ಭಾರತ ಕುಸ್ತಿ ಒಕ್ಕೂಟ ಸಮಿತಿಯನ್ನು ಅಮಾನತುಗೊಳಿಸಿದ ಕೇಂದ್ರ ಸರ್ಕಾರ
ಕಳೆದ ಒಂದು ವರ್ಷದಿಂದ ಕುಸ್ತಿ ಫೆಡರೇಶನ್ ಆಫ್ ಇಂಡಿಯಾ ವಿವಾದದಲ್ಲಿದೆ. ಅನೇಕ ದೊಡ್ಡ ಮಹಿಳಾ ಕುಸ್ತಿಪಟುಗಳು ಮಾಜಿ WFI ಅಧ್ಯಕ್ಷ ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದರು, ನಂತರ ಕೋಲಾಹಲ ಪ್ರಾರಂಭವಾಯಿತು. ಇದೀಗ ಕೆಲ ದಿನಗಳ ಹಿಂದೆಯಷ್ಟೇ ಕುಸ್ತಿ ಒಕ್ಕೂಟದ ಚುನಾವಣೆ ನಡೆದಿದ್ದು, ಸಂಜಯ್ ಸಿಂಗ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಸಂಜಯ್ ಸಿಂಗ್ ನೇತೃತ್ವದ ಭಾರತ ಕುಸ್ತಿ ಫೆಡರೇಷನ್ (WFI) ಸಮಿತಿಯನ್ನು ಕ್ರೀಡಾ ಸಚಿವಾಲಯ ಭಾನುವಾರ ಅಮಾನತುಗೊಳಿಸಿದೆ. ಗುರುವಾರ ನಡೆದ ಕುಸ್ತಿ ಫೆಡರೇಷನ್ ಚುನಾವಣೆಯಲ್ಲಿ ಬಿಜೆಪಿ ಸಂಸದ ಮತ್ತು ಮಾಜಿ WFI ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರ ನಿಕಟವರ್ತಿ ಸಿಂಗ್ ಅವರು ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಇದರ ಬೆನ್ನಲ್ಲೇ ಭಾರತದ ಖ್ಯಾತ ಕುಸ್ತಿಪಟುಗಳಾದ ಒಲಿಂಪಿಕ್ ಪದಕ ವಿಜೇತೆ ಸಾಕ್ಷಿ ಮಲಿಕ್, ಬಜರಂಗ್ ಪೂನಿಯಾ ತಮ್ಮ ಅಸಮಾಧಾನವನ್ನು ಹೊರಹಾಕಿ ನಿವೃತ್ತಿ ಘೋಷಿಸಿದ್ದರು. ಇದೀಗ ನೂತನ ಸಮಿತಿಯು ಒಕ್ಕೂಟದ ನಿಯಮಗಳು ಮತ್ತು ನಿಬಂಧನೆಗಳನ್ನು ಸಂಪೂರ್ಣ ನಿರ್ಲಕ್ಷಿಸಿದೆ ಎಂದು ಕ್ರೀಡಾ ಸಚಿವಾಲಯ ಅಮಾನತು ಪ್ರಕಟಣೆ ಹೊರಡಿಸಿದೆ.
WFI ನ ನೂತನ ಅಧ್ಯಕ್ಷ ಸಂಜಯ್ ಸಿಂಗ್ ಡಿಸೆಂಬರ್ 21 ರಂದು ಜೂನಿಯರ್ ರಾಷ್ಟ್ರೀಯ ಕುಸ್ತಿ ಸ್ಪರ್ಧೆ ಈ ವರ್ಷಾಂತ್ಯದಲ್ಲಿ ಪ್ರಾರಂಭವಾಗಲಿದೆ ಎಂದು ಘೋಷಿಸಿದ್ದರು. ಆದರೆ ಇದು ನಿಯಮಗಳಿಗೆ ವಿರುದ್ಧವಾಗಿದೆ. ಏಕೆಂದರೆ ಕುಸ್ತಿಪಟುಗಳಿಗೆ ಸಿದ್ಧರಾಗಲು ಕನಿಷ್ಠ 15 ದಿನಗಳು ಬೇಕಾಗುತ್ತದೆ. ಆದರೆ WFI ತರಾತುರಿಯಲ್ಲಿ ರಾಷ್ಟ್ರೀಯ ಸ್ಪರ್ಧೆಯನ್ನು ಘೋಷಿಸಿ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ಕ್ರೀಡಾ ಸಚಿವಾಲಯ ತನ್ನ ಹೇಳಿಕೆಯಲ್ಲಿ ಉಲ್ಲೇಖಿಸಿದೆ. ಅಷ್ಟೇ ಅಲ್ಲದೆ ಈ ಬಾರಿಯ ಚುನಾವಣೆ ನಿಯಮಗಳಿಗೆ ವಿರುದ್ಧವಾಗಿದೆ ಮತ್ತು ಹಳೆಯ ವ್ಯಕ್ತಿಗಳ ಪ್ರಭಾವದೊಂದಿಗೆ ಚುನಾವಣೆ ನಡೆದಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಹೀಗಾಗಿ ಭಾರತ ಕುಸ್ತಿ ಫೆಡರೇಷನ್ ಸಮಿತಿಯನ್ನು ಮುಂದಿನ ಆದೇಶದವರೆಗೆ ಅಮಾನತಿನಲ್ಲಿಡಲಾಗುತ್ತದೆ ಎಂದು ಕ್ರೀಡಾ ಸಚಿವಾಲಯ ತಿಳಿಸಿದೆ.
ಕ್ರೀಡಾ ಸಚಿವಾಲಯ ಹೊರಡಿಸಿದ ಆದೇಶದಲ್ಲಿ, ಪಂದ್ಯಾವಳಿಯ ಆಯೋಜನೆ ಸಂಪೂರ್ಣವಾಗಿ ಸ್ಪರ್ಧಾಳುಗಳ ನಿಯಮಗಳಿಗೆ ವಿರುದ್ಧವಾಗಿದ್ದವು ಎಂದು ಹೇಳಲಾಗಿದೆ. ಅಂತಹ ನಿರ್ಧಾರಗಳನ್ನು ಕಾರ್ಯಕಾರಿ ಸಮಿತಿಯು ತೆಗೆದುಕೊಳ್ಳುತ್ತದೆ. ಅದರ ಮೊದಲು ಕಾರ್ಯಸೂಚಿಯನ್ನು ಪರಿಗಣನೆಗೆ ತೆಗೆದುಕೊಳ್ಳಬೇಕು. ಆದರೆ ಇದ್ಯಾವುದನ್ನೂ ಪರಿಗಣಿಸಿಲ್ಲ ಎಂದು ತಿಳಿಸಲಾಗಿದೆ.
ಅಷ್ಟೇ ಅಲ್ಲ, ಕ್ರೀಡಾ ಸಚಿವಾಲಯ ತನ್ನ ಹೇಳಿಕೆಯಲ್ಲಿ WFI ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್ ಸಿಂಗ್ ಅವರ ಮೇಲೂ ಪ್ರಶ್ನೆಗಳನ್ನು ಎತ್ತಿದೆ. ಹಿಂದಿನ ಪದಾಧಿಕಾರಿಗಳೇ ಒಕ್ಕೂಟದಲ್ಲಿ ಹಿಡಿತ ಹೊಂದಿದ್ದು, ಅವರೇ ವ್ಯವಹಾರ ನಡೆಸುತ್ತಿದ್ದಾರೆ ಎಂದು ಆರೋಪ ಕೇಳಿ ಬಂದಿವೆ. ಈ ಎಲ್ಲಾ ಕಾರಣಗಳಿಂದಾಗಿ ಇದೀಗ ಭಾರತೀಯ ಕುಸ್ತಿ ಒಕ್ಕೂಟವನ್ನು ಮುಂದಿನ ಆದೇಶದವರೆಗೆ ಅಮಾನತಿನಲ್ಲಿಡಲು ಕೇಂದ್ರ ಕ್ರೀಡಾ ಸಚಿವಾಲಯ ನಿರ್ಧರಿಸಿದೆ.
ಕಳೆದ ಒಂದು ವರ್ಷದಿಂದ ಕುಸ್ತಿ ಫೆಡರೇಶನ್ ಆಫ್ ಇಂಡಿಯಾ ವಿವಾದದಲ್ಲಿದೆ. ಅನೇಕ ಮಹಿಳಾ ಕುಸ್ತಿಪಟುಗಳು ಮಾಜಿ WFI ಅಧ್ಯಕ್ಷ ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದರು. ಹೀಗಾಗಿ ಬ್ರಿಜ್ ಭೂಷನ್ ಸಿಂಗ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅದರಂತೆ ಕೆಲ ದಿನಗಳ ಹಿಂದೆಯಷ್ಟೇ ಕುಸ್ತಿ ಒಕ್ಕೂಟದ ಚುನಾವಣೆ ನಡೆದಿದ್ದು, ಸಂಜಯ್ ಸಿಂಗ್ ಅವರು ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು.
ಇದನ್ನೂ ಓದಿ: ಕುಸ್ತಿ ಫೆಡರೇಷನ್ ಅಧ್ಯಕ್ಷ ಸ್ಥಾನದಲ್ಲಿ ಆಪ್ತ; ಮೇಲುಗೈ ಸಾಧಿಸಿದ್ದೇನೆ ಎಂದ ಬ್ರಿಜ್ ಭೂಷಣ್ ಶರಣ್ ಸಿಂಗ್
ಸಂಜಯ್ ಸಿಂಗ್ ಅವರು ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್ ಸಿಂಗ್ ಅವರಿಗೆ ಆಪ್ತರು. ಹೀಗಾಗಿ ಚುನಾವಣಾ ಫಲಿತಾಂಶದ ಬೆನ್ನಲ್ಲೇ ಸಾಕ್ಷಿ ಮಲಿಕ್, ಬಜರಂಗ್ ಪುನಿಯಾ ಕುಸ್ತಿಯಿಂದ ನಿವೃತ್ತಿ ಘೋಷಿಸಿದ್ದರು. ಅಷ್ಟೇ ಅಲ್ಲ, ಇಬ್ಬರೂ ಭಾರತ ಸರ್ಕಾರದಿಂದ ಪಡೆದ ಎಲ್ಲಾ ಪ್ರಶಸ್ತಿಗಳನ್ನು ಹಿಂದಿರುಗಿಸುವುದಾಗಿ ಘೋಷಿಸಿದ್ದರು. ಇದರ ಬೆನ್ನಲ್ಲೇ ಇದೀಗ ಕೇಂದ್ರ ಕ್ರೀಡಾ ಸಚಿವಾಲಯವು ಮಹತ್ವದ ನಿರ್ಧಾರ ತೆಗೆದುಕೊಂಡಿದೆ.
Published On - 11:58 am, Sun, 24 December 23