ಬಟ್ಲರ್ ಅರ್ಧ ಶತಕ; ಎರಡನೇ ಟಿ20 ಪಂದ್ಯದಲ್ಲಿ ಪಾಕಿಸ್ತಾನವನ್ನು ಸೋಲಿಸಿ ಸರಣಿ ಸಮ ಮಾಡಿಕೊಂಡ ಇಂಗ್ಲೆಂಡ್

ಆಫ್ ಸ್ಪಿನ್ನರ್ ಮೊಯೀನ್ ಅಲಿ ಅನುಭವಿ ಆಟಗಾರ ಮೊಹಮ್ಮದ್ ಹಫೀಜ್ ಮತ್ತು ಫಕರ್ ಜಮಾನ್​ರನ್ನು ಕಡಿಮೆ ಸ್ಕೋರ್​ಗಳಿಗೆ ಔಟ್​ ಮಾಡಿದಾಗ ಪಾಕಿಸ್ತಾನ 95 ರ ಮೊತ್ತಕ್ಕೆ ಅರ್ಧ ಆಟಗಾರರನ್ನು ಕಳೆದುಕೊಂಡು ಚೇತರಿಸಿಕೊಳ್ಳದ ಸ್ಥಿತಿಗೆ ಸಿಲುಕಿತು.

ಬಟ್ಲರ್ ಅರ್ಧ ಶತಕ; ಎರಡನೇ ಟಿ20 ಪಂದ್ಯದಲ್ಲಿ ಪಾಕಿಸ್ತಾನವನ್ನು ಸೋಲಿಸಿ ಸರಣಿ ಸಮ ಮಾಡಿಕೊಂಡ ಇಂಗ್ಲೆಂಡ್
ಅದಿಲ್ ರಶೀದ್ ಮತ್ತು ಮೊಯೀನ್ ಅಲಿ
TV9kannada Web Team

| Edited By: Arun Belly

Jul 19, 2021 | 1:29 AM

ಇಂಗ್ಲೆಂಡ್ ಟೀಮಿನ ಸ್ಟ್ಯಾಂಡ್-ಇನ್ ನಾಯಕ ಜೋಸ್ ಬಟ್ಲರ್ ಅವರ ಅರ್ಧ ಶತಕ (59) ಮತ್ತು ಸ್ಪಿನ್ನರ್​ಗಳು ತೋರಿದ ಆದ್ಭುತ ಬೌಲಿಂಗ್ ಪ್ರದರ್ಶನದ ನೆರವಿನಿಂದ ಹೆಡಿಂಗ್ಲೇ, ಲೀಡ್ಸ್​ನಲ್ಲಿ ರವಿವಾರದಂದು ನಡೆದ ಎರಡನೇ ಟಿ20 ಪಂದ್ಯದಲ್ಲಿ ಪಾಕಿಸ್ತಾನವನ್ನು 45 ರನ್​ಗಳಿಂದ ಸುಲಭವಾಗಿ ಸೋಲಿಸಿದ ಅತಿಥೇಯರು ಮೂರು ಪಂದ್ಯಗಳ ಸರಣಿಯನ್ನು 1-1 ರಿಂದ ಸಮ ಮಾಡಿಕೊಂಡಿದ್ದಾರೆ.

ಪಾಕಿಸ್ತಾನ ಇನ್ನಿಂಗ್ಸ್​ ಮಧ್ಯಬಾಗದಲ್ಲಿ ತಮ್ಮ ಎರಡನೇ ಸ್ಪೆಲ್​ನಲ್ಲಿ ದಾಳಿಗಿಳಿದ ಇಂಗ್ಲೆಂಡ್​ ಲೆಗ್​ ಸ್ಪಿನ್ನರ್ ಆದಿಲ್ ರಶೀದ್ ಅವರು ಮೊಹಮ್ಮದ್ ರಿಜ್ವಾನ್ ಮತ್ತು ಸೊಹೇಬ್ ಮಕ್ಸೂದ್​ ಅವರನ್ನು ಔಟ್​ ಮಾಡಿದ ನಂತರ ಪಂದ್ಯದ ಮೇಲೆ ಆಂಗ್ಲರ ಹಿಡಿತ ಬಿಗಿಯಾಯಿತು.

ಆಫ್ ಸ್ಪಿನ್ನರ್ ಮೊಯೀನ್ ಅಲಿ ಅನುಭವಿ ಆಟಗಾರ ಮೊಹಮ್ಮದ್ ಹಫೀಜ್ ಮತ್ತು ಫಕರ್ ಜಮಾನ್​ರನ್ನು ಕಡಿಮೆ ಸ್ಕೋರ್​ಗಳಿಗೆ ಔಟ್​ ಮಾಡಿದಾಗ ಪಾಕಿಸ್ತಾನ 95 ರ ಮೊತ್ತಕ್ಕೆ ಅರ್ಧ ಆಟಗಾರರನ್ನು ಕಳೆದುಕೊಂಡು ಚೇತರಿಸಿಕೊಳ್ಳದ ಸ್ಥಿತಿಗೆ ಸಿಲುಕಿತು.

ಮ್ಯಾಟ್​ ಪಾರ್ಕಿನ್ಸನ್ ಅವರ ಲೆಗ್ ಬ್ರೇಕ್ ಎಸೆತ ಆಜಂ ಖಾನ್ ಅವರನ್ನು ವಂಚಿಸಿ ಸ್ಟಂಪ್ಡ್ ಆದ ನಂತರ ವೇಗದ ಬೌಲರ್ ಸಾದಿಕ್ ಮಹಮೂದ್ ಪಾಕಿಸ್ತಾನದ ಬಾಲ ಯಾವುದೇ ಪ್ರತಿರೋಧ ತೋರದಂತೆ ಮಾಡಿದರು. ಪ್ರವಾಸಿರು 20 ಓವರ್​ಗಳಲ್ಲಿ 155/9 ಮೊತ್ತವನ್ನಷ್ಟೇ ಕಲೆಹಾಕಿದರು.

ಇದಕ್ಕೆ ಮೊದಲು ರಾಷ್ಟ್ರೀಯ ತಂಡಕ್ಕೆ ತಮ್ಮ ವಾಪಸ್ಸಾತಿಯನ್ನು ಬಟ್ಲರ್ ಟಿ20ಐ ಗಳಲ್ಲಿ ತನ್ನ 14ನೇ ಅರ್ಧ ಬಾರಿಸುವ ಮೂಲಕ ಸಂಭ್ರಮಿಸಿದರು. ಇಂಗ್ಲೆಂಡ್ 20 ನೇ ಓವರ್ ಕೊನೆ ಎಸೆತ ಬಾಕಿಯಿರುವಾಗ 200 ರನ್​ ಮೊತ್ತಕ್ಕೆ ತನ್ನೆಲ್ಲ ವಿಕೆಟ್​ ಕಳೆದುಕೊಂಡಿತು.

ಹಿಮ್ಮಡಿ ನೋವಿಗೊಳಗಾಗಿದ್ದ ಬಟ್ಲರ್ ಫಿಟ್​ ಆಗಿದ್ದಾರೆಂದು ಫಿಸಿಯೋ ಘೋಷಿಸಿದ ನಂತರ ರೆಗ್ಯುಲರ್ ನಾಯಕ ಅಯಾನ್ ಮೊರ್ಗನ್, ಟಿ20 ವಿಶ್ವಕಪ್​ಗೆ ಮೊದಲು ತಮ್ಮ ತಂಡದ ಆಟಗಾರರನ್ನು ರೊಟೇಟ್ ಮಾಡುವ ಉದ್ದೇಶದಿಂದ ರೆಸ್ಟ್ ಮಾಡುವ ನಿರ್ಧಾರವನ್ನು ಪ್ರಕಟಿಸಿದ ಮೇಲೆ ಬಟ್ಲರ್​ಗೆ ನಾಯಕತ್ವ ಜವಾಬ್ದಾರಿ ನೀಡಲಾಯಿತು.

ಮೊದಲ ಮೂರು ಓವರ್​ಗಳ ಆಟದಲ್ಲಿ ಜೇಸನ್ ರಾಯ್ ಮತ್ತು ದಾವಿದ ಮಲಾನ್ ಅವರನ್ನು ಕಳೆದುಕೊಂಡ ಇಂಗ್ಲೆಂಡ್​ ತಂಡಕ್ಕೆ ಬಟ್ಲರ್ ಮತ್ತು ಮೊಯೀನ್ 67 ರನ್​ಗಳ ಜೊತೆಯಾಟದಲ್ಲಿ ಪಾಲ್ಗೊಳ್ಳುವ ಮೂಲಕ ಆಸರೆಯಾದರು.

ಮೊಯೀನ್ 36 ರನ್ ಗಳಿಸಿ ವೇಗದ ಬೌಲರ್ ಮೊಹಮ್ಮದ್ ಹಸ್ನೇನ್​ಗೆ ವಿಕೆಟ್ ಒಪ್ಪಿಸಿದರು ಆದರೆ, ಬಟ್ಲರ್ ಹಿಂದಿನ ಪಂದ್ಯದಲ್ಲಿ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ್ದ ಲಿಯಾಮ್ ಲಿವಿಂಗ್​ಸ್ಟೋನ್ ಜೊತೆ ರನ್ ಗಳಿಕೆಯ ವೇಗವನ್ನು ವೃದ್ಧಿಸಿದರು.

ಬಟ್ಲರ್ ಅವರು ಹಸ್ನೇನ್​ಗೆ ಎರಡನೇ ಆಹುತಿಯಾದರೂ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್​ ಪರ ಅತಿ ವೇಗದ ಶತಕ ದಾಖಲಿಸಿದ ಫಾರ್ಮನ್ನೇ ಇಲ್ಲೂ ಮುಂದುವರೆಸಿದ ಲಿವಿಂಗ್​ಸ್ಟೋನ್ ಮತ್ತೊಂದು ರೋಮಾಂಚಕ ಇನ್ನಿಂಗ್ಸ್ ಆಡಿದರು. ಹ್ಯಾರಿಸ್ ರೌಫ್​ ಅವರ ಎಸೆತವೊಂದನ್ನು ಹೊಸದಾಗಿ ನಿರ್ಮಿಸಲಾಗಿರುವ ಫುಟ್​ಬಾಲ್​ ಸ್ಟೇಡಿಯಂ ಮೇಲಿಂದ ಸಿಕ್ಸರ್​ಗೆ ಎತ್ತಿ ದಿನದ ಬಿಗ್​ ಹಿಟ್​ ಸಹ ಅವರೇ ಬಾರಿಸಿದರು.

ಲಿವಿಂಗ್​ಸ್ಟೋನ್ 28 ಎಸೆತಗಳಲ್ಲಿ 38ರನ್ ಬಾರಿಸಿ ಔಟಾದ ನಂತರ ಕೆಳ ಕ್ರಮಾಂಕದ ಆಟಗಾರರು ಕೊನೆಯ 4 ಓವರ್​ಗಳಲ್ಲಿ 35 ರನ್ ಗಳಿಸಿ ತಂಡದ ಮೊತ್ತ ಸತತವಾಗಿ ಎರಡನೇ ಬಾರಿ 200 ಮುಟ್ಟುವಂತೆ ಮಾಡಿದರು.

ಮೊಯೀನ್ ಅಲಿ ತಮ್ಮ ಅಲ್​ರೌಂಡ್ ಆಟದ ಪ್ರದರ್ಶನಕ್ಕೆ ಪಂದ್ಯದ ವ್ಯಕ್ತಿ ಪ್ರಶಸ್ತಿ ಪಡೆದರು.

ಎರಡು ತಂಡಗಳ ನಡುವೆ ಮೂರನೇ ಮತ್ತು ನಿರ್ಣಾಯಕ ಪಂದ್ಯ ಮಂಗಳವಾರ ಮ್ಯಾಂಚೆಸ್ಟರ್​ನಲ್ಲಿ ನಡೆಯಲಿದೆ.

ಇದನ್ನೂ ಓದಿ: Photos: ರಜೆ ಮುಗಿಸಿ ನೆಟ್‌ ಸೆಷನ್‌ ಆರಂಭಿಸಿದ ಕೊಹ್ಲಿ ಬಳಗ; ಟೀಂ ಇಂಡಿಯಾ ಆಟಗಾರರು ಮೈದಾನದಲ್ಲಿ ಬೆವರಿಳಿಸಿದ್ದು ಹೀಗೆ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada