ಸ್ಟೀವ್ ಸ್ಮಿತ್​ಗೆ ಬೆನ್ನುನೋವು, ಆಸ್ಟ್ರೇಲಿಯ ಶಿಬಿರದಲ್ಲಿ ಆತಂಕ!

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Dec 15, 2020 | 7:16 PM

ಬೆಳಿಗ್ಗೆ ನೆಟ್ಸ್​ನಲ್ಲಿ ಫೀಲ್ಡಿಂಗ್ ಅಭ್ಯಾಸ ಶುರುವಾಗಿ ಸುಮಾರು ಹತ್ತು ನಿಮಿಷಗಳ ನಂತರ ಬೆನ್ನುನೋವಿನ ತೊಂದರೆಗೊಳಗಾದ ಸ್ಮಿತ್, ಡ್ರೆಸಿಂಗ್ ರೂಮ್​ಗೆ ವಾಪಸ್ಸು ಹೋದವರು ಮರಳಿ ಬ್ಯಾಟಿಂಗ್ ಅಭ್ಯಾಸಕ್ಕೆ ಬರಲಿಲ್ಲ.

ಸ್ಟೀವ್ ಸ್ಮಿತ್​ಗೆ ಬೆನ್ನುನೋವು, ಆಸ್ಟ್ರೇಲಿಯ ಶಿಬಿರದಲ್ಲಿ ಆತಂಕ!
ಸ್ಟೀವ್​ ಸ್ಮಿತ್
Follow us on

ಭಾರತ ಮತ್ತು ಆಸ್ಟ್ರೇಲಿಯ ನಡುವೆ ಟೆಸ್ಟ್​ ಸರಣಿಯ ಮೊದಲ ಪಂದ್ಯಕ್ಕೆ ಕೇವಲ 48 ಗಂಟೆಗಳು ಬಾಕಿಯಿದೆ. ಆದರೆ, ಅತಿಥೇಯರ ಗಾಯಾಳುಗಳ ಪಟ್ಟಿ ಬೆಳೆಯುತ್ತಲೇ ಇದೆ. ಈ ಲಿಸ್ಟ್​ಗೆ ಇತ್ತೀಚಿನ ಸೇರ್ಪಡೆಯೆಂದರೆ, ಆಸಿಸ್​ಗಳ ಚಾಂಪಿಯನ್ ಬ್ಯಾಟ್ಸ್​ಮನ್ ಸ್ಟೀವ್​ಸ್ಮಿತ್. ಇಂದು ಬೆಳಿಗ್ಗೆ ನೆಟ್ಸ್​ನಲ್ಲಿ ಫೀಲ್ಡಿಂಗ್ ಅಭ್ಯಾಸ ಶುರುವಾಗಿ ಸುಮಾರು ಹತ್ತು ನಿಮಿಷಗಳ ನಂತರ ಬೆನ್ನುನೋವಿನ ತೊಂದರೆಗೊಳಗಾದ ಸ್ಮಿತ್, ಡ್ರೆಸಿಂಗ್ ರೂಮ್​ಗೆ ವಾಪಸ್ಸು ಹೋದವರು ಮರಳಿ ಬ್ಯಾಟಿಂಗ್ ಅಭ್ಯಾಸಕ್ಕೆ ಬರಲಿಲ್ಲವೆಂದು ಆಸ್ಟ್ರೇಲಿಯಾದ ಮಾಧ್ಯಮಗಳು ವರದಿ ಮಾಡಿವೆ.

ಫೀಲ್ಡಿಂಗ್ ಅಭ್ಯಾಸ ಮಾಡುವಾಗ ಬಾಲ್ ಹಿಡಿದು ಎಸೆಯುವ ಪ್ರಯತ್ನದಲ್ಲಿದ್ದ ಸ್ಮಿತ್ ಬೆನ್ನು ನೋವಿಗೊಳಗಾದರು ಎಂದು ವರದಿಯಾಗಿರುವುದು, ಆಸ್ಟ್ರೇಲಿಯ ಶಿಬಿರದಲ್ಲಿ ಆತಂಕ ಮೂಡಿಸಿದೆ. ಇವತ್ತಿನ ನೆಟ್​ ಸೆಷನ್​ನಲ್ಲಿ ಫೀಲ್ಡಿಂಗ್ ನಂತರ ಅವರು ಸ್ಟ್ರೆಚಿಂಗ್ ವ್ಯಾಯಾಮದ ಭಾಗವಾಗಿ ಫುಟ್ಬಾಲ್ ಆಡಬೇಕಿತ್ತು ಮತ್ತು ನೆಟ್ಸ್​ನಲ್ಲಿ ಬ್ಯಾಟಿಂಗ್ ಅಭ್ಯಾಸ ಸಹ ಮಾಡಬೇಕಿತ್ತು. ಸ್ಮಿತ್ ವಾಪಸ್ಸು ಹೋಗುವಾಗ ಆವರೊಂದಿಗೆ ಟೀಮಿನ ಫಿಸಿಯೋ ಡೇವಿಡ್​ ಬೇಕ್ಲಿ ಇದ್ದರೆಂದು ವರದಿಯಾಗಿದೆ.

ಸ್ಮಿತ್ ಅವರಿಗಾಗಿರುವ ಗಾಯ ಗಂಭೀರ ಸ್ವರೂಪದಲ್ಲವೆಂದು ಹೇಳಲಾಗಿದೆ. ಟೀಮಿನ ಮೂಲಗಳ ಪ್ರಕಾರ ಅವರು ನಾಳೆ ಅಂದರೆ ಬುಧವಾರದಂದು ನೆಟ್ಸ್​ನಲ್ಲಿ ಬ್ಯಾಟಿಂಗ್ ಅಭ್ಯಾಸ ಮಾಡಲಿದ್ದಾರೆ. ಅವರ ಸೇವೆಯನ್ನು ಟೀಮ್ ಆಸ್ಟ್ರೇಲಿಯ ಯಾವ ಕಾರಣಕ್ಕೂ ಕಳೆದುಕೊಳ್ಳುವಂತಿಲ್ಲ. ಯಾಕೆಂದರೆ, ಆಸ್ಟ್ರೇಲಿಯ ಆರಂಭ ಆಟಗಾರರಾಗಿರುವ ಡೇವಿಡ್​ ವಾರ್ನರ್ ಮತ್ತು ವಿಲ್ ಪುಕೊವ್​ಸ್ಕಿ ಗಾಯಗಳಿಂದ ಇನ್ನೂ ಚೇತರಿಸಿಕೊಂಡಿಲ್ಲ. ವಾರ್ನರ್ ತೊಡೆಸಂದಿ ನೋವಿನಿಂದ ಬಳಲುತ್ತಿದ್ದರೆ, ಮೂರು ದಿನಗಳ ಅಭ್ಯಾಸ ಪಂದ್ಯದಲ್ಲಿ ಉಮೇಶ್ ಯಾದವ್ ಅವರ ಒಂದು ಬೌನ್ಸರ್ ತಲೆಗೆ ಅಪ್ಪಳಿಸಿದ ನಂತರ ಪುಕೊವ್​ಸ್ಕಿ ಕನ್ಕಷನ್​ಗೊಳಗಾದರು.

ನೆಟ್ಸ್​ನಲ್ಲಿ ಸ್ಟೀವ್ ಸ್ಮಿತ್

ಅಡಿಲೇಡ್​ನಲ್ಲಿ ಟೆಸ್ಟ್ ಕ್ರಿಕೆಟ್​ಗೆ ಪಾದಾರ್ಪಣೆ ಮಾಡುವರೆಂದು ನಿರೀಕ್ಷಿಸಲಾಗಿರುವ ಯುವ ಆಲ್​ರೌಂಡರ್ ಕೆಮೆರಾನ್ ಗ್ರೀನ್ ಸಹ ಕನ್ಕಷನ್ ತೊಂದರೆ ಅನುಭವಿಸುತ್ತಿದ್ದಾರೆ. ಭಾರತದ ವಿರುದ್ಧ ಎರಡನೆ ಅಭ್ಯಾಸ ಪಂದ್ಯದಲ್ಲಿ, ಜಸ್ಪ್ರೀತ್ ಬುಮ್ರಾ ಅವರ ಬ್ಯಾಟ್​ನಿಂದ ಸಿಡಿದ ಚೆಂಡು ಗ್ರೀನ್ ತಲೆಗೆ ಅಪ್ಪಳಿಸಿತ್ತು. ಅವರು ಸಹ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ ಎಂದು ವರದಿಯಾಗಿದೆ.

ಸ್ಮಿತ್, ಪ್ರಸಕ್ತ ಸರಣಿಯಲ್ಲಿ ಭಾರತದ ವಿರುದ್ಧ ಸಿಡ್ನಿಯಲ್ಲಿ ಆಡಿದ ಮೊದಲೆರಡು ಒಂದು ದಿನದ ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಕೇವಲ 62 ಎಸೆತಗಳಲ್ಲಿ ಶತಕಗಳನ್ನು ಬಾರಿಸಿ ತಾವು ಉತ್ಕೃಷ್ಟ ಫಾರ್ಮ್​ನಲ್ಲಿರುವುದನ್ನು ಸಾಬೀತು ಮಾಡಿದ್ದಾರೆ. ಹಾಗಾಗಿ, ಸ್ಮಿತ್ ಅದೇ ಫಾರ್ಮ್ ಮಂದುವರೆಸಿ ಟನ್​ಗಟ್ಟಲೆ ರನ್​ಗಳಿಸುವುದನ್ನು ಟೀಮ್ ಅಸ್ಟ್ರೇಲಿಯ ಎದುರುನೋಡುತ್ತಿದೆ.

ಟೀಮ್ ಇಂಡಿಯಾಗೆ ಸಂತಸದ ಸುದ್ದಿ; ರೋಹಿತ್ ಫಿಟ್ ಎಂದ ಕ್ರಿಕೆಟ್ ಅಕಾಡೆಮಿ ವೈದ್ಯರು