Tokyo Olympics: ಒಲಿಂಪಿಕ್ಸ್ನಲ್ಲಿ ಪದಕ ಬಾಚಿದ ಭಾರತೀಯ ಕ್ರೀಡಾಪಟುಗಳಿಗೆ ಸಿಕ್ಕ ಒಟ್ಟು ಬಹುಮಾನದ ಮೊತ್ತ ಕೇಳಿದರೆ ನೀವು ಬೆರಗಾಗುತ್ತೀರಿ
ಈ ಬಾರಿಯ ಒಲಿಂಪಿಕ್ಸ್ನಲ್ಲಿ ಪದಕಕ್ಕೆ ಕೊರಳೊಡ್ಡಿದವರಿಗೆ ಸಿಕ್ಕ ಬಹುಮಾನಗಳೇನು? ಯಾರಿಗೆ ಎಷ್ಟು ಬಹುಮಾನ ಲಭ್ಯವಾಗಿದೆ ಎಂಬುದರ ಕುರಿತಾದ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.
ಈ ಬಾರಿ ಟೋಕಿಯೋದಲ್ಲಿ ನಡೆದ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ (Tokyo Olympics 2020) ಭಾರತೀಯ ಕ್ರೀಡಾಪಟುಗಳು ಉತ್ತಮ ಪ್ರದರ್ಶನ ನೀಡಿ ಹೊಸ ದಾಖಲೆ ಬರೆದಿದ್ದಾರೆ. ಭಾರತದ ರಾಷ್ಟ್ರೀಯ ಕ್ರೀಡೆ ಹಾಕಿಯಲ್ಲಿ ಸುಮಾರು ನಾಲ್ಕು ದಶಕಗಳ ನಂತರ ಪುರುಷರ ತಂಡ ಪದಕ ಬಾಚಿದೆ. ಅಥ್ಲೆಟಿಕ್ಸ್ ವಿಭಾಗದಲ್ಲಿ ನೀರಜ್ ಚೋಪ್ರಾ ಮೊತ್ತ ಮೊದಲ ಚಿನ್ನದ ಪದಕ (Gold Medal) ಪಡೆದಿದ್ದಾರೆ. ಬ್ಯಾಡ್ಮಿಂಟನ್ನಲ್ಲಿ ಪಿ.ವಿ.ಸಿಂಧು ಕಂಚಿನ ಪದಕ, ಬಾಕ್ಸಿಂಗ್ನಲ್ಲಿ ಲವ್ಲಿನಾ ಬೊರ್ಗೊಹೈನ್ ಕಂಚಿನ ಪದಕ, ವೇಟ್ ಲಿಫ್ಟಿಂಗ್ನಲ್ಲಿ ಮೀರಾಬಾಯಿ ಚಾನು ಬೆಳ್ಳಿ, ಕುಸ್ತಿಯಲ್ಲಿ ರವಿ ದಹಿಯಾ ಬೆಳ್ಳಿ ಹಾಗೂ ಕುಸ್ತಿಯಲ್ಲಿ ಬಜರಂಗ್ ಪೂನಿಯಾ ಕಂಚಿನ ಪದಕಕ್ಕೆ ಮುತ್ತಿಕ್ಕಿದ್ದಾರೆ. ಇವರೆಲ್ಲರೂ ತೋರಿದ ಅದ್ಭುತ ಪ್ರದರ್ಶನದ ಫಲವಾಗಿ ಭಾರತ ಟೋಕಿಯೋ ಒಲಿಂಪಿಕ್ಸ್ 2020ರಲ್ಲಿ ಒಟ್ಟು 7 ಪದಕಗಳನ್ನು ಗಳಿಸಿದೆ.
ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಪದಕ ಬಾಚಿದ ಭಾರತೀಯ ಕ್ರೀಡಾಪಟುಗಳಿಗೆ ಅಭಿನಂದನೆಗಳ ಸುರಿಮಳೆಯೇ ಸಿಕ್ಕಿದೆ. ಸರ್ಕಾರದ ಮಟ್ಟದಲ್ಲಿ, ಕ್ರೀಡಾ ಸಂಸ್ಥೆ ಹಾಗೂ ವಿವಿಧ ಸಂಘ ಸಂಸ್ಥೆಗಳಿಂದ ವಿಜೇತರಿಗೆ ಬಹುಮಾನಗಳನ್ನೂ ನೀಡಲಾಗಿದೆ. ಇಡೀ ದೇಶವೇ ಹೆಮ್ಮೆ ಪಡುವಂತೆ ಮಾಡಿದ ಸಾಧಕರನ್ನು ದೊಡ್ಡ ಮಟ್ಟದಲ್ಲಿ ಗೌರವಿಸಲಾಗಿದೆ. ಹಾಗಾದರೆ ಈ ಬಾರಿಯ ಒಲಿಂಪಿಕ್ಸ್ನಲ್ಲಿ ಪದಕಕ್ಕೆ ಕೊರಳೊಡ್ಡಿದವರಿಗೆ ಸಿಕ್ಕ ಬಹುಮಾನಗಳೇನು? ಯಾರಿಗೆ ಎಷ್ಟು ಬಹುಮಾನ ಲಭ್ಯವಾಗಿದೆ ಎಂಬುದರ ಕುರಿತಾದ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.
ಜಾವೆಲಿನ್ ಎಸೆತದಲ್ಲಿ ಭಾರತಕ್ಕೆ ಚಿನ್ನ ತಂದುಕೊಟ್ಟ ನೀರಜ್ ಚೋಪ್ರಾ ಇದೀಗ ಭಾರತೀಯರ ಕಣ್ಮಣಿಯಾಗಿದ್ದಾರೆ. ಪದಕ ಪಟ್ಟಿಯಲ್ಲಿ ನಮಗೂ ಒಂದು ಚಿನ್ನ ಬೇಕಿತ್ತು ಎಂದು ಆಸೆಗಣ್ಣಿನಿಂದ ನೋಡುತ್ತಿದ್ದ ಅಭಿಮಾನಿಗಳ ಬಯಕೆಯನ್ನು ನೀರಜ್ ಚೋಪ್ರಾ ಪೂರೈಸಿದ್ದಾರೆ. ಈ ಅದ್ಭುತ ಸಾಧನೆಗೈದ ಚೋಪ್ರಾಗೆ ಹರಿಯಾಣ ರಾಜ್ಯದ ಮುಖ್ಯಮಂತ್ರಿ ಮನೋಹರ್ ಲಾಲ್ ಕಟ್ಟರ್ ಭರ್ಜರಿ ಉಡುಗೊರೆ ನೀಡಿದ್ದು, 6 ಕೋಟಿ ರೂಪಾಯಿ ಬಹುಮಾನ ಘೋಷಿಸಿದ್ದಾರೆ. ಜತೆಗೆ ಪಂಚ್ಕುಲದ ಸೆಂಟರ್ ಫಾರ್ ಎಕ್ಸಲೆನ್ಸ್ ಇನ್ ಅಥ್ಲೆಟಿಕ್ಸ್ ಮುಖ್ಯಸ್ಥನನ್ನಾಗಿಸುವ ಭರವಸೆಯನ್ನೂ ನೀಡಿದ್ದಾರೆ.
ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್ 2 ಕೋಟಿ ರೂಪಾಯಿ, ಇಂಡಿಯನ್ ಒಲಿಂಪಿಕ್ ಅಸೋಸಿಯೇಶನ್ 75 ಲಕ್ಷ ರೂಪಾಯಿ, ಬಿಸಿಸಿಐ 1 ಕೋಟಿ ರೂಪಾಯಿ, ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯಿಂದ 1 ಕೋಟಿ ರೂಪಾಯಿ ಹಾಗೂ 8758 ಸಂಖ್ಯೆಯ ವಿಶೇಷ ಜರ್ಸಿ, ಇಂಡಿಗೋ ಏರ್ಲೈನ್ಸ್ನಲ್ಲಿ ಅನಿರ್ದಿಷ್ಟಾವಧಿ ಉಚಿತ ಪ್ರಯಾಣ, ಎಲಾನ್ ಸಮೂಹದಿಂದ 25 ಲಕ್ಷ ರೂಪಾಯಿ, ಬೈಜೂಸ್ಸಂಸ್ಥೆಯಿಂದ 2 ಕೋಟಿ ರೂಪಾಯಿ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಿಂದ ಗೋಲ್ಡನ್ ಪಾಸ್ ನೀಡಿ ಗೌರವಿಸಲಾಗಿದೆ.
ಬ್ಯಾಂಡ್ಮಿಂಟನ್ನಲ್ಲಿ ಕಂಚಿನ ಪದಕ ತಂದುಕೊಟ್ಟ ಪಿ.ವಿ.ಸಿಂಧು ಅವರಿಗೆ ಆಂಧ್ರ ಪ್ರದೇಶ ರಾಜ್ಯ ಸರ್ಕಾರ 30 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಘೋಷಿಸಿದೆ. ಅದಲ್ಲದೇ, ಬಿಸಿಸಿಐ ವತಿಯಿಂದ 25 ಲಕ್ಷ ರೂಪಾಯಿ, ಇಂಡಿಯನ್ ಒಲಿಂಪಿಕ್ ಅಸೋಸಿಯೇಶನ್ ಕಡೆಯಿಂದ 25 ಲಕ್ಷ ರೂಪಾಯಿ, ಬೈಜೂಸ್ 1 ಕೋಟಿ ರೂಪಾಯಿ ನೀಡಿ ಅಭಿನಂದಿಸಿದೆ.
ಬಾಕ್ಸಿಂಗ್ನಲ್ಲಿ ಕಂಚಿನ ಪದಕ ತಂದುಕೊಟ್ಟ ಲವ್ಲಿನಾ ಬೊರ್ಗೊಹೈನ್ ಅವರಿಗೆ ಬಿಸಿಸಿಐ 25 ಲಕ್ಷ ರೂಪಾಯಿ, ಇಂಡಿಯನ್ ಒಲಿಂಪಿಕ್ ಅಸೋಸಿಯೇಶನ್ 25 ಲಕ್ಷ ರೂಪಾಯಿ, ಬೈಜೂಸ್ 1 ಕೋಟಿ ರೂಪಾಯಿ, ಅಸ್ಸಾಂ ಕಾಂಗ್ರೆಸ್ 3 ಲಕ್ಷ ರೂಪಾಯಿ ನೀಡುವುದಾಗಿ ತಿಳಿಸಿವೆ.
ಭಾರ ಎತ್ತುವ ಸ್ಪರ್ಧೆಯಲ್ಲಿ ಬೆಳ್ಳಿ ಗೆದ್ದ ಮೀರಾಬಾಯಿ ಚಾನು ಅವರಿಗೆ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ 2 ಕೋಟಿ ರೂಪಾಯಿ ನೀಡಿದ್ದಾರೆ. ಮಣಿಪುರ ಮುಖ್ಯಮಂತ್ರಿ ಎನ್.ಬಿರೇನ್ ಸಿಂಗ್ 1 ಕೋಟಿ ರೂಪಾಯಿ ನೀಡುವ ಜತೆಗೆ ಚಾನು ಅವರನ್ನು ಮಣಿಪುರ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾಗಿ ನೇಮಕ ಮಾಡುವುದಾಗಿ ತಿಳಿಸಿದ್ದಾರೆ. ಇದಲ್ಲದೇ ಬಿಸಿಸಿಐ 50 ಲಕ್ಷ ರೂಪಾಯಿ, ಇಂಡಿಯನ್ ಒಲಿಂಪಿಕ್ ಅಸೋಸಿಯೇಶನ್ 40 ಲಕ್ಷ ರೂಪಾಯಿ, ಬೈಜೂಸ್ 1 ಕೋಟಿ ರೂಪಾಯಿ ಬಹುಮಾನ ನೀಡಲಿವೆ.
ಬರೋಬ್ಬರಿ 41 ವರ್ಷಗಳ ನಂತರ ಪದಕಕ್ಕೆ ಕೊರಳೊಡ್ಡಿದ ಭಾರತೀಯ ಪುರುಷರ ಹಾಕಿ ತಂಡ ಕಂಚಿನ ಪದಕವನ್ನು ಗಳಿಸಿದೆ. ಈ ತಂಡದ ಸುರೇಂದರ್ ಕುಮಾರ್ ಹಾಗೂ ಸುಮಿತ್ಗೆ ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಕಟ್ಟರ್ 2.5 ಕೋಟಿ ರೂಪಾಯಿ ಜತೆಗೆ ಸರ್ಕಾರಿ ಉದ್ಯೋಗ ನೀಡುವುದಾಗಿ ತಿಳಿಸಿದ್ದಾರೆ. ಇಡೀ ತಂಡಕ್ಕೆ ಬಿಸಿಸಿಐ ವತಿಯಿಂದ 2.5 ಕೋಟಿ ರೂಪಾಯಿ ಘೋಷಿಸಲಾಗಿದೆ. ಬೈಜೂಸ್ 1 ಕೋಟಿ ರೂಪಾಯಿ ಹಾಗೂ ಇಂಡಿಯನ್ ಒಲಿಂಪಿಕ್ ಅಸೋಸಿಯೇಶನ್ 25 ಲಕ್ಷ ರೂಪಾಯಿ ಘೋಷಿಸಿವೆ.
ಕುಸ್ತಿಯಲ್ಲಿ ಬೆಳ್ಳಿ ಪದಕ ಬಾಚಿದ ರವಿ ದಹಿಯಾ ಅವರಿಗೆ ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಕಟ್ಟರ್ 4 ಕೋಟಿ ರೂಪಾಯಿ ಜತೆಗೆ ಸರ್ಕಾರಿ ಉದ್ಯೋಗ ನೀಡುವುದಾಗಿ ತಿಳಿಸಿದ್ದಾರೆ. ಬಿಸಿಸಿಐ ವತಿಯಿಂದ 50 ಲಕ್ಷ ರೂಪಾಯಿ, ಇಂಡಿಯನ್ ಒಲಿಂಪಿಕ್ ಅಸೋಸಿಯೇಶನ್ 40 ಲಕ್ಷ ರೂಪಾಯಿ, ಬೈಜೂಸ್ 1 ಕೋಟಿ ರೂಪಾಯಿ ಬಹುಮಾನ ನೀಡುವುದಾಗಿ ತಿಳಿಸಿವೆ.
ಕುಸ್ತಿಯಲ್ಲಿ ಕಂಚಿನ ಪದಕ ತಂದ ಬಜರಂಗ್ ಪೂನಿಯಾಗೆ ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಕಟ್ಟರ್ 2.5 ಕೋಟಿ ರೂಪಾಯಿ ಜತೆಗೆ ಸರ್ಕಾರಿ ಉದ್ಯೋಗ ನೀಡುವುದಾಗಿ ತಿಳಿಸಿದ್ದಾರೆ. ಬಿಸಿಸಿಐ ವತಿಯಿಂದ 25 ಲಕ್ಷ ರೂಪಾಯಿ, ಇಂಡಿಯನ್ ಒಲಿಂಪಿಕ್ ಅಸೋಸಿಯೇಶನ್ 40 ಲಕ್ಷ ರೂಪಾಯಿ, ಬೈಜೂಸ್ 1 ಕೋಟಿ ರೂಪಾಯಿ ಬಹುಮಾನ ನೀಡುವುದಾಗಿ ತಿಳಿಸಿವೆ.
(Tokyo Olympics 2020 complete list of cash rewards announced for Indian Medal winners)
ಇದನ್ನೂ ಓದಿ: olympics vs cricket: ಕ್ರಿಕೆಟ್ ಆಡುವ ದೇಶಗಳು ಒಲಿಂಪಿಕ್ಸ್ನಲ್ಲಿ ಗೆದ್ದ ಪದಕಗಳು ಎಷ್ಟು?
ಭಾರತ ಗೆದ್ದ ಪದಕಗಳಿಂದ ದೇಶಕ್ಕೆ ಹೆಮ್ಮೆ; ಕಠಿಣ ಸಮಯದಲ್ಲಿ ಒಲಿಂಪಿಕ್ಸ್ ಆಯೋಜಿಸಿದ ಜಪಾನ್ಗೆ ಧನ್ಯವಾದ: ಮೋದಿ ಟ್ವೀಟ್
Published On - 9:59 am, Wed, 11 August 21