ಶ್ರೀಲಂಕಾದ ದಂಬುಲಾದ ರಂಗಿರಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಭಾರತ ಹಾಗೂ ಬಾಂಗ್ಲಾದೇಶ ಮಹಿಳಾ ತಂಡಗಳ ನಡುವಿನ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಹರ್ಮನ್ಪ್ರೀತ್ ಕೌರ್ ನಾಯಕತ್ವದ ಭಾರತ ಮಹಿಳಾ ತಂಡ, ಬಾಂಗ್ಲಾದೇಶ ತಂಡವನ್ನು ಬರೋಬ್ಬರಿ 10 ವಿಕೆಟ್ಗಳಿಂದ ಮಣಿಸಿ ಅಜೇಯ ತಂಡವಾಗಿ ಫೈನಲ್ ಪ್ರವೇಶಿಸಿದೆ. ಲೀಗ್ ಸುತ್ತಿನಲ್ಲಿ ಆಡಿದ ಮೂರೂ ಪಂದ್ಯಗಳನ್ನು ಗೆದ್ದು ಸೆಮಿಫೈನಲ್ಗೆ ಲಗ್ಗೆ ಇಟ್ಟಿದ್ದ ಟೀಂ ಇಂಡಿಯಾ, ಇದೀಗ ಸೆಮಿಫೈನಲ್ ಪಂದ್ಯದಲ್ಲೂ ಬಾಂಗ್ಲಾ ತಂಡವನ್ನು ಸುಲಭವಾಗಿ ಮಣಿಸಿ ಸತತ ಐದನೇ ಬಾರಿಗೆ ಫೈನಲ್ಗೇರಿದೆ. ಇದೀಗ ಇಂದು ರಾತ್ರಿ ನಡೆಯಲ್ಲಿರುವ ಪಾಕಿಸ್ತಾನ ಹಾಗೂ ಶ್ರೀಲಂಕಾ ನಡುವಿನ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಗೆದ್ದ ತಂಡ ಜುಲೈ 28 ರಂದು ನಡೆಯಲ್ಲಿರುವ ಫೈನಲ್ ಪಂದ್ಯದಲ್ಲಿ ಅಜೇಯ ಭಾರತವನ್ನು ಎದುರಿಸಲಿದೆ.
ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಲು ಆರಂಭಿಸಿದ ಬಾಂಗ್ಲಾ ತಂಡಕ್ಕೆ ಮೊದಲ ಓವರ್ನಲ್ಲೇ ವೇಗಿ ರೇಣುಕಾ ಶಾಕ್ ನೀಡಿದರು. ಅವರು ಬಾಂಗ್ಲಾ ಓಪನರ್ ದಿಲಾರಾ ಅಖ್ತರ್ ವಿಕೆಟ್ ಉರುಳಿಸಿ ಭಾರತಕ್ಕೆ ಮೊದಲ ಯಶಸ್ಸು ನೀಡಿದರು. ತಮ್ಮ ಖೋಟಾದ ಎರಡನೇ ಓವರ್ನಲ್ಲೂ ವಿಕೆಟ್ ಭೇಟೆ ಮುಂದುವರೆಸಿದ ರೇಣುಕಾ ಮತ್ತೊಬ್ಬ ಓಪನರ್ ಮುರ್ಷಿದಾ ಖಾತೂನ್ ಅವರನ್ನು ಪೆವಿಲಿಯನ್ಗಟ್ಟಿದರು. ಇನ್ನು 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದ ಇಶ್ಮಾ ತಂಜೀಮ್ ಕೂಡ 8 ರನ್‌ಗಳಿಸಿ ರೇಣುಕಾ ಸಿಂಗ್ಗೆ ಬಲಿಯಾದರು. ಹೀಗಾಗಿ ತಂಡ ಕೇವಲ 23 ರನ್ಗಳಿಗೆ ಪ್ರಮುಖ 3 ವಿಕೆಟ್ ಕಳೆದುಕೊಂಡಿತು.
One step closer 👌👌
A superb all-round performance and a comprehensive 10-wicket win for #TeamIndia👏
Scorecard ▶️ https://t.co/JwoMEaSoyn#INDvBAN | #WomensAsiaCup2024 | #ACC | #SemiFinal pic.twitter.com/iaWz32Wi4f
— BCCI Women (@BCCIWomen) July 26, 2024
ಆ ನಂತರವೂ ಬಾಂಗ್ಲಾ ತಂಡದ ಪೆವಿಲಿಯನ್ ಪರೇಡ್ ಮುಂದುವರೆದಿತ್ತು. ಮೊದಲು ರೇಣುಕಾ ಸಿಂಗ್ ದಾಳಿಗೆ ಬೆದರಿದ ಬಾಂಗ್ಲಾ, ಆ ನಂತರ ರಾಧಾ ಯಾದವ್ರ ಸ್ಪಿನ್ ಮೋಡಿಗೆ ಮಕಾಡೆ ಮಲಗಿತು. ರಾಧಾ ಕೂಡ ರೇಣುಕಾರಂತೆ ಪ್ರಮುಖ 3 ವಿಕೆಟ್ ಉರುಳಿಸುವಲ್ಲಿ ಯಶಸ್ವಿಯಾದರು. ಒಂದೆಡೆ ಸತತ ವಿಕೆಟ್ ಪತನದ ನಡುವೆಯೂ ಜವಬ್ದಾರಿಯುತ ಬ್ಯಾಟಿಂಗ್ ನಡೆಸಿದ ನಾಯಕಿ ನಿಗರ್ ಸುಲ್ತಾನಾ ಅತ್ಯಧಿಕ 32 ರನ್ ದಾಖಲಿಸಿ, ತಂಡವನ್ನು 80 ರನ್ಗಳ ಗಡಿಗೆ ತಂದರು. ಇಲ್ಲದಿದ್ದರೆ ತಂಡ 50 ರನ್ಗಳ ಗಡಿ ಕೂಡ ದಾಟುತ್ತಿರಲಿಲ್ಲ.
ಬಾಂಗ್ಲಾದೇಶ ನೀಡಿದ 80 ರನ್ಗಳ ಸುಲಭ ಗುರಿ ಬೆನ್ನಟ್ಟಿದ ಭಾರತದ ಆರಂಭಿಕರು, ಬಾಂಗ್ಲಾ ಬೌಲರ್ಗಳಿಗೆ ವಿಕೆಟ್ ಉರುಳಿಸುವ ಒಂದೇ ಒಂದು ಅವಕಾಶ ನೀಡಲಿಲ್ಲ. ಹೀಗಾಗಿ ಕೇವಲ 11 ಓವರ್ಗಳಲ್ಲಿ ಭಾರತ ತಂಡ ಗೆಲುವಿನ ದಡ ಮುಟ್ಟಿತು. ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದಿದ್ದ ಸ್ಮೃತಿ ಮಂಧಾನ ಹಾಗೂ ಶಫಾಲಿ ವರ್ಮಾ ಅಜೇಯ 83 ರನ್ಗಳ ಜೊತೆಯಾಟವನ್ನಾಡಿದರು. ಇದರಲ್ಲಿ ಸ್ಫೋಟಕ ಬ್ಯಾಟಿಂಗ್ ಮಾಡಿದ ಸ್ಮೃತಿ 39 ಎಸೆತಗಳಲ್ಲಿ 9 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ ಅಜೇಯ 55 ರನ್ ಬಾರಿಸಿದರೆ, ಶಫಾಲಿ ವರ್ಮಾ 28 ಎಸೆತಗಳಲ್ಲಿ 2 ಬೌಂಡರಿ ಸಹಿತ ಅಜೇಯ 26 ರನ್ಗಳ ಗೆಲುವಿನ ಕಾಣಿಕೆ ನೀಡಿದರು.
Published On - 4:35 pm, Fri, 26 July 24