ಒಲಿಂಪಿಕ್ಸ್​ನಲ್ಲಿ ಚಿನ್ನ ಗೆದ್ದ ನೀರಜ್​ ಚೋಪ್ರಾಗೆ ಜೀವಿತಾವಧಿ ಕೊಡುಗೆ ನೀಡಿದ ಕೆಎಸ್​ಆರ್​ಟಿಸಿ; ಕನ್ನಡತಿ ಅದಿತಿ ಅಶೋಕ್​ಗೂ ಗೌರವ

| Updated By: Skanda

Updated on: Aug 08, 2021 | 9:04 AM

KSRTC: ಕೆಎಸ್​ಆರ್​ಟಿಸಿ ಕೊಡಮಾಡುವ ಗೋಲ್ಡನ್​ ಪಾಸ್​ ಮೂಲಕ ನಿಗಮದ ಯಾವುದೇ ಬಸ್ಸಿನಲ್ಲಿ ರಾಜ್ಯ ಹಾಗೂ ಅಂತಾರಾಜ್ಯಗಳಲ್ಲಿ ಜೀವಿತಾವಧಿವರೆಗೆ ಉಚಿತವಾಗಿ ಪ್ರಯಾಣಿಸಬಹುದಾಗಿದೆ.

ಒಲಿಂಪಿಕ್ಸ್​ನಲ್ಲಿ ಚಿನ್ನ ಗೆದ್ದ ನೀರಜ್​ ಚೋಪ್ರಾಗೆ ಜೀವಿತಾವಧಿ ಕೊಡುಗೆ ನೀಡಿದ ಕೆಎಸ್​ಆರ್​ಟಿಸಿ; ಕನ್ನಡತಿ ಅದಿತಿ ಅಶೋಕ್​ಗೂ ಗೌರವ
ನೀರಜ್​ ಚೋಪ್ರಾಗೆ ಕೆಎಸ್​ಆರ್​ಟಿಸಿ ಗೌರವ
Follow us on

ಟೋಕಿಯೋ ಒಲಿಂಪಿಕ್ಸ್​ನ (Tokyo Olympics) ಜಾವೆಲಿನ್‌ ತ್ರೋ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದು ಶತಮಾನದ ಸಾಧನೆ ಮಾಡಿರುವ ನೀರಜ್‌ ಚೋಪ್ರಾ (Neeraj Chopra) ಅವರಿಗೆ ಇಡೀ ದೇಶವೇ ಅಭಿನಂದನೆ ಸಲ್ಲಿಸುತ್ತಿದೆ. 100 ವರ್ಷಗಳ ಬಳಿಕ ಭಾರತಕ್ಕೆ ಒಲಿಂಪಿಕ್ಸ್‌ ಕ್ರಿಡಾಕೂಟದ ಅಥ್ಲೆಟಿಕ್ಸ್​​ ವಿಭಾಗದಲ್ಲಿ ಚಿನ್ನ ಗೆದ್ದು ಕೊಟ್ಟಿರುವ ನೀರಜ್​ಗೆ ಬಿಸಿಸಿಐ, ಹರಿಯಾಣ ರಾಜ್ಯ ಸರ್ಕಾರ, ಚೆನ್ನೈ ಸೂಪರ್ ಕಿಂಗ್ಸ್​ ಫ್ರಾಂಚೈಸಿ ಸೇರಿದಂತೆ ಹಲವರು ಬಹುಮಾನ ಘೋಷಿಸಿದ್ದಾರೆ. ಏತನ್ಮಧ್ಯೆ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್​ಆರ್​ಟಿಸಿ) ಕೂಡಾ ಚಿನ್ನದ ಹುಡುಗನಿಗೆ ಅಭಿನಂದನೆ ಸಲ್ಲಿಸಿ ವಿಶೇಷ ಸವಲತ್ತನ್ನು ಕಲ್ಪಿಸಿಕೊಟ್ಟಿದೆ.

ಒಲಿಂಪಿಕ್ಸ್​ನಲ್ಲಿ ಚಿನ್ನ ಗೆದ್ದಿರುವ ನೀರಜ್​ ಚೋಪ್ರಾಗೆ ಕೆಎಸ್​ಆರ್​ಟಿಸಿ ಗೋಲ್ಡನ್ ಪಾಸ್ ನೀಡಿದೆ. ಸಂಸ್ಥೆಯ 60 ವರ್ಷದ ಸಂಭ್ರಮಾಚರಣೆ ಸಂದರ್ಭದಲ್ಲೇ ಈ ವಿಶೇಷ ಗೌರವವನ್ನು ಬಂಗಾರದ ಪದಕಕ್ಕೆ ಕೊರಳೊಡ್ಡಿದ ಚೋಪ್ರಾಗೆ ಸಲ್ಲಿಸಲಾಗಿದ್ದು, ಈ ಬಗ್ಗೆ ಕೆಎಸ್​ಆರ್​ಟಿಸಿ ಅಧಿಕೃತ ಟ್ವಿಟರ್ ಅಕೌಂಟ್​ನಲ್ಲಿ ಟ್ವೀಟ್ ಮಾಡಿದೆ.

ಅನಂತ ಅನಂತ ಅಭಿನಂದನೆಗಳು. ಚಿನ್ನದ ಹುಡುಗ ನೀರಜ್ ಚೋಪ್ರಾ ಅವರ ಅತ್ಯುನ್ನತ ಸಾಧನೆಯನ್ನು ಸಂಭ್ರಮಿಸಿ ಹಾರೈಸುತ್ತಾ, ಕೆಎಸ್​ಆರ್​ಟಿಸಿಯು 60 ವಸಂತಗಳನ್ನು ಪೂರೈಸಿರುವ ಸವಿನೆನಪಿನಲ್ಲಿ ನೀರಜ್ ಚೋಪ್ರಾ ಅವರಿಗೆ ಕೆಎಸ್​ಆರ್​ಟಿಸಿ ಗೋಲ್ಡನ್ ಪಾಸ್ ನೀಡಲಾಗುತ್ತದೆ ಎಂದು ಟ್ವೀಟ್ ಮೂಲಕ ತಿಳಿಸಲಾಗಿದೆ. ಭಾರತವು ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಒಟ್ಟು 7 ಪದಕಗಳನ್ನು ದಾಖಲಿಸಿ ಅತ್ಯುತ್ತಮ ಪ್ರದರ್ಶನ ನೀಡಲು ಕಾರಣರಾದ ನೀರಜ್​​ ಚೋಪ್ರಾ ನೆರವಾಗಿದ್ದು, ಅವರ ಸಾಧನೆಗೆ ಕೆಎಸ್​ಆರ್​ಟಿಸಿ ಅಭಿನಂದನೆ ಸಲ್ಲಿಸಿದೆ.

ಗೋಲ್ಡನ್ ಪಾಸ್ ವಿಶೇಷತೆ ಏನು?
ಕೆಎಸ್​ಆರ್​ಟಿಸಿ ಕೊಡಮಾಡುವ ಗೋಲ್ಡನ್​ ಪಾಸ್​ ಮೂಲಕ ನಿಗಮದ ಯಾವುದೇ ಬಸ್ಸಿನಲ್ಲಿ ರಾಜ್ಯ ಹಾಗೂ ಅಂತಾರಾಜ್ಯಗಳಲ್ಲಿ ಜೀವಿತಾವಧಿವರೆಗೆ ಉಚಿತವಾಗಿ ಪ್ರಯಾಣಿಸಬಹುದಾಗಿದೆ. ಇದು ಗೌರವ ಸೂಚಕವಾಗಿ ಕೊಡಲಾಗುವ ಸವಲತ್ತಾಗಿದ್ದು, ಒಲಿಂಪಿಕ್ಸ್​ನಲ್ಲಿ ಚಿನ್ನ ಗೆದ್ದು ಭಾರತೀಯರು ಹೆಮ್ಮೆ ಪಡುವಂತೆ ಮಾಡಿದ ಕಾರಣಕ್ಕಾಗಿ ನೀರಜ್​ ಚೋಪ್ರಾ ಅವರಿಗೆ ಇದನ್ನು ಕೆಎಸ್​ಆರ್​ಟಿಸಿ ನೀಡಿದೆ.

ಅದಿತಿ ಅಶೋಕ್​ಗೂ ಉಚಿತ ಪಾಸ್
ಪದಕ ಗೆಲ್ಲುವುದು ಸಾಧ್ಯವಾಗದಿದ್ದರೂ ಗಾಲ್ಫ್​ ಕ್ರೀಡೆಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಹೃದಯ ಗೆದ್ದ ಕನ್ನಡತಿ ಅದಿತಿ ಅಶೋಕ್​ ಅವರಿಗೂ ಕೆಎಸ್​ಆರ್​ಟಿಸಿ ಉಚಿತ ಪಾಸ್​ ನೀಡುವುದಾಗಿ ಘೋಷಿಸಿದೆ. ಒಲಿಂಪಿಕ್​ನಲ್ಲಿ ಅದ್ಭುತ ಆಟವಾಡಿದ ಕನ್ನಡದ ಕುವರಿ, ಅರ್ಜುನ ಪ್ರಶಸ್ತಿ ವಿಜೇತೆ ಅದಿತಿ ಅಶೊಕ್​ ಅವರಿಗೆ ಕೆಎಸ್​ಆರ್​ಟಿಸಿ ಉಚಿತ ಪಾಸ್​ ನೀಡುವ ಮೂಲಕ ಅಭಿನಂದನೆ ಸಲ್ಲಿಸುತ್ತದೆ ಎಂದು ಟ್ವೀಟ್ ಮೂಲಕ ತಿಳಿಸಲಾಗಿದೆ.

ಇದನ್ನೂ ಓದಿ:
ಕೂದಲೆಳೆಯಲ್ಲಿ ಸೋಲು ಅನುಭವಿಸಿದ ಗಾಲ್ಫ್ ಆಟಗಾರ್ತಿ ಅದಿತಿ ಅಶೋಕ್ ಮೂಲತಃ ಬಾಗಲಕೋಟೆಯವರು; ಇನ್ನಷ್ಟು ವಿವರ ಇಲ್ಲಿದೆ 

Tokyo Olympics: ಬಂಗಾರ ಗೆದ್ದ ನೀರಜ್​ಗೆ ತರಬೇತಿ ನೀಡಿದ್ದು ನಮ್ಮ ಹೆಮ್ಮೆಯ ಕನ್ನಡಿಗ ಕಾಶೀನಾಥ್ ನಾಯ್ಕ್​!

(KSRTC announce Golden Bus Pass to Olympic Gold Medalist Neeraj Chopra and Free pass to Aditi Ashok)