ಆಟದಲ್ಲಿ ಗೆಲುವು-ಸೋಲು ಇದ್ದಿದ್ದೆ. ಇಂತಹ ಸೋಲುಗಳನ್ನು ಅಭಿಮಾನಿಗಳು ಅರಗಿಸಿಕೊಳ್ಳಲೇಬೇಕಾಗುತ್ತದೆ. ಹಾಗೆಯೇ ಗೆಲುವನ್ನು ಕೂಡ ಪರಮಾವಧಿಯೊಳಗೆ ಸಂಭ್ರಮಿಸಬೇಕಾಗುತ್ತದೆ. ಆದರೆ ಕೆಲವೊಮ್ಮೆ ಸೋಲಿನ ಹತಾಶೆಯಲ್ಲಿ ಮೈಮರೆಯುವವರು ಇದ್ದಾರೆ. ಇಂತಹದೊಂದು ಘಟನೆ ಆಸ್ಟ್ರೇಲಿಯಾದಲ್ಲಿ ನಡೆದಿದೆ. ಈತ ತಂಡ ಸೋತ ಸಿಟ್ಟಿನಲ್ಲಿ ಸಿಡ್ನಿ ಕ್ರಿಕೆಟ್ ಮೈದಾನದ ಛಾವಣಿಯ ಮೇಲೆ ನಿಂತು ಮೂತ್ರ ವಿಸರ್ಜನೆ ಮಾಡಿದ್ದ. ಈ ದೃಶ್ಯ ವೈರಲ್ ಆದ ಬಳಿಕ ಆತನನ್ನು ಬಂಧಿಸಲಾಗಿದೆ. ಅಷ್ಟಕ್ಕೂ ಈ ಘಟನೆ ನಡೆದಿದ್ದು ರಗ್ಬಿ ಪಂದ್ಯದ ಬಳಿಕ. ಸಿಡ್ನಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ರಗ್ಬಿ ಪಂದ್ಯದಲ್ಲಿ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ಮುಖಾಮುಖಿಯಾಗಿತ್ತು.
ಭಾರೀ ಕುತೂಹಲಕ್ಕೆ ಕಾರಣವಾಗಿದ್ದ ಈ ಪಂದ್ಯವನ್ನು ಇಂಗ್ಲೆಂಡ್ ತಂಡವು 21-17 ಅಂತರದಿಂದ ಗೆದ್ದುಕೊಂಡಿದೆ. ಅತ್ತ ತವರಿನಲ್ಲೇ ಆಸ್ಟ್ರೇಲಿಯಾ ತಂಡ ಸೋತ ಹತಾಶೆಯಲ್ಲಿ ಅಭಿಮಾನಿಯೊಬ್ಬ ಸ್ಟೇಡಿಯಂನ ಮೇಲ್ಛಾವಣಿಗೆ ಏರಿದ್ದ. ಅಲ್ಲದೆ ಅಲ್ಲಿಂದ ಮೂತ್ರ ವಿಸರ್ಜನೆ ಮಾಡಿದ್ದ.
ತಕ್ಷಣವೇ ಆತನನ್ನು ಸ್ಟೇಡಿಯಂ ಭದ್ರತಾ ಸಿಬ್ಬಂದಿಗಳು ವಶಕ್ಕೆ ಪಡೆದಿದ್ದಾರೆ. ಅನುಚಿತ ವರ್ತನೆಯ ಆರೋಪದ ಜೊತೆಗೆ ಅನುಮತಿಯಿಲ್ಲದೆ ಟೆರೇಸ್‌ಗೆ ಹೋಗಿದ್ದಕ್ಕಾಗಿ ಪ್ರಕರಣ ದಾಖಲಿಸಲಾಗಿದೆ. ಅಷ್ಟೇ ಅಲ್ಲದೆ ಸಿಡ್ನಿ ಕ್ರಿಕೆಟ್ ಗ್ರೌಂಡ್ ಆತನ ಮೇಲೆ ಕೇವಲ 2 ವರ್ಷಗಳ ನಿಷೇಧ ಹೇರಿದೆ. ಇದರ ಬೆನ್ನಲ್ಲೇ ರಗ್ಬಿ ಆಸ್ಟ್ರೇಲಿಯಾ ಶಿಕ್ಷೆಯನ್ನು ಹೆಚ್ಚಿಸಿ ಜೀವಾವಧಿ ನಿಷೇಧ ಹೇರಲಾಗಿದೆ.
ಸದ್ಯ ಆ ಅಭಿಮಾನಿ ಪೊಲೀಸರಿಂದ ಬಿಡುಗಡೆಯಾದರೂ, ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಇನ್ಮುಂದೆ ಯಾವುದೇ ಪಂದ್ಯವನ್ನು ನೋಡಲು ಸಾಧ್ಯವಾಗುವುದಿಲ್ಲ ಎಂದು ರಗ್ಬಿ ಆಸ್ಟ್ರೇಲಿಯಾ ಸ್ಪಷ್ಟಪಡಿಸಿದೆ.