WTC: ಗಾಯಗೊಂಡಿದ್ದ ಸೀನಿಯರ್​ಗಳು ವಾಪಸ್ಸಾಗಲಿರುವುದರಿಂದ ಯುವ ಪ್ರತಿಭೆಗಳಿಗೆ ಅವಕಾಶ ಸಿಗದು

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Mar 10, 2021 | 7:52 PM

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ಮೂಲಗಳ ಪ್ರಕಾರ ಆಸ್ಟ್ರೇಲಿಯಾದಲ್ಲಿ ಗಾಯಗೊಂಡಿದ್ದ ರವೀಂದ್ರ ಜಡೇಜಾ ಮತ್ತು ಮೊಹಮ್ಮದ್ ಶಮಿ ಜೂನ್ ಹೊತ್ತಿಗೆ ಸಂಪೂರ್ಣವಾಗಿ ಚೇತರಿಸಿಕೊಳ್ಳಲಿದ್ದಾರೆ ಮತ್ತು ಡಬ್ಲ್ಯೂಟಿಸಿ ಟೆಸ್ಟ್​ನಲ್ಲಿ ಆಡುವ ಎಲ್ಲ ಸಾಧ್ಯತೆಗಳಿವೆ.

WTC: ಗಾಯಗೊಂಡಿದ್ದ ಸೀನಿಯರ್​ಗಳು ವಾಪಸ್ಸಾಗಲಿರುವುದರಿಂದ ಯುವ ಪ್ರತಿಭೆಗಳಿಗೆ ಅವಕಾಶ ಸಿಗದು
ಅಕ್ಷರ್ ಪಟೇಲ್
Follow us on

ಅಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ವಿರುದ್ಧ ಸತತ ಎರಡು ಟೆಸ್ಟ್ ಸರಣಿಗಳನ್ನು ಗೆದ್ದಿರುವ ಭಾರತ ಆತ್ಮವಿಶ್ವಾಸದಿಂದ ಬೀಗುತ್ತಿದೆ. ಈ ಗೆಲುವುಗಳಲ್ಲಿ ಯುವ ಆಟಗಾರರು ನೀಡಿದ ಕಾಣಿಕೆ ಬಗ್ಗೆ ಎಲ್ಲೆಡೆ ಚರ್ಚೆ ಆಗುತ್ತಿದೆ. ಕಡಿಮೆ ಅನುಭವದ ಮತ್ತು ಅನುಭವವೇ ಇರದ ಹಲವು ಯುವ ಆಟಗಾರರು ದೊರೆತ ಅವಕಾಶಗಳನ್ನು ಎರಡೂ ಕೈಗಳಿಂದ ಬಾಚಿಕೊಂಡು ತಮ್ಮ ಸಾಮರ್ಥ್ಯಕ್ಕೆ ಮೀರಿದ ಪ್ರದರ್ಶನಗಳನ್ನು ನೀಡಿ ನಾವು ಯಾರಿಗೇನು ಕಮ್ಮಿಯಿಲ್ಲ ಎನ್ನುವುದನ್ನು ಸಾಬೀತು ಮಾಡಿದರು. ಕ್ರಿಕೆಟ್ ಪ್ರೇಮಿಗಳು ಗಮನಿಸಬೇಕಿರುವ ಅಂಶವೊಂದು ಇಲ್ಲಿದೆ.  ಆದೇನೆಂದೆ, ಈ ಯುವ ಆಟಗಾರರಯ ಅವಕಾಶ ಪಡೆದಿದ್ದು, ಸೀನಿಯರ್ ಆಟಗಾರರರಲ್ಲಿ ಕೆಲವರು ಗಾಯಗೊಂಡಿದ್ದರಿಂದ. ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ಗಾಗಿ ನ್ಯೂಜಿಲೆಂಡ್ ವಿರುದ್ಧ ಇಂಗ್ಲೆಂಡ್​ನಲ್ಲಿ ನಡೆಯಲಿರುವ ಟೆಸ್ಟ್​ ಭಾರತದ ಮುಂದಿನ ಅಸೈನ್​ಮೆಂಟ್ ಆಗಿದೆ. ಈಗ ಎದ್ದಿರುವ ಪ್ರಶ್ನೆಯೇನೆಂದರೆ, ಗಾಯಗೊಂಡಿರುವ ಸೀನಿಯರ್​ ಆಟಗಾರರೆಲ್ಲ ಜೂನ್ ಹೊತ್ತಿಗೆ ಚೇತೆರಿಸಿಕೊಂಡು ಮರಳಿ ಫಿಟ್ನೆಸ್ ಪಡೆದುಕೊಂಡರೆ, ನಾವು ಚರ್ಚಿಸುತ್ತಿರುವ ಯುವ ಆಟಗಾರರು ಡಬ್ಲ್ಯೂಟಿಸಿ ಟೆಸ್ಸ್​ನಲ್ಲಿ ಆಡುವ ಅವಕಾಶ ಪಡೆಯಲಿದ್ದಾರೆಯೇ ಅನ್ನೋದು!

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ಮೂಲಗಳ ಪ್ರಕಾರ ಆಸ್ಟ್ರೇಲಿಯಾದಲ್ಲಿ ಗಾಯಗೊಂಡಿದ್ದ ರವೀಂದ್ರ ಜಡೇಜಾ ಮತ್ತು ಮೊಹಮ್ಮದ್ ಶಮಿ ಜೂನ್ ಹೊತ್ತಿಗೆ ಸಂಪೂರ್ಣವಾಗಿ ಚೇತರಿಸಿಕೊಳ್ಳಲಿದ್ದಾರೆ ಮತ್ತು ಡಬ್ಲ್ಯೂಟಿಸಿ ಟೆಸ್ಟ್​ನಲ್ಲಿ ಆಡುವ ಎಲ್ಲ ಸಾಧ್ಯತೆಗಳಿವೆ. ಅವರಿಗೆ ಸ್ಥಾನಗಳನ್ನು ಕಲ್ಪಿಸಬೇಕಾದರೆ ಯುವ ಆಟಗಾರರನ್ನು ಕೈ ಬಿಡಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಸ್ಥಾನ ಕಳೆದುಕೊಳ್ಳಬಹುದಾದ ಆಟಗಾರರು ಯಾರೆಂದು ನೋಡೋಣ.

ಅಕ್ಷರ್ ಪಟೇಲ್: 80 ರದಶಕದಲ್ಲಿ ನರೇಂದ್ರ ಹಿರ್ವಾನಿ ತಾನಾಡಿದ ಮೊದಲ ಪಂದ್ಯದಲ್ಲೇ (ವೆಸ್ಟ್ ಇಂಡೀಸ್ ವಿರುದ್ಧ) 16 ವಿಕೆಟ್​ಗಳನ್ನು ಪಡೆದು ವಿಶಿಷ್ಟ ಸಾಧನೆ ಮಾಡಿದಂತೆ ಗುಜರಾತಿನ ಅಕ್ಷರ್ ಪಟೇಲ್ ಇಂಗ್ಲೆಂಡ್ ವಿರುದ್ಧ ಆಡಿದ ಸರಣಿಯಲ್ಲಿ ಮಾಡಿದರು. ನಿಮಗೆ ಗೊತ್ತಿದೆ, ಈ ಸರಣಿಯಲ್ಲಿ ಅವರು ಆಡಿದ 3 ಟೆಸ್ಟ್​ಗಳಲ್ಲಿ 4 ಬಾರಿ 5-ವಿಕೆಟ್ ಪಡೆಯುವ ಸಾಧನೆ ಮಾಡಿ ಒಟ್ಟು 27 ವಿಕೆಟ್​ಗಳನ್ನು ಕಬಳಿಸಿದರು. ಬ್ಯಾಟ್ ಮೂಲಕವೂ ಆವರು ಉಪಯುಕ್ತ ಕಾಣಿಕೆಗಳನ್ನು ನೀಡಿದರು. ಅಂಥ ಆಮೋಘ ಸಾಧನೆ ಹೊರತಾಗಿಯೂ ಅಕ್ಷರ್ ತಮ್ಮ ಸ್ಥಾನವನ್ನು ರವೀಂದ್ರ ಜಡೇಜಾಗೆ ಬಿಟ್ಟುಕೊಡಬೇಕಾಗಬಹುದು. ಪ್ರವಾಸಕ್ಕೆ ತೆರಳುವ ಟೀಮ್ ಇಂಡಿಯಾದ ಒಬ್ಬ ಸದಸಸ್ಯನಾಗಿ ಅವರು ಅಯ್ಕೆಯಾಗಬಹುದು, ಅದರೆ ಆಡುವ ಇಲೆವೆನ್​ನಲ್ಲಿ ಸ್ಥಾನ ಗಿಟ್ಟಿಸುವುದು ಅವರಿಗೆ ಸಾಧ್ಯವಾಗಲಿಕ್ಕಿಲ್ಲ.

ಮೊಹಮ್ಮದ್ ಸಿರಾಜ್ ಮತ್ತು ನಟರಾಜನ್

ತಂಗರಸು ನಟರಾಜನ್: ತಮಿಳುನಾಡಿನ ಎಡಗೈ ವೇಗದ ಬೌಲರ್ ಯಾರ್ಕರ್ ಸ್ಪೆಷಲಿಸ್ಟ್ ಎಂದು ಗುರುತಿಸಿಕೊಂಡಿದ್ದಾರೆ. ಅವರು ಆಸ್ಟ್ರೇಲಿಯಾ ಪ್ರವಾಸ ಹೋಗಿದ್ದು ಒಬ್ಬ ನೆಟ್ ಬೌಲರ್​ ಆಗಿ. ಆದರೆ, ಭಾರತದ ಮುಂಚೂಣಿಯ ಬೌಲರ್​ಗಳು ಗಾಯಗೊಂಡಿದ್ದರಿಂದ ಅವರಿಗೆ ಬ್ರಿಸ್ಬೇನ್​ ಟೆಸ್ಟ್​ನಲ್ಲಿ ಆಡುವ ಅವಕಾಶ ಕಲ್ಪಿಸಲಾಯಿತು. ಆಸ್ಟ್ರೇಲಿಯಾದ ಪ್ರಮುಖ ಬ್ಯಾಟ್ಸ್​ಮನ್​ಗಳಾದ ಮಾರ್ನಸ್ ಲಬುಶೇನ್ ಮತ್ತು ಮ್ಯಾಥ್ಯೂ ವೇಡ್ ಅವರ ವಿಕೆಟ್​ಗಳನ್ನು ಪಡೆದು ಅವರು ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಂಡರು. ಆದರೆ ಉಮೇಶ್ ಯಾದವ್, ಶಮಿ, ಜಸ್ಪ್ರೀತ್ ಬುಮ್ರಾ ಮೊದಲಾದವರು ಟೀಮಿಗೆ ವಾಪಸ್ಸಾಗಲಿರುವುದರಿಂದ ನಟರಾಜನ್​ ತಂಡದಲ್ಲಿ ಸ್ಥಾನ ಗಿಟ್ಟಿಸಲಿಕ್ಕಿಲ್ಲ.

ವಾಷಿಂಗ್ಟನ್ ಸುಂದರ್: ತಮಿಳನಾಡಿನವರೇ ಅಗಿರುವ ಸುಂದರ್ ಆಸ್ಟ್ರೇಲಿಯಾ ವಿರುದ್ಧ ನಡೆದ ಬ್ರಿಸ್ಬೇನ್​ನಲ್ಲಿ ಆಡಿದ ನಾಲ್ಕನೇ ಟೆಸ್ಟ್​ ಪಂದ್ಯದಲ್ಲಿ ಗಾಯಗೊಂಡ ರವಿಚಂದ್ರನ್ ಅಶ್ವಿನ್ ಸ್ಥಾನದಲ್ಲಿ ಅವಕಾಶ ಪಡೆದರು. ಸುಂದರ್ ಬೌಲಿಂಗ್​ನಲ್ಲಿ ಯಾವುದೇ ಕರಾಮತ್ತು ತೋರಿಸಲಿಲ್ಲ ನಿಜ ಆದರೆ ಬ್ಯಾಟಿಂಗ್​ನಲ್ಲಿ ಮಿಂಚಿ ಪದಾರ್ಪಣೆಯ ಟೆಸ್ಟ್​ನಲ್ಲಿ ದಿಟ್ಟತನದ ತೋರಿ 62ರನ್ ಗಳಿಸಿದರು. ಆಮೇಲೆ ಇಂಗ್ಲೆಂಡ್ ವಿರುದ್ಧ ಅಡಿದ ಮೊದಲ ಮತ್ತು ಕೊನೆಯ ಟೆಸ್ಟ್​ಗಳಲ್ಲಿ ಅವರು ಕ್ರಮವಾಗಿ ಅಜೇಯ 85 ಮತ್ತು ಅಜೇಯ 96 ರನ್ ಗಳಿಸಿದರು. ಅಷ್ಟಾಗಿಯೂ ಅವರಿಗೆ ಡಬ್ಲ್ಯೂಟಿಸಿ ಟೆಸ್ಟ್​ನಲ್ಲಿ ಆಡುವ ಅವಕಾಶ ಸಿಗಲಾರದು. ಆಯ್ಕೆ ಸಮಿತಿಯು ಅಶ್ವಿನ್, ಜಡೇಜಾ ಮತ್ತು ಅಕ್ಷರ್ ಅವರನ್ನು ಪರಿಗಣಿಸಲಿದೆ.

ಮೊಹಮ್ಮದ್ ಸಿರಾಜ್: ಹೈದರಾಬಾದಿನ ವೇಗದ ಬೌಲರ್ ಡಿಸೆಂಬರ್ 26 ರಿಂದ ಶುರುವಾದ ಬಾಕ್ಸಿಂಗ್ ಡೇ ಟೆಸ್ಟ್​ನಲ್ಲಿ ಟೆಸ್ಟ್ ಕ್ರಿಕೆಟ್ ಪದಾರ್ಪಣೆ ಮಾಡಿದರು. ಅದಾದ ನಂತರ ಬ್ರಿಸ್ಬೇನ್ ಟೆಸ್ಟ್​ನಲ್ಲಿ ಎಲ್ಲ ಪ್ರಮುಖ ವೇಗದ ಬೌಲರ್​ಗಳ ಅನುಪಸ್ಥಿತಿಯಲ್ಲಿ ಭಾರತೀಯ ವೇಗದ ಬೌಲಂಗ್​ನ ನೇತೃತ್ವ ವಹಿಸಿದರು. ಆದರೆ ಈಗ ಇಶಾಂತ್ ಶರ್ಮ, ಬುಮ್ರಾ, ಉಮೇಶ್ ಯಾದವ್, ಶಮಿ ಮತ್ತು ಭುವನೇಶ್ವರ್ ಕುಮಾರ ಮೊದಲಾವರೆಲ್ಲ ಆಯ್ಕೆಗೆ ಲಭ್ಯರಿರುವುದರಿಂದ ಅವರಿಗೆ ತಂಡದಲ್ಲಿ ಸ್ಥಾನ ಸಿಗಲಾರದು.

ಶಾರ್ದುಲ್ ಠಾಕೂರ್: ಬ್ರಿಸ್ಬೇನ್ ಟೆಸ್ಟ್​ನಲ್ಲಿ ಆಡುವ ಅವಕಾಶ ಗಿಟ್ಟಿಸಿದ ಮುಂಬೈನ ಶಾರ್ದುಲ್ ಠಾಕೂರ್ ಬ್ಯಾಟ್ ಮತ್ತು ಬಾಲ್ ಎರಡರಿಂದಲೂ ಮಿಂಚಿದರು. ಆಸ್ಟ್ರೇಲಿಯಾದ ಮೊದಲ ಇನ್ನಿಂಗ್ಸ್​ನಲ್ಲಿ 3 ವಿಕೆಟ್ ಪಡೆದ ನಂತರ ಉತ್ತಮ ಮತ್ತು ದಿಟ್ಟತನದ ಬ್ಯಾಟಿಂಗ್ ಪ್ರದರ್ಶನ ನೀಡಿ 67 ರನ್ ಬಾರಿಸಿದ್ದರು. ಆದರೆ, ಮೇಲೆ ಹೇಳಿರುವ ಆಟಗಾರರಂತೆ ಶಾರ್ದುಲ್​ಗೂ ಚಾನ್ಸ್ ಸಿಗಲಾರದು.
ಈ ಆಟಗಾರರು ಅವಕಾಶ ಪಡೆಯದಂಥ ಸ್ಥಿತಿ ನಿರ್ಮಾಣವಾಗಿರುವುದಕ್ಕೆ ವ್ಯಥೆಯೆನಿಸಿದರೂ ಸ್ಥಾನಗಳಿಗಾಗಿ ಆಟಗಾರರ ನಡುವೆ ಆರೋಗ್ಯಕರ ಸ್ಪರ್ಧೆ ಏರ್ಪಟ್ಟಿರುವುದು ಸಮಾಧಾನ ಮೂಡಿಸುತ್ತದೆ.

ಇದನ್ಣೂ ಓದಿ: India vs England 4th Test Day 3: ಭರ್ಜರಿ ಜಯದೊಂದಿಗೆ ಡಬ್ಲ್ಯೂಟಿಸಿ ಫೈನಲ್ ಪ್ರವೇಶಿಸಿದ ಭಾರತ