
ಒಲಿಂಪಿಕ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಹಾಕಿಯ ಸೆಮಿ ಫೈನಲ್ ಪ್ರವೇಶಿಸಿ ಇತಿಹಾಸ ಬರೆದಿದ್ದ ಭಾರತ ಮಹಿಳಾ ತಂಡ ಫೈನಲ್ಗೇರಲು ವಿಫಲವಾಗಿದೆ. ಅರ್ಜೇಂಟಿನಾ ವಿರುದ್ಧ ನಡೆದ ಸೆಮಿ ಫೈನಲ್ ಕದನದಲ್ಲಿ ಭಾರತ 1-2 ಗೋಲುಗಳ ಅಂತರದಿಂದ ಸೋಲು ಕಂಡಿದೆ. ಆದರೆ, ಭಾರತಕ್ಕೆ ಕಂಚು ಗೆಲ್ಲುವ ಅವಕಾಶವಿದ್ದು, ಇನ್ನೊಂದು ಸೆಮಿ ಫೈನಲ್ನಲ್ಲಿ ಸೋಲುವ ತಂಡದ ವಿರುದ್ಧ ಪಂದ್ಯವಿದೆ. ಇದರಲ್ಲಿ ಭಾರತ ಮಹಿಳಾ ಹಾಕಿ ತಂಡ ಗೆದ್ದರೆ ಕಂಚಿನ ಪದಕ ಮುಡಿಗೇರಿಸಿಕೊಳ್ಳಲಿದೆ.
ಪಂದ್ಯ ಆರಂಭವಾದ ಕೇವಲ ಎರಡು ನಿಮಿಷದಲ್ಲೇ ಭಾರತಕ್ಕೆ ಮೊದಲ ಗೋಲು ದಕ್ಕಿತು. ವಂದನಾ ಅವರು ತಂಡಕ್ಕೆ ಖಾತೆ ತೆರೆದು ಮೊದಲ ಕ್ವಾರ್ಟರ್ನಲ್ಲಿ ಭಾರತ 1-0 ಮುನ್ನಡೆ ಸಾಧಿಸುವಂತೆ ಮಾಡಿದರು. ಎರಡನೇ ಕ್ವಾರ್ಟರ್ನ ಆರಂಭದಲ್ಲಿ ಅರ್ಜೇಂಟಿನಾ ಪೆನಾಲ್ಟಿ ಕಾರ್ನರ್ ಅವಕಾಶ ಪಡೆದುಕೊಂಡು ತನ್ನ ಖಾತೆ ತೆರೆಯಿತು. ಈ ಮೂಲಕ ಮೊದಲಾರ್ಧದ ವೇಳೆಗೆ ಉಭಯ ತಂಡಗಳು ಸಲಬಲ ಸಾಧಿಸಿದವು.
ಮೂರನೇ ಕ್ವಾರ್ಟರ್ನಲ್ಲಿ ಸಿಕ್ಕ ಪೆನಾಲ್ಟಿ ಕಾರ್ನರ್ ಅವಕಾಶವನ್ನು ಅದ್ಭುತವಾಗಿ ಉಪಯೋಗಿಸಿಕೊಂಡ ಅರ್ಜೇಂಟಿನಾ 2-1ರ ಮುನ್ನಡೆ ಸಾಧಿಸಿತು. ಮೂರನೇ ಮತ್ತು ಅಂತಿಮ ನಾಲ್ಕನೆ ಕ್ವಾರ್ಟರ್ನಲ್ಲಿ ಆಕ್ರಮಣ ಆಟ ಪ್ರದರ್ಶಿಸಿದ ಅರ್ಜೇಂಟಿನಾ ಭಾರತಕ್ಕೆ ಗೋಲು ದಾಖಲಿಸಲು ಅವಕಾಶವೇ ಕೊಡಲಿಲ್ಲ. ಅಂತಿಮವಾಗಿ ಅರ್ಜೇಂಟಿನಾ 2-1 ಗೋಲುಗಳ ಅಂತರದಿಂದ ಗೆದ್ದು ಫೈನಲ್ಗೆ ಪ್ರವೇಶ ಪಡೆದಿದೆ. ಭಾರತ ಮಹಿಳಾ ಹಾಕಿ ತಂಡದ ಚೊಚ್ಚಲ ಫೈನಲ್ ಕನಸು ಭಗ್ನಗೊಂಡಿದೆ.
ಇದಕ್ಕೂ ಮುನ್ನ ಗುಂಪು ಹಂತದ ಪಂದ್ಯದಲ್ಲಿ ಮೊದಲ 3 ಪಂದ್ಯ ಸೋತಿದ್ದ ಭಾರತ ಆ ಬಳಿಕ ಸತತ 2 ಪಂದ್ಯ ಗೆದ್ದು ಭರ್ಜರಿ ಕಮ್ಬ್ಯಾಕ್ ಮಾಡಿ ಕ್ವಾರ್ಟರ್ ಫೈನಲ್ ಪ್ರವೇಶಿಸಿತ್ತು. ಇಲ್ಲಿ 3 ಬಾರಿ ಒಲಿಂಪಿಕ್ಸ್ ಚಾಂಪಿಯನ್ ಆಸ್ಪ್ರೇಲಿಯಾವನ್ನು 1-0 ಗೋಲಿನಿಂದ ಕಟ್ಟಿಹಾಕಿ ಸೆಮಿ ಫೈನಲ್ಗೆ ಪ್ರವೇಶ ಪಡೆದು ಜಗತ್ತೇ ಬೆರಗಾಗುವಂತೆ ಮಾಡಿತ್ತು.
ಇನ್ನೂ ಭಾರತದ ಖ್ಯಾತ ಕುಸ್ತಿತಿಪಟು ರವಿಕುಮಾರ್ ಇತಿಹಾಸ ನಿರ್ಮಿಸಿದ್ದಾರೆ. ಬುಧವಾರ ನಡೆದ ಪುರುಷರ 57 ಕೆ.ಜಿ. ಫ್ರಿಸ್ಟೈಲ್ ವಿಭಾಗದ ಸೆಮಿಫೈನಲ್ ಮುಖಾಮುಖಿಯಲ್ಲಿ ರವಿಕುಮಾರ್ ಕಜಕಿಸ್ತಾನದ ನುರಿಸ್ಲಾಮ್ ಸನಾಯೆವ್ ವಿರುದ್ಧ ಗೆದ್ದು ಭಾರತಕ್ಕೆ ಮಗದೊಂದು ಪದಕ ಖಾತ್ರಿಪಡಿಸಿದ್ದಾರೆ.
ರವಿ ಅವರು ಪುರುಷರ 57 ಕೆ.ಜಿ. ವಿಭಾಗದ ಫ್ರೀ ಸ್ಟ್ರೈಲ್ ಕುಸ್ತಿ ಸ್ಪರ್ಧೆಯಲ್ಲಿ ಕೊಲಂಬಿಯಾದ ಅರ್ಬಾನೊ ಟೈಗರೋಸ್ ಎದುರು 13-2 ಅಂಕಗಳ ಅಂತರದ ಭರ್ಜರಿ ಗೆಲುವು ಸಾಧಿಸುವ ಮೂಲಕ ಕ್ವಾರ್ಟರ್ ಫೈನಲ್ಗೆ ಲಗ್ಗೆಯಿಟ್ಟಿದ್ದರು. ಕ್ವಾರ್ಟರ್ ಫೈನಲ್ನಲ್ಲಿ ಬಲ್ಜೆರಿಯಾದ ಜಾರ್ಗೀ ವಂಗೆಲೊವ್ ಎದುರು 14-4 ಅಂಕಗಳ ಅಂತರದಲ್ಲಿ ಅಮೋಘ ಗೆಲುವು ಸಾಧಿಸಿ ಸೆಮೀಸ್ಗೆ ಅರ್ಹತೆಗಿಟ್ಟಿಸಿಕೊಂಡಿದ್ದರು.