Rafael Nadal: ಮತ್ತೆ ಅಂಗಳಕ್ಕೆ ಮರಳಿದ ರಾಫೆಲ್ ನಡಾಲ್
Rafael Nadal: ರಾಫೆಲ್ ನಡಾಲ್ ಯೂ ಮಾಂಟ್ರಿಯಲ್‌ಗೆ ಬರಲು ಬಯಸಿದ್ದಾರೆ. ಈಗಾಗಲೇ ಅವರ ಹೋಟೆಲ್ ಕೊಠಡಿಗಳನ್ನು ಕಾಯ್ದಿರಿಸಲಾಗಿದೆ.
ಟೆನಿಸ್ ಅಂಗಳದ ಸ್ಟಾರ್ ಆಟಗಾರ ರಾಫೆಲ್ ನಡಾಲ್ (Rafael Nadal) ಮತ್ತೆ ಮೈದಾನದಲ್ಲಿ ಅಭ್ಯಾಸ ಆರಂಭಿಸಿದ್ದಾರೆ. ಈ ಮೂಲಕ ಮುಂಬರುವ ಕೆನೆಡಿಯನ್ ಓಪನ್ ನಲ್ಲಿ ಕಣಕ್ಕಿಳಿಯುವುದನ್ನು ಖಚಿತಪಡಿಸಿದ್ದಾರೆ. ಇತ್ತೀಚೆಗೆ ಮುಕ್ತಾಯಗೊಂಡ ವಿಂಬಲ್ಡನ್ ಟೂರ್ನಿಯ ಸೆಮಿಫೈನಲ್ ಪಂದ್ಯದಿಂದ ನಡಾಲ್ ಹಿಂದೆ ಸರಿದಿದ್ದಾರೆ. ಕಿಬ್ಬೊಟ್ಟೆಯ ಗಾಯದ ಸಮಸ್ಯೆಗೆ ತುತ್ತಾಗಿದ್ದ ನಡಾಲ್ ಪಂದ್ಯದಿಂದ ಹಿಂದೆ ಸರಿಯುವ ಮೂಲಕ ವಾಕ್ ಓವರ್ ನೀಡಿದ್ದರು. ಇದರಿಂದ 22 ಬಾರಿ ಗ್ರ್ಯಾಂಡ್ ಸ್ಲಾಮ್ ಚಾಂಪಿಯನ್ ಆಗಿರುವ ರಾಫೆಲ್ ನಡಾಲ್ ಮತ್ತೊಂದು ಕಿರೀಟ ತಪ್ಪಿಸಿಕೊಂಡಿದ್ದರು.
ಇದೀಗ ಸಂಪೂರ್ಣ ಚೇತರಿಸಿಕೊಂಡಿರುವ ನಡಾಲ್ ಮತ್ತೆ ಕೋರ್ಟ್ ಗೆ ಮರಳಿದ್ದಾರೆ.ಅಲ್ಲದೆ ಮುಂದಿನ ತಿಂಗಳ ಆರಂಭದಲ್ಲಿ ಕೆನಡಿಯನ್ ಓಪನ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದಕ್ಕಾಗಿ ಕಠಿಣ ಅಭ್ಯಾಸವನ್ನು ಆರಂಭಿಸಿದ್ದು, ಈ ಮೂಲಕ ವಿಂಬಲ್ಡನ್ ಕಿರೀಟ ತಪ್ಪಿಸಿಕೊಂಡಿದ್ದನ್ನು ಸರಿದೂಗಿಸುವ ಇರಾದೆಯಲ್ಲಿದ್ದಾರೆ.
Entraînement de Rafa ce matin à la #RNA !! Vamos ?? pic.twitter.com/bCeQJwqkQN
— Pascale (@PascaleMazel) July 18, 2022
ರಾಫೆಲ್ ನಡಾಲ್ ಯೂ ಮಾಂಟ್ರಿಯಲ್‌ಗೆ ಬರಲು ಬಯಸಿದ್ದಾರೆ. ಈಗಾಗಲೇ ಅವರ ಹೋಟೆಲ್ ಕೊಠಡಿಗಳನ್ನು ಕಾಯ್ದಿರಿಸಲಾಗಿದೆ ಎಂದು ಕೆನಡಿಯನ್ ಓಪನ್‌ನ ಪಂದ್ಯಾವಳಿಯ ನಿರ್ದೇಶಕ ಯುಜೀನ್ ಲ್ಯಾಪಿಯರ್ ಹೇಳಿದ್ದಾರೆ. ಅಷ್ಟೇ ಅಲ್ಲದೆ ತಯಾರಿಗಾಗಿ ಪಂದ್ಯಾವಳಿಯ ಸಮಯದಲ್ಲಿ ಬಳಸಲು ಚೆಂಡುಗಳ ಕ್ರೇಟ್ ಅನ್ನು ಕಳುಹಿಸಲಾಗಿದೆ. ಅದರಂತೆ ಇದೀಗ ಅಭ್ಯಾಸವನ್ನು ಆರಂಭಿಸಿದ್ದಾರೆ ಎಂದು ಯುಜೀನ್ ತಿಳಿಸಿದ್ದಾರೆ.
ಸ್ಪೇನ್‌ನ ಆಟಗಾರ ನಡಾಲ್ ಕೆನಡಿಯನ್ ಓಪನ್ ನಲ್ಲಿ ಐದು ಬಾರಿ ಟ್ರೋಫಿ ಗೆದ್ದಿದ್ದಾರೆ. ಈ ಬಾರಿ ಕೂಡ ಕಿರೀಟವನ್ನು ತಮ್ಮದಾಗಿಸಿಕೊಂಡರೆ, ಈ ಟೂರ್ನಿಯಲ್ಲಿ ಅತಿ ಹೆಚ್ಚು ಪ್ರಶಸ್ತಿ ಗೆದ್ದ ದಂತಕಥೆ ಇವಾನ್ ಲೆಂಡ್ಲ್ ಅವರನ್ನು ಸರಿಗಟ್ಟಲಿದ್ದಾರೆ.
Rafa à l’entraînement ce matin !!! ? pic.twitter.com/f6IcL9ATo7
— Pascale (@PascaleMazel) July 18, 2022
ಆದರೆ ಮತ್ತೊಂದೆಡೆ ಕೆನೆಡಿಯನ್ ಓಪನ್ ನಿಂದ ಮತ್ತೋರ್ವ ಸ್ಟಾರ್ ಆಟಗಾರ ನೊವಾಕ್ ಜೊಕೊವಿಕ್ ಹೊರಗುಳಿಯುವ ಸಾಧ್ಯತೆಯಿದೆ. ಕೊರೋನಾ ವ್ಯಾಕ್ಸಿನೇಷನ್ ಪಡೆಯದ ಕಾರಣ ಅವರ ಭಾಗವಹಿಸುವಿಕೆಗೆ ಅನುಮತಿ ನೀಡುವ ಸಾಧ್ಯತೆಯಿಲ್ಲ ಎಂದು ಲ್ಯಾಪಿಯರ್ ದೃಢಪಡಿಸಿದ್ದಾರೆ.
ನಾವು ಉತ್ತಮ ಟೂರ್ನಿಯನ್ನು ಆಯೋಜಿಸಲಿದ್ದೇವೆ. ಇಬ್ಬರನ್ನು ಹೊರತುಪಡಿಸಿ ಎಲ್ಲಾ ಅತ್ಯುತ್ತಮ ಆಟಗಾರರು ಇರುತ್ತಾರೆ. ಕೆನಡಾದ ಸರ್ಕಾರವು ಲಸಿಕೆಗೆ ಸಂಬಂಧಿಸಿದ ನಿಯಮಗಳನ್ನು ಬದಲಾಯಿಸಿದ್ರೆ ಅಥವಾ ಅವರು ಲಸಿಕೆ ಪಡೆದರೆ ಮಾತ್ರ ಟೂರ್ನಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆದರೆ ಪ್ರಸ್ತುತ ಸನ್ನಿವೇಶದಲ್ಲಿ ಅದು ನಡೆಯಲಿದೆ ಎಂದು ಭಾವಿಸುವುದಿಲ್ಲ ಕೆನಡಿಯನ್ ಓಪನ್‌ನ ಪಂದ್ಯಾವಳಿಯ ನಿರ್ದೇಶಕ ಯುಜೀನ್ ಲ್ಯಾಪಿಯರ್ ಹೇಳಿದ್ದಾರೆ. ಈ ಮೂಲಕ ನೊವಾಕ್ ಜೊಕೊವಿಕ್ ಭಾಗವಹಿಸುವುದು ಅನುಮಾನ ಎಂದಿದ್ದಾರೆ. ಇದಾಗ್ಯೂ ರಾಫೆಲ್ ನಡಾಲ್ ಅಂಗಳಕ್ಕೆ ಮರಳುತ್ತಿರುವುದು ಅಭಿಮಾನಿಗಳ ಸಂತಸಕ್ಕೆ ಕಾರಣವಾಗಿದೆ.