Milkha Singh: ಮಿಲ್ಖಾ ಸಿಂಗ್​ಗಿಂತ ಐದು ದಿನ ಮುಂಚೆ ಪತ್ನಿ ನಿರ್ಮಲ್ ಕೌರ್ ನಿಧನ; ಇವರಿಬ್ಬರ ಪ್ರೇಮಕಥೆಯನ್ನು ಕೇಳಿದ್ದೀರಾ?

Milkha Singh wife Nirmal Kaur: ಸಂದರ್ಶನವೊಂದರಲ್ಲಿ ಮಿಲ್ಖಾ ಸಿಂಗ್ ಹೇಳಿಕೊಂಡಂತೆ, ಆ ಸಂದರ್ಭದಲ್ಲಿ ಅವರಿಬ್ಬರ ನಡುವೆ ಸಾಕಷ್ಟು ಮಾತುಕತೆಗಳಾಗಿದ್ದವಂತೆ. ಆದರೆ, ಆಗಿನ ಕಾಲದ ಮಾಮೂಲಿ ರೀತಿಯಲ್ಲಿ ಪತ್ರ ಬರೆಯುತ್ತಾ ಕೂರದೇ ಮಿಲ್ಖಾ ನೇರವಾಗಿ ಹೋಗಿ ಕೌರ್​ ಕೈ ಮೇಲೆ ತಾವು ಉಳಿದುಕೊಂಡಿದ್ದ ರೂಮ್ ನಂಬರ್ ಬರೆದು ಬಂದಿದ್ದರಂತೆ.

Milkha Singh: ಮಿಲ್ಖಾ ಸಿಂಗ್​ಗಿಂತ ಐದು ದಿನ ಮುಂಚೆ ಪತ್ನಿ ನಿರ್ಮಲ್ ಕೌರ್ ನಿಧನ; ಇವರಿಬ್ಬರ ಪ್ರೇಮಕಥೆಯನ್ನು ಕೇಳಿದ್ದೀರಾ?
ನಿರ್ಮಲ್​ ಕೌರ್, ಮಿಲ್ಖಾ ಸಿಂಗ್
Follow us
TV9 Web
| Updated By: Skanda

Updated on: Jun 19, 2021 | 9:49 AM

ಫ್ಲೈಯಿಂಗ್ ಸಿಖ್ ಎಂದೇ ಖ್ಯಾತರಾದ ಭಾರತದ ಶ್ರೇಷ್ಠ ಅಥ್ಲೀಟ್ ಮಿಲ್ಖಾ ಸಿಂಗ್(91) ನಿನ್ನೆ (ಜೂನ್ 18) ನಿಧನರಾಗಿದ್ದಾರೆ. ಕೊರೊನಾದಿಂದ ಅಸ್ವಸ್ಥರಾಗಿ ಮೇ 24 ರಂದು ಮೊಹಾಲಿಯ ಆಸ್ಪತ್ರೆಗೆ ಸೇರಿದ ಮಿಲ್ಖಾ ಸಿಂಗ್​ ಕೊವಿಡ್​19 ಸೋಂಕಿನಿಂದ ಚೇತರಿಸಿಕೊಂಡರಾದರೂ ಅವರನ್ನು ಉಳಿಸಿಕೊಳ್ಳುವುದು ಸಾಧ್ಯವಾಗಿಲ್ಲ. ಕೇವಲ ಐದೇ ಐದು ದಿನಗಳ ಹಿಂದಷ್ಟೇ ಹೃದಯ ಸಂಬಂಧಿ ಸಮಸ್ಯೆಗಳಿಂದ ಮಿಲ್ಖಾ ಸಿಂಗ್ ಪತ್ನಿ ನಿರ್ಮಲ್ ಕೌರ್ ಕೂಡಾ ಕೊನೆಯುಸಿರೆಳೆದಿದ್ದಾರೆ. ಪರಸ್ಪರ ಪ್ರೀತಿಸಿ ಮದುವೆಯಾದ ಮಿಲ್ಖಾ ಸಿಂಗ್​ ಹಾಗೂ ನಿರ್ಮಲ್​ ಕೌರ್ ಸಾವಿನಲ್ಲೂ ಜತೆಯಾಗಿಯೇ ಸಾಗಿದ್ದಾರೆ. ಇವರಿಬ್ಬರ ಪ್ರೇಮಕಥೆ ಬಲು ಸೋಜಿಗವಾಗಿದ್ದು, ಅದರ ಕುತೂಹಲಕಾರಿ ಮಾಹಿತಿಯನ್ನು ಇಲ್ಲಿ ನೀಡಿದ್ದೇವೆ.

ಮಿಲ್ಖಾ ಸಿಂಗ್ ಹಾಗೂ ನಿರ್ಮಲ್ ಕೌರ್ ಪರಸ್ಪರ ಭೇಟಿಯಾಗಿದ್ದು ಮೈದಾನದಲ್ಲೇ. ಕೌರ್ ಭೇಟಿಗೂ ಮುನ್ನವೇ ಮಿಲ್ಖಾ ಹೆಸರು ಸಾಕಷ್ಟು ತರುಣಿಯರೊಂದಿಗೆ ತಳುಕು ಹಾಕಿಕೊಂಡಿತ್ತಾದರೂ ಕೊನೆಗೆ ಪ್ರೀತಿ ಮೊಳಕೆಯೊಡೆದಿದ್ದು ಇವರಿಬ್ಬರ ನಡುವೆಯೇ. ಮೂವರು ಯುವತಿಯರ ಜತೆ ಮಿಲ್ಖಾ ಹೆಸರು ಗಾಢವಾಗಿ ಕೇಳಿ ಬಂತಾದರೂ ಅದ್ಯಾವುದೂ ವಿವಾಹದ ತನಕ ಮುಂದುವರೆಯಲಿಲ್ಲ. ಅಷ್ಟರಲ್ಲಾಗಲೇ ಮಿಲ್ಖಾ ಕಣ್ಣಿಗೆ ಬಿದ್ದಿದ್ದ ವಾಲಿಬಾಲ್​ ಆಟಗಾರ್ತಿ ಕೌರ್​ ಅತ್ಯುತ್ತಮ ಅಥ್ಲೀಟ್​ನನ್ನು ಕಣ್ಣ ಹೊಳಪಲ್ಲೇ ಸೋಲಿಸಿಬಿಟ್ಟಿದ್ದರು.

ಇವರಿಬ್ಬರ ನಡುವಿನ ಮೊದಲ ಭೇಟಿ ನಡೆದಿದ್ದು ವಿದೇಶದ ನೆಲದಲ್ಲಿ. ಶ್ರೀಲಂಕಾದ ಕೊಲಂಬೋದಲ್ಲಿ 1955ರಲ್ಲಿ ಭಾರತೀಯ ವಾಲಿಬಾಲ್​ ತಂಡದ ನಾಯಕಿ ನಿರ್ಮಲ್​ ಕೌರ್​ ಅವರನ್ನು ಉದ್ಯಮಿಯೊಬ್ಬರು ಏರ್ಪಡಿಸಿದ್ದ ಔತಣಕೂಟದಲ್ಲಿ ಮಿಲ್ಖಾ ಭೇಟಿ ಮಾಡಿದ್ದರು. ಮೊದಲ ಭೇಟಿಯಲ್ಲೇ ರೋಮಾಂಚಿತಗೊಂಡಿದ್ದ ಮಿಲ್ಖಾ ಸಿಂಗ್​, ನಿರ್ಮಲ್ ಕೌರ್​ಗೆ ತನ್ನ ಹೃದಯವನ್ನು ಕೊಟ್ಟಿದ್ದರಾದರೂ ತಕ್ಷಣವೇ ಪರಸ್ಪರ ಪ್ರೀತಿಯಲ್ಲಿ ಬೀಳುವುದು ಸಾಧ್ಯವಾಗಿರಲಿಲ್ಲ. ಸಂದರ್ಶನವೊಂದರಲ್ಲಿ ಮಿಲ್ಖಾ ಸಿಂಗ್ ಹೇಳಿಕೊಂಡಂತೆ, ಆ ಸಂದರ್ಭದಲ್ಲಿ ಅವರಿಬ್ಬರ ನಡುವೆ ಸಾಕಷ್ಟು ಮಾತುಕತೆಗಳಾಗಿದ್ದವಂತೆ. ಆದರೆ, ಆಗಿನ ಕಾಲದ ಮಾಮೂಲಿ ರೀತಿಯಲ್ಲಿ ಪತ್ರ ಬರೆಯುತ್ತಾ ಕೂರದೇ ಮಿಲ್ಖಾ ನೇರವಾಗಿ ಹೋಗಿ ಕೌರ್​ ಕೈ ಮೇಲೆ ತಾವು ಉಳಿದುಕೊಂಡಿದ್ದ ರೂಮ್ ನಂಬರ್ ಬರೆದು ಬಂದಿದ್ದರಂತೆ.

1955ರ ಮೊದಲ ಭೇಟಿ ನಂತರ ಅವರಿಬ್ಬರೂ ಮತ್ತೆ ಮುಖಾಮುಖಿಯಾಗಿದ್ದು 1958ರಲ್ಲಿ. ಆದರೆ, ಆ ಭೇಟಿಯಲ್ಲೂ ಪ್ರೀತಿ ಅಧಿಕೃತವಾಗಿ ಆರಂಭವಾಗಲಿಲ್ಲ. ಬದಲಾಗಿ ಅದಾದ ಎರಡು ವರ್ಷಗಳ ನಂತರ ಅಂದರೆ 1960ರಲ್ಲಿ ಇಬ್ಬರೂ ಪರಸ್ಪರ ಒಪ್ಪಿ ಪ್ರೀತಿಯ ಪ್ರಯಾಣ ಆರಂಭಿಸಿದ್ದರು. ಅದಾಗಲೇ ಕ್ರೀಡೆಯಲ್ಲಿ ರಾಷ್ಟ್ರಮಟ್ಟದಲ್ಲಿ ಮಿಂಚುತ್ತಿದ್ದ ಮಿಲ್ಖಾ ತನ್ನ ಹೃದಯ ಕದ್ದ ಕೌರ್​ ಅವರನ್ನ ದೆಹಲಿಯ ನ್ಯಾಶನಲ್​ ಸ್ಟೇಡಿಯಂನಲ್ಲಿ ಭೇಟಿಯಾಗಿದ್ದರು. ಅವರಿಬ್ಬರ ಮಧ್ಯೆ ಪ್ರೀತಿ ಶುರುವಾಗುವುದಕ್ಕೆ ಕಾಫಿ ಒಂದು ನೆಪವಾಯಿತಾದರೂ, ಅದಾದ ನಂತರ ಅಂತಹ ಸಾಕಷ್ಟು ಭೇಟಿಗಳು ಜರುಗಿಹೋದವು.

ಇಬ್ಬರೂ ಕ್ರೀಡೆಯಲ್ಲಿ ಸಾಧನೆ ಮಾಡಿದವರು, ಪರಸ್ಪರ ಪ್ರೀತಿ ಹಂಚಿಕೊಂಡವರಾದರೂ ಅದನ್ನು ಮುಂದುವರೆಸುವುದಕ್ಕೆ ಇಬ್ಬರಿಗೂ ಸಾಕಷ್ಟು ಅಡೆತಡೆಗಳಿದ್ದವು. ವಿಶೇಷವೆಂದರೆ ಆ ತಡೆಗೋಡೆಯನ್ನು ಕೆಡವಲು ಅಂದಿನ ಪಂಜಾಬ್​ ಮುಖ್ಯಮಂತ್ರಿಯಾಗಿದ್ದ ಪ್ರತಾಪ್​ ಸಿಂಗ್​ ಖೈರಾನ್ ಸ್ವ ಇಚ್ಛೆಯಿಂದ ಮುಂದೆ ಬಂದಿದ್ದರು. ನಿರ್ಮಲ್​ ಕೌರ್ ಹಿಂದೂ ಸಂಪ್ರದಾಯದವರಾಗಿದ್ದು, ಮಿಲ್ಖಾ ಸಿಂಗ್ ಸಿಖ್ ಸಮುದಾಯಕ್ಕೆ ಸೇರಿದವರಾದ ಕಾರಣ ಅವರ ನಡುವಿನ ಪ್ರೀತಿ ಮದುವೆಗೆ ತಿರುಗುವುದು ಸುಲಭವಿರಲಿಲ್ಲ. ಈ ವಿಷಯವನ್ನು ನಂಬಲು ನಿರ್ಮಲ್​ ತಂದೆಯೂ ಸಿದ್ಧರಿರಲಿಲ್ಲ. ಆ ಹಂತದಲ್ಲಿ ಪಂಜಾಬ್​ನ ಮುಖ್ಯಮಂತ್ರಿಯವರೇ ಮುಂದೆ ಬಂದು ಎರಡೂ ಕುಟುಂಬದ ಮನವೊಲಿಸಿ 1962ರಲ್ಲಿ ವಿವಾಹ ನೆರವೇರಲು ಕಾರಣರಾದರು.

ಮೈದಾನದಲ್ಲಿ ಎದುರಾಳಿಗಳನ್ನು ಸಮರ್ಥವಾಗಿ ಹಿಮ್ಮೆಟ್ಟಿಸಿ ತಮ್ಮ ತಂಡಕ್ಕೆ ಶಕ್ತಿ ತುಂಬುತ್ತಿದ್ದ ಇಬ್ಬರೂ, ಸಾಂಸಾರಿಕ ಜೀವನದಲ್ಲೂ ಪರಸ್ಪರ ಸಹಕಾರದೊಂದಿಗೆ ಹೆಜ್ಜೆ ಹಾಕಲಾರಂಭಿಸಿದರು. ಆ ಅದಮ್ಯ ಪ್ರೀತಿಯ ಫಲವಾಗಿಯೇ ಇಬ್ಬರೂ ಸುದೀರ್ಘ ದಾಂಪತ್ಯದ ಸವಿಯುಂಡರು. ಇವರಿಬ್ಬರ ಪ್ರೇಮದ ಫಲವಾಗಿ ಮೋನಾ ಸಿಂಗ್, ಅಲೀಜಾ ಗ್ರೋವರ್, ಸೋನಿಯಾ ಸಾನ್​ವಲ್ಕಾ ಎಂಬ ಮೂವರು ಪುತ್ರಿಯರು ಹಾಗೂ ಜೀವ್ ಮಿಲ್ಖಾ ಸಿಂಗ್ ಎಂಬ ಓರ್ವ ಪುತ್ರ ಇದ್ದಾರೆ. ತಂದೆಯ ಸಾಧನೆಯ ಹಾದಿಯಲ್ಲೇ ಸಾಗಿದ ಜೀವ್ ಮಿಲ್ಖಾ ಸಿಂಗ್ ತಂದೆಯಂತೆಯೇ ಪದ್ಮಶ್ರೀ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ. ಗಾಲ್ಫ್​ ಆಟದಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವ ಜೀವ್ ಮಿಲ್ಖಾ ಸಿಂಗ್ ಭಾರತೀಯ ಕ್ರೀಡಾ ಕ್ಷೇತ್ರಕ್ಕೆ ಮಿಲ್ಖಾ ಸಿಂಗ್​ರಿಂದ ಸಿಕ್ಕ ಕೊಡುಗೆಯೆಂದರೂ ತಪ್ಪಾಗಲಾರದು.

ಇದನ್ನೂ ಓದಿ: Milkha Singh: ನಾವು ಒಬ್ಬ ಶ್ರೇಷ್ಠ ಆಟಗಾರನನ್ನು ಕಳೆದುಕೊಂಡಿದ್ದೇವೆ: ಮಿಲ್ಖಾ ಸಿಂಗ್ ಅಗಲಿಕೆಗೆ ಪ್ರಧಾನಿ ಮೋದಿ ಸಂತಾಪ 

Milkha Singh Death: ‘ನೀವು ಸದಾ ಜೀವಂತವಾಗಿರುತ್ತೀರಿ’; ಮಿಲ್ಖಾ ಸಿಂಗ್​ ನಿಧನಕ್ಕೆ ಫರ್ಹಾನ್​ ಅಖ್ತರ್​ ಸಂತಾಪ