
CWG Trials: ಕಾಮನ್‌ವೆಲ್ತ್ ಟ್ರಯಲ್ಸ್‌ನಲ್ಲಿ 125 ಕೆಜಿ ವಿಭಾಗದ ಫೈನಲ್‌ನಲ್ಲಿ ಸೋತ ನಂತರ ರೆಫರಿ ಜಗ್ಬೀರ್ ಸಿಂಗ್ ಅವರ ಮೇಲೆ ಕುಸ್ತಿಪಟು ಸತೇಂದರ್ ಮಲಿಕ್ (Wrestler Satender Malik) ಹಲ್ಲೆ ನಡೆಸಿದ ಘಟನೆ ನಡೆದಿದೆ. ಈ ಹಿನ್ನೆಲೆಯಲ್ಲಿ ಸತೇಂದರ್ ಮಲಿಕ್ ಅವರಿಗೆ ರಾಷ್ಟ್ರೀಯ ಕುಸ್ತಿ ಫೆಡರೇಷನ್ ಆಜೀವ ನಿಷೇಧ ಹೇರಿದೆ. ಈ ಪಂದ್ಯದಲ್ಲಿ ಏರ್‌ಫೋರ್ಸ್ ತಂಡದ ಸತ್ಯೆಂದರ್ ಮಲಿಕ್ ಹಾಗೂ ಮೋಹಿತ್ ಮುಖಾಮುಖಿಯಾಗಿದ್ದರು. ಪಂದ್ಯವು ಕೊನೆಗೊಳ್ಳಲು 18 ಸೆಕೆಂಡುಗಳಿರುವಾಗ 3-0 ಯಿಂದ ಮುನ್ನಡೆಯಲ್ಲಿದ್ದರು. ಈ ಹಂತದಲ್ಲಿ ‘ಟೇಕ್‌ಡೌನ್’ ನಡೆ ಪ್ರಯೋಗಿಸಿದ ಮೋಹಿತ್, ಸತೇಂದರ್ ಅವರನ್ನು ಮ್ಯಾಟ್‌ನಿಂದ ಹೊರಕ್ಕೆ ದೂಡಿದರು. ಆದರೆ ಪಂದ್ಯದ ರೆಫರಿ ವೀರೇಂದ್ರ ಮಲಿಕ್ ಟೇಕ್‌ಡೌನ್‌ಗೆ ಮಾತ್ರ ಎರಡು ಪಾಯಿಂಟ್ ನೀಡಿದ್ದರು. ಇದಾಗ್ಯೂ ಹೊರದೂಡಿದ್ದಕ್ಕೆ ಪಾಯಿಂಟ್ ನೀಡಿರಲಿಲ್ಲ.
ಈ ವೇಳೆ ಮೋಹಿತ್ ಹೆಚ್ಚುವರಿ ಪಾಯಿಂಟ್‌ಗಾಗಿ ಮೇಲ್ಮನವಿ ಸಲ್ಲಿಸಿದರು. ಈ ವೇಳೆ ಸೀನಿಯರ್ ರೆಫರಿ ಆಗಿದ್ದ ಜಗ್ಬೀರ್ ಸಿಂಗ್ ಅವರು ಟಿವಿ ಮರುಪರಿಶೀಲನೆಗೆ ಸೂಚಿಸಿದರು. ಅಲ್ಲದೆ ಮರುಪರಿಶೀಲನೆ ವೇಳೆ ಹೊರದೂಡಿದಕ್ಕೆ ಹೆಚ್ಚುವರಿ ಪಾಯಿಂಟ್ಸ್ ನೀಡಬೇಕಾಗಿರುವುದು ಕಂಡು ಬಂತು. ಅದರಂತೆ ಮೋಹಿತ್ ಅವರಿಗೆ ಮೂರು ಪಾಯಿಂಟ್ಸ್ ನೀಡಲಾಯಿತು.
ಈ ವೇಳೆ ಬೌಟ್ 3-3 ರಿಂದ ಸಮಬಲವಾಯಿತು. ಅಷ್ಟೇ ಅಲ್ಲದೆ ಬೌಟ್‌ನ ಕೊನೆಯ ಪಾಯಿಂಟ್ ಮೋಹಿತ್ ಗಳಿಸಿದ್ದರಿಂದ ಅವರನ್ನೇ ವಿಜಯಿ ಎಂದು ಘೋಷಿಸಲಾಯಿತು. ಇದರಿಂದ ಸಂಯಮ ಕಳೆದುಕೊಂಡ ಸತೇಂದರ್ ಸೀನಿಯರ್ ರೆಫರಿ ಜಗ್ಬೀರ್ ಸಿಂಗ್ ಅವರನ್ನು ನಿಂದಿಸಿದ್ದಾರೆ. ಅಷ್ಟೇ ಅಲ್ಲದೆ ಬಳಿಕ ಕಪಾಳಕ್ಕೆ ಹೊಡೆಯುವ ದೈಹಿಕ ಹಲ್ಲೆ ನಡೆಸಿದರು. ಇತ್ತ ಅನಿರೀಕ್ಷಿತ ಹಲ್ಲೆಯಿಂದಾಗಿ ರೆಫರಿ ನೆಲಕ್ಕುರುಳಿದರು. ಅಷ್ಟರಲ್ಲಾಗಲೇ ಆಯೋಜಕರು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.
ಈ ಘಟನೆಯ ವೇಳೆ ಭಾರತ ಕುಸ್ತಿ ಫೆಡರೇಷನ್ ಅಧ್ಯಕ್ಷ ಬ್ರಿಜ್‌ಭೂಷನ್ ಶರಣ್ ಸಿಂಗ್ ಕೂಡ ಹಾಜರಿದ್ದರು. ಹೀಗಾಗಿ ಸತೇಂದರ್ ಮಲಿಕ್ ಅವರ ನಡೆಯ ವಿರುದ್ದ ಕ್ರಮ ಕೈಗೊಳ್ಳಲು ಸೂಚಿಸಿದ್ದಾರೆ. ಅದರಂತೆ ರಾಷ್ಟ್ರೀಯ ಕುಸ್ತಿ ಫೆಡರೇಷನ್ ಇದೀಗ ಸತೇಂದರ್ ಮಲಿಕ್ ಅವರಿಗೆ ಆಜೀವ ನಿಷೇಧ ಹೇರಿದೆ.
ಹೆಚ್ಚಿನ IPL 2022 ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:28 pm, Tue, 17 May 22