Bajrang Punia: ಕಂಚಿನ ಪದಕಕ್ಕೆ ಕೊರೊಳೊಡ್ಡುತ್ತಿದ್ದಂತೆ ಬಜರಂಗ್​ಗೆ ಕರೆ ಮಾಡಿದ ಪ್ರಧಾನಿ ಮೋದಿ

Bajrang Punia: ಕಂಚಿನ ಪದಕಕ್ಕೆ ಕೊರೊಳೊಡ್ಡುತ್ತಿದ್ದಂತೆ ಬಜರಂಗ್​ಗೆ ಕರೆ ಮಾಡಿದ ಪ್ರಧಾನಿ ಮೋದಿ
PM Modi-Bajrang Punia

Narendra Modi-Bajarang Punia: ಟೋಕಿಯೋ ಒಲಿಂಪಿಕ್ಸ್​ನಲ್ಲಿ ಭಾರತ ಈವರೆಗೆ ಒಟ್ಟು 6 ಪದಕಗಳನ್ನು ತನ್ನದಾಗಿಸಿಕೊಂಡಿದೆ. ಅದರಲ್ಲಿ ಮಹಿಳಾ ವೇಟ್ ಲಿಫ್ಟಿಂಗ್‌ನಲ್ಲಿ ಮೀರಾಬಾಯಿ ಚಾನು ಹಾಗೂ ರಸ್ಲಿಂಗ್‌ನಲ್ಲಿ ರವಿಕುಮಾರ್ ಬೆಳ್ಳಿ ಪದಕ ಗೆದ್ದರೆ, ಮಹಿಳಾ ಬ್ಯಾಡ್ಮಿಂಟನ್‌ನಲ್ಲಿ ಪಿವಿ ಸಿಂಧು, ಮಹಿಳಾ ಬಾಕ್ಸಿಂಗ್‌ನಲ್ಲಿ ಲವ್ಲಿನಾ ಬೋರ್ಗೊಹೈನ್, ಪುರುಷರ ಹಾಕಿ ತಂಡ ಕಂಚಿನ ಪದಕ ಗೆದ್ದುಕೊಂಡಿದೆ.

TV9kannada Web Team

| Edited By: Zahir PY

Aug 07, 2021 | 5:31 PM

ಟೋಕಿಯೋ ಒಲಿಂಪಿಕ್ಸ್ (Tokyo Olympics) 2020 ರಲ್ಲಿ ಭಾರತ 6ನೇ ಪದಕ ಗೆದ್ದುಕೊಂಡಿದೆ. ಶನಿವಾರ ನಡೆದ 65 ಕೆಜಿ ಫ್ರೀಸ್ಟೈಲ್ ವಿಭಾಗದ ಪಂದ್ಯದಲ್ಲಿ ಕಜಕಿಸ್ತಾನದ ದೌಲತ್ ನಿಯಾಜ್​ಬೆಕವೊ ಅವರನ್ನು 8-0 ಅಂತರದಿಂದ ಮಣಿಸಿದ ಬಜರಂಗ್ ಪುನಿಯಾ ಭಾರತಕ್ಕೆ ಮತ್ತೊಂದು ಕಂಚಿನ ಪದಕ ತಂದುಕೊಟ್ಟಿದ್ದಾರೆ. ಈ ಪದಕದ ಗೆಲುವಿನೊಂದಿಗೆ ಈ ಬಾರಿ ಭಾರತ 4 ಕಂಚಿನ ಪದಕ ಗೆದ್ದಂತಾಗಿದೆ. ಬಜರಂಗ್ ಪುನಿಯಾ ಅವರ ಈ ಸಾಧನೆಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಟ್ವೀಟ್ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ.

ಕಂಚಿನ ಪದಕಕ್ಕೆ ಬಜರಂಗ್ ಪುನಿಯಾ ಕೊರೊಳೊಡ್ಡುತ್ತಿದ್ದಂತೆ, ಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, “ಟೋಕಿಯೋ ಒಲಿಂಪಿಕ್ಸ್​ನಿಂದ ಮತ್ತೊಂದು ಸಂತೋಷಕರ ಸುದ್ದಿ! ಅದ್ಭುತವಾದ ಹೋರಾಟ ಬಜರಂಗ್ ಪುನಿಯಾ. ನಿಮ್ಮ ಸಾಧನೆಗಾಗಿ ಅಭಿನಂದನೆಗಳು, ನಿಮ್ಮ ಗೆಲುವು ಪ್ರತಿಯೊಬ್ಬ ಭಾರತೀಯರಿಗೂ ಹೆಮ್ಮೆ ಮತ್ತು ಸಂತೋಷವನ್ನು ನೀಡಿದೆ ಎಂದು ಶುಭ ಹಾರೈಸಿದ್ದಾರೆ. ಇದರ ಬೆನ್ನಲ್ಲೇ ಕರೆ ಮಾಡಿ ಮಾತನಾಡಿದ ಪ್ರಧಾನಿ,  ಕಂಚಿನ ಪದಕ ಗೆದ್ದಿದ್ದಕ್ಕೆ ನಿಮಗೆ ನಮ್ಮ ಕಡೆಯಿಂದ ಅಭಿನಂದನೆ. ನೀವು ಪಟ್ಟಂತಹ ಕಠಿಣ ಪರಿಶ್ರಮ, ಬದ್ದತೆಗೆ ನಾವು ಚಿರಋಣಿ. ನಿಮ್ಮ ಸಾಧನೆಯನ್ನು ಇಡೀ ಭಾರತ ಕೊಂಡಾಡುತ್ತಿದೆ ಎಂದು ಅಭಿನಂದಿಸಿದ್ದಾರೆ.

ಭಾರತೀಯ ಕುಸ್ತಿಗೆ ಒಂದು ವಿಶೇಷ ಕ್ಷಣ! ಟೋಕಿಯೋ ಒಲಿಂಪಿಕ್ಸ್​ನಲ್ಲಿ ಕಂಚು ಗೆದ್ದಿದ್ದಕ್ಕಾಗಿ ಬಜರಂಗ್ ಪುನಿಯಾ ಅವರಿಗೆ ಅಭಿನಂದನೆಗಳು ಎಂದು ರಾಷ್ಟ್ರಪತಿ ರಾಮನಾಥ ಕೋವಿಂದ್ ಅಭಿನಂದನೆ ಸಲ್ಲಿಸಿದ್ದಾರೆ.

ಇನ್ನು ಮಾಜಿ ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ಕೂಡ ಟ್ವೀಟ್ ಮಾಡಿದ್ದು, ಟೋಕಿಯೋ 2020 ರಲ್ಲಿ ಭಾರತವು 6ನೇ ಒಲಿಂಪಿಕ್ ಪದಕ ಗೆದ್ದಿದೆ! ಒಲಿಂಪಿಕ್ ಕಂಚಿನ ಪದಕ ಗೆದ್ದ ನಮ್ಮ ಸ್ಟಾರ್ ಕುಸ್ತಿಪಟು ಬಜರಂಗ್ ಪುನಿಯಾ ಭಾಯ್​ಗೆ ಅಭಿನಂದನೆಗಳು! ನಾವು ನಿಮ್ಮ ಬಗ್ಗೆ ತುಂಬಾ ಹೆಮ್ಮೆ ಪಡುತ್ತೇವೆ ಎಂದು ತಿಳಿಸಿದ್ದಾರೆ.

ಈ ಹಿಂದೆ ಸೆಮಿ ಫೈನಲ್​ವರೆಗೂ ಭರ್ಜರಿ ಪ್ರದರ್ಶನ ನೀಡಿದ್ದ ಪುನಿಯಾ ಫೈನಲ್​ ಪ್ರವೇಶಿಸುವಲ್ಲಿ ವಿಫಲರಾಗಿದ್ದರು. ಅಜರ್‌ಬೈಜಾನಿಯಾದ ಹಾಜಿ ಆಲಿಯಾವ್‌ ವಿರುದ್ಧ ನಡೆದ ಸೆಮಿ ಫೈನಲ್ ಪಂದ್ಯದಲ್ಲಿ 5-12 ಅಂಕಗಳ ಅಂತರದಿಂದ ಪುನಿಯಾ ಸೋಲನುಭವಿಸಿದ್ದರು. ಆದರೆ 3ನೇ ಸ್ಥಾನಕ್ಕಾಗಿ ನಡೆದ ಹೋರಾಟದಲ್ಲಿ ಈ ಹಿಂದಿನ ತಪ್ಪುಗಳನ್ನು ತಿದ್ದಿಕೊಂಡಿದ್ದ ಭಾರತೀಯ ಕುಸ್ತಿಪಟು ಆಕ್ರಮಣಕಾರಿ ಆಟದೊಂದಿಗೆ ಇಡೀ ಪಂದ್ಯದ ಮೇಲೆ ಹಿಡಿತ ಸಾಧಿಸಿದ್ದರು. ಅದರಂತೆ ಎದುರಾಳಿಗೆ ಯಾವುದೇ ಅಂಕ ಬಿಟ್ಟುಕೊಡದೆ 8-0 ಅಂತರದಿಂದ ಭರ್ಜರಿ ಗೆಲುವು ಸಾಧಿಸಿದರು.

ಈ ಮೊದಲು ಪ್ರೀ-ಕ್ವಾರ್ಟರ್ ಫೈನಲ್​ ಮುಖಾಮುಖಿಯಲ್ಲಿ ಬಜರಂಗ್, ಕಿರ್ಗಿಸ್ತಾನದ ಎರ್ನಾಜರ್ ಅಕ್ಮಟಾಲೀವ್ ಅವರನ್ನು ಮಣಿಸಿದ್ದರು. ಹಾಗೆಯೇ ಕ್ವಾರ್ಟರ್ ಫೈನಲ್​ನಲ್ಲಿ ಕುಸ್ತಿ ಅಂಗಳದ ಬಲಿಷ್ಠ ಪಟು ಇರಾನಿನ ಮೊರ್ತೆಜಾ ಗಿಯಾಸಿ ಅವರನ್ನು 2-1ರ ಅಂತರದಿಂದ ಸೋಲಿಸಿ ಸೆಮಿಫೈನಲ್​ಗೆ ಲಗ್ಗೆಯಿಟ್ಟು ಸರ್ವಶ್ರೇಷ್ಠ ಸಾಧನೆ ಮಾಡಿದ್ದರು. ಕಠಿಣ ಹೋರಾಟದ ಹೊರತಾಗಿಯೂ ಪುನಿಯಾ ಅವರ ಫೈನಲ್ ಆಸೆ ಈಡೇರಿರಲಿಲ್ಲ. ಇದೀಗ ಕಂಚಿನ ಪದಕ ಗೆಲ್ಲುವ ಮೂಲಕ ಒಲಿಂಪಿಕ್ಸ್​ನಲ್ಲಿ ಬಜರಂಗ್ ಪುನಿಯಾ ತಮ್ಮ ಪದಕದ ಖಾತೆ ತೆರೆದಿದ್ದಾರೆ.

ಟೋಕಿಯೋ ಒಲಿಂಪಿಕ್ಸ್​ನಲ್ಲಿ ಭಾರತ ಈವರೆಗೆ ಒಟ್ಟು 6 ಪದಕಗಳನ್ನು ತನ್ನದಾಗಿಸಿಕೊಂಡಿದೆ. ಅದರಲ್ಲಿ ಮಹಿಳಾ ವೇಟ್ ಲಿಫ್ಟಿಂಗ್‌ನಲ್ಲಿ ಮೀರಾಬಾಯಿ ಚಾನು ಹಾಗೂ ರಸ್ಲಿಂಗ್‌ನಲ್ಲಿ ರವಿಕುಮಾರ್ ಬೆಳ್ಳಿ ಪದಕ ಗೆದ್ದರೆ, ಮಹಿಳಾ ಬ್ಯಾಡ್ಮಿಂಟನ್‌ನಲ್ಲಿ ಪಿವಿ ಸಿಂಧು, ಮಹಿಳಾ ಬಾಕ್ಸಿಂಗ್‌ನಲ್ಲಿ ಲವ್ಲಿನಾ ಬೋರ್ಗೊಹೈನ್, ಪುರುಷರ ಹಾಕಿ ತಂಡ ಕಂಚಿನ ಪದಕ ಗೆದ್ದುಕೊಂಡಿದೆ. ಇದೀಗ ಬಜರಂಗ್ ಪುನಿಯಾ ಕೂಡ ಕಂಚಿನ ಪದಕ ಗೆಲ್ಲುವ ಮೂಲಕ ಭಾರತದ ಪದಕದ ಸಂಖ್ಯೆಯನ್ನು ಆರಕ್ಕೇರಿಸಿದ್ದಾರೆ. ಸದ್ಯ 6 ಪದಕಗಳೊಂದಿಗೆ ಭಾರತ ಪದಕ ಪಟ್ಟಿಯಲ್ಲಿ 66ನೇ ಸ್ಥಾನದಲ್ಲಿದೆ.

ಇದನ್ನೂ ಓದಿ:-

Tokyo Olympics: ಒಲಿಂಪಿಕ್ಸ್​ನಲ್ಲಿ ವಿಶ್ವ ದಾಖಲೆ ಬರೆದ ಭಾರತ..!

Tokyo Olympics: ಪದಕ ಗೆಲ್ಲುತ್ತಿದ್ದಂತೆ ಟೀಮ್ ಇಂಡಿಯಾಗೆ ಕಾದಿತ್ತು ಸರ್​ಪ್ರೈಸ್..!

Follow us on

Related Stories

Most Read Stories

Click on your DTH Provider to Add TV9 Kannada