ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಎರಡನೇ ಆವೃತ್ತಿ ಭಾರತ ಮತ್ತು ಇಂಗ್ಲೆಂಡ್ ನಡುವಿನ ಸರಣಿಯೊಂದಿಗೆ ಆರಂಭ: ಐಸಿಸಿ
ಟೆಸ್ಟ್ಗಳ ಸಂಖ್ಯೆಯ ದೃಷ್ಟಿಯಿಂದ ನೋಡಿದರೆ, ಇಂಗ್ಲೆಂಡ್ ಉಳಿದೆಲ್ಲ ದೇಶಗಳಿಗಿಂತ ಜಾಸ್ತಿ ಅಂದರೆ 21 ಟೆಸ್ಟ್ಗಳನ್ನಾಡಲಿದೆ. ಎರಡನೇ ಸ್ಥಾನದಲ್ಲಿದಿರುವ ಭಾರತ 19 ಟೆಸ್ಟ್ಗಳನ್ನಾಡಲಿದೆ. ಆಸ್ಟ್ರೇಲಿಯ 18 ಟೆಸ್ಟ್ಗಳನ್ನಾಡಲಿದ್ದರೆ, ದಕ್ಷಿಣ ಆಫ್ರಿಕ 15 ಟೆಸ್ಟ್ಗಳಲ್ಲಿ ಭಾಗವಹಿಸಲಿದೆ.
ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ (ಡಬ್ಲ್ಯೂಟಿಸಿ) ಮೊದಲ ಆವೃತ್ತಿಯು ನ್ಯೂಜಿಲೆಂಡ್ ಪಟ್ಟ ಧರಿಸುವುದರೊಂದಿಗೆ ಕೊನೆಗೊಂಡಿದೆ. ಎರಡನೇ ಆವೃತ್ತಿ ಅಂದರೆ ದ್ವಿತೀಯ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಆವೃತ್ತಿಯ ಸೈಕಲನ್ನು ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಇಷ್ಟರಲ್ಲೇ ಪ್ರಕಟಿಸುವುದು ಎಂದು ಈ ಹಿಂದೆ ನಾವು ಚರ್ಚಿಸಿದ್ದು ಓದುಗರಿಗೆ ನೆನಪಿರಬಹುದು. ಅದರಂತೆ ಆಗಸ್ಟ್ ತಿಂಗಳಲ್ಲಿ ಅರಂಭಗೊಳ್ಳುವ ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯೊಂದಿಗೆ ವರಡನೇ ಡಬ್ಲ್ಯೂಟಿಸಿ ಸೈಕಲ್ ಶುರುವಾಗಲಿದೆಯೆಂದು ಐಸಿಸಿ ಬುಧವಾರ ತಿಳಿಸಿದೆ. ಮೂಲಗಳ ಪ್ರಕಾರ ಆಗಸ್ಟ್ 2021 ರಿಂದ ಆರಂಭಗೊಂಡು ಜೂನ್ 2023ರವರಗೆ ನಡೆಯುವ ಎರಡನೇ ಡಬ್ಲ್ಯೂಟಿಸಿ ಸೈಕಲ್ನಲ್ಲಿ ಕೇವಲ ಎರಡು ಮಾತ್ರ 5-ಪಂದ್ಯಗಳ ಟೆಸ್ಟ್ ಸರಣಿಗಳಾಗಿವೆ. ಮೊದಲನೆಯದ್ದು ಭಾರತ ಮತ್ತು ಇಂಗ್ಲೆಂಡ್ ನಡುವೆ ಆಗಸ್ಟ್ನಲ್ಲಿ ಶುರುವಾಗುವ ಸರಣಿಯಾದರೆ ವರ್ಷಾಂತ್ಯದಲ್ಲಿ ನಡೆಯುವ ಌಶಸ್ ಎರಡನೇಯದ್ದು. ಹಾಗೆಯೇ, 2022 ರಲ್ಲಿ ಭಾರತ ಪ್ರವಾಸ ಮಾಡಲಿರುವ ಆಸ್ಟ್ರೇಲಿಯ 4-ಪಂದ್ಯಗಳ ಸರಣಿಯನ್ನಾಡಲಿದ್ದು, ಸದರಿ ಸರಣಿಯು ಎರಡನೇ ಡಬ್ಲ್ಯೂಟಿಸಿ ಸೈಕಲ್ನಲ್ಲಿ ಆಯೋಜಿಸಲ್ಪಡುವ ಏಕಮಾತ್ರ 4-ಪಂದ್ಯಗಳ ಸರಣಿ ಆಗಲಿದೆ.
ಇವಲ್ಲದೆ, ಈ ಸೈಕಲ್ನಲ್ಲಿ 3 ಪಂದ್ಯಗಳ 7 ಸರಣಿಗಳು ಮತ್ತು 2-ಪಂದ್ಯಗಳ 13 ಸರಣಿಗಳು ನಡೆಯಲಿವೆ. ಮೊದಲ ಸೈಕಲ್ನಂತೆ ಡಬ್ಲ್ಯೂಟಿಸಿಯಲ್ಲಿ ಪಾಲ್ಗೊಳ್ಳುವ 9 ತಂಡಗಳು ಒಟ್ಟು 6 ಸರಣಿಗಳನ್ನು-3 ಸ್ವದೇಶದಲ್ಲಿ ಮತ್ತು 3 ವಿದೇಶಗಳಲ್ಲಿ ಆಡುವುದು ಮುಂದುವರಿಸಲಿವೆ.
ಆದರೆ ಟೆಸ್ಟ್ಗಳ ಸಂಖ್ಯೆಯ ದೃಷ್ಟಿಯಿಂದ ನೋಡಿದರೆ, ಇಂಗ್ಲೆಂಡ್ ಉಳಿದೆಲ್ಲ ದೇಶಗಳಿಗಿಂತ ಜಾಸ್ತಿ ಅಂದರೆ 21 ಟೆಸ್ಟ್ಗಳನ್ನಾಡಲಿದೆ. ಎರಡನೇ ಸ್ಥಾನದಲ್ಲಿದಿರುವ ಭಾರತ 19 ಟೆಸ್ಟ್ಗಳನ್ನಾಡಲಿದೆ. ಆಸ್ಟ್ರೇಲಿಯ 18 ಟೆಸ್ಟ್ಗಳನ್ನಾಡಲಿದ್ದರೆ, ದಕ್ಷಿಣ ಆಫ್ರಿಕ 15 ಟೆಸ್ಟ್ಗಳಲ್ಲಿ ಭಾಗವಹಿಸಲಿದೆ.
ವಿಶ್ವ ಚಾಂಪಿಯನ್ ನ್ಯೂಜಿಲೆಂಡ್ ಕೇವಲ 13 ಟೆಸ್ಟ್ಗಳನ್ನಾಡಲಿದೆ. ಪಾಕಿಸ್ತಾನ ಕಿವಿಗಳಿಗಿಂತ ಒಂದು ಟೆಸ್ಟ್ ಕಡಿಮೆ ಆಡಲಿದ್ದರೆ, ವೆಸ್ಟ್ ಇಂಡೀಸ್ ಮತ್ತು ಶ್ರೀಲಂಕಾ ಸಹ ತಲಾ 13 ಟೆಸ್ಟ್ಗಳನ್ನಾಡಲಿವೆ.
ಡಬ್ಲ್ಯೂಟಿಸಿ 2ಕ್ಕೆ ಹೊಸ ಪಾಯಿಂಟ್ಸ್ ಪದ್ಧತಿ
ಐಸಿಸಿ ಎಲ್ಲ ಟೆಸ್ಟ್ ಪಂದ್ಯಗಳಿಗೆ ಒಂದೇ ತೆರನಾದ ಪಾಯಿಂಟ್ಸ್ ನೀಡುವ ನಿರ್ಧಾರ ತೆಗೆದುಕೊಂಡಿದೆ. ಟೆಸ್ಟ್ನಲ್ಲಿ ಗೆಲುವು ಸಾಧಿಸುವ ತಂಡಕ್ಕೆ 12 ಅಂಕಗಳು ಸಿಗಲಿವೆ. ಪಂದ್ಯ ಡ್ರಾ ಆದರೆ ಎರಢೂ ತಂಡಗಳಿಗೆ ತಲಾ 4 ಪಾಯಿಂಟ್ಸ್ಗಳನ್ನು ಹಂಚಲಾಗುವುದು. ಒಂದು ಪಕ್ಷ ಪಂದ್ಯ ಟೈನಲ್ಲಿ ಅಂತ್ಯ ಕಂಡರೆ ಟೀಮುಗಳು ತಲಾ 6 ಅಂಕಗಳನ್ನು ಹಂಚಿಕೊಳ್ಳಲಿವೆ.
ಹಾಗೆಯೇ, ನಿಧಾನ ಗತಿಯ ಓವರ್ ರೇಟ್ಗಳಿಗೆ ಪೆನಾಲ್ಟಿ ವಿಧಿಸುವ ನಿರ್ಧಾರವನ್ನು ಐಸಿಸಿ ತೆಗೆದುಕೊಂಡಿದೆ. ನಿಗದಿತ ಓವರ್ ರೇಟ್ ಕಾಯ್ದುಕೊಳ್ಳದ ತಂಡಕ್ಕೆ ಅದರ ಪಾಯಿಂಟ್ಸ್ ಟ್ಯಾಲಿಯಿಂದ 1 ಅಂಕವನ್ನು ಕಡಿತಗೊಳಿಸಲಾಗುವುದು. ಶೆಡ್ಯೂಲ್ ಮತ್ತು ಫೈನಲ್ ಪಂದ್ಯ ನಡೆಯುವ ಸ್ಥಳವನ್ನು ಇನ್ನೂ ನಿರ್ಧರಿಸಿಲ್ಲ ಎಂದು ಐಸಿಸಿ ಹೇಳಿದೆ.
ಮೊದಲ ಡಬ್ಲ್ಯೂಟಿಸಿ ಸೈಕಲ್ನಲ್ಲಿ ಸರಣಗಳಿಗೆ ಏಕರೂಪದ ಅಂಕಗಳನ್ನು ನೀಡಲಾಗಿತ್ತು, ಟೆಸ್ಟ್ಗಳಿಗಲ್ಲ. ‘ಹಾಗೆ ಮಾಡಿದ ಹಿಂದಿನ ಉದ್ದೇಶ, ತಂಡಗಳು ಬೇರೆ ಬೇರೆ ಸಂಖ್ಯೆಯ ಸರಣಿ ಮತ್ತು ಟೆಸ್ಟ್ ಪಂದ್ಯಗಳನ್ನಾಡಿದ್ದರೂ. ಸೈಕಲ್ನ ಯಾವುದೇ ಹಂತದಲ್ಲಿ ಟೀಮುಗಳ ಪಾಯಿಂಟ್ಸ್ ಟ್ಯಾಲಿಯನ್ನು ಹೋಲಿಸುವುದಕ್ಕೆ ಸಾಧ್ಯವಾಗುವ ಹಾಗೆ ಸರಳೀಕರಿಸುವ ಪ್ರಯತ್ನ ಮಾಡಲಾಗಿತ್ತು,’ ಎಂದು ಐಸಿಸಿಯ ಹಂಗಾಮಿ ಮುಖ್ಯ ಕಾರ್ಯ ನಿರ್ವವಹಣಾಧಿಕಾರಿ ಜೆಫ್ ಅಲ್ಲರ್ಡೈಸ್ ಹೇಳಿದರೆಂದು ಕ್ರೀಡಾ ವೆಬ್ಸೈಟ್ ವರದಿ ಮಾಡಿದೆ.
ಇದನ್ನೂ ಓದಿ: WTC Final: ಜಡೇಜಾ ಆಲ್ರೌಂಡರ್ ಕೋಟಾದಲ್ಲಿ ಆಯ್ಕೆಯಾಗಿರಲಿಲ್ಲ! ಟೀಂ ಇಂಡಿಯಾ ಸೋಲಿಗೆ ಕಾರಣ ವಿವರಿಸಿದ ಸಂಜಯ್ ಮಂಜ್ರೇಕರ್
Published On - 4:41 pm, Wed, 30 June 21