Neeraj Chopra Gold: ಕೂದಲೆಳೆಯ ಅಂತರದಲ್ಲಿ ತಪ್ಪಿದ ಚಿನ್ನದ ಹುಡುಗನ ವಿಶ್ವ ದಾಖಲೆ

| Updated By: ಝಾಹಿರ್ ಯೂಸುಫ್

Updated on: Aug 07, 2021 | 6:24 PM

Tokyo Olympics 2020: ಶನಿವಾರ ನಡೆದ ಪುರುಷರ ಜಾವೆಲಿನ್ ಥ್ರೋ ಫೈನಲ್​ನಲ್ಲಿ ಒಟ್ಟು 12 ಸ್ಪರ್ಧಿಗಳು ಭಾಗವಹಿಸಿದ್ದರು. ಭರ್ಜರಿ ಪೈಪೋಟಿಗೆ ಕಾರಣವಾಗಿದ್ದ ಈ ಸ್ಪರ್ಧೆಯಲ್ಲಿ ನೀರಜ್ ಚೋಪ್ರಾ ಪ್ರಥಮ ಸುತ್ತಿನಲ್ಲಿ 87.03 ಮೀಟರ್ ದೂರ ಎಸೆಯುವ ಮೂಲಕ ಮುನ್ನಡೆ ಸಾಧಿಸಿದರು.

Neeraj Chopra Gold: ಕೂದಲೆಳೆಯ ಅಂತರದಲ್ಲಿ ತಪ್ಪಿದ ಚಿನ್ನದ ಹುಡುಗನ ವಿಶ್ವ ದಾಖಲೆ
ಇದೇ ವೇಳೆ ಮಾತನಾಡಿದ ನೀರಜ್ ಚೋಪ್ರಾ, ನನ್ನ ಮುಂದಿನ ಗುರಿ 90 ಮೀಟರ್ ಜಾವೆಲಿನ್ ಎಸೆಯುವುದು. ನಾನು 90 ಮೀಟರ್‌ಗಳಷ್ಟು ಹತ್ತಿರದಲ್ಲಿದ್ದೇನೆ. ಅದಕ್ಕಾಗಿ ಕೋಚ್ ಜೊತೆ ಕಠಿಣ ಅಭ್ಯಾಸ ನಡೆಸಲಿದ್ದೇನೆ. 90 ಮೀಟರ್ ಎಸೆಯುವುದು ನನ್ನ ಕನಸು. ಅದನ್ನು ನನಸಾಗಿಸಲು ಪ್ರಯತ್ನಿಸುತ್ತೇನೆ ಎಂದರು.
Follow us on

ಭಾರತದ ಹದಿಮೂರು ವರ್ಷಗಳ ಕಾಯುವಿಕೆ ಕೊನೆಗೂ ನೀರಜ್ ಚೋಪ್ರಾ (Neeraj Chopra) ಇತಿಶ್ರೀ ಹಾಡಿದ್ದಾರೆ. ಟೋಕಿಯೋ ಒಲಿಂಪಿಕ್ಸ್​ನಲ್ಲಿ (Tokyo Olympics) ಜಾವೆಲಿನ್ ಥ್ರೋ ವಿಭಾಗದಲ್ಲಿ ಭಾರತಕ್ಕೆ ಚೊಚ್ಚಲ ಸ್ವರ್ಣ ಪದಕವನ್ನು ಗೆದ್ದುಕೊಟ್ಟಿದ್ದಾರೆ. ಇದರೊಂದಿಗೆ ಶತಮಾನಗಳ ಒಲಿಂಪಿಕ್ಸ್ ಕಾದಾಟದಲ್ಲಿ ಭಾರತದ ಕ್ರೀಡಾಪಟುವೊಬ್ಬರು ವೈಯುಕ್ತಿಕ ವಿಭಾಗದಲ್ಲಿ 2 ಬಾರಿ ಚಿನ್ನದ ಪದಕ ಗೆದ್ದಂತಾಗಿದೆ. ಈ ಹಿಂದೆ 2008ರಲ್ಲಿ ಅಭಿನವ್ ಬಿಂದ್ರಾ (Abhinav Bindra) 19m ರೈಫಲ್ಸ್ ಶೂಟಿಂಗ್​ನಲ್ಲಿ ಭಾರತಕ್ಕೆ ಚೊಚ್ಚಲ ಸ್ವರ್ಣ ಪದಕ ತಂದುಕೊಟ್ಟಿದ್ದರು. ಇದಾಗಿ 2 ಒಲಿಂಪಿಕ್ಸ್ ಕಳೆದರೂ ಮತ್ತೆ ಭಾರತ ಚಿನ್ನದ ಪದಕವನ್ನು ಗೆದ್ದುಕೊಂಡಿರಲಿಲ್ಲ. ಇದೀಗ 13 ವರ್ಷಗಳ ಬಳಿಕ ನೀರಜ್ ಚಿನ್ನದ ಬೇಟೆಯೊಂದಿಗೆ ಪದಕ ಪಟ್ಟಿಯಲ್ಲಿ ಭಾರತದ ಸ್ವರ್ಣ ಪದಕದ ಖಾತೆ ತೆರೆದಿದ್ದಾರೆ.

ಶನಿವಾರ ನಡೆದ ಪುರುಷರ ಜಾವೆಲಿನ್ ಥ್ರೋ ಫೈನಲ್​ನಲ್ಲಿ ಒಟ್ಟು 12 ಸ್ಪರ್ಧಿಗಳು ಭಾಗವಹಿಸಿದ್ದರು. ಭರ್ಜರಿ ಪೈಪೋಟಿಗೆ ಕಾರಣವಾಗಿದ್ದ ಈ ಸ್ಪರ್ಧೆಯಲ್ಲಿ ನೀರಜ್ ಚೋಪ್ರಾ ಪ್ರಥಮ ಸುತ್ತಿನಲ್ಲಿ 87.03 ಮೀಟರ್ ದೂರ ಎಸೆಯುವ ಮೂಲಕ ಮುನ್ನಡೆ ಸಾಧಿಸಿದರು. ಹಾಗೆಯೇ 2ನೇ ಸುತ್ತಿನಲ್ಲಿ ನೀರಜ್ ಎಸೆದ ಥ್ರೋ 87.58 ಮೀಟರ್ ತಲುಪುತ್ತಿದ್ದಂತೆ ಚಿನ್ನದ ಪದಕ ನಿರೀಕ್ಷಿಸಲಾಗಿತ್ತು. ಇನ್ನು 3ನೇ ಸುತ್ತಿನಲ್ಲಿ 76.79 ಮೀಟರ್ ದೂರ ಎಸೆದರು. 4ನೇ ಮತ್ತು 5ನೇ ಸುತ್ತಿನಲ್ಲಿ ಫೌಲ್‌ ಆದ ಕಾರಣ ಆತಂಕ ಎದುರಾಗಿತ್ತು. ಇದಾಗ್ಯೂ 6ನೇ ಸುತ್ತಿನಲ್ಲಿ 84.24 ದೂರ ಎಸೆಯುವ ಮೂಲಕ ತಮ್ಮ ರೌಂಡ್ ಮುಗಿಸಿದರು.

ಆದರೆ ನೀರಜ್ ಎಸೆದ 2ನೇ ಸುತ್ತಿನ 87.58 ಮೀಟರ್ ಥ್ರೋವನ್ನು ದಾಟಲು ಯಾವೊಬ್ಬ ಸ್ಪರ್ಧಿಗಳಿಗೂ ಸಾಧ್ಯವಾಗಿಲ್ಲ. ಇದರೊಂದಿಗೆ ನೀರಜ್ ಚೋಪ್ರಾ ಅವರ ಚಿನ್ನದ ಪದಕ ಖಚಿತವಾಯಿತು. 86.67 ಮೀಟರ್ ಎಸೆದ ಜೆಕ್​ ರಿಪಬ್ಲಿಕ್​ನ ಜಾಕೋಬ್ ವಡ್ಲೇಜ್ ದ್ವಿತೀಯ ಸ್ಥಾನ ಅಲಂಕರಿಸಿ ಬೆಳ್ಳಿ ಪದಕಕ್ಕೆ ತೃಪ್ತಿ ಪಟ್ಟುಕೊಂಡರು. ಇನ್ನು ಮತ್ತೊರ್ವ ಜೆಕ್ ರಿಪಬ್ಲಿಕ್ ಸ್ಪರ್ಧಿ ವಿಟೆಜ್ಸ್ಲಾವ್ 85.44 ಮೀಟರ್ ಎಸೆಯುವ ಮೂಲಕ ಕಂಚಿನ ಪದಕವನ್ನು ತಮ್ಮದಾಗಿಸಿಕೊಂಡರು.

ಇದಾಗ್ಯೂ ಕೂದಲೆಳೆಯ ಅಂತರದಲ್ಲಿ ಒಲಿಂಪಿಕ್ಸ್​ನಲ್ಲಿ ವಿಶ್ವ ದಾಖಲೆ ನಿರ್ಮಿಸುವ ಅವಕಾಶದಿಂದ ನೀರಜ್ ವಂಚಿತರಾದರು. 2008ರ ಬೀಜಿಂಗ್ ಒಲಿಂಪಿಕ್ಸ್​ನಲ್ಲಿ ಥಾರ್ಕಿಲ್ಡನ್ ಆಂಡ್ರಿಯಾಸ್ 90.57 ಮೀಟರ್ ಎಸೆದಿರುವುದು ಒಲಿಂಪಿಕ್ಸ್ ಅಂಗಳದ ಶ್ರೇಷ್ಠ ಸಾಧನೆಯಾಗಿದೆ. ನೀರಜ್ ಚೋಪ್ರಾ 2ನೇ ಸುತ್ತಿನಲ್ಲಿ 87.58 ಮೀಟರ್ ಎಸೆಯುತ್ತಿದ್ದಂತೆ ಹೊಸ ದಾಖಲೆ ನಿರ್ಮಿಸುವ ನಿರೀಕ್ಷೆಯನ್ನು ಹುಟ್ಟುಹಾಕಿದ್ದರು. ಆದರೆ ಕೇವಲ 3 ಮೀಟರ್​ಗಳ ಅಂತರದಿಂದ ಒಲಿಂಪಿಕ್ಸ್​ನಲ್ಲಿ ಹೊಸ ಇತಿಹಾಸ ರಚಿಸುವ ಅವಕಾಶವನ್ನು ಭಾರತೀಯ ಕಳೆದುಕೊಂಡರು. ಅದಾಗ್ಯೂ ಜಾವೆಲಿನ್ ವಿಭಾಗದಲ್ಲಿ ಭಾರತಕ್ಕೆ ಮೊತ್ತ ಮೊದಲ ಚಿನ್ನದ ಪದಕವನ್ನು ತಂದುಕೊಟ್ಟ ಹೆಗ್ಗಳಿಕೆ ಹಾಗೂ ಭಾರತಕ್ಕಾಗಿ ಒಲಿಂಪಿಕ್ಸ್ ಇತಿಹಾಸದಲ್ಲಿ 2ನೇ ಬಾರಿ ಸ್ವರ್ಣ ಪದಕವನ್ನು ಗೆಲ್ಲಿಸಿಕೊಟ್ಟ ಕೀರ್ತಿ ನೀರಜ್ ಚೋಪ್ರಾಗೆ ಸಲ್ಲುತ್ತದೆ.

ಇದನ್ನೂ ಓದಿ:-

Tokyo Olympics: ಒಲಿಂಪಿಕ್ಸ್​ನಲ್ಲಿ ವಿಶ್ವ ದಾಖಲೆ ಬರೆದ ಭಾರತ..!

Tokyo Olympics: ಪದಕ ಗೆಲ್ಲುತ್ತಿದ್ದಂತೆ ಟೀಮ್ ಇಂಡಿಯಾಗೆ ಕಾದಿತ್ತು ಸರ್​ಪ್ರೈಸ್..!

Published On - 6:23 pm, Sat, 7 August 21