WTC Final: ಹಳೆ ಜರ್ಸಿ ತೊಟ್ಟು ಮೈದಾನಕ್ಕಿಳಿದ ಬುಮ್ರಾ! ಪಂದ್ಯದ ಮಧ್ಯದಲ್ಲಿ ಡ್ರೆಸಿಂಗ್ ರೂಂಗೆ ಓಡಿದ ಯಾರ್ಕರ್ ಕಿಂಗ್
WTC Final: ದಿನದ ಮೊದಲ ಓವರನ್ನು ಹಳೆಯ ಜರ್ಸಿಯೊಂದಿಗೆ ಬೌಲ್ ಮಾಡಿದರು. ತನ್ನ ತಪ್ಪಿನ ಅರಿವಾದ ಬಳಿಕ ಬುಮ್ರಾ ಜರ್ಸಿ ಬದಲಾವಣೆಗಾಗಿ ಡ್ರೆಸ್ಸಿಂಗ್ ಕೋಣೆಗೆ ಹಿಂತಿರುಗಿದರು.
ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (ಡಬ್ಲ್ಯುಟಿಸಿ) ಫೈನಲ್ ಪಂದ್ಯದ 5ನೇ ದಿನದಾಟ ಮಂಗಳವಾರ ಪುನರಾರಂಭವಾಯಿತು. ಮಳೆಯಿಂದಾಗಿ ಐದನೇ ದಿನದಾಟ ಒಂದು ಗಂಟೆ ತಡವಾಗಿ ಆರಂಭವಾಯಿತು. ಆದರೆ ಕ್ರಿಕೆಟ್ ಆರಂಭವಾದ ಕೂಡಲೇ ಒಂದು ಹಾಸ್ಯಸ್ಪದ ಪ್ರಸಂಗವೊಂದು ನಡೆಯಿತು. ಭಾರತದ ವೇಗಿ ಜಸ್ಪ್ರೀತ್ ಬುಮ್ರಾಗೆ ಈ ಪಂದ್ಯದಲ್ಲಿ ಇದುವರೆಗೂ ಯಾವುದೇ ವಿಕೆಟ್ ಬಿದ್ದಿಲ್ಲ. ಹಾಗಾಗಿ ಬುಮ್ರಾ ಸ್ವಲ್ಪ ಮಂಕಾಗಿರುವುದು ಕಂಡುಬರುತ್ತಿದೆ. ಆದರೆ ಬುಮ್ರಾ ಸುದ್ದಿಯಾಗಿರುವುದು ಈ ವಿಚಾರಕಲ್ಲ. ಬದಲಿಗೆ ಈ ಪಂದ್ಯಕ್ಕೆಂದು ನೀಡಿರುವ ಹೊಸ ಜರ್ಸಿಯ ಬದಲಿಗೆ ಹಳೆಯ ಜರ್ಸಿ ತೊಟ್ಟು ಮೈದಾನಕ್ಕಿಳಿದಿದ್ದರು.
ಬುಮ್ರಾ ಮಾಡಿದ ಯಡವಟ್ಟೇನು? ಅವರು ದಿನದ ಮೊದಲ ಓವರನ್ನು ಹಳೆಯ ಜರ್ಸಿಯೊಂದಿಗೆ ಬೌಲ್ ಮಾಡಿದರು. ತನ್ನ ತಪ್ಪಿನ ಅರಿವಾದ ಬಳಿಕ ಬುಮ್ರಾ ಜರ್ಸಿ ಬದಲಾವಣೆಗಾಗಿ ಡ್ರೆಸ್ಸಿಂಗ್ ಕೋಣೆಗೆ ಹಿಂತಿರುಗಿದರು. ನಂತರ ಬುಮ್ರಾ ಸರಿಯಾದ ಜರ್ಸಿಯೊಂದಿಗೆ ಮೈದಾನಕ್ಕೆ ವಾಪಸ್ಸಾದರು. ತಮ್ಮ ಬೌಲಿಂಗ್ ಅನ್ನು ಮುಂದುವರೆಸಿದರು.
ಐಸಿಸಿ ಆಯೋಜಿಸುವ ಯಾವುದೇ ಪಂದ್ಯಾವಳಿಯಲ್ಲೂ ದೇಶದ ಹೆಸರನ್ನು ಜರ್ಸಿಯ ಮಧ್ಯದಲ್ಲಿ ಮುದ್ರಿಸಲಾಗುತ್ತದೆ. ಹಾಗೆಯೇ ಪ್ರಾಯೋಜಕ ಕಂಪನಿಯ ಹೇಸರನ್ನು ತೋಳುಗಳಲ್ಲಿ ಮುದ್ರಿಸಲಾಗುತ್ತದೆ. ಸೀಮಿತ ಓವರ್‌ಗಳ ವಿಶ್ವಕಪ್್ನಲ್ಲಿ ಈ ರೀತಿಯಾಗಿ ಮಾಡಲಾಗುತ್ತಿತ್ತು. ಅಲ್ಲದೆ ಟೆಸ್ಟ್ ಸ್ವರೂಪದಲ್ಲಿ ಐಸಿಸಿ ಮೊದಲ ಬಾರಿಗೆ ಈ ರೀತಿಯ ಕ್ರಮವನ್ನು ಕೈಗೊಂಡಿದೆ. ಹೀಗಾಗಿ ಜಸ್ಪ್ರೀತ್ ಬುಮ್ರಾ ಗೊಂದಲಕ್ಕೀಡಾಗಿರಬೇಕು ಎಂಬುದು ನಾವು ಊಹಿಸಿಕೊಳ್ಳಬೇಕಾಗಿದೆ.