Wimbledon 2023: ಮಹಿಳಾ ಸಿಂಗಲ್ಸ್ ಪ್ರಶಸ್ತಿ ಮುಡಿಗೇರಿಸಿಕೊಂಡ ಮಾರ್ಕೆಟಾ

| Updated By: ಝಾಹಿರ್ ಯೂಸುಫ್

Updated on: Jul 15, 2023 | 9:07 PM

Wimbledon 2023 Women’s Final: ಜಾನಾ ನೊವೊಟ್ನಾ ಮತ್ತು ಪೆಟ್ರಾ ಕ್ವಿಟೋವಾ ನಂತರ ವಿಂಬಲ್ಡನ್‌ನಲ್ಲಿ ಪ್ರಶಸ್ತಿ ಗೆದ್ದ ಮೂರನೇ ಜೆಕ್ ಗಣರಾಜ್ಯದ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಮಾರ್ಕೆಟಾ ವೊಂಡ್ರೊಸೊವಾ ಪಾತ್ರರಾಗಿದ್ದಾರೆ.

Wimbledon 2023: ಮಹಿಳಾ ಸಿಂಗಲ್ಸ್ ಪ್ರಶಸ್ತಿ ಮುಡಿಗೇರಿಸಿಕೊಂಡ ಮಾರ್ಕೆಟಾ
Marketa Vondrousova
Follow us on

Wimbledon 2023 Women’s Final: ವಿಂಬಲ್ಡನ್ ಮಹಿಳಾ ಸಿಂಗಲ್ಸ್ ಫೈನಲ್​ನಲ್ಲಿ ಟುನೀಶಿಯಾದ ಓನ್ಸ್ ಜಬೇರ್ ವಿರುದ್ಧ ಜೆಕ್ ಗಣರಾಜ್ಯದ ಮಾರ್ಕೆಟಾ ವೊಂಡ್ರೊಸೊವಾ ಗೆಲುವು ದಾಖಲಿಸಿದ್ದಾರೆ. ಲಂಡನ್‌ನ ಕ್ರೋಕೆಟ್ ಕ್ಲಬ್‌ ಸೆಂಟರ್ ಕೋರ್ಟ್‌ನಲ್ಲಿ ನಡೆದ ಫೈನಲ್ ಕಾದಾಟದಲ್ಲಿ ಓನ್ಸ್ ಜಬೇರ್ ಅವರನ್ನು 6-4, 6-4 ಅಂತರದಿಂದ ಸೋಲಿಸಿ ಮಾರ್ಕೆಟಾ ವಿಂಬಲ್ಡನ್ ಕಿರೀಟವನ್ನು ತಮ್ಮದಾಗಿಸಿಕೊಂಡರು. ಭಾರೀ ಪೈಪೋಟಿಯನ್ನು ನಿರೀಕ್ಷಿಸಲಾಗಿದ್ದ ಅಂತಿಮ ಹಣಾಹಣಿಯನ್ನು 24 ವರ್ಷದ ಮಾರ್ಕೆಟಾ ಏಕಪಕ್ಷೀಯವಾಗಿಸಿದ್ದರು.

2022 ರ ವಿಂಬಲ್ಡನ್ ಫೈನಲ್​ನಲ್ಲೂ ಸೋತು ರನ್ನರ್ ಅಪ್ ಆಗಿದ್ದ ಒನ್ಸ್ ಜಬೇರ್ ಈ ಕೂಡ ಒತ್ತಡ ಮೀರಿ ಆಡುವಲ್ಲಿ ವಿಫಲರಾದರು. ಇದರ ಸಂಪೂರ್ಣ ಲಾಭ ಪಡೆದ ಮಾರ್ಕೆಟಾ ಮೊದಲ ಸೆಟ್​ನಲ್ಲೇ ಪಂದ್ಯದ ಮೇಲೆ ಹಿಡಿತ ಸಾಧಿಸಿದರು. ಈ ಮೂಲಕ ಮೊದಲ ಸೆಟ್​ ಅನ್ನು 6-4 ಅಂತರದಿಂದ ಗೆದ್ದುಕೊಳ್ಳುವಲ್ಲಿ ಯಶಸ್ವಿಯಾದರು.

ಇನ್ನು ದ್ವಿತೀಯ ಸೆಟ್​ನಲ್ಲಿ ಒನ್ಸ್ ಜಬೇರ್ ಕಂಬ್ಯಾಕ್ ಅನ್ನು ನಿರೀಕ್ಷಿಸಲಾಗಿತ್ತು. ಆದರೆ ಫಸ್ಟ್ ಸರ್ವ್​ ಮೂಲಕವೇ ಪಂದ್ಯದ ಮೇಲೆ ಹಿಡಿತ ಸಾಧಿಸುವಲ್ಲಿ ಮಾರ್ಕೆಟಾ ಮತ್ತೊಮ್ಮೆ ಯಶಸ್ವಿಯಾದರು. ಇತ್ತ ಅತ್ಯುತ್ತಮ ಹೊಡೆತಗಳ ಮೂಲಕ ಜೆಕ್ ರಿಪಬ್ಲಿಕ್ ಆಟಗಾರ್ತಿ ಮಾರ್ಕೆಟಾ ಎದುರಾಳಿ ಮೇಲೆ ಒತ್ತಡ ಹೇರುವಲ್ಲಿ ಯಶಸ್ವಿಯಾದರು.

ಇದಾಗ್ಯೂ ಕೆಲ ಅತ್ಯುತ್ತಮ ಶಾಟ್​ಗಳ ಮೂಲಕ ಟುನೀಶಿಯಾ ಆಟಗಾರ್ತಿ ಕಂಬ್ಯಾಕ್ ಮಾಡುವ ಪ್ರಯತ್ನ ಮಾಡಿದ್ದರು. ಆದರೆ ಉತ್ತಮ ಹೊಡೆತಗಳಿಗಿಂತ ಒನ್ಸ್ ಜಬೇರ್ ಅವರ ಅನಗತ್ಯ ತಪ್ಪುಗಳನ್ನೇ ಮುಳುವಾದವು.  ಮತ್ತೊಂದೆಡೆ ಅನುಭವಕ್ಕಿಂತ ಹೆಚ್ಚಾಗಿ ಒತ್ತಡವನ್ನು ಮೀರಿ ನಿರ್ಭೀತಿಯಿಂದ ಆಡುವಲ್ಲಿ ಮಾರ್ಕೆಟಾ ಯಶಸ್ವಿಯಾದರು. ಇದರೊಂದಿಗೆ 2ನೇ ಸೆಟ್​ ಅನ್ನು ಕೂಡ 6-4 ಅಂತರದಿಂದ ಗೆದ್ದುಕೊಂಡರು.

ಈ ಮೂಲಕ ಜಾನಾ ನೊವೊಟ್ನಾ ಮತ್ತು ಪೆಟ್ರಾ ಕ್ವಿಟೋವಾ ನಂತರ ವಿಂಬಲ್ಡನ್‌ನಲ್ಲಿ ಪ್ರಶಸ್ತಿ ಗೆದ್ದ ಮೂರನೇ ಜೆಕ್ ಗಣರಾಜ್ಯದ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಮಾರ್ಕೆಟಾ ವೊಂಡ್ರೊಸೊವಾ ಪಾತ್ರರಾದರು.

 

 

 

Published On - 8:43 pm, Sat, 15 July 23