Tokyo Olympics 2020: ಎಡಗಣ್ಣು ಮತ್ತು ಭುಜಕ್ಕೆ ಗಾಯಗೊಂಡು ಒಲಂಪಿಕ್ಸ್​ನಿಂದಲೇ ಹೊರಬಿದ್ದ ಬಾಕ್ಸರ್ ವಿಕಾಸ ಕೃಷ್ಣನ್

ಶನಿವಾರ ನಡೆದ ಬಾಕ್ಸಿಂಗ್ ಸ್ಫರ್ಧೆಗಳಲ್ಲಿ ಭಾರತೀಯರ ಪೈಕಿ ವಿಕಾಸ ಮಾತ್ರ ಕಣದಲ್ಲಿದ್ದರು. ಕಳೆದ ವರ್ಷ ಒಲಂಪಿಕ್ಸ್​ಗೆ ಏಷ್ಯನ್ ಬಾಕ್ಸರ್​ಗಳ ಆರ್ಹತಾ ಸುತ್ತಿನ ಬೌಟ್​ನಲ್ಲಿ ಅವರು ಒಕಜಾವರನ್ನು ಸೋಲಿಸಿದ್ದರು. ಆದರೆ ಶನಿವಾರ ನಡೆದ ಸ್ಪರ್ಧೆಯಲ್ಲಿ ಒಕಾಜಾವ ಆರಂಭದಿಂದಲೇ ಮೇಲುಗೈ ಸಾಧಿಸಿ ಮೂರನೇ ಬಾರಿ ಒಲಂಪಿಕ್ಸ್​ನಲ್ಲಿ ಸ್ಪರ್ಧಿಸಿದ್ದ ಭಾರತೀಯನಿಗೆ ಹೋರಾಡುವ ಅವಕಾಶ ನೀಡದೆ ಸುಲಭವಾಗಿ ಬೌಟ್​ ಗೆದ್ದರು.

Tokyo Olympics 2020: ಎಡಗಣ್ಣು ಮತ್ತು ಭುಜಕ್ಕೆ ಗಾಯಗೊಂಡು ಒಲಂಪಿಕ್ಸ್​ನಿಂದಲೇ ಹೊರಬಿದ್ದ ಬಾಕ್ಸರ್ ವಿಕಾಸ ಕೃಷ್ಣನ್
ವಿಕಾಸ ಕೃಷ್ಣನ್
Follow us
TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jul 25, 2021 | 12:24 AM

ಟೊಕಿಯೋ:  ಮೊದಲ ಸುತ್ತಿನ ಬೌಟ್​ನಲ್ಲಿ ಎಡಗಣ್ಣಿಗೆ ತೀವ್ರವಾಗಿ ಗಾಯಗೊಂಡು ಸ್ಥಳೀಯ ಫೆವರಿಟ್​ ಸಿವೊನ್​ರೆಟ್ಸ್​ ಕ್ವಿನ್ಸಿ ಮೆನ್ಸಾ ಒಕಜಾವ ವಿರುದ್ಧ 69 ಕೆಜಿ ವಿಭಾಗದಲ್ಲಿ 0-5 ಪಾಯಿಂಟ್​ಗಳಿಂದ ಸೋತ ಭಾರತದ ಬಾಕ್ಸರ್ ವಿಕಾಸ ಕೃಷ್ಣನ್ ಅವರು ಒಲಂಪಿಕ್ಸ್ ಕ್ರೀಡಾಕೂಟದಿಂದಲೇ ನಿರ್ಗಮಿಸಿದ್ದಾರೆ. ಲಭ್ಯವಿರುವ ಮಾಹಿತಿ ಪ್ರಕಾರ ವಿಕಾಸ ಭುಜದ ಗಾಯದಿಂದ ಸಂಪೂರ್ಣವಾಗಿ ಚೇತರಿಸಿಕೊಂಡಿರಲಿಲ್ಲ ಮತ್ತು ಒಕಜಾವ ವಿರುದ್ಧ ನಡೆದ ಸೆಣಸಿನಲ್ಲಿ ಆ ಗಾಯ ಮರುಕಳಿಸಿ ಕೇವಲ ಒಂದೇ ಕೈಯಿಂದ ಹೋರಾಡುವ ಪರಿಸ್ಥಿತಿ ಎದುರಾಯಿತು. ಕಣದಿಂದ ಹೊರಬರುವಾಗ ಅವರ ಕಣ್ಣಿನ ಮೇಲ್ಭಾಗದಿಂದ ರಕ್ತ ಸೋರುತಿತ್ತು. ‘ಟೊಕಿಯೋ ಹೊರಡುವ ಮೊದಲು ಇಟಲಿಯಲ್ಲಿ ನಡೆದ ತರಬೇತಿ ಶಿಬಿರದಲ್ಲಿ ವಿಕಾಸ ಭುಜಕ್ಕೆ ಗಾಯಮಾಡಿಕೊಂಡಿದ್ದರು. ಚಿಕಿತ್ಸೆ ನೀಡಿದ ನಂತರ ಅವರು ಚೇತರಿಸಿಕೊಂಡರೆಂದೇ ನಾವು ಭಾವಿಸಿದ್ದೆವು. ಒಕಜಾವ ವಿರುದ್ಧ ನಡೆದ ಬೌಟ್ ಅನ್ನು ವಿಕಾಸ್ ಚೆನ್ನಾಗಿಯೇ ಫೈಟ್ ಶುರುಮಾಡಿದರು,’ ಎಂದು ಭಾರತದ ಹೈ-ಪರ್ಫಾರ್ಮನ್​ ಡೈರೆಕ್ಟರ್ ಸ್ಯಾಂಡಿಯಾಗೊ ನೀವಾ ಟೊಕಿಯೋನಲ್ಲಿ ಪಿಟಿಐಗೆ ತಿಳಿಸಿದರು.

‘ಆದರೆ, ಒಕಜಾವಾಗೆ ಪಂಚ್​ ಮಾಡುವ ಭರದಲ್ಲಿ ಅವರು ಎಡಭುಜಕ್ಕೆ ಮತ್ತೆ ಗಾಯಮಾಡಿಕೊಂಡರು ಮತ್ತು ಎಡಗೈ ಉಪಯೋಗಿಸುವುದು ಅವರಿಗೆ ಸಾಧ್ಯವಾಗದೆ ಹೋಗಿದ್ದರಿಂದ ಒಂದೇ ಕೈನಲ್ಲಿ ಫೈಟ್ ಮಾಡಿದರು,’ ಎಂದು ನೀವಾ ಹೇಳಿದರು.

ಶನಿವಾರ ನಡೆದ ಬಾಕ್ಸಿಂಗ್ ಸ್ಫರ್ಧೆಗಳಲ್ಲಿ ಭಾರತೀಯರ ಪೈಕಿ ವಿಕಾಸ ಮಾತ್ರ ಕಣದಲ್ಲಿದ್ದರು. ಕಳೆದ ವರ್ಷ ಒಲಂಪಿಕ್ಸ್​ಗೆ ಏಷ್ಯನ್ ಬಾಕ್ಸರ್​ಗಳ ಆರ್ಹತಾ ಸುತ್ತಿನ ಬೌಟ್​ನಲ್ಲಿ ಅವರು ಒಕಜಾವರನ್ನು ಸೋಲಿಸಿದ್ದರು. ಆದರೆ ಶನಿವಾರ ನಡೆದ ಸ್ಪರ್ಧೆಯಲ್ಲಿ ಒಕಾಜಾವ ಆರಂಭದಿಂದಲೇ ಮೇಲುಗೈ ಸಾಧಿಸಿ ಮೂರನೇ ಬಾರಿ ಒಲಂಪಿಕ್ಸ್​ನಲ್ಲಿ ಸ್ಪರ್ಧಿಸಿದ್ದ ಭಾರತೀಯನಿಗೆ ಹೋರಾಡುವ ಅವಕಾಶ ನೀಡದೆ ಸುಲಭವಾಗಿ ಬೌಟ್​ ಗೆದ್ದರು.

‘ವಿಕಾಸ ತೀವ್ರ ಸ್ವರೂಪದ ನೋವಿನಲ್ಲಿದ್ದರು,’ ಎಂದು ಅವರೊಂದಿಗೆ ಅಭ್ಯಾಸದ ಜೊತೆಗಾರನಾಗಿರುವ ನೀರಜ್ ಗೊಯತ್ ಹೇಳಿದರು.

25-ವರ್ಷ ವಯಸ್ಸಿನ ಒಕಜಾವ ಘಾನಾ ಮೂಲದರಾಗಿದ್ದು 2019 ರ ಏಷ್ಯನ್ ಚಾಂಪಿಯನ್​ಶಿಪ್​ನಲ್ಲಿ ಬೆಳ್ಳಿ ಪದಕ ಗೆದ್ದಿದ್ದರು ಮತ್ತು ಅದೇ ವರ್ಷ ನಡೆದ ವಿಶ್ವ ಚಾಂಪಿಯನ್​ಶಿಪ್​ನಲ್ಲಿ ಕ್ವಾರ್ಟರ್​ ಫೈನಲ್ ಹಂತ ತಲುಪಿದ್ದರು. ಮುಂದಿನ ಸುತ್ತಿನಲ್ಲಿ ಅವರು ಕ್ಯೂಬಾದ ಮೂರನೇ ಸೀಡ್ ರಾನೀಲ್ ಇಗ್ಲೇಸಿಯಸ್ ಅವರನ್ನು ಎದುರಿಸಲಿದ್ದಾರೆ. ಇಗ್ಲೇಸಿಯಸ್ 2012ರ ಒಲಂಪಿಕ್ಸ್​ನಲ್ಲಿ ಚಿನ್ನದ ಪದಕ ಗೆದ್ದಿದ್ದರು ಮತ್ತು ಮಾಜಿ ವಿಶ್ವ ಚಾಂಪಿಯನ್ ಸಹ ಆಗಿದ್ದಾರೆ.

ರವಿವಾರದಂದು ಆರು ಬಾರಿ ವಿಶ್ವ ಚಾಂಪಿಯನ್​ಶಿಪ್ ಗೆದ್ದಿರುವ ಮೇರಿ ಕೋಮ್ (51 ಕೆಜಿ ವಿಭಾಗ) ಮತ್ತು ಕಾಮನ್​ವೆಲ್ತ್ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ ಗೆದ್ದಿದ್ದ ಮನೀಶ್ ಕೌಶಿಕ್ ತಮ್ಮ ಮೊದಲ ಬೌಟ್​ಗಳಲ್ಲಿ ಸ್ಪರ್ಧಿಸಲಿದ್ದಾರೆ.

‘ಭಾರತೀಯರು ಕಠಿಣವೆನಿಸುವ ಡ್ರಾನಲ್ಲಿದ್ದಾರೆ, ಆದರೆ ನಾವು ಒಲಂಪಿಕ್ಸ್​ನಲ್ಲಿದ್ದೇವೆ, ಇಲ್ಲಿ ಯಾವುದೂ ಸುಲಭವಲ್ಲ,’ ಎಂದು ನೀವಾ, ಭಾರತೀಯರು ಎದುರಿಸಲಿರುವ ಪ್ರಬಲ ಪ್ರತಿಸ್ಪರ್ಧಿಗಳ ಬಗ್ಗೆ ಕೇಳಿದಾಗ ಹೇಳಿದರು.

‘ಪ್ರತಿಯೊಬ್ಬರು ಆರಂಭಿಕ ಹಂತದಲ್ಲಿನ ಬೌಟ್​ಗಳು ಸುಲಭವಾಗಿರಲಿ ಅಂತ ಬಯಸುತ್ತಾರೆ, ಆದರೆ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಲು ಅದು ಸಕಾರಣವಲ್ಲ,’ ಎಂದು ಅವರು ಹೇಳಿದರು.

ಇದನ್ನೂ ಓದಿ: ಟೊಕಿಯೋ ಒಲಂಪಿಕ್ಸ್​ 2020: ಒಟ್ಟು 202 ಕೆಜಿ ಭಾರ ಎತ್ತಿದ ಮೀರಾಬಾಯಿ ಚಾನು ಭಾರತೀಯರೆಲ್ಲ ಗರ್ವದಿಂದ ತಲೆ ಎತ್ತುವಂತೆ ಮಾಡಿದ್ದಾರೆ!