Tokyo Olympics: ಒಲಿಂಪಿಕ್ಸ್​ನಲ್ಲಿ ವಿಶ್ವ ದಾಖಲೆ ಬರೆದ ಭಾರತ..!

Indian Hockey Team Medals: 1964ರ ಟೋಕಿಯೊ ಒಲಿಂಪಿಕ್ಸ್​ನ ಫೈನಲ್​ನಲ್ಲಿ ಏಷ್ಯಾದ ಪ್ರತಿಸ್ಪರ್ಧಿಗಳು ಮತ್ತೊಮ್ಮೆ ಮುಖಾಮುಖಿಯಾದರು. ಆದರೆ ಈ ಬಾರಿ ಕೂಡ ಪಾಕ್​ಗೆ ಸೋಲುಣಿಸುವ ಮೂಲಕ ಭಾರತ ತಮ್ಮ 7ನೇ ಒಲಿಂಪಿಕ್ ಚಿನ್ನವನ್ನು ಗೆದ್ದುಕೊಂಡಿತು

Tokyo Olympics: ಒಲಿಂಪಿಕ್ಸ್​ನಲ್ಲಿ ವಿಶ್ವ ದಾಖಲೆ ಬರೆದ ಭಾರತ..!
indian hockey team
Follow us
|

Updated on:Aug 05, 2021 | 3:24 PM

ಒಲಿಂಪಿಕ್ಸ್ ( Olympics ) ಕ್ರೀಡಾಕೂಟ ಆರಂಭವಾಗಿ 124 ವರ್ಷಗಳು ಕಳೆದಿವೆ. ಚೊಚ್ಚಲ ಬಾರಿ 1896 ರಲ್ಲಿ ಅಥೆನ್ಸ್ ನಗರದಲ್ಲಿ ಒಲಿಂಪಿಕ್ಸ್ ಶುರುವಾಗಿತ್ತು. ಆದರೆ ಭಾರತವು ಒಲಿಂಪಿಕ್ಸ್​ ಕ್ರೀಡಾಕೂಟವನ್ನು ಪ್ರತಿನಿಧಿಸಿದ್ದು 1990 ರಲ್ಲಿ ಎಂಬುದು ವಿಶೇಷ. ಕಳೆದ ಒಂದು ಶತಮಾನದಿಂದಲೂ ಒಲಿಂಪಿಕ್ಸ್​ನಲ್ಲಿ ಭಾರತೀಯ ಕ್ರೀಡಾಪಟುಗಳು ಪಾಲ್ಗೊಳ್ಳುತ್ತಿದ್ದರೂ, ಪ್ರಶಸ್ತಿ ಪಟ್ಟಿಯಲ್ಲಿ ಮಹತ್ವದ ಸಾಧನೆ ಮೆರೆಯಲು ಸಾಧ್ಯವಾಗಿಲ್ಲ ಎಂಬುದೇ ಸತ್ಯ. ಇದಾಗ್ಯೂ ಒಂದು ಕಾಲದಲ್ಲಿ ಭಾರತೀಯ ಹಾಕಿ ( Indian Hockey Team ) ತಂಡವು ಒಲಿಂಪಿಕ್ಸ್​ನ ಹಾಕಿ ಅಂಗಳದಲ್ಲಿ ಪಾರುಪತ್ಯ ಸ್ಥಾಪಿಸಿತ್ತು ಎಂದರೆ ನಂಬಲೇಬೇಕು. ಇದಕ್ಕೆ ಸಾಕ್ಷಿಯೇ ಭಾರತ ಇದುವರೆಗೆ ಗೆದ್ದಿರುವ 9 ಚಿನ್ನದ ಪದಕಗಳ ( Gold medal ) ಪೈಕಿ ಹಾಕಿ ಕ್ರೀಡೆಯಿಂದಲೇ 8 ಸ್ವರ್ಣ ಪದಕಗಳು ಬಂದಿರುವುದು. ಅಷ್ಟೇ ಅಲ್ಲದೆ ಭಾರತಕ್ಕೆ ಚೊಚ್ಚಲ ಬಾರಿ ಚಿನ್ನದ ಪದಕ ತಂದುಕೊಟ್ಟಿದ್ದೂ ಕೂಡ ಹಾಕಿ ತಂಡ ಎಂಬುದು ಇಲ್ಲಿ ವಿಶೇಷ.

– 1928ರಲ್ಲಿ ಆಮ್ಸ್ಟರ್‌ಡ್ಯಾಮ್ ಒಲಿಂಪಿಕ್ಸ್​ನಲ್ಲಿ ಭಾರತ ಹಾಕಿ ತಂಡವು ಫೈನಲ್​ನಲ್ಲಿ ನೆದರ್‌ಲ್ಯಾಂಡ್ಸ್ ತಂಡವನ್ನು 3-0 ಗೋಲುಗಳಿಂದ ಸೋಲಿಸುವ ಮೂಲಕ ಚೊಚ್ಚಲ ಬಾರಿ ಸ್ವರ್ಣ ಪದಕವನ್ನು ಗೆದ್ದುಕೊಂಡಿತು. ಈ ಪಂದ್ಯದಲ್ಲಿ ಹಾಕಿ ದಂತಕಥೆ ಧ್ಯಾನ್ ಚಂದ್ ಮೂರು ಬಾರಿ ಗೋಲು ಗಳಿಸಿ ದೇಶಕ್ಕೆ ಚಿನ್ನದ ಪದಕ ತಂದುಕೊಡುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.

– 1932 ಲಾಸ್ ಏಂಜಲೀಸ್ ಒಲಿಂಪಿಕ್ಸ್​ನಲ್ಲೂ ಪಾರುಪತ್ಯ ಮೆರೆದ ಭಾರತೀಯ ಹಾಕಿ ತಂಡ ಜಪಾನ್ ತಂಡವನ್ನು 11-1ರಿಂದ ಸೋಲಿಸಿ ದಾಖಲೆ ಬರೆದಿತ್ತು. ಅಷ್ಟೇ ಅಲ್ಲದೆ ಫೈನಲ್​ನಲ್ಲಿ ಯುಎಸ್ಎ ತಂಡವನ್ನು 24-1 ಗೋಲುಗಳಿಂದ ಸೋಲಿಸಿ ಹೊಸ ಇತಿಹಾಸ ನಿರ್ಮಿಸಿತು.

– 1936 ಬರ್ಲಿನ್ ಒಲಿಂಪಿಕ್ಸ್​ನಲ್ಲಿ ಆತಿಥೇಯ ಜರ್ಮನಿ ವಿರುದ್ಧ 8-1 ಅಂತರದಿಂದ ಗೆಲ್ಲುವ ಮೂಲಕ ಭಾರತ ತಂಡ ಮೂರನೇ ಬಾರಿ ಒಲಿಂಪಿಕ್ಸ್ ಚಿನ್ನದ ಪದಕಕ್ಕೆ ಕೊರೊಲೊಡ್ಡಿತು.

– 12 ಸುದೀರ್ಘ ವರ್ಷಗಳ ನಂತರ 1948 ರ ಲಂಡನ್ ಒಲಿಂಪಿಕ್ಸ್ ಮತ್ತೊಮ್ಮೆ ಭಾರತವು ಫೈನಲ್‌ ಪ್ರವೇಶಿಸಿತು. ಫೈನಲ್‌ನಲ್ಲಿ ಅವರು ಗ್ರೇಟ್ ಬ್ರಿಟನ್ ತಂಡದ ವಿರುದ್ಧ 4-0 ಗೋಲುಗಳ ಅಂತರದಿಂದ ಜಯ ಸಾಧಿಸಿದ ಭಾರತೀಯ ಹಾಕಿ ತಂಡ 4ನೇ ಬಾರಿ ಒಲಿಂಪಿಕ್ ಚಿನ್ನದ ಪದಕವನ್ನು ತನ್ನದಾಗಿಸಿಕೊಂಡಿತು. ಇದು ಸ್ವತಂತ್ರ ಭಾರತದ ಮೊದಲ ಒಲಿಂಪಿಕ್ಸ್ ಪದಕವಾಗಿತ್ತು. ಅಷ್ಟೇ ಅಲ್ಲದೆ ಈ ವಿಜಯವು ಭಾರತವನ್ನು ಆಳಿದ್ದ ಗ್ರೇಟ್ ಬ್ರಿಟನ್ ವಿರುದ್ದ ಬಂದಿರುವುದು ಮತ್ತೊಂದು ವಿಶೇಷ.

– 1952ರ ಹೆಲ್ಸಿಂಕಿ ಒಲಿಂಪಿಕ್ಸ್​ನಲ್ಲಿ ನೆದರ್ಲ್ಯಾಂಡ್ಸ್ ತಂಡವನ್ನು 6-1 ಅಂತರದಿಂದ ಬಗ್ಗು ಬಡಿಯುವ ಮೂಲಕ ಭಾರತ ಮತ್ತೊಮ್ಮೆ ಸ್ವರ್ಣ ಪದಕಕ್ಕೆ ಕೊರೊಳೊಡ್ಡಿತು.

– 1956 ಮೆಲ್ಬೋರ್ನ್​ ಒಲಿಂಪಿಕ್ಸ್​ನ ಫೈನಲ್ ಪಂದ್ಯವು ಭಾರತದ ಪಾಲಿಗೆ ಮಹತ್ವದ್ದಾಗಿತ್ತು. ಏಕೆಂದರೆ ಅದೇ ಮೊದಲ ಬಾರಿ ಭಾರತ-ಪಾಕಿಸ್ತಾನ್ ಫೈನಲ್​ನಲ್ಲಿ ಮುಖಾಮುಖಿಯಾಗಿತ್ತು. ರೋಚಕ ಹೋರಾಟಕ್ಕೆ ಸಾಕ್ಷಿಯಾಗಿದ್ದ ಫೈನಲ್​ನಲ್ಲಿ ಭಾರತವು 1-0 ಅಂತರದಲ್ಲಿ ಜಯಗಳಿಸುವ ಮೂಲಕ ಚಿನ್ನದ ಪದಕವನ್ನು ತನ್ನದಾಗಿಸಿಕೊಂಡಿತು.

-1960ರ ರೋಮ್ ಒಲಿಂಪಿಕ್ಸ್​ ಫೈನಲ್​ನಲ್ಲಿ ಭಾರತ ಹಾಗೂ ಪಾಕಿಸ್ತಾನ ಫೈನಲ್​ನಲ್ಲಿ ಮುಖಾಮುಖಿಯಾಗಿತ್ತು. ಈ ಪಂದ್ಯದಲ್ಲಿ 1-0 ಅಂತರದಿಂದ ಪರಾಜಯ ಅನುಭವಿಸುವ ಮೂಲಕ ಭಾರತ ಮೊದಲ ಬಾರಿ ಒಲಿಂಪಿಕ್ಸ್​ನಲ್ಲಿ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡಿತು.

– 1964ರ ಟೋಕಿಯೊ ಒಲಿಂಪಿಕ್ಸ್​ನ ಫೈನಲ್​ನಲ್ಲಿ ಏಷ್ಯಾದ ಪ್ರತಿಸ್ಪರ್ಧಿಗಳು ಮತ್ತೊಮ್ಮೆ ಮುಖಾಮುಖಿಯಾಗಿದ್ದರು. ಆದರೆ ಈ ಬಾರಿ ಕೂಡ ಪಾಕ್​ಗೆ ಸೋಲುಣಿಸುವ ಮೂಲಕ ಭಾರತ ತಮ್ಮ 7ನೇ ಒಲಿಂಪಿಕ್ ಚಿನ್ನವನ್ನು ಗೆದ್ದುಕೊಂಡಿತು.

– 1968ರ ಮೆಕ್ಸಿಕೊ ಒಲಿಂಪಿಕ್ಸ್​ ಫೈನಲ್​ನಲ್ಲಿ ಭಾರತ ಜರ್ಮನಿ ವಿರುದ್ದ ಮೂರನೇ ಸ್ಥಾನಕ್ಕಾಗಿ ಸ್ಪರ್ಧಿಸಿತ್ತು. ಈ ಪಂದ್ಯದಲ್ಲಿ ಜರ್ಮನಿ ತಂಡವನ್ನು 2-1 ಅಂತರದಿಂದ ಬಗ್ಗು ಬಡಿಯುವ ಮೂಲಕ ಭಾರತ ಚೊಚ್ಚಲ ಬಾರಿ ಕಂಚಿನ ಪದಕವನ್ನು ತನ್ನದಾಗಿಸಿಕೊಂಡಿತು.

-1972 ರಲ್ಲಿ ಜರ್ಮನಿಯಲ್ಲಿ ನಡೆದ ಒಲಿಂಪಿಕ್ಸ್​ನಲ್ಲಿ ಭಾರತ ಹಾಗೂ ನೆದರ್ಲ್ಯಾಂಡ್ಸ್ 3ನೇ ಸ್ಥಾನಕ್ಕಾಗಿ ಮುಖಾಮುಖಿಯಾಗಿತ್ತು. ಈ ಪಂದ್ಯದಲ್ಲಿ 2-1 ಅಂತರದಿಂದ ಗೆಲ್ಲುವ ಮೂಲಕ ಮತ್ತೊಮ್ಮೆ ಭಾರತದ ಹಾಕಿ ತಂಡ ಕಂಚಿನ ಪದಕದೊಂದಿಗೆ ಮರಳಿತ್ತು.

– 1980ರ ಮಾಸ್ಕೋ ಒಲಿಂಪಿಕ್ಸ್​: ಟೋಕಿಯೋ ಒಲಿಂಪಿಕ್ಸ್ ಬಳಿಕ ಸತತ 3 ಒಲಿಂಪಿಕ್ಸ್​ನಲ್ಲಿ ಚಿನ್ನದ ಪದಕ ಗೆಲ್ಲುವಲ್ಲಿ ವಿಫಲರಾಗಿದ್ದ ಭಾರತೀಯ ಹಾಕಿ ತಂಡ 1980ರ ಮಾಸ್ಕೋ ಒಲಿಂಪಿಕ್ಸ್ ಮೂಲಕ ಮತ್ತೊಮ್ಮೆ ಸ್ವರ್ಣ ಪದಕಕ್ಕೆ ಮುತ್ತಿಕ್ಕಿತು. ಫೈನಲ್​ನಲ್ಲಿ ಸ್ಪೇನ್ ತಂಡವನ್ನು ಸೋಲಿಸಿ ಹಾಕಿಯಲ್ಲಿ 8ನೇ ಚಿನ್ನದ ಪದಕ ಗೆದ್ದರು. ಇದಾದ ಬಳಿಕ ಹಾಕಿಯಲ್ಲಿ ಭಾರತಕ್ಕೆ ಚಿನ್ನದ ಪದಕ ಲಭಿಸಿಲ್ಲ.

ಇದೀಗ 41 ವರ್ಷಗಳ ಬಳಿಕ ಟೋಕಿಯೋ ಒಲಿಂಪಿಕ್ಸ್​ ಮೂಲಕ ಮತ್ತೊಮ್ಮೆ ಭಾರತೀಯ ಹಾಕಿ ತಂಡ ಕಂಚಿನ ಪದಕವನ್ನು ಗೆದ್ದುಕೊಂಡಿದೆ. 3ನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಜರ್ಮನಿಯನ್ನು 5-4 ಅಂತರದಿಂದ ಮಣಿಸುವ ಮೂಲಕ 4 ದಶಕಗಳ ಬಳಿಕ ಮತ್ತೊಮ್ಮೆ ಪದಕ ಗೆದ್ದಿದೆ. ಈ ಮೂಲಕ ಒಲಿಂಪಿಕ್ಸ್ ಇತಿಹಾಸದಲ್ಲೇ ಅತ್ಯಂತ ಯಶಸ್ವಿ ಹಾಕಿ ತಂಡ ಎನಿಸಿಕೊಂಡಿದೆ.

ಇದುವರೆಗೆ ಒಲಿಂಪಿಕ್ಸ್​ನಲ್ಲಿ ಭಾರತದ ಹಾಕಿ ತಂಡ 12 ಪದಕ (8 ಚಿನ್ನ, 1, ಬೆಳ್ಳಿ, 3 ಕಂಚು) ಗೆದ್ದುಕೊಂಡಿತು. ಇದು ಒಲಿಂಪಿಕ್ಸ್​ ಇತಿಹಾಸದಲ್ಲೇ ತಂಡವೊಂದರೆ ಸರ್ವಶ್ರೇಷ್ಠ ಸಾಧನೆ. ಈ ಹಿಂದೆ 11 ಪದಕ ಗೆದ್ದು ಜರ್ಮನಿ ಹಾಕಿ ತಂಡ ಒಲಿಂಪಿಕ್ಸ್​ ಇತಿಹಾಸ ನಿರ್ಮಿಸಿತ್ತು. ಇದೀಗ ಟೋಕಿಯೋ ಒಲಿಂಪಿಕ್ಸ್​ನಲ್ಲಿ ಜರ್ಮನಿಯನ್ನು ಮಣಿಸುವ ಮೂಲಕ ಭಾರತದ ಹಾಕಿ ತಂಡ ಹೊಸ ದಾಖಲೆ ಬರೆದಿದೆ.

ಇದನ್ನೂ ಓದಿ:-

ಭಾರತ ಮಹಿಳಾ ಹಾಕಿ ತಂಡದ ಆಟಗಾರರಿಗೆ ಮನೆ ಕಟ್ಟಲು ಹಣ, ಕಾರು: ವಜ್ರದ ವ್ಯಾಪಾರಿ ಘೋಷಣೆ

ವಿನೇಶ್ ಪೋಗತ್ ಆಕ್ರಮಣಕಾರಿ ಆಟ: ಕ್ವಾರ್ಟರ್ ಫೈನಲ್​ಗೆ ಎಂಟ್ರಿ

Published On - 2:55 pm, Thu, 5 August 21