Virat Kohli: ಇಂಗ್ಲೆಂಡ್ ವಿರುದ್ದ ಸಿಡಿಸಿದ್ರೆ ಈ 5 ದಾಖಲೆಗಳು ಕೊಹ್ಲಿ ಪಾಲಾಗುವುದು ಪಕ್ಕಾ

India tour of England: ಭಾರತದ ಪರ ಟೆಸ್ಟ್​ನಲ್ಲಿ ಅತೀ ಹೆಚ್ಚು ಅರ್ಧಶತಕಗಳನ್ನು ಬಾರಿಸಿದ ಟಾಪ್ 5 ಬ್ಯಾಟ್ಸ್​ಮನ್​ಗಳ ಪಟ್ಟಿಗೆ ಸೇರ್ಪಡೆಗೊಳ್ಳಲು ಕೊಹ್ಲಿಗೆ ಇನ್ನು 3 ಅರ್ಧಶತಕಗಳ ಅಗತ್ಯವಿದೆ.

Virat Kohli: ಇಂಗ್ಲೆಂಡ್ ವಿರುದ್ದ ಸಿಡಿಸಿದ್ರೆ ಈ 5 ದಾಖಲೆಗಳು ಕೊಹ್ಲಿ ಪಾಲಾಗುವುದು ಪಕ್ಕಾ
Virat Kohli
Follow us
TV9 Web
| Updated By: ಝಾಹಿರ್ ಯೂಸುಫ್

Updated on: Aug 01, 2021 | 7:51 PM

ಭಾರತ-ಇಂಗ್ಲೆಂಡ್ ನಡುವಣ 5 ಪಂದ್ಯಗಳ ಟೆಸ್ಟ್ ಸರಣಿ ಆಗಸ್ಟ್ 4 ರಿಂದ ಶುರುವಾಗಲಿದೆ. ಈ ಸರಣಿಯನ್ನು ಗೆಲ್ಲುವ ಮೂಲಕ ಟೀಮ್ ಇಂಡಿಯಾ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ ಸೋಲಿನ ನೋವನ್ನು ಮರೆಯುವ ಇರಾದೆಯಲ್ಲಿದೆ. ಆದರೆ ಇಂಗ್ಲೆಂಡ್ ನೆಲದಲ್ಲಿ ಗೆಲುವು ಎಂಬುದು ಅಂದುಕೊಂಡಷ್ಟು ಸುಲಭವಲ್ಲ. ಹೀಗಾಗಿಯೇ ಟೀಮ್ ಇಂಡಿಯಾ ಕಠಿಣ ಅಭ್ಯಾಸವನ್ನು ನಡೆಸಿತ್ತು. ಇದೀಗ ಮೊದಲ ಟೆಸ್ಟ್​​ಗಾಗಿ ಸಕಲ ಸಿದ್ಧತೆಯಲ್ಲಿದೆ. ಅದರಲ್ಲೂ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಈ ಸರಣಿ ಮೂಲಕ ಐದು ದೊಡ್ಡ ದಾಖಲೆಯನ್ನು ಬರೆಯುವ ಸನಿಹದಲ್ಲಿದ್ದಾರೆ. ಕೊಹ್ಲಿ ಬ್ಯಾಟ್ ಮೂಲಕ ಸಿಡಿದರೆ ಅವರ ಹೆಸರಿಗೆ ದಾಖಲಾಗುವ 5 ದಾಖಲೆಗಳಾವುವು ಎಂಬುದನ್ನು ಈ ಕೆಳಗೆ ತಿಳಿಸಲಾಗಿದೆ.

– ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್ ನಲ್ಲಿ 8000 ರನ್ ಪೂರೈಸಲು ಇನ್ನು ಕೇವಲ 453 ರನ್​ಗಳ ಅಗತ್ಯವಿದೆ. ಇಂಗ್ಲೆಂಡ್ ವಿರುದ್ಧ 5 ಟೆಸ್ಟ್ ಸರಣಿಯಲ್ಲಿ ಈ ಮೊತ್ತವನ್ನು ಕಲೆಹಾಕುವ ವಿಶ್ವಾಸದಲ್ಲಿದ್ದಾರೆ. ಸದ್ಯ ಕೊಹ್ಲಿ 92 ಟೆಸ್ಟ್‌ಗಳಿಂದ 7547 ರನ್ ಗಳಿಸಿದ್ದಾರೆ. ಇದರಲ್ಲಿ 27 ಶತಕಗಳು ಮತ್ತು 25 ಅರ್ಧ ಶತಕಗಳು ಒಳಗೊಂಡಿವೆ. ಈ ಸರಣಿಯಲ್ಲಿ ಕೊಹ್ಲಿ 8000 ರನ್ ಪೂರೈಸಿದರೆ, ಟೆಸ್ಟ್ ಕ್ರಿಕೆಟ್ ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲಿರುವ ಜಸ್ಟಿನ್ ಲ್ಯಾಂಗರ್ (7696), ಇಯಾನ್ ಬೆಲ್ (7727) ಮತ್ತು ಮೈಕೆಲ್ ಅರ್ಥನ್ (7728) ಅವರನ್ನು ಹಿಂದಿಕ್ಕಲಿದ್ದಾರೆ.

– ವಿರಾಟ್ ಕೊಹ್ಲಿ ಇಂಗ್ಲೆಂಡ್ ವಿರುದ್ಧ 2000 ಟೆಸ್ಟ್ ರನ್ ಪೂರೈಸಲು ಇನ್ನು ಕೇವಲ 211 ರನ್ ಗಳಸಷ್ಟೇ ಸಾಕು. ಹೀಗಾಗಿ ಮುಂಬರುವ ಟೆಸ್ಟ್ ಸರಣಿಯಲ್ಲಿ ಅವರು ಈ ಸಾಧನೆಯನ್ನು ಮಾಡುವ ಸಾಧ್ಯತೆ ಹೆಚ್ಚಿದೆ. ಈ ಸಾಧನೆ ಮಾಡಿದರೆ ಇಂಗ್ಲೆಂಡ್ ವಿರುದ್ದ 1950 ರನ್​ ಬಾರಿಸಿರುವ ರಾಹುಲ್ ದ್ರಾವಿಡ್ ಅವರ ದಾಖಲೆಯನ್ನು ಹಿಂದಿಕ್ಕಿ 2 ಸಾವಿರ ರನ್ ಬಾರಿಸಿದ ಸುನೀಲ್ ಗವಾಸ್ಕರ್ ಮತ್ತು ಸಚಿನ್ ತೆಂಡೂಲ್ಕರ್​ ಅವರ ಕ್ಲಬ್​ಗೆ ಕೊಹ್ಲಿ ಸೇರಿಕೊಳ್ಳಲಿದ್ದಾರೆ.

– ಭಾರತದ ಪರ ಟೆಸ್ಟ್​ನಲ್ಲಿ ಅತೀ ಹೆಚ್ಚು ಅರ್ಧಶತಕಗಳನ್ನು ಬಾರಿಸಿದ ಟಾಪ್ 5 ಬ್ಯಾಟ್ಸ್​ಮನ್​ಗಳ ಪಟ್ಟಿಗೆ ಸೇರ್ಪಡೆಗೊಳ್ಳಲು ಕೊಹ್ಲಿಗೆ ಇನ್ನು 3 ಅರ್ಧಶತಕಗಳ ಅಗತ್ಯವಿದೆ. ಈ ಸರಣಿಯಲ್ಲಿ ಮೂರು ಅರ್ಧಶತಕ ಮೂಡಿಬಂದರೆ ಸಚಿನ್, ದ್ರಾವಿಡ್, ಗವಾಸ್ಕರ್ ಮತ್ತು ಲಕ್ಷ್ಮಣ್ ಅವರ ಬಳಿಕದ ಸ್ಥಾನ ಕೊಹ್ಲಿ ಪಾಲಾಗಲಿದೆ.

– ಪ್ರಸ್ತುತ ಕ್ರಿಕೆಟ್ ಆಡುತ್ತಿರುವ ಬ್ಯಾಟ್ಸ್​ಮನ್​ಗಳ ಪಟ್ಟಿಯಲ್ಲಿ ಅತೀ ಹೆಚ್ಚು ಟೆಸ್ಟ್​ ಶತಕ ಬಾರಿಸಿದ ಆಟಗಾರರ ಪಟ್ಟಿಯಲ್ಲಿ ಕೊಹ್ಲಿ ಹಾಗೂ ಸ್ಟೀವ್ ಸ್ಮಿತ್ ಅಗ್ರಸ್ಥಾನದಲ್ಲಿದ್ದಾರೆ. ಈ ಇಬ್ಬರು 27 ಶತಕ ಬಾರಿಸುವ ಮೂಲಕ ಗಮನ ಸೆಳೆದಿದ್ದಾರೆ. ಅದರಲ್ಲೂ ವಿರಾಟ್ 2019 ರ ನವೆಂಬರ್ ಬಳಿಕ ಒಂದೇ ಒಂದು ಶತಕ ಬಾರಿಸಿಲ್ಲ. ಇಂಗ್ಲೆಂಡ್ ವಿರುದ್ದ ಈ ಶತಕದ ಬರವನ್ನು ನೀಗಿಸಿದರೆ, ಸ್ಮಿತ್ ಅವರನ್ನು ಹಿಂದಿಕ್ಕಲಿದ್ದಾರೆ. ಅಷ್ಟೇ ಶತಕ ವೀರರ ಪಟ್ಟಿಯಲ್ಲಿ ಆಮ್ಲಾ ಮತ್ತು ಮೈಕೆಲ್ ಕ್ಲಾರ್ಕ್ (28 ಶತಕ)ಯಲ್ಲಿ ಅವರೊಂದಿಗೆ ಸ್ಥಾನ ಪಡೆಯಲಿದ್ದಾರೆ.

– ವಿರಾಟ್ ಕೊಹ್ಲಿ ಈ ಟೆಸ್ಟ್ ಸರಣಿ ಜಯಿಸಿದರೆ ನಾಯಕನಾಗಿ ಕೂಡ ದಾಖಲೆ ಬರೆಯಬಹುದು. ವೆಸ್ಟ್ ಇಂಡೀಸ್ ನ ಕ್ಲೈವ್ ಲಾಯ್ಡ್ ಅವರ ನಾಯಕತ್ವದ ಅಡಿಯಲ್ಲಿ ವಿಂಡೀಸ್ ತಂಡವು 74 ಟೆಸ್ಟ್​ನಲ್ಲಿ 36 ಪಂದ್ಯಗಳನ್ನು ಗೆದ್ದುಕೊಂಡಿದೆ. ಇದೀಗ 36 ಟೆಸ್ಟ್ ಪಂದ್ಯ ಗೆದ್ದಿರುವ ವಿರಾಟ್ ಕೊಹ್ಲಿ ನಾಯಕನಾಗಿ 62ನೇ ಪಂದ್ಯದಲ್ಲಿ ಜಯ ಸಾಧಿಸಿದರೆ ಲಾಯ್ಡ್ ಅವರ ದಾಖಲೆಯನ್ನು ಹಿಂದಿಕ್ಕಲಿದ್ದಾರೆ.

ಭಾರತ-ಇಂಗ್ಲೆಂಡ್ ನಡುವೆ ಟೆಸ್ಟ್ ಸರಣಿ ಆಗಸ್ಟ್ 4 ರಿಂದ ಪ್ರಾರಂಭವಾಗಲಿದೆ. 2ನೇ ಟೆಸ್ಟ್ ಪಂದ್ಯವು ಆಗಸ್ಟ್ 12 ರಿಂದ 16ರವರೆಗೆ ನಡೆಯಲಿದೆ. ಹಾಗೆಯೇ ಮೂರನೇ ಪಂದ್ಯವು 25 ರಿಂದ ಪ್ರಾರಂಭವಾಗಲಿದ್ದು, 4ನೇ ಟೆಸ್ಟ್​ ಸೆಪ್ಟೆಂಬರ್ 2 ಕ್ಕೆ ಶುರುವಾಗಿ ಸೆ.6 ರವರೆಗೆ ನಡೆಯಲಿದೆ. ಇನ್ನು ಅಂತಿಮ ಟೆಸ್ಟ್ ಪಂದ್ಯವು ಸೆಪ್ಟೆಂಬರ್ 10 ರಿಂದ ಸೆ.14ರವರೆಗೆ ಜರುಗಲಿದೆ.

ಇಂಗ್ಲೆಂಡ್ ವಿರುದ್ದದ ಟೆಸ್ಟ್ ಸರಣಿಗೆ ಟೀಮ್ ಇಂಡಿಯಾ ಹೀಗಿದೆ: ರೋಹಿತ್ ಶರ್ಮಾ, ಮಾಯಾಂಕ್ ಅಗರ್ವಾಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ (ನಾಯಕ), ಅಜಿಂಕ್ಯ ರಹಾನೆ (ಉಪನಾಯಕ), ಹನುಮಾ ವಿಹಾರಿ, ರಿಷಭ್ ಪಂತ್ (ವಿಕೆಟ್ ಕೀಪರ್), ಆರ್.ಅಶ್ವಿನ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಜಸ್ಪ್ರೀತ್ ಬುಮ್ರಾ, ಇಶಾಂತ್ ಶರ್ಮಾ, ಮೊಹಮ್ಮದ್. ಶಮಿ, ಮೊಹಮ್ಮದ್ ಸಿರಾಜ್, ಶಾರ್ದುಲ್ ಠಾಕೂರ್, ಉಮೇಶ್ ಯಾದವ್, ಕೆ.ಎಲ್. ರಾಹುಲ್, ವೃದ್ಧಿಮಾನ್ ಸಹಾ (ವಿಕೆಟ್ ಕೀಪರ್), ಅಭಿಮನ್ಯು ಈಶ್ವರನ್, ಪೃಥ್ವಿ ಶಾ, ಸೂರ್ಯಕುಮಾರ್ ಯಾದವ್

ಹೆಚ್ಚುವರಿ ಆಟಗಾರರು: ಪ್ರಸಿದ್ಧ್ ಕೃಷ್ಣ, ಅರ್ಝಾನ್ ನಾಗ್ವಾಸ್ವಾಲಾ

ಇದನ್ನೂ ಓದಿ: ಕಡಿಮೆ ಬೆಲೆಯ ಪವರ್​ಫುಲ್ ಪವರ್ ಬ್ಯಾಂಕ್: ಮೊಬೈಲ್, ಲ್ಯಾಪ್​ಟಾಪ್​ನ್ನು ಚಾರ್ಜ್​ ಮಾಡಬಹುದು

ಇದನ್ನೂ ಓದಿ: Viral Story: ಒಂದು ಕೆ.ಜಿ ಮಾಂಸ ಖರೀದಿಸಿದ್ರೆ ಒಂದು ಲೀಟರ್ ಪೆಟ್ರೋಲ್ ಉಚಿತ

ಇದನ್ನೂ ಓದಿ: LICಯ ವಿಶೇಷ ಯೋಜನೆ: 200 ರೂ. ಹೂಡಿಕೆ ಮಾಡಿ, 28 ಲಕ್ಷ ರೂ. ಪಡೆಯಿರಿ

(Virat Kohli on verge of achieving 5 big records in India tour of England)