
ತಮಿಳುನಾಡಿನ 29 ವರ್ಷ ವಯಸ್ಸಿನ ತಂಗರಸು ನಟರಾಜನ್ಗೆ ತನ್ನ ಅದೃಷ್ಟವನ್ನು ನಂಬದ ಸ್ಥಿತಿ ಎದುರಾಗಿರಬಹುದು. ನಿಮಗೆ ನೆನಪಿರಬಹುದು. ಆಸ್ಟ್ರೇಲಿಯಾ ಪ್ರವಾಸಕ್ಕೆ ಆಯ್ಕೆಯಾದ ಮೂರು ತಂಡಗಳಲ್ಲೂ (ಟಿ20ಐ, ಒಡಿಐ ಮತ್ತು ಟೆಸ್ಟ್) ನಟರಾಜನ್ ಹೆಸರಿರಲಿಲ್ಲ. ಇಷಾನ್ ಪೊರೆಲ್, ಕಾರ್ತಿಕ್ ತ್ಯಾಗಿ ಮತ್ತು ಕಮ್ಲೇಶ್ ನಾಗರಕೋಟಿ ಜೊತೆ ಅವರು ಒಬ್ಬ ನೆಟ್ ಬೌಲರ್ ಆಗಿ ಅಸ್ಟ್ರೇಲಿಯಾಗೆ ತೆರಳಿದವರು. ಆದರೆ ಅದೃಷ್ಟ ನೋಡಿ ಹೇಗಿದೆ. ಅವರನ್ನು ಮೊದಲು ಒಂದು ದಿನದ ಅಂತರರಾಷ್ಟ್ರೀಯ ಪಂದ್ಯಗಳಲ್ಲಿ, ಅಮೇಲೆ ನಡೆದ ಟಿ20 ಐ ಪಂದ್ಯಗಳಲ್ಲಿ ಆಡಿಸಲಾಯಿತು. ಎರಡು ಅವೃತ್ತಿಗಳಲ್ಲೂ ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಂಡ ನಟರಾಜನ್ ಆಡಿದ 4 ಪಂದ್ಯಗಳಲ್ಲಿ 8 ವಿಕೆಟ್ಗಳನ್ನು ಪಡೆದರು.
ಯಾರ್ಕರ್ ಪರಿಣಿತ ಎಂದು ಗುರುತಿಸಿಕೊಂಡಿರುವ ನಟರಾಜನ್ ಅವರನ್ನು ಮೆಲ್ಬರ್ನ್ ಟೆಸ್ಟ್ನಲ್ಲಿ ಮೀನಖಂಡದ ಸೆಳೆತಕ್ಕೆ ಒಳಗಾಗಿ ಸರಣಿಯಿಂದ ಹೊರಬಿದ್ದ ವೇಗದ ಬೌಲರ್ ಉಮೇಶ್ ಯಾದವ್ ಸ್ಥಾನದಲ್ಲಿ ತಂಡಕ್ಕೆ ಸೇರಿಸಿಕೊಳ್ಳಲಾಗಿದೆಯೆಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಶುಕ್ರವಾರದಂದು ಅಧಿಕೃತ ಪ್ರಕಟಣೆಯೊಂದರ ಮೂಲಕ ತಿಳಿಸಿದೆ.
‘ಬಿಸಿಸಿಐನ ಸೀನಿಯರ್ ಆಯ್ಕೆ ಸಮಿತಿಯು ಮೆಲ್ಬರ್ನ್ ಟೆಸ್ಟ್ನಲ್ಲಿ ಸ್ನಾಯು ಸೆಳೆತಕ್ಕೊಳಗಾಗಿ ಸರಣಿಯಿಂದ ಹೊರಬಿದ್ದಿರುವ ವೇಗದ ಬೌಲರ್ ಉಮೇಶ್ ಯಾದವ್ ಸ್ಥಾನದಲ್ಲಿ ಎಡಗೈ ವೇಗದ ಬೌಲರ್ ತಂಗರಸು ನಟರಾಜನ್ ಅವರನ್ನು ಭಾರತದ ಟೆಸ್ಟ್ ತಂಡಕ್ಕೆ ಸೇರಿಸಿದೆ’ ಎಂದು ಬಿಸಿಸಿಐ ಪ್ರಕಟಣೆಯಲ್ಲಿ ಹೇಳಿದೆ.
ನಟರಾಜನ್ ಸರಣಿಯ ಮಧ್ಯಭಾಗದಲ್ಲಿ ತಂಡಕ್ಕೆ ಸೇರಿಕೊಂಡಿರುವ ಎರಡನೆ ಬೌಲರ್ ಆಗಿರುತ್ತಾರೆ. ಎರಡನೆ ಟೆಸ್ಟ್ ಆರಂಭಕ್ಕೆ ಮುನ್ನ ಬಲಮುಂಗೈ ಮೂಳೆ ಮುರಿದುಕೊಂಡಿರುವ ಮತ್ತೊಬ್ಬ ವೇಗದ ಬೌಲರ್ ಮೊಹಮ್ಮದ್ ಶಮಿ ಸ್ಥಾನದಲ್ಲಿ ಮುಂಬೈ ವೇಗದ ಬೌಲರ್ ಶಾರ್ದುಲ್ ಠಾಕೂರ್ ಅವರನ್ನು ಬದಲಿ ಆಟಗಾರನಾಗಿ ತಂಡಕ್ಕೆ ಸೇರಿಸಿಕೊಳ್ಳಲಾಗಿತ್ತು.
ಬಿಸಿಸಿಐ ನೀಡಿರುವ ಮಾಹಿತಿ ಪ್ರಕಾರ, ಶಮಿ ಮತ್ತು ಯಾದವ್ ಅವರನ್ನು ರಿಹ್ಯಾಬ್ಗೋಸ್ಕರ ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಗೆ ಕಳಿಸಲಾಗಿದೆ.
ಶಾರ್ದುಲ್ ಠಾಕುರ್
ಹಾಗೆ ನೋಡಿದರೆ, ಶಮಿ ಕುರಿತು ಬಿಸಿಸಿಐ ಮೊದಲ ಬಾರಿಗೆ ಆಧಿಕೃತ ಮಾಹಿತಿ ನೀಡಿದೆ. ಶಮಿ ಅಡಿಲೇಡ್ ಪಂದ್ಯದಲ್ಲಿ ಗಾಯಗೊಂಡಾಗಿನಿಂದ ಮಂಡಳಿಯಿಂದ ಅವರ ಗಾಯದ ಬಗ್ಗೆಯಾಗಲೀ ಅಥವಾ ಭಾರತಕ್ಕೆ ಹಿಂತಿರುಗಿರುವ ಬಗ್ಗೆಯಾಗಲಿ ಯಾವುದೇ ಮಾಹಿತಿ ಲಭ್ಯವಾಗಿರಲಿಲ್ಲ.
ಜನವರಿ 7ರಂದು ಸಿಡ್ನಿಯಲ್ಲಿ ಆರಂಭವಾಗುವ ಮೂರನೇ ಟೆಸ್ಟ್ನಲ್ಲಿ ಠಾಕೂರ್ ಆಡ್ತಾರಾ ಅಥವಾ ನಟರಾಜನ್ ಫೀಲ್ಡ್ಗೆ ಬರ್ತಾರಾ ಎಂಬ ಪ್ರಶ್ನೆ ಕ್ರಿಕೆಟ್ ಪ್ರೇಮಿಗಳಲ್ಲಿದೆ. ಕ್ರಿಕೆಟ್ ಪರಿಣಿತರ ಪ್ರಕಾರ ಮುಂಬೈ ಬೌಲರ್ನನ್ನು ಆಡಿಸುವುದು ಹೆಚ್ಚು ಪ್ರಯೋಜನಕಾರಿ. ಪ್ರಾಯಶಃ ಓದುಗರಿಗೆ ನೆನೆಪಿರಬಹುದು. ಠಾಕೂರ್ 2018ರಲ್ಲೇ ವೆಸ್ಟ್ ಇಂಡೀಸ್ ವಿರುದ್ಧ ನಡೆದ ಸರಣಿಯಲ್ಲಿ ಟೆಸ್ಟ್ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದ್ದರು.
ಗಾಯಗೊಂಡು ಮೈದಾನದಿಂದ ಹೊರ ನಡೆಯುತ್ತಿರುವ ಉಮೇಶ್ ಯಾದವ್
ಆದರೆ ಹೈದರಾಬಾದ್ನಲ್ಲಿ ನಡೆದ ಡೆಬ್ಯು ಟೆಸ್ಟ್ನಲ್ಲಿ ಠಾಕೂರ್ ಕೇವಲ 10 ಎಸೆತಗಳನ್ನು ಬೌಲ್ ಮಾಡುವಷ್ಟರಲ್ಲಿ ತೊಡೆಸಂದಿ ನೋವಿಗೀಡಾಗಿ ಮೈದಾನದಿಂದ ಆಚೆ ನಡೆದರು. ಅಲ್ಲಿಂದೀಚೆಗೆ ಬಿಸಿಸಿಐ ಠಾಕೂರರನ್ನು ಟೆಸ್ಟ್ಗಳಿಗೆ ಪರಿಗಣಿಸಲೇ ಇಲ್ಲ. ಠಾಕೂರ್, ತಮಿಳುನಾಡು ಬೌಲರ್ಗಿಂತ ಹೆಚ್ಚು ಅನುಭವಿಯಾಗಿದ್ದಾರೆ. ಇದುವರೆಗೆ ಅವರು 62 ಪ್ರಥಮ ದರ್ಜೆ ಪಂದ್ಯಗಳನ್ನಾಡಿದ್ದು, 206 ವಿಕೆಟ್ ಪಡೆದಿದ್ದಾರೆ. ಲೇಟ್ ಆರ್ಡರ್ನಲ್ಲಿ ಉಪಯುಕ್ತ ಬ್ಯಾಟ್ಸ್ಮನ್ ಕೂಡ ಆಗಿರುವ ಅವರು 6 ಅರ್ಧ ಶತಕಗಳನ್ನು ಬಾರಿಸಿದ್ದಾರೆ.
ಆದರೆ, ಸೀಮಿತ ಓವರ್ಗಳ ಸ್ಪೆಷಲಿಸ್ಟ್ ಬೌಲರ್ ಆಗಿರುವ ನಟರಾಜನ್ ಇದುವರೆಗೆ ಕೇವಲ ಒಂದು ಪ್ರಥಮ ದರ್ಜೆ ಪಂದ್ಯ ಮಾತ್ರ ಅಡಿದ್ದಾರೆ. ಈ ಹಿನ್ನೆಲೆಯಲ್ಲಿ ಸಿಡ್ನಿ ಟೆಸ್ಟ್ಗೆ ಟೀಮ್ ಮ್ಯಾನೇಜ್ಮೆಂಟ್ ಠಾಕೂರ್ ಅವರನ್ನು ಆಡಿಸಲು ಒಲವು ತೋರಿದರೆ ಆಶ್ಚರ್ಯಪಡಬೇಕಿಲ್ಲ. ರೋಹಿತ್ ಶರ್ಮ ಅವರ ಸ್ಟೇಟಸ್ ಬಗ್ಗೆಯೂ ಬಿಸಿಸಿಐ ಮಾಹಿತಿ ಒದಗಿಸಿದೆ.
‘ರೋಹಿತ್ ಶರ್ಮ ತಮ್ಮ ಕ್ವಾರೆಂಟೈನ್ ಅವಧಿಯನ್ನು ಪೂರ್ತಿಗೊಳಿಸಿ, ಮೆಲ್ಬರ್ನ್ನಲ್ಲಿರುವ ಟೀಮ್ ಇಂಡಿಯಾವನ್ನು ಸೇರಿಕೊಂಡಿದ್ದಾರೆ’ ಎಂದು ಬಿಸಿಸಿಐ ಪ್ರಕಟಣೆ ತಿಳಿಸಿದೆ.
ಮುಂದಿನೆರಡು ಟೆಸ್ಟ್ಗಳಿಗೆ ಭಾರತದ ಇಂತಿದೆ: ಅಜಿಂಕ್ಯಾ ರಹಾನೆ (ನಾಯಕ) ರೋಹಿತ್ ಶರ್ಮ(ಉಪ ನಾಯಕ), ಮಾಯಾಂಕ್ ಅಗರ್ವಾಲ್, ಪೃಥ್ವಿ ಶಾ, ಕೆ ಎಲ್ ರಾಹುಲ್, ಚೇತೇಶ್ವರ್ ಪೂಜಾರಾ, ಶುಭ್ಮನ್ ಗಿಲ್, ಹನುಮ ವಿಹಾರಿ, ರಿಷಭ್ ಪಂತ್ (ವಿಕೆಟ್-ಕೀಪರ್) ವೃದ್ಧಿಮಾನ್ ಸಹಾ, ಜಸ್ಪ್ರೀತ್ ಬುಮ್ರಾ, ನವದೀಪ್ ಸೈನಿ, ಕುಲ್ದೀಪ್ ಯಾದವ್, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಮೊಹಮ್ಮದ್ ಸಿರಾಜ್, ಶಾರ್ದುಲ್ ಠಾಕೂರ್ ಮತ್ತು ಟಿ ನಟರಾಜನ್.
Published On - 7:13 pm, Fri, 1 January 21