Tokyo Olympics: ಅಶಿಸ್ತು, ಅನುಚಿತ ವರ್ತನೆ: ಕುಸ್ತಿಪಟು ವಿನೇಶ್ ಪೋಗಟ್ ಅಮಾನತು
Tokyo Olympics: ಇನ್ನು ಟೋಕಿಯೋ ಒಲಿಂಪಿಕ್ಸ್ನಲ್ಲಿ ನಿರಾಶಾದಾಯಕ ಪ್ರದರ್ಶನ ನೀಡಿದ ಸೋನಮ್ ಮಲಿಕ್ಗೂ ಅನುಚಿತ ವರ್ತನೆಗಾಗಿ ನೋಟಿಸ್ ನೀಡಲಾಗಿದೆ.
ಭಾರತೀಯ ಕುಸ್ತಿ ಫೆಡರೇಶನ್ ಮಂಗಳವಾರ ಮಹಿಳಾ ಕುಸ್ತಿಪಟು ವಿನೇಶ್ ಪೋಗಟ್ ಅವರನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಿದೆ. ಟೋಕಿಯೊ ಒಲಿಂಪಿಕ್ಸ್ನಲ್ಲಿ ಅಶಿಸ್ತಿನಿಂದ ವರ್ತಿಸಿದ್ದ ಹಿನ್ನೆಲೆಯಲ್ಲಿ ಅವರನ್ನು ಅಮಾನತುಗೊಳಿಸಲಾಗಿದೆ. ತಮ್ಮ ಪ್ರಾಯೋಜಕತ್ವವನ್ನು ಕೈ ಬಿಟ್ಟು, ಇತರೆ ಕಂಪೆನಿಗಳ ಬಟ್ಟೆ ಧರಿಸಿ ವಿನೇಶ್ ಕಣಕ್ಕಿಳಿದಿದ್ದರು. ಅಷ್ಟೇ ಅಲ್ಲದೆ ಭಾರತದಿಂದ ತೆರಳಿದ್ದ ಸಹ ಕುಸ್ತಿಪಟುಗಳೊಂದಿಗೆ ಗಲಾಟೆ ಮಾಡಿದ ಆರೋಪ ಕೂಡ ಆಕೆಯ ಮೇಲಿದೆ. ಈ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಭಾರತೀಯ ಕುಸ್ತಿ ಫೆಡರೇಶನ್ ಕ್ರಮ ಕೈಗೊಂಡಿದೆ. ವಿನೇಶ್ ಹೊರತಾಗಿ ಸೋನಂ ಮಲಿಕ್ ಅವರಿಗೂ ನೋಟಿಸ್ ನೀಡಲಾಗಿದೆ. ಒಲಿಂಪಿಕ್ಸ್ ಆರಂಭಕ್ಕೂ ಮುನ್ನ ವಿನೇಶ್ ಪೋಗಟ್ ಅವರಿಂದ ಪದಕ ನಿರೀಕ್ಷಿಸಲಾಗಿತ್ತು. ಆದರೆ ಟೋಕಿಯೋ ಅಂಗಳದಲ್ಲಿ ಆಕೆಯ ಪ್ರದರ್ಶನ ನಿರಾಶಾದಾಯಕವಾಗಿತ್ತು. ವಿಶ್ವ ನಂ .1 ಮಹಿಳಾ ಕುಸ್ತಿಪಟುವಾಗಿರುವ ವಿನೇಶ್ ಪೋಗಟ್ ಮಹಿಳೆಯರ 53 ಕೆಜಿ ತೂಕ ವಿಭಾಗದ ಕ್ವಾರ್ಟರ್ ಫೈನಲ್ ನಲ್ಲಿ ಬೆಲಾರಸ್ನ ವನೆಸ್ಸಾ ಕಲಾಡ್ಜಿನ್ಸ್ಕಯಾ ವಿರುದ್ದ ಸೋಲನುಭವಿಸಿದ್ದರು.
ಇನ್ನು ಆಗಸ್ಟ್ 16 ರೊಳಗೆ ನೋಟಿಸ್‌ಗೆ ಪ್ರತಿಕ್ರಿಯೆ ನೀಡುವಂತೆ ಡಬ್ಲ್ಯುಎಫ್‌ಐ ವಿನೇಶ್ ಫೋಗಟ್ ಅವರಿಗೆ ಸೂಚಿಸಿದೆ. ವಿನೇಶ್ ಫೋಗಟ್ ಟೋಕಿಯೊ ಒಲಿಂಪಿಕ್ಸ್ ಗೂ ಮುನ್ನ ಹಂಗೇರಿಯಲ್ಲಿ ತರಬೇತಿ ಪಡೆಯುತ್ತಿದ್ದರು. ಅಲ್ಲಿಂದ ನೇರವಾಗಿ ಟೋಕಿಯೊಗೆ ತೆರಳಿದ್ದರು. ಅಲ್ಲಿಗೆ ತಲುಪಿದ ನಂತರ, ವಿನೇಶ್ ಪೋಗಟ್ ಉಳಿದ ಆಟಗಾರರಂತೆ, ಕ್ರೀಡಾ ಗ್ರಾಮದಲ್ಲಿ ಉಳಿಯಲು ಮತ್ತು ಉಳಿದ ಕುಸ್ತಿಪಟುಗಳೊಂದಿಗೆ ಅಭ್ಯಾಸ ನಡೆಸಲು ನಿರಾಕರಿಸಿದರು.
ಇನ್ನು ಭಾರತೀಯ ತಂಡದ ಪ್ರಾಯೋಜಕ ಶಿವ ನರೇಶ್ ಅವರ ಹೆಸರಿನ ಬದಲಿಗೆ ನೈಕ್ ನಿಂದ ಮಾಡಿದ ಬಟ್ಟೆಗಳನ್ನು ಧರಿಸಿ ಪೋಗಟ್ ಕಣಕ್ಕಿಳಿದಿದ್ದರು. ಇವೆಲ್ಲವನ್ನು ಗಂಭೀರವಾಗಿ ಪರಿಗಣಿಸಿರುವ ಡಬ್ಲ್ಯುಎಫ್‌ಐ “ಆಟಗಾರರ ಅಶಿಸ್ತಿನ ವರ್ತನೆಯನ್ನು ಕ್ಷಮಿಸಲಾಗುವುದಿಲ್ಲ. ಹೀಗಾಗಿ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ತಿಳಿಸಿದೆ. ಅಷ್ಟೇ ಅಲ್ಲದೆ ತನ್ನ ಮೇಲಿನ ಆರೋಪಗಳಿಗೆ ಪ್ರತಿಕ್ರಿಯಿಸುವವರೆಗೂ ಯಾವುದೇ ರಾಷ್ಟ್ರೀಯ ಮತ್ತು ದೇಶೀಯ ಕುಸ್ತಿ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶ ಇರುವುದಿಲ್ಲ ಎಂದು ತಿಳಿಸಿದೆ.
ಸೋನಂ ಮಲಿಕ್ಗೂ ನೋಟಿಸ್: ಇನ್ನು ಟೋಕಿಯೋ ಒಲಿಂಪಿಕ್ಸ್ನಲ್ಲಿ ನಿರಾಶಾದಾಯಕ ಪ್ರದರ್ಶನ ನೀಡಿದ ಸೋನಮ್ ಮಲಿಕ್ಗೂ ಅನುಚಿತ ವರ್ತನೆಗಾಗಿ ನೋಟಿಸ್ ನೀಡಲಾಗಿದೆ. ಸೋನಂ ಮಲಿಕ್‌ಗೆ ಆಕೆ ಅಥವಾ ಆಕೆಯ ಕುಟುಂಬದ ಯಾರಾದರೂ ಫೆಡರೇಶನ್ ಕಚೇರಿಯಿಂದ ಪಾಸ್‌ಪೋರ್ಟ್ ತೆಗೆದುಕೊಳ್ಳಬೇಕು ಎಂದು ತಿಳಿಸಲಾಯಿತು. ಆದರೆ ಆಕೆ ತನ್ನ ಪರವಾಗಿ ಸಂಗ್ರಹಿಸಲು SAI ಅಧಿಕಾರಿಗಳಿಗೆ ಆದೇಶಿಸಿದಳು. ಇದು ಸ್ವೀಕಾರಾರ್ಹವಲ್ಲ. ಅವರು ಏನನ್ನೂ ಸಾಧಿಸಿಲ್ಲ. ಇದಾಗ್ಯೂ ಇಂತಹ ವರ್ತನೆಗಳು ಸ್ಟಾರ್ಗಿರಿಯನ್ನು ತೋರಿಸುತ್ತಿದೆ. ಹೀಗಾಗಿ ಈ ಬಗ್ಗೆ ಸ್ಪಷ್ಟನೆ ನೀಡುವಂತೆ ನೊಟೀಸ್ ನೀಡಲಾಗಿದೆ ಎಂದು ಇದನ್ನು ಸ್ವೀಕರಿಸಲಾಗುವುದಿಲ್ಲ” ಎಂದು ಭಾರತೀಯ ಕುಸ್ತಿ ಫೆಡರೇಶನ್ ಅಧಿಕಾರಿ ತಿಳಿಸಿದ್ದಾರೆ.
ಇದನ್ನೂ ಓದಿ: IPL 2021: ಐಪಿಎಲ್ಗಾಗಿ 2 ತಂಡ ಕಟ್ಟಿದ್ದ ನ್ಯೂಜಿಲೆಂಡ್..!
ಇದನ್ನೂ ಓದಿ: IPL 2021: ಐಪಿಎಲ್ನ ಹೊಸ ನಿಯಮದಿಂದ ಯಾರಿಗೆ ಅನುಕೂಲ?