Mirabai Chanu: ಟ್ರಕ್ ಚಾಲಕರನ್ನು ಹುಡುಕುತ್ತಿದ್ದಾರೆ ಮೀರಾಬಾಯಿ ಚಾನು
Mirabai Chanu Story: ಭಾರತೀಯ ಬೆಳ್ಳಿ ಹುಡುಗಿ ಇದೀಗ ಕೆಲ ಟ್ರಕ್ ಚಾಲಕರನ್ನು ಹುಡುಕುತ್ತಿದ್ದಾರೆ. ಯಾಕಾಗಿ ಎಂದು ಕೇಳಿದ್ರೆ ಸಿಗುವ ಉತ್ತರ ಕೂಡ ಅಷ್ಟೇ ಇಂಟ್ರೆಸ್ಟಿಂಗ್ ಆಗಿದೆ.
ಟೊಕಿಯೋ ಒಲಂಪಿಕ್ಸ್ (Tokyo Olympics) ನಲ್ಲಿ ಭಾರತದ ಕೀರ್ತಿ ಪತಾಕೆಯನ್ನು ಹಾರಿಸಿದ ಮೀರಾಬಾಯಿ ಚಾನು (Mirabai Chanu) ಈಗ ಎಲ್ಲರ ಮನೆಮಾತಾಗಿದ್ದಾರೆ. ಟೊಕಿಯೋ ಒಲಿಂಪಿಕ್ಸ್ನಲ್ಲಿ 49 ಕೆಜಿ ವೇಟ್-ಲಿಫ್ಟಿಂಗ್ ವಿಭಾಗದಲ್ಲಿ ಸ್ಪರ್ಧಿಸಿದ್ದ ಅವರು ಒಟ್ಟು 202 ಕೆಜಿ ಭಾರ ಎತ್ತುವ (87 ಕೆಜಿ ಸ್ನ್ಯಾಚ್ ಮತ್ತು ಕ್ಲೀನ್ ಮತ್ತು ಜರ್ಕ್ನಲ್ಲಿ 115 ಕೆಜಿ) ಮೂಲಕ ಬೆಳ್ಳಿ ಪದಕಕ್ಕೆ ಮುತ್ತಿಕ್ಕಿದ್ದರು. ಈ ಮೂಲಕ ಭಾರತೀಯರು ಹೆಮ್ಮೆ ಪಡುವಂತೆ ಮಾಡಿದ್ದರು.
ಇದೀಗ ಭಾರತಕ್ಕೆ ಹಿಂತಿರುಗಿರುವ ಚಾನುಗೆ ಭವ್ಯ ಸ್ವಾಗತ ಲಭಿಸಿದೆ. ಅದರಲ್ಲೂ ತವರಿನಲ್ಲಿ ಬೆಳ್ಳಿ ಹುಡುಗಿಯನ್ನು ಬರ ಮಾಡಿಕೊಳ್ಳಲು ಇಡೀ ಊರೇ ಸೇರಿದ್ದು ವಿಶೇಷ. ಈ ಸ್ವಾಗತ, ಗೌರವ, ಮಣಿಪುರ ಹೆಚ್ಚುವರಿ ಪೊಲೀಸ್ ಅಧೀಕ್ಷಕಿ ಹುದ್ದೆ…ಇವೆಲ್ಲಾ ದೊರೆತರೂ ಮೀರಾಬಾಯಿ ಮಾತ್ರ ತಾನು ಬಂದ ಹಾದಿಯನ್ನು ಮರೆತಿಲ್ಲ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ.
ಹೌದು, ಭಾರತೀಯ ಬೆಳ್ಳಿ ಹುಡುಗಿ ಇದೀಗ ಕೆಲ ಟ್ರಕ್ ಚಾಲಕರನ್ನು ಹುಡುಕುತ್ತಿದ್ದಾರೆ. ಯಾಕಾಗಿ ಎಂದು ಕೇಳಿದ್ರೆ ಸಿಗುವ ಉತ್ತರ ಕೂಡ ಅಷ್ಟೇ ಇಂಟ್ರೆಸ್ಟಿಂಗ್ ಆಗಿದೆ. ನೊಂಗ್‌ಪೋಕ್ ಕಾಕ್ಚಿಂಗ್ ಹಳ್ಳಿಯಿಂದ ಇಂಫಾಲ್‌ನ ಖುಮಾನ್ ಲಂಪಾಕ್ ಕ್ರೀಡಾ ಕೇಂದ್ರಕ್ಕೆ ತರಬೇತಿಗೆ ತೆರಳಲು ಮೀರಾ ಟ್ರಕ್ಗಳನ್ನು ಆಶ್ರಯಿಸಿಕೊಂಡಿದ್ದರು. ಮೀರಾಬಾಯಿ ಮನೆಯಿಂದ ತರಬೇತಿ ಕೇಂದ್ರ 20-30 ಕಿ.ಮೀ ದೂರದಲ್ಲಿತ್ತು. ಈ ವೇಳೆ ಪ್ರತಿನಿತ್ಯ ಅದೇ ದಾರಿಯಲ್ಲಿ ಹೋಗುತ್ತಿದ್ದ ಟ್ರಕ್ಗಳಿಗೆ ಕೈ ತೋರಿಸಿ ಹತ್ತುತ್ತಿದ್ದರು. ಹೀಗೆ ತಮ್ಮನ್ನು ತರಬೇತಿ ಕೇಂದ್ರದತ್ತ ಉಚಿತವಾಗಿ ಕರೆದೊಯ್ದ ಟ್ರಕ್ ಚಾಲಕರನ್ನು ಈಗ ಹುಡುಕುತ್ತಿದ್ದಾರೆ.
“ನನಗೆ ಮನೆಯಿಂದ ತರಬೇತಿ ಕೇಂದ್ರಕ್ಕೆ ನಿಯಮಿತವಾಗಿ ಲಿಫ್ಟ್‌ಗಳನ್ನು ನೀಡಿದ್ದ ಟ್ರಕ್ಕರ್‌ಗಳನ್ನು ನೋಡಲು ಮತ್ತು ಅವರ ಆಶೀರ್ವಾದವನ್ನು ಪಡೆಯಲು ನಾನು ಬಯಸುತ್ತೇನೆ. ಅಂದು ತನಗೆ ತರಬೇತಿಗಾಗಿ ತೆರಳಲು ಸಹಾಯ ಮಾಡಿದ ಟ್ರಕ್ ಚಾಲಕನರಿಗೆ ನೆರವಾಗಲು ಇಚ್ಛಿಸುತ್ತೇನೆ” ಎಂದು 26 ವರ್ಷದ ಮೀರಾಬಾಯಿ ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ.
ಅಂದು ಟ್ರಕ್ ಚಾಲಕರು ನನಗೆ ಉಚಿತ ಪ್ರಯಾಣ ಮಾಡಲು ನೆರವಾಗಿದ್ದರಿಂದ ನಮ್ಮ ಕುಟುಂಬಕ್ಕೆ ಸಾರಿಗೆ ವೆಚ್ಚ ಉಳಿಸಲು ಸಹಾಯವಾಯಿತು. ಹದಿಹರೆಯದವಳಾಗಿದ್ದಾಗ ಆ ಹಣವನ್ನು ನಾನು ಆಹಾರಕ್ಕಾಗಿ ಬಳಸಿಕೊಳ್ಳುತ್ತಿದ್ದೆ. ಹೀಗೆ ಹೆತ್ತವರು ನೀಡುತ್ತಿದ್ದ ಪ್ರಯಾಣ ವೆಚ್ಚ 10-20 ರೂ. ಉಳಿಸಿಕೊಳ್ಳಲು ಟ್ರಕ್ ಚಾಲಕರು ನೆರವಾಗಿದ್ದರು. ಹೀಗೆ ನೆರವಾದವರಿಗೆ ನಾನು ಪ್ರತಿ ಸಹಾಯ ಮಾಡಲು ಬಯಸುತ್ತೇನೆ ಎಂದು ಜೀವಮಾನ ಸರ್ವಶ್ರೇಷ್ಠ ಸಾಧನೆ ಮಾಡಿರುವ ಮೀರಾಬಾಯಿ ಚಾನು ತಿಳಿಸಿದ್ದಾರೆ.
ಟೊಕಿಯೋ ಒಲಿಂಪಿಕ್ಸ್ನಲ್ಲಿ ಬೆಳ್ಳಿ ಪದಕ ಗೆಲ್ಲುವ ಮೂಲಕ ವಿಶ್ವದಲ್ಲೇ ಹೆಸರು ಮಾಡಿರುವ, ಮಣಿಪುರ ಹೆಚ್ಚುವರಿ ಪೊಲೀಸ್ ಅಧೀಕ್ಷಕಿ ಹುದ್ದೆ ಅಲಂಕರಿಸಿರುವ ಭಾರತೀಯ ಬೆಳ್ಳಿ ಹುಡುಗಿ ಮೀರಾಬಾಯಿ ಚಾನು ಬಂದ ಹಾದಿಯನ್ನು ಮರೆತಿಲ್ಲ ಎಂಬುದನ್ನು ಇದಕ್ಕಿಂತ ದೊಡ್ಡ ಸಾಕ್ಷಿ ಬೇಕಾ?
ಇದನ್ನೂ ಓದಿ: ಕಡಿಮೆ ಬೆಲೆಯ ಪವರ್ಫುಲ್ ಪವರ್ ಬ್ಯಾಂಕ್: ಮೊಬೈಲ್, ಲ್ಯಾಪ್ಟಾಪ್ನ್ನು ಚಾರ್ಜ್ ಮಾಡಬಹುದು
ಇದನ್ನೂ ಓದಿ: Viral Story: ಒಂದು ಕೆ.ಜಿ ಮಾಂಸ ಖರೀದಿಸಿದ್ರೆ ಒಂದು ಲೀಟರ್ ಪೆಟ್ರೋಲ್ ಉಚಿತ
(Mirabai Chanu in searching for truck drivers)