ಕ್ರಿಕೆಟ್ ಪ್ರೇಮಿಗಳಿಗೆ ಮಳೆರಾಯನ ಅವಕೃಪೆಯಿಂದಾಗಿ ಸೌಥಾಂಪ್ಟನ್ನಲ್ಲಿ (Southampton) ನಿನ್ನೆ ಸಾಂಪ್ರದಾಯಿಕ ಟೆಸ್ಟ್ ಕ್ರಿಕೆಟ್ ರಸದೌತಣ ಸವಿಯಲು ಸಾಧ್ಯವಾಗದೆ ಭಾರೀ ನಿರಾಶೆಗೊಂಡಿದ್ದಾರೆ. ಚೊಚ್ಚಲ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯ ಆರಂಭಕ್ಕೂ ಮುನ್ನ ಭಾರೀ ಮಳೆಯಿಂದಾಗಿ ಏಜೀಸ್ ರೋಸ್ ಬೌಲ್ (Ageas Bowl) ಮೈದಾನ ಅಕ್ಷರಶಃ ಕೆರೆಯಂತಾಗಿ ಎಲ್ಲೆಡೆ ನಿರಾಸೆಯ ಕಾರ್ಮೋಡ ಮುಸುಕಿತ್ತು. ಆದರೆ ಇಂದು ವಾತಾವರಣ ಕೊಂಚ ತಿಳಿಯಾಗುತ್ತಿದೆ. ವರುಣ ತುಸು ರೆಸ್ಟ್ ತೆಗೆದುಕೊಳ್ಳುವಂತಿದೆ. ವಿರಾಟ್ ಕೊಹ್ಲಿ ಸಾರಥ್ಯದ ಭಾರತ ತಂಡ ಮತ್ತು ಕೇನ್ ವಿಲಿಯಮ್ಸ್ ನಾಯಕತ್ವದ ನ್ಯೂಜಿಲ್ಯಾಂಡ್ ತಂಡ ಪರಸ್ಪರ ಸೆಣೆಸಲು ವೇದಿಕೆ ಸುಗಮವಾಗಿದೆ ಎಂದು ಹವಾಮಾನ ವರದಿ ಹೇಳುತ್ತಿದೆ.
ಟೆಸ್ಟ್ ಪಂದ್ಯ ಸೌಥಾಂಪ್ಟನ್ನಲ್ಲಿ ಆರಂಭವಾಗಲು ಮಳೆ ಅಡ್ಡಿಯಿಲ್ಲ ಎನ್ನುತ್ತಿದೆ ಹವಾಮಾನ ವರದಿ. ಅಟ್ಲೀಸ್ಟ್ ದಿನದ ಮೊದಲ ಅರ್ಧ ಭಾಗ ಅಂದ್ರೆ ಬಹುಶಃ ಚಹಾ ವಿರಾಮದ ವರೆಗೂ ಮಳೆಕಾಟ ಇರದು. ಮೊದಲ ದಿನ ನಿನ್ನೆ ಒಂದೇ ಒಂದು ಬಾಲ್ ಕೂಡ ಎಸೆಯು ಆಗಿಲ್ಲ. ಅಷ್ಟೇ ಏಕೆ ಟಾಸ್ ಕೂಡ ಎಸೆಯಲು ಆಗಿಲ್ಲ. ಆದರೆ ಇಂದು ಕೊನೆಯ ಪಕ್ಷ ಟಾಸ್ ಹಾಕುವ ಲಕ್ಷಣವಿದೆ. ತಂಡಗಳು ತಮ್ಮ ಅಂತಿಮ 11 ಮಂದಿ ಆಟಗಾರರ ಹೆಸರುಗಳನ್ನು ಪ್ರಕಟಿಸಬಹುದು. ಯಾರು ಮೊದಲು ಬ್ಯಾಟಿಂಗ್ ಎಂಬುದೂ ನಿರ್ಧಾರವಾಗಹುದು. ಅದಕ್ಕೂ ಮುನ್ನ ಭಾರತ ತಂಡವು ಬದಲಾದ ಹವಾಮಾನ ನೋಡಿಕೊಂಡು ತನ್ನ ಪ್ಲೇಯಿಂಗ್ 11 ಬದಲಾಯಿಸುವ ಸಾಧ್ಯತೆಯಿದೆ.
ಇಂಗ್ಲೆಂಡಿನ ಸೌಥಾಂಪ್ಟನ್ನಲ್ಲಿ ನಿನ್ನೆ ರಾತ್ರಿಯಿಂದ ಮಳೆಯಾಗಿಲ್ಲ. ಇಂದು ಬೆಳಗೆ ಕಚಗುಳಿಯಿಡುವಂತೆ ಸೂರ್ಯ ಇಣುಕಿ ನೋಡಿದ್ದಾನೆ. ಅದೇ ಕ್ರಿಕೆಟ್ ಪ್ರೇಮಿಗಳಿಗೆ ಸಂತಸದಾಯಕವಾಗಿದೆ. ಆದರೆ ಮಧ್ಯೆ ಮೋಡಗಳೂ ಇಣುಕುತ್ತಿವೆ.
ನಿನ್ನೆಯ ಇಡೀ ದಿನದ ಆಟ ಮಳೆಗೆ ಕೊಚ್ಚಿ ಹೋಗಿದ್ದರಿಂದ ಐಸಿಸಿ ನಿಯಮಾವಳಿ ಪ್ರಕಾರ ಮುಂದಿನ ನಾಲ್ಕು ದಿನಗಳಲ್ಲಿ ಆಟ ಅರ್ಧ ಗಂಟೆ ಮುಂಚಿತವಾಗಿಯೇ ಆರಂಭವಾಗಲಿದೆ. ದಿನದ ಮೊದಲಾರ್ಧದಲ್ಲಿ ಮಳೆ ಬರುವ ಸಾಧ್ಯತೆ ಇಲ್ಲವಾದ್ದರಿಂದ ಇಂದು ಉತ್ತಮ ಆಟ ನಡೆಯಲಿದೆ ಎಂದು ಅಂದಾಜಿಸಲಾಗಿದೆ. ಸಂಜೆಯ ಮೇಲೆ ಒಂದಷ್ಟು ಮಳೆಯಾಗಲಿದ್ದು, ರಾತ್ರಿ ವೇಳೆಗೆ ಭಾರೀ ಮಳೆಯಾಗಿದೆ ಎನ್ನುತ್ತಿದೆ ಹವಾಮಾನ ವರದಿ.
ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಐತಿಹಾಸಿಕ ಚೊಚ್ಚಲ ವಿಶ್ವ ಟೆಸ್ಟ್ ಮ್ಯಾಚ್ 6ನೆಯ ದಿನಕ್ಕೆ (Reserve Day) ಕಾಲಿಡಲಿದೆ. ಈಗಾಗಲೇ ಮೊದಲ ದಿನ 8 ಗಂಟೆಗಳ ಆಟ ಮಳೆಗೆ ಆಹುತಿಯಾಗಿದೆ. ಇನ್ನು ಮುಂದಿನ ಐದು ಮಳೆಯೇ ಬರುವುದಿಲ್ಲ ಎಂದಾದರೂ (ಅದರ ಸಾಧ್ಯತೆ ತುಂಬಾ ಕಡಿಮೆ, ಮಧ್ಯೆ ಮಧ್ಯೆ ಮಳೆಯಾಗುವುದು ಖಚಿತ) ಮತ್ತು ಪ್ರತಿ ದಿನ ಅರ್ಧ ಗಂಟೆ ಬೇಗನೇ ಆಟ ಆರಂಭಿಸಲಾಗುವುದು ಎಂದೂ ಲೆಕ್ಕ ಹಾಕಿದರೆ ಅಲ್ಲಿಗೆ… ಎರಡು ಗಂಟೆಯ ಆಟ ಸರಿದೂಗಿಸಬಹುದು.
ಆದರೂ ಇನ್ನೂ 6 ಗಂಟೆಗಳ ಆಟ ಬಾಕಿಯಿರುತ್ತದೆ. ಅದನ್ನು ಸರಿದೂಗಿಸುವುದು Reserve Day ಹೊಣೆಗೆ ಬಿಡಬೇಕಾದೀತು. ಈ ಎಲ್ಲಾ ಸಾಧ್ಯಾಸಾಧ್ಯತೆಗಳಲ್ಲಿ ಪಂದ್ಯ ಡ್ರಾ ಆಗಬಹುದು ಅನ್ನಬಹುದು ಅಥವಾ ಸಂಭಾವ್ಯ ಆಟದ ಅವಧಿಯಲ್ಲಿಯೇ ಎರಡೂ ತಂಡಗಳು ಆಟವನ್ನು ಮುಗಿಸಿಬಿಟ್ಟರೆ ಯಾವುದೇ ತಾಪತ್ರಯ ಇರುವುದಿಲ್ಲ. ಪಂದ್ಯ ಯಾರ ಮಡಿಲಿಗೆ ಎಂಬುದೂ ನಿರ್ಧಾರವಾಗಿ ಬಿಡುತ್ತದೆ!
ಭಾರತ ತಂಡ ತನ್ನ ಪ್ಲೇಯಿಂಗ್ 11 (Playing XI) ಮಾರ್ಪಾಡು ಮಾಡುತ್ತದಾ?
ಮಳೆರಾಯನ ಕಾಟದ ನಡುವೆ ಭಾರತ ತಂಡದ ಮ್ಯಾನೇಜ್ಮೆಂಟ್ಗೆ ಇದೂ ಒಂದು ಕಾಡುತ್ತಿದೆ… ಭಾರತ ತಂಡದ ಪ್ಲೇಯಿಂಗ್ 11 ಬದಲಿಸಬೇಕಾ? ಎಂಬ ಪ್ರಶ್ನೆಯೂ ಸುಂಟರಗಾಳಿಯಂತೆ ಸುತ್ತುತ್ತಿದೆ. ಸೌಥಾಂಪ್ಟನ್ನಲ್ಲಿ ಮಳೆಯಾಗಿ ಏಜೀಸ್ ಬೌಲ್ ಮೈದಾನ ಅಕ್ಷರಶಃ ಮಳೆಯ ಬಟ್ಟಲಾಗಿ ಆರ್ಪಟ್ಟಿದೆ. ಇದರಿಂದ ಪಿಚ್ ಹೇಗೆ ವರ್ತಿಸಲಿದೆ ಎಂಬುದು ಊಹಿಸುವುದು ಕಷ್ಟವಾಗಲಿದೆ. ಈ ಅಂಶ ನ್ಯೂಜಿಲ್ಯಾಂಡ್ಗಿಂತ ಭಾರತಕ್ಕೆ ಹೆಚ್ಚು ಕಾಡುತ್ತದೆ. ಪಂದ್ಯದ ಆರಂಭದಲ್ಲಿ ತೇವದ ಸದುಪಯೋಗಪಡಿಸಿಕೊಳ್ಳಲು ಯಾರೇ ಟಾಸ್ ಗೆದ್ದರೂ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಳ್ಳುವುದು ಖಚಿತವಾಗಿದೆ.
ಭಾರತ ತಂಡದ ಈಗಿನ ಪ್ರಕಟಿತ ಆಟಗಾರರ ಪಟ್ಟಿಯಲ್ಲಿ ಮೂವರು ವೇಗಿಗಳು ಮತ್ತು ಇಬ್ಬರು ಸ್ಪಿನ್ ಬೌಲರ್ಗಳು ಇದಾರೆ. ಸೌಥಾಂಪ್ಟನ್ನಲ್ಲಿ ಮಳೆ ಮೈದಾನವನ್ನು ನೋಡಿದರೆ ಭಾರತ ತಂಡಕ್ಕೆ ಮತ್ತೊಬ್ಬ ಬ್ಯಾಟ್ಸ್ಮನ್ ಅಗತ್ಯ ಬೀಳಲಿದೆ. ಆಗ ಒಳ್ಳೆಯ ಫಾರಂನಲ್ಲಿರುವ ಬ್ಯಾಟ್ಸ್ಮನ್ ಹನುಮ ವಿಹಾರಿ ತಂಡದಲ್ಲಿ ವಿಹರಿಸಬಹುದು. ಆಗ ಇಬ್ಬರು ಸ್ಪಿನ್ನರ್ಗಳ ಪೈಕಿ ಕೆಚ್ಚೆದೆಯ ರವಿಂಚಂದ್ರನ್ ಅಶ್ವಿನ್ ಮಾತ್ರವೇ ಉಳಿದುಕೊಳ್ಳಬಹುದು.
ಈ ಮಧ್ಯೆ ಭಾರತ ತಂಡದ ಫೀಲ್ಡಿಂಗ್ ಕೋಚ್ ಆರ್ ಶ್ರೀಧರ್ ಅವರು ಭಾರತ ತಂಡದ ಪ್ಲೇಯಿಂಗ್ 11 ಪ್ರಕಟಿಸಿದಾಗ ಈ 11 ಮಂದಿ ಆಟಗಾರರು ಯಾವುದೇ ವಾತಾವರಣದಲ್ಲಿ ಬೇಕಾದರೂ ತಮ್ಮ ಪ್ರದರ್ಶನ, ಸಾಮರ್ಥ್ಯವನ್ನು ತೋರಬಲ್ಲರು ಎಂದಿರುವುದನ್ನು ಪರಿಗಣಿಸಿದಾಗ ಭಾರತ ತಂಡ ಈಗಾಗಲೇ ಘೋಷಿಸಿರುವ 11 ಮಂದಿಯೊಂದಿಗೇ ಕಣಕ್ಕೆ ಇಳಿಯಬಹುದು.
(WTC Final southampton weather today Forecast good for first half on june 19 at Rose Bowl but Will India change their Playing XI)
Published On - 11:19 am, Sat, 19 June 21