಧ್ಯಾನ್ ಚಂದ್ ಪ್ರಶಸ್ತಿ ಗೌರವಕ್ಕೆ ಪಾತ್ರರಾಗಿದ್ದರು. ಇನ್ನು 2010 ರಲ್ಲಿ ಪದ್ಮಶ್ರೀ ಮತ್ತು 2016 ರಲ್ಲಿ ಪದ್ಮಭೂಷಣ ಪ್ರಶಸ್ತಿಗಳನ್ನು ಸಹ ಸ್ವೀಕರಿಸಿದ್ದರು. ಇದೀಗ 35ನೇ ವಯಸ್ಸಿನಲ್ಲಿ ನಿವೃತ್ತಿ ಘೋಷಿಸಿದ್ದಾರೆ.

Saina Nehwal: ನಿವೃತ್ತಿ ಘೋಷಿಸಿದ ಸೈನಾ ನೆಹ್ವಾಲ್
Saina Nehwal
TV9 Web
| Edited By: |

Updated on: Jan 20, 2026 | 10:30 AM

Share

ಭಾರತದ ಖ್ಯಾತ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ನಿವೃತ್ತಿ ಘೋಷಿಸಿದ್ದಾರೆ. ಕಳೆದ ಕೆಲ ತಿಂಗಳುಗಳಿಂದ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಇದೀಗ ಬ್ಯಾಡ್ಮಿಂಟನ್ ಅಂಗಳಕ್ಕೆ ವಿದಾಯ ಹೇಳಲು ನಿರ್ಧರಿಸಿದ್ದಾರೆ. ಅಲ್ಲದೆ ಇನ್ಮುಂದೆ ಸ್ಪರ್ಧಾತ್ಮಕ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಕಣಕ್ಕಿಳಿಯುವುದಿಲ್ಲ ಎಂದು ಸಹ ಸ್ಪಷ್ಟಪಡಿಸಿದ್ದಾರೆ.

ಸೈನಾ ನೆಹ್ವಾಲ್ ಕೊನೆಯ ಸ್ಪರ್ಧಾತ್ಮಕ ಪಂದ್ಯವಾಡಿದ್ದು 2023 ರಲ್ಲಿ. 2023ರ ಸಿಂಗಾಪುರ್ ಓಪನ್ ನಂತರ ಅವರು ಯಾವುದೇ ಅಧಿಕೃತ ಪಂದ್ಯಗಳಲ್ಲಿ ಕಾಣಿಸಿಕೊಂಡಿರಲಿಲ್ಲ. ಇದಕ್ಕೆ ಮುಖ್ಯ ಕಾರಣ ಗಾಯದ ಸಮಸ್ಯೆ.

ಮೊಣಕಾಲಿನ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಕಳೆದ ಎರಡು ವರ್ಷಗಳಿಂದ ಕಂಬ್ಯಾಕ್ ಮಾಡಲು ಯತ್ನಿಸಿದ್ದರು. ಇದಾಗ್ಯೂ ಸಂಪೂರ್ಣ ಫಿಟ್​​ನೆಸ್ ಸಾಧಿಸಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಈ ವರ್ಷದ ಆರಂಭದಲ್ಲೇ ಸೈನಾ ನೆಹ್ವಾಲ್ ಬ್ಯಾಡ್ಮಿಂಟನ್​ಗೆ ವಿದಾಯ ಹೇಳಲು ನಿರ್ಧರಿಸಿದ್ದಾರೆ.

ನಿವೃತ್ತಿ ಬಗ್ಗೆ ಸೈನಾ ಹೇಳಿದ್ದೇನು?

ಪಾಡ್‌ಕ್ಯಾಸ್ಟ್​ವೊಂದರಲ್ಲಿ ಮಾತನಾಡಿದ ಸೈನಾ ನೆಹ್ವಾಲ್,  ತನ್ನ ದೇಹವು ಇನ್ನು ಮುಂದೆ ತನ್ನ ಆಟವನ್ನು ಬೆಂಬಲಿಸುವುದಿಲ್ಲ. ಹೀಗಾಗಿ ಬ್ಯಾಡ್ಮಿಂಟನ್​ನಲ್ಲಿ ಇನ್ಮುಂದೆ ಮುಂದುವರೆಯಲು ಸಾಧ್ಯವಿಲ್ಲ. ಮೊಣಕಾಲಿನ ನೋವಿನ ಸಮಸ್ಯೆಯಿರುವ ಕಾರಣ ನಿವೃತ್ತಿ ಘೋಷಿಸಲು ನಿರ್ಧರಿಸಿದ್ದೇನೆ. ಏಕೆಂದರೆ ಈ ನೋವಿನೊಂದಿಗೆ ಅಭ್ಯಾಸ ಮಾಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಇನ್ಮುಂದೆ ನಾನು ಸ್ಪರ್ಧಾತ್ಮಕ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಕಾಣಿಸಿಕೊಳ್ಳುವುದಿಲ್ಲ ಎಂದು 35 ವರ್ಷದ ಸೈನಾ ನೆಹ್ವಾಲ್ ಹೇಳಿದ್ದಾರೆ.

18 ಪದಕಗಳ ರಾಣಿ:

ಸೈನಾ ನೆಹ್ವಾಲ್ 2012ರ ಲಂಡನ್ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದಿದ್ದಲ್ಲದೆ, ಇತರ ಬ್ಯಾಡ್ಮಿಂಟನ್ ಸ್ಪರ್ಧೆಗಳಲ್ಲಿ ಹಲವಾರು ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದರು. ಈ ಮೂಲಕ ತಮ್ಮ ವೃತ್ತಿಜೀವನದಲ್ಲಿ ಒಟ್ಟು 18 ಪದಕಗಳನ್ನು ಗೆದ್ದಿದ್ದಾರೆ.

ವಿಶ್ವ ಜೂನಿಯರ್ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಮತ್ತು ಕಂಚು ಪದಕಗಳನ್ನು ಗೆಲ್ಲುವ ಮೂಲಕ ಅಭಿಯಾನ ಆರಂಭಿಸಿದ್ದ ಸೈನಾ ನೆಹ್ವಾಲ್, ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಮೂರು ಮತ್ತು ಉಬರ್ ಕಪ್‌ನಲ್ಲಿ ಎರಡು ಕಂಚಿನ ಪದಕಗಳನ್ನು ಗೆದ್ದಿದ್ದಾರೆ.

ಹಾಗೆಯೇ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಮೂರು ಚಿನ್ನದ ಪದಕಗಳು, ಒಂದು ಬೆಳ್ಳಿ ಪದಕ ಮತ್ತು ಒಂದು ಕಂಚಿನ ಪದಕ ಸೇರಿದಂತೆ ಒಟ್ಟು ಐದು ಪದಕಗಳನ್ನು ಗೆದ್ದಿದ್ದಾರೆ. ಇನ್ನು ಏಷ್ಯನ್ ಕ್ರೀಡಾಕೂಟದಲ್ಲಿ ಎರಡು ಬಾರಿ ಕಂಚಿನ ಪದಕಕ್ಕೆ ಕೊರೊಳೊಡ್ಡಿದ್ದಾರೆ. ಇದರ ಜೊತೆಗೆ  ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಒಂದು ಬೆಳ್ಳಿ ಮತ್ತು ಒಂದು ಕಂಚಿನ ಪದಕವನ್ನು ಸಹ ಗೆದ್ದಿದ್ದಾರೆ.

ಇದನ್ನೂ ಓದಿ: ಐರ್ಲೆಂಡ್ ಗ್ರೂಪ್ ಬದಲಿಸಿ… ಬಾಂಗ್ಲಾದೇಶ್​ ತಂಡದ ಹೊಸ ಬೇಡಿಕೆ!

ಅಗ್ರಸ್ಥಾನ ಅಲಂಕರಿಸಿದ್ದ ಸೈನಾ:

ಸೈನಾ ನೆಹ್ವಾಲ್ 2015 ರಲ್ಲಿ ವಿಶ್ವದ ನಂ. 1 ಸ್ಥಾನ ಬ್ಯಾಡ್ಮಿಂಟನ್ ತಾರೆಯಾಗಿ ಹೊರಹೊಮ್ಮಿದ್ದರು. ಅಷ್ಟೇ ಅಲ್ಲದೆ 2009 ರಲ್ಲಿ ಅರ್ಜುನ ಪ್ರಶಸ್ತಿ ಮತ್ತು 2010 ರಲ್ಲಿ ಮೇಜರ್ ಧ್ಯಾನ್ ಚಂದ್ ಪ್ರಶಸ್ತಿ ಗೌರವಕ್ಕೆ ಪಾತ್ರರಾಗಿದ್ದರು. ಇನ್ನು 2010 ರಲ್ಲಿ ಪದ್ಮಶ್ರೀ ಮತ್ತು 2016 ರಲ್ಲಿ ಪದ್ಮಭೂಷಣ ಪ್ರಶಸ್ತಿಗಳನ್ನು ಸಹ ಸ್ವೀಕರಿಸಿದ್ದರು. ಇದೀಗ 35ನೇ ವಯಸ್ಸಿನಲ್ಲಿ ನಿವೃತ್ತಿ ಘೋಷಿಸುವ ಮೂಲಕ ಸೈನಾ ನೆಹ್ವಾಲ್ ಹೊಸ ಇನಿಂಗ್ಸ್ ಆರಂಭಿಸುವ ಇರಾದೆಯಲ್ಲಿದ್ದಾರೆ.