- Kannada News Sports Tokyo olympics 2020 21 Tokyo Olympics Tracking Bhavani Devis performances as she heads into her maiden Games
Tokyo Olympics: ಪದಕ ಬೇಟೆಗೆ ಕತ್ತಿ ಹಿಡಿದು ಸಜ್ಜಾದ ಭವಾನಿ ದೇವಿ; ಸಮರಾಭ್ಯಾಸದ ಫೋಟೋ ನೋಡಿ
Tokyo Olympics: ಜಪಾನ್‌ನಲ್ಲಿ ನಡೆಯುವ ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುವ ಮೂಲಕ ಭಾರತದ ಫೆನ್ಸಿಂಗ್ ಪಟು ಸಿಎ ಭವಾನಿ ದೇವಿ ಇತಿಹಾಸ ಸೃಷ್ಟಿಸಿದ್ದಾರೆ.
Updated on: Jul 21, 2021 | 4:25 PM

ಜಪಾನ್‌ನಲ್ಲಿ ನಡೆಯುವ ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುವ ಮೂಲಕ ಭಾರತದ ಫೆನ್ಸಿಂಗ್ ಪಟು ಸಿಎ ಭವಾನಿ ದೇವಿ ಇತಿಹಾಸ ಸೃಷ್ಟಿಸಿದ್ದಾರೆ. ಜೊತೆಗೆ ಭಾರತದಿಂದ ಫೆನ್ಸಿಂಗ್ ವಿಭಾಗದಲ್ಲಿ ಟೋಕಿಯೊ ಒಲಿಂಪಿಕ್ಸ್‌ಗೆ ತೆರಳುತ್ತಿರುವ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.

ವಿಶ್ವ ಶ್ರೇಯಾಂಕದ ಆಧಾರದ ಮೇಲೆ ಭವಾನಿಗೆ ಟೋಕಿಯೊ ಒಲಿಂಪಿಕ್ಸ್‌ಗೆ ಟಿಕೆಟ್ ಸಿಕ್ಕಿದೆ. ಭವಾನಿ ದೇವಿ ಫೆನ್ಸಿಂಗ್‌ನ ಸಬರ್ ಈವೆಂಟ್‌ನಲ್ಲಿ ಕಾಣಿಸಿಕೊಳ್ಳಲ್ಲಿದ್ದಾರೆ. ಮೂಲತಃ ಚೆನ್ನೈನವರಾದ ಭವಾನಿ ಅವರು 2004 ರಲ್ಲಿಯೇ ತಾವು ಓದುತ್ತಿದ್ದ ಶಾಲೆಯಲ್ಲಿ ಫೆನ್ಸಿಂಗ್ ತರಬೇತಿಯನ್ನು ಆರಂಭಿಸಿದ್ದರು.

ಇಟಲಿಯಲ್ಲಿ ಅನೇಕ ಚಿನ್ನದ ಪದಕ ವಿಜೇತರಿಗೆ ತರಬೇತಿ ನೀಡಿದ ನಿಕೋಲಾ ಜಾನೊಟ್ಟಿ ಅವರ ಬಳಿ ಭವಾನಿ 2016 ರಿಂದ ತರಬೇತಿ ಪಡೆಯುತ್ತಿದ್ದಾರೆ. 2004 ರಲ್ಲಿ ಫೆನ್ಸಿಂಗ್ ಪ್ರಾರಂಭಿಸಿದ ಭವಾನಿ ಎಂಟು ಬಾರಿ ರಾಷ್ಟ್ರೀಯ ಚಾಂಪಿಯನ್ ಆಗಿದ್ದಾರೆ. 2016 ರಲ್ಲಿ ರಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯಲು ತೀರ ಸನಿಹದಲ್ಲಿದ್ದ ಭವಾನಿ ಅಂತಿಮ ಹಂತದಲ್ಲಿ ವಿಫಲರಾಗಿದ್ದರು.

10 ನೇ ತರಗತಿಯ ನಂತರ ಕೇರಳದ ತಲಶೇರಿಯಲ್ಲಿರುವ ಸಾಯಿ ಕೇಂದ್ರದಲ್ಲಿ ತರಬೇತಿ ಪ್ರಾರಂಭಿಸಿದ ಭವಾನಿ. ತನ್ನ 14 ನೇ ವಯಸ್ಸಿನಲ್ಲಿ ಟರ್ಕಿಯಲ್ಲಿ ನಡೆದಿದ್ದ ತನ್ನ ಮೊದಲ ಅಂತರರಾಷ್ಟ್ರೀಯ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದರು. ಆದರೆ ಪಂದ್ಯಾವಳಿ ನಡೆಯುವ ಸ್ಥಳಕ್ಕೆ ತಡವಾಗಿ ಬಂದ ಕಾರಣ ಕಪ್ಪು ಕಾರ್ಡ್ ತೋರಿಸಿ ಅವರನ್ನು ಅಲ್ಲಿಂದ ವಾಪಸ್ ಕಳುಹಿಸಲಾಯಿತು. ಹಾಗಾಗಿ 2010 ರಲ್ಲಿ ಫಿಲಿಪೈನ್ಸ್‌ನಲ್ಲಿ ನಡೆದ ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ಗೆದ್ದರು.

ಕೇಂದ್ರ ಕ್ರೀಡಾ ಸಚಿವ ಕಿರೆನ್ ರಿಜಿಜು ಅವರು ಭವಾನಿ ದೇವಿ ಅವರು ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿದ್ದನ್ನು ಅಭಿನಂದಿಸಿದರು. “ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿರುವ ಭಾರತೀಯ ಫೆನ್ಸರ್ ಭವಾನಿ ದೇವಿ ಅವರಿಗೆ ಅಭಿನಂದನೆಗಳು! ಈ ಸಾಧನೆ ಮಾಡಿದ ಮೊದಲ ಭಾರತೀಯ ಫೆನ್ಸರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ ಎಂದು ಅವರು ಟ್ವೀಟ್ ಮಾಡಿದ್ದಾರೆ.




