ಅಂತು ಇಂತು ಟೋಕಿಯೋ ಒಲಿಂಪಿಕ್ಸ್ ಅಪರೂಪರ ಕ್ಷಣಗಳಿಗೆ ಸಾಕ್ಷಿಯಾಗಿದೆ. ಕಳೆದ 10 ದಿನಗಳಿಂದ ವಿವಿಧ ಕ್ರೀಡಾಪಟುಗಳ ರೋಚಕ ಹೋರಾಟವನ್ನು ನೋಡಿದ ಕ್ರೀಡಾ ಪ್ರೇಮಿಗಳಿಗೆ ಕ್ರೀಡಾ ಸ್ಪೂರ್ತಿ ಅಂದರೇನು ಎಂಬುದನ್ನು ತೋರಿಸಿಕೊಟ್ಟಿದ್ದಾರೆ ಕತಾರ್ ದೇಶದ ಹೈಜಂಪ್ (ಎತ್ತರ ಜಿಗಿತ) ಪಟು ಮುತಾಜ್ ಎಸ್ಸಾ ಬಾರ್ಶಿಮ್.
ಆಗಸ್ಟ್ 1 ರಂದು ನಡೆದ ಪುರುಷರ ಹೈಜಂಪ್ನಲ್ಲಿ ಅಂತಿಮ ಸುತ್ತಿನಲ್ಲಿ ಬಾರ್ಶಿಮ್ ಹಾಗೂ ಇಟಲಿಯ ಜಿಯಾನ್ ಮಾರ್ಕೊ ತಂಬೇರಿ ಮುಖಾಮುಖಿಯಾಗಿದ್ದರು. ಇಬ್ಬರ ನಡುವೆ ರೋಚಕ ಪೈಪೋಟಿ ಕೂಡ ಕಂಡು ಬಂತು. ಒಬ್ಬರ ಹಿಂದೆ ಒಬ್ಬರಂತೆ ಎತ್ತರಕ್ಕೆ ಜಿಗಿಯುತ್ತಾ ಸಾಗಿದರು.
ಅಂತಿಮವಾಗಿ ಇಬ್ಬರು 2.37 ಮೀಟರ್ ಜಿಗಿಯುವ ಮೂಲಕ ಸಮಬಲ ಸಾಧಿಸಿದರು. ಅಂದರಂತೆ ಆಯೋಜಕರು ಮುಂದಿನ ಸುತ್ತಿಗಾಗಿ 2.39 ಸೆಟ್ ಮಾಡಿದರು. ಆದರೆ ಈ ಎತ್ತರದಲ್ಲಿ ಬಾರ್ಶಿಮ್ ಹಾಗೂ ತಂಬೇರಿ ಇಬ್ಬರೂ ವಿಫಲರಾದರು. ಮೂರು ಬಾರಿ ನೀಡಲಾದ ಅವಕಾಶದಲ್ಲೂ ಫಲಿತಾಂಶ ಕಂಡು ಬಂದಿರಲಿಲ್ಲ.
ಹೀಗಾಗಿ ಮುಂದಿನ ಜಿಗಿತದಲ್ಲಿ ಯಾರು ಯಶಸ್ವಿಯಾಗುತ್ತಾರೋ ಅವರನ್ನು ವಿಜಯಿ ಎಂದು ಘೋಷಿಸಲಾಗುವುದು ಎಂದು ಒಲಿಂಪಿಕ್ ಅಧಿಕಾರಿ ತಿಳಿಸಿದ್ದರು. ಆದರೆ ಅದಾಗಲೇ ಹಳೆಯ ಗಾಯ ಉಲ್ಭಣಗೊಂಡಿದ್ದರಿಂದ ತಂಬೇರಿ ಮತ್ತೊಂದು ಪ್ರಯತ್ನ ಮಾಡುವ ಸ್ಥಿತಿಯಲ್ಲಿರಲಿಲ್ಲ. ಹೀಗಾಗಿ ಬಾರ್ಶಿಮ್ ಗೆಲುವು ಖಚಿತವಾಗಿತ್ತು.
ಇನ್ನೇನು ಫೈನಲ್ ಜಂಪ್ ಶುರುವಾಗಲಿದೆ ಅನ್ನುವಷ್ಟರಲ್ಲಿ ಬಾರ್ಶಿಮ್ ಆಯೋಜಕರ ಬಳಿ ಬಂದು ಚಿನ್ನದ ಪದಕವನ್ನು ಹಂಚಿಕೊಳ್ಳಬಹುದೇ? ಎಂದು ಪ್ರಶ್ನಿಸಿದರು. ಅತ್ತ ಗಾಯಗೊಂಡಿದ್ದ ಇಟಲಿಯ ತಂಬೇರಿಗೆ ಆಶ್ಚರ್ಯ. ತನ್ನ ಎದುರಾಳಿ ನನ್ನ ಜೊತೆ ಚಿನ್ನವನ್ನು ಹಂಚಿಕೊಳ್ಳಲು ಮನವಿ ಮಾಡುತ್ತಿರುವುದನ್ನು ನೋಡಿ ಮೂಕವಿಸ್ಮಿತನಾಗಿದ್ದ.
ಬಾರ್ಶಿಮ್ ಮನವಿಯನ್ನು ಆಯೋಜಕರು ಪುರಸ್ಕರಿಸಿದರು. ಅದರಂತೆ ಟೋಕಿಯೋ ಒಲಿಂಪಿಕ್ಸ್ನ ಹೈಜಂಪ್ನಲ್ಲಿ ಜಂಟಿ ವಿಜೇತರನ್ನಾಗಿ ಬಾರ್ಶಿಮ್-ತಂಬೇರಿಯನ್ನು ಆಯ್ಕೆ ಮಾಡಲಾಯಿತು. ಇತ್ತ ಸೋತು ಗೆದ್ದ ತಂಬೇರಿ ಕುಣಿದು ಕುಪ್ಪಳಿಸಿದರು. ಅತ್ತ ಪದಕವನ್ನು ಹಂಚಿಕೊಂಡು ಬಾರ್ಶಿಮ್ ಇಡೀ ವಿಶ್ವದ ಅಭಿಮಾನಿಗಳನ್ನು ಗೆದ್ದರು.
ಈ ಬಗ್ಗೆ ಮಾತನಾಡಿದ ಬಾರ್ಶಿಮ್, ನಾನು ತಂಬೇರಿಯನ್ನು ಕೆಲ ವರ್ಷಗಳಿಂದ ನೋಡುತ್ತಿದ್ದೇನೆ. ಆತ ನನ್ನ ಉತ್ತಮ ಸ್ನೇಹಿತರಲ್ಲಿ ಒಬ್ಬರು. ಟ್ರ್ಯಾಕ್‌ನಲ್ಲಿ ಮಾತ್ರವಲ್ಲ, ಟ್ರ್ಯಾಕ್‌ನ ಹೊರಗೆ ಕೂಡ ನಮ್ಮ ನಡುವೆ ಸ್ನೇಹಬಂಧವಿದೆ. ನಾವಿಬ್ಬರೂ ಒಟ್ಟಾಗಿ ಪರಿಶ್ರಮ ಪಟ್ಟಿದ್ದೇವೆ. ಹೀಗಾಗಿ ಇದು ಇಬ್ಬರ ಕನಸು ನನಸಾಗಬೇಕಾದ ಸಮಯ. ಇದುವೇ ಒಬ್ಬ ಕ್ರೀಡಾಪಟು ಮನೋಭಾವ ಆಗಿರಬೇಕು. ಈ ಕ್ರೀಡಾ ಸ್ಪೂರ್ತಿಯ ಸಂದೇಶವನ್ನು ಹಂಚಿಕೊಳ್ಳಲು ನಾನು ಬಯಸುತ್ತೇನೆ ಎಂದಿದ್ದಾರೆ.
ಅಂದಗಾಗೆ ಪುರುಷರ ಹೈಜಂಪ್ ವಿಭಾಗದಲ್ಲಿ ಮುತಾಜ್ ಎಸ್ಸಾ ಬಾರ್ಶಿಮ್ ಕಿಂಗ್ ಆಗಿ ಮೆರೆಯುತ್ತಿದ್ದಾರೆ. 2012ರ ಲಂಡನ್ ಒಲಿಂಪಿಕ್ನಲ್ಲಿ ಬೆಳ್ಳಿ ಪದಕ ಗೆದ್ದಿದ್ದ ಬಾರ್ಶಿಮ್, ನಾಲ್ಕು ವರ್ಷಗಳ ನಂತರ 2016ರ ರಿಯೋ ಒಲಿಂಪಿಕ್ಸ್ನಲ್ಲಿ ಮತ್ತೊಂದು ಬೆಳ್ಳಿ ಪದಕವನ್ನು ತಮ್ಮದಾಗಿಸಿಕೊಂಡಿದ್ದರು. ಇದಾದ ಬಳಿಕ 2017 ಮತ್ತು 2019 ರಲ್ಲಿ ಎರಡು ಸತತ ವಿಶ್ವ ಹೈಜಂಪ್ ಚಾಂಪಿಯನ್ ಪ್ರಶಸ್ತಿಗಳನ್ನು ಗೆದಿದ್ದರು. ಹೀಗಾಗಿ ಈ ಸಲ ಒಲಿಂಪಿಕ್ಸ್ನಲ್ಲಿ ಚಿನ್ನದ ಪದಕ ಬಾರ್ಶಿಮ್ ಪಾಲಾಗುವ ಸಾಧ್ಯತೆಯಿತ್ತು. ಆದರೆ ಅಂತಿಮ ಕ್ಷಣದಲ್ಲಿ ಗಾಯಾಳು ಎದುರಾಳಿ ಜೊತೆ ಪದಕ ಹಂಚಿಕೊಂಡು ಕ್ರೀಡಾ ಸ್ಪೂರ್ತಿ ಮೆರೆದಿದ್ದಾರೆ ಕತಾರ್ನ ಮುತಾಜ್ ಎಸ್ಸಾ ಬಾರ್ಶಿಮ್.
ಇದನ್ನೂ ಓದಿ: Virat Kohli: ಇಂಗ್ಲೆಂಡ್ ವಿರುದ್ದ ಸಿಡಿಸಿದ್ರೆ ಈ 5 ದಾಖಲೆಗಳು ಕೊಹ್ಲಿ ಪಾಲಾಗುವುದು ಪಕ್ಕಾ
ಇದನ್ನೂ ಓದಿ: IPL 2021: RCB ಅಭಿಮಾನಿಗಳಿಗೆ ಗುಡ್ ನ್ಯೂಸ್: ಸ್ಟಾರ್ ಆಟಗಾರರು ಕಣಕ್ಕಿಳಿಯುವುದು ಖಚಿತ
ಇದನ್ನೂ ಓದಿ: PV Sindhu: ಒಲಿಂಪಿಕ್ಸ್ನಲ್ಲಿ ಈ ಸಾಧನೆ ಮಾಡಿದ್ದು ಇವರಿಬ್ಬರೇ..!
(Qatar’s Barshim and Italy’s Tamberi share Tokyo Olympics high jump victory)