ಭಾರತದ ಮಾಜಿ ಎಡಗೈ ಸ್ಪಿನ್ನರ್ ಮುರಳಿ ಕಾರ್ತಿಕ್ ಗೊತ್ತಲ್ಲ? ಭಾರತವನ್ನು 8 ಟೆಸ್ಟ್, 37 ಒಂದು ದಿನ ಅಂತರರಾಷ್ಟ್ರೀಯ ಪಂದ್ಯಗಳು ಮತ್ತು 1 ಟಿ20ಐ ಪಂದ್ಯದಲ್ಲಿ ಪ್ರತಿನಿಧಿಸಿದ್ದ ಅವರು ಈಗ ಕಾಮೆಂಟೇಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ಇತ್ತೀಚಿಗೆ ಯೂಟ್ಯೂಬ್ನಲ್ಲಿ ಭಾರತದ ಖ್ಯಾತ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರೊಂದಿಗೆ ನಡೆಸಿದ ಸಂಭಾಷಣೆಯಲ್ಲಿ ಅವರು ಒಂದು ಸ್ವಾರಸ್ಯಕರ ಘಟನೆಯನ್ನು ವಿವರಿಸಿದರು. 2012 ರಲ್ಲಿ ಅವರು ಸರ್ರೆ ಪರ ಸಾಮರ್ಸೆಟ್ ಕ್ಲಬ್ ವಿರುದ್ಧ ಆಡಿದ ಪಂದ್ಯದಲ್ಲಿ ಅಲೆಕ್ಸ್ ಬ್ಯಾರೊ ಅವರನ್ನು ‘ಮಂಕಡಿಂಗ್’ ಮಾಡಿದಾಗ ಪಂದ್ಯವನ್ನು ವೀಕ್ಷಿಸುತ್ತಿದ್ದ ಅವರ ಪತ್ನಿ ಮೈದಾನ ಬಿಟ್ಟು ಓಡಿಹೋದರಂತೆ ಮತ್ತು ಪ್ರೇಕ್ಷಕರು ಡ್ರೆಸಿಂಗ್ ರೂಮಿನವರೆಗೆ ಬಂದಿದ್ದರಂತೆ. ಕಾರ್ತಿಕ್ ಇಂಗ್ಲಿಷ್ ಕೌಂಟಿ ಚಾಂಪಿಯನ್ಶಿಪ್ನಲ್ಲಿ ಸರ್ರೆ, ಮಿಡ್ಲ್ ಸೆಕ್ಸ್ ಮತ್ತು ಸಾಮರ್ಸೆಟ್ ಕ್ಲಬ್ಗಳ ಪರ ಕೆಲ ವರ್ಷ ಆಡಿದ್ದರು.
‘ನನ್ನ ಪತ್ನಿ ಮೈದಾನದಿಂದಾಚೆ ಓಡಿಹೋದಳು. ಪ್ರೇಕ್ಷಕರು ಗುಂಪುಗೂಡಿ ಡ್ರೆಸಿಂಗ್ ರೂಮಿನೆಡೆ ಓಡಿಬಂದಾಗ ನಮಗೆಲ್ಲ ಭಯವಾಗಿತ್ತು. ಅವರು ಹೆಚ್ಚು ಕಡಿಮೆ ಡ್ರೆಸಿಂಗ್ ರೂಮನ್ನು ಪ್ರವೇಶಿಯೇ ಬಿಟ್ಟಿದ್ದರು’ ಎಂದು ಕಾರ್ತಿಕ್ ಅವರು ಅಶ್ವಿನ್ ಜೊತೆ ಮಾತಾಡುವಾಗ ಹೇಳಿದ್ದಾರೆ. ಅಶ್ವಿನ್ ಯೂಟ್ಯೂಬ್ನಲ್ಲಿ ಡಿಆರ್ಎಸ್ ವಿತ್ ಆಶ್ವಿನ್ ಎಂಬ ಕಾರ್ಯಕ್ರಮವನ್ನು ನಡೆಸುತ್ತಾರೆ.
ಮಂಕಡಿಂಗ್ ಏನು ಅನ್ನೋದು ಕ್ರಿಕೆಟ್ ಪ್ರೇಮಿಗಳಿಗೆ ಗೊತ್ತಿರುತ್ತದೆ. ಬೌಲರ್ನೊಬ್ಬ ನಾನ್ಸ್ಟ್ರೈಕರ್ ತುದಿಯಲ್ಲಿರುವ ಬ್ಯಾಟ್ಸ್ಮನ್ ತಾನು ಬೌಲ್ ಮಾಡುವ ಮೊದಲೇ ರನ್ ಗಳಿಸುವ ಪ್ರಯತ್ನದಲ್ಲಿ ಕ್ರೀಸ್ನಿಂದ ಆಚೆ ಬಂದರೆ, ಅವನು ಚೆಂಡೆಸೆಯುವುದನ್ನು ನಿಲ್ಲಿಸಿ ಬ್ಯಾಟ್ಸ್ಮನ್ನನ್ನು ರನೌಟ್ ಮಾಡಿದರೆ ಅದನ್ನು ಮಂಕಡಿಂಗ್ ಅನ್ನುತ್ತಾರೆ. ಹಾಗೆ ಔಟ್ ಮಾಡಲು ಕ್ರಿಕೆಟ್ ನಿಯಮದ ಪುಸ್ತಕಗಳಲ್ಲಿ ಅವಕಾಶವಿದೆಯಾದರೂ ಸಾಮಾನ್ಯವಾಗಿ ಅದನ್ನು ಕ್ರೀಡಾ ಸ್ಫೂರ್ತಿಗೆ ವಿರುದ್ಧವಾದದ್ದು ಎಂದು ಬಣ್ಣಿಸಲಾಗುತ್ತದೆ.
1947-48 ಆಸ್ಟ್ರೇಲಿಯ ವಿರುದ್ಧ ನಡೆದ ಸರಣಿಯ ಸಿಡ್ನಿ ಟೆಸ್ಟ್ ಪಂದ್ಯದಲ್ಲಿ ಭಾರತದ ಖ್ಯಾತ ಆಲ್ರೌಂಡರ್ ವಿನೂ ಮಂಕಡ್ ಅವರು ಅತಿಥೇಯ ಬ್ಯಾಟ್ಸಮನ್ ಬಿಲ್ ಬ್ರೌನ್ ಅವರನ್ನು ಹಾಗೆ ಔಟ್ ಮಡಿದ ನಂತರ ಅದಕ್ಕೆ ಮಂಕಡಿಂಗ್ ಅಂತ ಹೆಸರಿಡಲಾಯಿತು. ಟೆಸ್ಟ್ ಕ್ರಿಕೆಟ್ನಲ್ಲಿ ಮೊಟ್ಟಮೊದಲ ಬಾರಿಗೆ ಒಬ್ಬ ಬ್ಯಾಟ್ಸ್ಮನ್ ಹಾಗೆ ಔಟಾಗಿದ್ದ.
ಪ್ರಸಕ್ತ ಸ್ಥಿತಿಗೆ ವಾಪಸ್ಸಾಗೋಣ. ಬ್ಯಾಟ್ಟ್ಮನ್ನನ್ನು ಮಂಕಡಿಂಗ್ ಮಾಡುವ ಮೊದಲು ಮೂರು ಬಾರಿ ಎಚ್ಚರಿಸಿದ್ದಾಗಿ ಕಾರ್ತಿಕ್ ಹೇಳಿದರು.
‘ನನ್ನ ಪ್ರಕರಣದಲ್ಲಿ ಹೇಳುವುದಾದರೆ, ಬ್ಯಾಟ್ಸ್ಮನ್ ಅನ್ನು ಔಟ್ ಮಾಡುವ ಮೊದಲು ಕ್ರೀಸ್ ಬಿಟ್ಟು ಮುಂದೆ ಹೋಗುತ್ತಿರುವ ಬಗ್ಗೆ ನಾನು ಮೂರು ಸಲ ಎಚ್ಚರಿಸಿದ್ದೆ. ಆದರೆ ಅದರ ಬಗ್ಗೆ ಯಾರೂ ಚರ್ಚಿಸಲಿಲ್ಲ. ಎಚ್ಚರಿಕೆಗಳನ್ನು ಕೊಟ್ಟಾಗ್ಯೂ ಅವರು ಬೌಲರ್ನನ್ನು ಮಾತ್ರ ದೂಷಿಸಿದರು. ನಾನು ಬೌಲ್ ಮೊದಲೇ ಬ್ಯಾಟ್ಸ್ಮನ್ ಕ್ರೀಸ್ ಬಿಟ್ಟರೆ ನಾನು ಎಲ್ಲ 11 ಆಟಗಾರರನ್ನು ಹಾಗೆ ಔಟ್ ಮಾಡಲು ಸಿದ್ಧನಿದ್ದೇನೆ’ ಎಂದು ಕಾರ್ತಿಕ್ ಹೇಳಿದರು.
‘ನಾನು ಒಟ್ಟು 5 ಬಾರಿ ಮಂಕಡಿಂಗ್ ಮಾಡಿದ್ದರೂ ಈ ಐದನೇ ಪ್ರಕರಣವೇ ವಿವಾದದ ರೂಪ ತಳೆಯಿತು. ಯಾಕೆಂದರೆ ನಾನು ಮೂರು ವರ್ಷಗಳ ಕಾಲ ಪ್ರತಿನಿಧಿಸಿದ್ದ ಸಾಮರ್ಸೆಟ್ ವಿರುದ್ಧ ಮಂಕಡಿಂಗ್ ಮಾಡಿದ್ದೆ. ನಾನು ಈ ಸಾಮರ್ಸೆಟ್ ಬಿಟ್ಟು ಸರ್ರೆ ಸೇರಿದ್ದು ಅದಾಗಲೇ ಆ ಕ್ಲಬ್ನವರಿಗೆ ಇರುಸು ಮುರುಸು ಉಂಟು ಮಾಡಿತ್ತು. ಅವರು ನನ್ನ ವಿರುದ್ಧ ಹಲವಾರು ಆರೋಪಗಳನ್ನು ಮಾಡಿದ್ದರು. ನನ್ನ ಹೆಂಡತಿಗೆ ನಗರ ಜೀವನ ಇಷ್ಟವಾಗಿತ್ತಾದ್ದರಿಂದ ನಾನು ಲಂಡನ್ಗೆ ಹೋದೆ ಅನ್ನೋದು ಅವರು ಮಾಡಿದ ಆರೋಪಗಳಲ್ಲಿ ಒಂದಾಗಿತ್ತು. ಸರ್ರೆ ನನಗೆ ಹೆಚ್ಚಿನ ಸಂಬಳ ನೀಡುತ್ತಿದೆ ಅಂತೆಲ್ಲ ಅವರು ಹೇಳಿದರು. ಸಾಮರ್ಸೆಟ್ ನಾನು ಹಿಂದೆ ಪ್ರತಿನಿಧಿಸಿದ್ದ ಕ್ಲಬ್ ಆಗಿದ್ದರಿಂದ ಅದು ದೊಡ್ಡ ವಿವಾದವಾಯಿತು’ ಎಂದು ಕಾರ್ತಿಕ್ ಹೇಳಿದ್ದಾರೆ.
‘ಆಗ ಪ್ರಾಯಶಃ ಶ್ರೀಲಂಕಾ ತಂಡವು ಇಂಗ್ಲೆಂಡ್ ಪ್ರವಾಸ ಬಂದಿತ್ತು. ಸರಣಿಗೆ ಕಾಮೆಂಟೇಟರ್ಗಳಾಗಿದ್ದ ಮೈಕೆಲ್ ಹೋಲ್ಡಿಂಗ್, ನಾಸೆರ್ ಹುಸ್ಸೇನ್ ಮತ್ತು ಡೇವಿಡ್ ಲಾಯ್ಡ್ (ಇವರನ್ನು ಬಂಬಲ್ ಅಂತ ಕರೆಯುತ್ತಾರೆ) ಅವರಿಗೆ ಮುರಳಿ ಕಾರ್ತಿಕ್ ಮಾಡಿದ್ದ್ದು ಸರಿಯಾ ಅಂತ ಕೇಳಿದಾಗ ಅವರೆಲ್ಲ ಅವರು ಮಾಡಿದ್ದರಲ್ಲಿ ತಪ್ಪೇನೂ ಇಲ್ಲ ಎಂದು ಹೇಳಿದ್ದರು’ ಅಂತ ಕಾರ್ತಿಕ್ ಹೇಳಿದರು.
ಪ್ರಾಯಶಃ ಕ್ರಿಕೆಟ್ ಪ್ರೇಮಿಗಳಿಗೆ ನೆನಪಿರಬಹುದು. 2019ರ ಐಪಿಎಲ್ ಟೂರ್ನಿಯಲ್ಲಿ ಅಶ್ವಿನ್ ಅವರು ಜೊಸ್ ಬಟ್ಲರ್ ಅವರನ್ನು ಮಂಕಡಿಂಗ್ ಮಾಡಿದ್ದರು. ಆಗ ಅಶ್ವಿನ್ರನ್ನು ತಾನು ಟ್ಟೀಟ್ಗಳ ಮೂಲಕ ಸಮರ್ಥಿಸಿದ್ದೆ ಎಂದು ಕಾರ್ತಿಕ್ ಹೇಳಿದರು. ‘ಒಮ್ಮೆ ನೀವು (ಅಶ್ವಿನ್), ಜೊಸ್ ಬಟ್ಲರ್ ಅವರನ್ನು ಹಾಗೆ ಔಟ್ ಮಾಡಿದ್ದಿರಿ, ಆಗ ನಾನು ಟ್ವಿಟ್ಟರ್ನಲ್ಲಿ ಎಲ್ಲರನ್ನು ಎದುರು ಹಾಕಿಕೊಂಡಿದ್ದೆ. ಬೌಲರ್ನನ್ನು ದೂಷಿಸುತ್ತ್ತಾ ಅದ್ಹೇಗೆ ಅವರು ಗೇಲಿ ಮಾಡಬಹುದಿತ್ತು?’ ಎಂದು ಕಾರ್ತಿಕ್ ಕೇಳಿದರು.