ವಿಶ್ವ ಯೋಗಾಸನ ಚಾಂಪಿಯನ್‌ಶಿಪ್ 2026: ಜಾಗತಿಕ ವೇದಿಕೆಯಲ್ಲಿ ಹೊಸ ಇತಿಹಾಸ ಸೃಷ್ಟಿಸಿದ ಭಾರತ

World Yogasana Championship 2026: ಅಹಮದಾಬಾದ್‌ನ ಉದ್ಘಾಟನಾ ವಿಶ್ವ ಯೋಗಾಸನ ಚಾಂಪಿಯನ್‌ಶಿಪ್‌ನಲ್ಲಿ ಆತಿಥೇಯ ಭಾರತ 102 ಚಿನ್ನ ಸೇರಿದಂತೆ 114 ಪದಕಗಳೊಂದಿಗೆ ಪ್ರಾಬಲ್ಯ ಸಾಧಿಸಿದೆ. 79 ದೇಶಗಳ ಭಾಗವಹಿಸುವಿಕೆ ಕಂಡ ಈ ಚಾಂಪಿಯನ್‌ಶಿಪ್, ಯೋಗಾಸನವನ್ನು ಜಾಗತಿಕ ಸ್ಪರ್ಧಾತ್ಮಕ ಕ್ರೀಡೆಯಾಗಿ ಬೆಳೆಸುವಲ್ಲಿ ಮತ್ತು ಒಲಿಂಪಿಕ್ಸ್‌ಗೆ ಕೊಂಡೊಯ್ಯುವಲ್ಲಿ ಐತಿಹಾಸಿಕ ಹೆಜ್ಜೆಯಾಗಿದೆ. ಭಾರತದ ಸಾಧನೆ ಗಮನಾರ್ಹ.

ವಿಶ್ವ ಯೋಗಾಸನ ಚಾಂಪಿಯನ್‌ಶಿಪ್ 2026: ಜಾಗತಿಕ ವೇದಿಕೆಯಲ್ಲಿ ಹೊಸ ಇತಿಹಾಸ ಸೃಷ್ಟಿಸಿದ ಭಾರತ
Yogasana

Updated on: Jun 08, 2026 | 9:45 PM

ಅಹಮದಾಬಾದ್‌ನ ಇಕೆಎ ಅರೆನಾದಲ್ಲಿ ನಡೆದ ಉದ್ಘಾಟನಾ ವಿಶ್ವ ಯೋಗಾಸನ ಚಾಂಪಿಯನ್‌ಶಿಪ್‌ನಲ್ಲಿ ಆತಿಥೇಯ ಭಾರತ ಸಂಪೂರ್ಣ ಪ್ರಾಬಲ್ಯ ಮೆರೆದಿದೆ. ಸೋಮವಾರ ಮುಕ್ತಾಯಗೊಂಡ ಈ ಕೂಟದಲ್ಲಿ ಭಾರತವು 102 ಚಿನ್ನದ ಪದಕಗಳೊಂದಿಗೆ ಒಟ್ಟು 114 ಪದಕಗಳನ್ನು ಬಾಚಿಕೊಳ್ಳುವ ಮೂಲಕ ಭರ್ಜರಿ ಪ್ರದರ್ಶನ ನೀಡಿದೆ. ಉಳಿದಂತೆ ಜಪಾನ್ ಮೂರು ಚಿನ್ನ, ಮೂರು ಬೆಳ್ಳಿ ಮತ್ತು ಐದು ಕಂಚಿನ ಪದಕಗಳೊಂದಿಗೆ ಎರಡನೇ ಸ್ಥಾನ ಪಡೆದರೆ, ಅರ್ಜೆಂಟೀನಾದ ಕ್ರೀಡಾಪಟು ನಬೀಲಾ ಬರ್ರಾಜಾ ಅವರು ಎರಡು ಚಿನ್ನ ಮತ್ತು ಮೂರು ಬೆಳ್ಳಿ ಪದಕಗಳನ್ನು ಗೆಲ್ಲುವ ಮೂಲಕ ತಮ್ಮ ದೇಶವನ್ನು ಮೂರನೇ ಸ್ಥಾನದಲ್ಲಿ ನಿಲ್ಲಿಸಿದರು.

522 ಕ್ರೀಡಾಪಟುಗಳು ಭಾಗವಹಿಸಿದ್ದರು

ಪಕ್ಕದ ರಾಷ್ಟ್ರ ನೇಪಾಳವು ಒಂದು ಚಿನ್ನ, 36 ಬೆಳ್ಳಿ ಮತ್ತು 15 ಕಂಚಿನ ಪದಕಗಳೊಂದಿಗೆ ಒಟ್ಟು 52 ಪದಕಗಳನ್ನು ಗೆದ್ದು, ಪದಕ ಪಟ್ಟಿಯಲ್ಲಿ ಐದನೇ ಸ್ಥಾನವನ್ನು ಪಡೆದುಕೊಂಡಿತು. ಉಜ್ಬೇಕಿಸ್ತಾನ್ ಒಂದು ಚಿನ್ನ, 13 ಬೆಳ್ಳಿ ಮತ್ತು 11 ಕಂಚಿನ ಪದಕಗಳೊಂದಿಗೆ ಒಟ್ಟು 25 ಪದಕಗಳನ್ನು ಗಳಿಸಿತು. ಈ ಚಾಂಪಿಯನ್‌ಶಿಪ್‌ನಲ್ಲಿ 79 ದೇಶಗಳ ಒಟ್ಟು 522 ಕ್ರೀಡಾಪಟುಗಳು ಭಾಗವಹಿಸಿದ್ದರು. ಇವರಲ್ಲಿ 31 ದೇಶಗಳ ಕ್ರೀಡಾಪಟುಗಳು ಪದಕಗಳನ್ನು ಗೆಲ್ಲುವಲ್ಲಿ ಯಶಸ್ವಿಯಾದರು ಮತ್ತು ಹತ್ತು ದೇಶಗಳು ಕನಿಷ್ಠ ಒಂದು ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡವು.

2030ರ ಕಾಮನ್ವೆಲ್ತ್ ಕ್ರೀಡಾಕೂಟದ ಆತಿಥ್ಯ ವಹಿಸಲಿರುವ ಅಹಮದಾಬಾದ್‌ನಲ್ಲಿ ನಡೆದ ಈ ಚಾಂಪಿಯನ್‌ಶಿಪ್, ಪ್ರಾಚೀನ ಭಾರತೀಯ ಕಲೆಯಾದ ಯೋಗಾಸನವನ್ನು ಜಾಗತಿಕ ಸ್ಪರ್ಧಾತ್ಮಕ ಕ್ರೀಡೆಯಾಗಿ ಪರಿವರ್ತಿಸುವಲ್ಲಿ ಮತ್ತು ಅದನ್ನು ಒಲಿಂಪಿಕ್ ಕ್ರೀಡಾಕೂಟದತ್ತ ಕೊಂಡೊಯ್ಯುವಲ್ಲಿ ಒಂದು ಐತಿಹಾಸಿಕ ಘಟ್ಟವಾಗಿದೆ. ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ, ಆಯುಷ್ ಸಚಿವಾಲಯ, ಭಾರತೀಯ ಕ್ರೀಡಾ ಪ್ರಾಧಿಕಾರ (SAI), ಗುಜರಾತ್ ಕ್ರೀಡಾ ಪ್ರಾಧಿಕಾರ, ಗುಜರಾತ್ ಪ್ರವಾಸೋದ್ಯಮ ಮತ್ತು ಗುಜರಾತ್ ಯೋಗಾಸನ ಕ್ರೀಡಾ ಸಂಘಗಳು ಈ ಚಾಂಪಿಯನ್‌ಶಿಪ್‌ಗೆ ಬೆಂಬಲ ನೀಡಿದ್ದವು.

Yoga

ಆತಿಥೇಯ ಭಾರತವು 122 ಸದಸ್ಯರ ತಂಡವನ್ನು ಕಣಕ್ಕಿಳಿಸಿತ್ತು. ಕ್ರೀಡಾಪಟುಗಳು ಆರು ವಯೋಮಿತಿ ವಿಭಾಗಗಳಲ್ಲಿ ಸ್ಪರ್ಧಿಸಿದರು: ಸಬ್-ಜೂನಿಯರ್ (10-14 ವರ್ಷ), ಜೂನಿಯರ್ (14-18 ವರ್ಷ), ಸೀನಿಯರ್ (18-28 ವರ್ಷ), ಸೀನಿಯರ್ ಎ (28-35 ವರ್ಷ), ಸೀನಿಯರ್ ಬಿ (35-45 ವರ್ಷ) ಮತ್ತು ಸೀನಿಯರ್ ಸಿ (45-55 ವರ್ಷ).

ಜಾಗತಿಕ ಚಳುವಳಿಯ ಆರಂಭ

ವೀಡಿಯೊ ಸಂದೇಶವೊಂದರಲ್ಲಿ ಮಾತನಾಡಿದ ವಿಶ್ವ ಯೋಗಾಸನದ ಅಧ್ಯಕ್ಷ ಯೋಗಋಷಿ ಸ್ವಾಮಿ ರಾಮದೇವ್ ಜಿ ಮಹಾರಾಜ್, “ವಿಶ್ವ ಯೋಗಾಸನ ಚಾಂಪಿಯನ್‌ಶಿಪ್ ಕೇವಲ ಒಂದು ಗಮ್ಯಸ್ಥಾನವಲ್ಲ; ಇದು ಜಾಗತಿಕ ಚಳುವಳಿಯ ಆರಂಭವಾಗಿದೆ. ಯೋಗವು ಕೇವಲ ಕ್ರೀಡೆಯಲ್ಲ—ಅದು ಜೀವನಶೈಲಿ, ಆರೋಗ್ಯ, ಸಾಮರಸ್ಯ, ಶಾಂತಿ ಮತ್ತು ಮಾನವ ಐಕ್ಯತೆಯ ಮಾರ್ಗವಾಗಿದೆ” ಎಂದು ತಿಳಿಸಿದರು.

ಫಲಿತಾಂಶಗಳ ಪ್ರಕಾರ, ಆರ್ಟಿಸ್ಟಿಕ್ ಪೇರ್ (Artistic Pair) ಸಬ್-ಜೂನಿಯರ್ ಮಹಿಳೆಯರ ವಿಭಾಗದಲ್ಲಿ ಭಾರತದ ಇಶಿಕಾ ಗುಚೈತ್ ಮತ್ತು ಇಶಾನ್ವಿ (90.89) ಚಿನ್ನದ ಪದಕ ಗೆದ್ದರೆ, ಜಾಂಬಿಯಾದ ನಿಯಾ ವಿಜಯ್‌ವರ್ಗೀಯ ಮತ್ತು ಆರೋಹಿ ಲೋಖಂಡೆ (82.38) ಬೆಳ್ಳಿ ಹಾಗೂ ಜಪಾನ್‌ನ ರೆಂಕಾ ಅಯೋಕಿ ಮತ್ತು ಇಚಿಕಾ ಶಿಮಿಜು (60.34) ಕಂಚಿನ ಪದಕ ಪಡೆದರು. ಜೂನಿಯರ್ ಮಹಿಳೆಯರ ವಿಭಾಗದಲ್ಲಿ ಭಾರತದ ದೀಪಾ ಲೋಧಿ ಮತ್ತು ಸಿಮಾ ನಿಯೋಪಾನೆ (90.42) ಚಿನ್ನ, ನೇಪಾಳದ ಸ್ವೀಕ್ಷ್ಯ ಥಾಪಾ ಮತ್ತು ಪ್ರಜ್ಞಾ ಗೌತಮ್ (56.39) ಬೆಳ್ಳಿ ಹಾಗೂ ಜಾಂಬಿಯಾದ ಟಸಿಲಾ ಬ್ಲೆಸ್ಸಿಂಗ್ಸ್ ಫಿರಿ ಮತ್ತು ಡೆಬೊರಾ (41.30) ಕಂಚಿನ ಪದಕಗಳನ್ನು ಗೆದ್ದುಕೊಂಡರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪೃಥ್ವಿಶಂಕರ

ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ, ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ನೆಲೆ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ನಾನು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ನನ್ನ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ನನ್ನ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
Follow Us