ಟೋಕಿಯೊ ಒಲಿಂಪಿಕ್ಸ್ನಲ್ಲಿ ಭಾರತೀಯ ಪುರುಷರ ಹಾಕಿ ತಂಡ ಗೆಲುವಿನ ನಾಗಾಲೋಟ ಮುಂದುವರೆಸಿದೆ. ಭಾನುವಾರ ನಡೆದ ಎಂಟರಘಟ್ಟದ ಹಣಾಹಣಿಯಲ್ಲಿ ಬಿಟ್ರನ್ ತಂಡವನ್ನು 3-1 ಅಂತರದಿಂದ ಮಣಿಸುವ ಮೂಲಕ ಟೀಮ್ ಇಂಡಿಯಾ ಸೆಮಿ ಫೈನಲ್ ಪ್ರವೇಶಿಸಿದೆ. ಜಿದ್ದಾಜಿದ್ದಿನ ಹೋರಾಟಕ್ಕೆ ಸಾಕ್ಷಿಯಾಗಿದ್ದ ಸೆಮಿ ಫೈನಲ್ ಪಂದ್ಯದಲ್ಲಿ ಭಾರತ ಮೊದಲ ಗೋಲು ದಾಖಲಿಸಿತು. ಪಂದ್ಯ ಶುರುವಾದ 9 ನಿಮಿಷದಲ್ಲೇ ಪ್ರಥಮ ಗೋಲು ದಾಖಲಿಸಿ ದಿಲ್ಪ್ರೀತ್ ಸಿಂಗ್ ಭಾರತಕ್ಕೆ ಆರಂಭಿಕ ಯಶಸ್ಸು ತಂದುಕೊಟ್ಟರು.
ಆ ಬಳಿಕ ಮತ್ತಷ್ಟು ಆಕ್ರಮಣಕಾರಿ ಆಟವಾಡಿದ ಭಾರತ ಸತತವಾಗಿ ಬ್ರಿಟನ್ ಗೋಲ್ನತ್ತ ದಾಳಿ ನಡೆಸಿತು. ಪಂದ್ಯದ 21 ನಿಮಿಷದಲ್ಲಿ ಸಿಕ್ಕ ಮತ್ತೊಂದು ಅವಕಾಶವನ್ನು ಬಳಸಿಕೊಂಡ ಗುಜರಂತ್ ಸಿಂಗ್ ಚೆಂಡನ್ನು ಗೋಲ್ ಬಲೆಯೊಳಗೆ ತಲುಪಿಸಿದರು. ಅದರಂತೆ ಮೊದಲಾರ್ಧ ಮುಕ್ತಾಯದ ವೇಳೆಗೆ ಭಾರತ 2-0 ಮುನ್ನಡೆ ಪಡೆದುಕೊಂಡಿತು.
ಆದರೆ ಮೂರನೇ ಕ್ವಾರ್ಟರ್ನಲ್ಲಿ ಕಂಬ್ಯಾಕ್ ಮಾಡಿದ ಬ್ರಿಟನ್ ಅಟ್ಯಾಕಿಂಗ್ ಆಟದ ಮೂಲಕ ಭಾರತದ ರಕ್ಷಣಾ ಪಡೆಯನ್ನು ಬೇಧಿಸುವ ಸತತ ಪ್ರಯತ್ನ ಮಾಡಿದರು. ಪರಿಣಾಮ 45ನೇ ನಿಮಿಷದಲ್ಲಿ ಸಿಕ್ಕ ಪೆನಾಲ್ಟಿ ಕಾರ್ನರ್ನಲ್ಲಿ ಗೋಲು ದಾಖಲಿಸಿ ಅಂತರವನ್ನು 2-1ಕ್ಕೆ ಇಳಿಸಿದರು.
ಇನ್ನು ನಾಲ್ಕನೇ ಕ್ವಾರ್ಟರ್ನಲ್ಲಿ ಉಭಯ ತಂಡಗಳ ನಡುವೆ ಭರ್ಜರಿ ಪೈಪೋಟಿ ಕಂಡು ಬಂತು. ಅದರಲ್ಲೂ ಬ್ರಿಟನ್ ತಂಡ ಮೇಲುಗೈ ಸಾಧಿಸಿದರೂ ಭಾರತದ ರಕ್ಷಣಾ ಆಟಗಾರರನ್ನು ತಪ್ಪಿಸಿ ಗೋಲು ದಾಖಲಿಸಲು ಸಾಧ್ಯವಾಗಿಲ್ಲ. ಆಟ ಇನ್ನೇನು ಮುಗಿಯುವಷ್ಟರಲ್ಲಿ ಹಾರ್ದಿಕ್ ಸಿಂಗ್ ಮತ್ತೊಂದು ಗೋಲು ದಾಖಲಿಸಿ ಮೂಲಕ ಭಾರತಕ್ಕೆ 3-1 ಅಂತರದ ಭರ್ಜರಿ ಜಯ ತಂದುಕೊಟ್ಟರು.
ಈ ಜಯದೊಂದಿಗೆ ಭಾರತ 41 ವರ್ಷಗಳ ಬಳಿಕ ಸೆಮಿಫೈನಲ್ಗೇರಿದೆ. 1980 ರ ಮಾಸ್ಕೋ ಒಲಿಂಪಿಕ್ಸ್ನಲ್ಲಿ ಭಾರತ ಕಡೆಯ ಬಾರಿ ಪದಕ ಜಯಿಸಿತ್ತು. ಆ ಬಳಿಕ ಪ್ರಮುಖ ಘಟ್ಟ ತಲುಪುವಲ್ಲಿ ಇಂಡಿಯನ್ ಹಾಕಿ ಟೀಮ್ ವಿಫಲವಾಗಿತ್ತು.
ಅದರಲ್ಲೂ 2016ರ ರಿಯೋ ಒಲಿಂಪಿಕ್ಸ್ನಲ್ಲಿ ಕೊನೆಯ ಸ್ಥಾನ ಅಲಂಕರಿಸುವ ಮೂಲಕ ಭಾರೀ ಅವಮಾನಕ್ಕೆ ಕಾರಣವಾಗಿತ್ತು. ಆದರೆ ಈ ಬಾರಿ ಭರ್ಜರಿ ಪ್ರದರ್ಶನದೊಂದಿಗೆ ಮುನ್ನುಗ್ಗಿರುವ ಭಾರತ ತಂಡ ಸೆಮಿಫೈನಲ್ ಪ್ರವೇಶಿಸಿದೆ. ಈ ಮೂಲಕ ಭಾರತಕ್ಕೆ 9ನೇ ಬಾರಿ ಸ್ವರ್ಣ ಪದಕ ಗೆದ್ದುಕೊಡುವ ವಿಶ್ವಾಸದಲ್ಲಿದೆ ಭಾರತೀಯ ಹಾಕಿ ತಂಡ.
ಇದನ್ನೂ ಓದಿ: ಕಡಿಮೆ ಬೆಲೆಯ ಪವರ್ಫುಲ್ ಪವರ್ ಬ್ಯಾಂಕ್: ಮೊಬೈಲ್, ಲ್ಯಾಪ್ಟಾಪ್ನ್ನು ಚಾರ್ಜ್ ಮಾಡಬಹುದು
ಇದನ್ನೂ ಓದಿ: Viral Story: ಒಂದು ಕೆ.ಜಿ ಮಾಂಸ ಖರೀದಿಸಿದ್ರೆ ಒಂದು ಲೀಟರ್ ಪೆಟ್ರೋಲ್ ಉಚಿತ
ಇದನ್ನೂ ಓದಿ: LICಯ ವಿಶೇಷ ಯೋಜನೆ: 200 ರೂ. ಹೂಡಿಕೆ ಮಾಡಿ, 28 ಲಕ್ಷ ರೂ. ಪಡೆಯಿರಿ
(Tokyo olympics 2020 india won Againist Great Britain and Enters Semi final)
Published On - 7:01 pm, Sun, 1 August 21