India vs Australia Test Series | ಮೂರನೆ ಟೆಸ್ಟ್ಗೆ ಯಾರಿರಬೇಕು, ಯಾರಿರಬಾರದು ಎನ್ನುವುದೇ ಗೊಂದಲ
ಕ್ವಾರಂಟೈನ್ ಅವಧಿ ಪೂರ್ತಿಗೊಳಿಸಿರುವ ರೋಹಿತ್ ಶರ್ಮ ಮೂರನೆ ಟೆಸ್ಟ್ಗೆ ಲಭ್ಯರಿರುವುದು ಮತ್ತು ವೇಗಿ ಉಮೇಶ್ ಯಾದವ್ ಗಾಯಗೊಂಡು ಸರಣಿಯಿಂದ ಹೊರಬಿದ್ದಿರುವುದರಿಂದ ಎರಡನೆ ಟೆಸ್ಟ್ನಲ್ಲಿ ಅಧಿಕಾರಯುತ ಗೆಲುವು ಸಾಧಿಸಿ ಸರಣಿಯಲ್ಲಿ ವಾಪಸ್ಸು ಬಂದಿರುವ ಟೀಮ್ ಇಂಡಿಯಾಗೆ ಸಿಡ್ನಿಯಲ್ಲಿ ಆಡುವ ಇಲೆವೆನ್ ಅಂತಿಮಗೊಳಿಸಲು ಸಮಸ್ಯೆಗಳು ಎದುರಾಗಿವೆ.

ಆಸ್ಟ್ರೇಲಿಯ ವಿರುದ್ಧ ಎರಡನೆ ಟೆಸ್ಟ್ ಗೆದ್ದು ಸರಣಿ ಸಮ ಮಾಡಿಕೊಂಡಿರುವ ಭಾರತಕ್ಕೆ ಸಿಡ್ನಿಯಲ್ಲಿ ಜನೆವರಿ 7 ರಿಂದ ಶುರುವಾಗಲಿರುವ ಮೂರನೆ ಟೆಸ್ಟ್ಗೆ ಅಡುವ ಇಲೆವೆನ್ ಆರಿಸುವುದು ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಉಮೇಶ್ ಯಾದವ್ ರೂಪದಲ್ಲಿ ಮತ್ತೊಬ್ಬ ವೇಗದ ಬೌಲರ್ ಗಾಯಗೊಂಡು ಸರಣಿಯಿಂದ ಹೊರಬಿದ್ದಿದ್ದಾರೆ. ಅವರ ಸ್ಥಾನದಲ್ಲಿ ಸೀಮಿತ ಓವರ್ಗಳ ಪಂದ್ಯಗಳಲ್ಲಿ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿದ ತಂಗರಸು ನಟರಾಜನ್ ಅವರನ್ನು ಟೀಮಿಗೆ ಸೇರಿಸಿಕೊಳ್ಳಲಾಗಿದೆ. ಆಸ್ಟ್ರೇಲಿಯಾದಲ್ಲಿ ಎರಡು-ವಾರ ಅವಧಿಯ ಕ್ವಾರೈಂಟೈನ್ ಪೂರ್ಣಗೊಳಿಸಿರುವ ಆರಂಭ ಆಟಗಾರ ರೋಹಿತ್ ಶರ್ಮ ಆಯ್ಕೆಗೆ ಲಭ್ಯರಿದ್ದಾರೆ.
ರೋಹಿತ್ ಅವರನ್ನು ಸಿಡ್ನಿಯಲ್ಲಿ ಆಡಿಸಬೇಕಾದರೆ ಮೆಲ್ಬರ್ನ್ ಪಂದ್ಯದಲ್ಲಿ ದಿಟ್ಟ ಮತ್ತು ನಿಷ್ಕಳಂಕ ಬ್ಯಾಟಿಂಗ್ ಪ್ರದರ್ಶನ ನೀಡಿದ ಶುಭ್ಮನ್ ಗಿಲ್ರನ್ನು ಟೀಮಿನಿಂದ ಕೈಬಿಡುವುದು ಸಾಧ್ಯವಿಲ್ಲ. ಆಸ್ಟ್ರೇಲಿಯಾದ ಮಾಜಿ ಕ್ಯಾಪ್ಟನ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿಯ ಮೆಂಟರ್ ಆಗಿರುವ ರಿಕ್ಕಿ ಪಾಂಟಿಂಗ್ ಪ್ರಕಾರ ಗಿಲ್, ವಿಶ್ವದ ಶ್ರೇಷ್ಠ ಯುವ ಬ್ಯಾಟ್ಸ್ಮನ್ಗಳಲ್ಲೊಬ್ಬರು ಮತ್ತು ಮುಂದಿನ ದಿನಗಳಲ್ಲಿ ಅತ್ಯಂತ ವಿಶ್ವಸಾರ್ಹ ಟೆಸ್ಟ್ ಬ್ಯಾಟ್ಸ್ಮನ್ ಆಗಿ ಮಾರ್ಪಡಲಿದ್ದಾರೆ.
ಮೆಲ್ಬರ್ನ್ ಪಂದ್ಯದಲ್ಲಿ ಆಸ್ಸೀ ವೇಗಿಗಳೆದಿರು ಗಿಲ್ ನಿರ್ಭೀತಿಯಿಂದ ಆಡಿದ್ದು ಭಾರತೀಯ ಕ್ರಿಕೆಟ್ ಮಂಡಳಿ, ಟೀಮ್ ಇಂಡಿಯಾದ ಮ್ಯಾನೇಜ್ಮೆಂಟ್ ಜೊತೆಗೆ ಕ್ರಿಕೆಟ್ ಪ್ರೇಮಿಗಳ ಮನಸೂರೆಗೊಂಡಿದೆ. ಅವರು ಟೀಮಿನ ಖಾಯಂ ಸದಸ್ಯರಾಗುವುದರಲ್ಲಿ ಸಂದೇಹವೇ ಇಲ್ಲ. ಹಾಗಾದಲ್ಲಿ, ರೋಹಿತ್ ಅವರನ್ನು ಟೀಮಿಗೆ ಸೇರಿಸಬೇಕಾದರೆ, ಮಾಯಾಂಕ್ ಅಗರ್ವಾಲ್ ಅವರನ್ನು ಡ್ರಾಪ್ ಮಾಡಬೇಕಾಗುತ್ತದೆ.
ಆದರೆ, ಮಾಜಿ ಆರಂಭ ಆಟಗಾರ ಮತ್ತು ಕಾಮೆಂಟೇಟರ್ ಸುನಿಲ್ ಗಾವಸ್ಕರ್, ಅಗರವಾಲ್ ಅವರನ್ನು ಆಡುವ ಎಲೆವೆನ್ನಿಂದ ಡ್ರಾಪ್ ಮಾಡುವುದು ಅಪರಾಧವೆನಿಸುತ್ತದೆ ಎಂದು ಎಚ್ಚರಿಸಿದ್ದಾರೆ. ಸರಣಿ ಆರಂಭಕ್ಕೆ ಮೊದಲೇ ಅವರು ಮಾಯಾಂಕ್ ಅವರ ಸಾಮರ್ಥ್ಯದ ಮೇಲೆ ನಂಬಿಕೆಯಿರಲಿ ಎಂದು ಹೇಳಿದ್ದರು.

ಶುಭ್ಮನ್ ಗಿಲ್
‘‘ಈ ಸರಣಿಯಲ್ಲಿ ನಾನು ಮಾಯಾಂಕ್ ಮೇಲೆ ಜಾಸ್ತಿ ವಿಶ್ವಾಸವಿಟ್ಟುಕೊಂಡಿದ್ದೇನೆ. 2018-19 ರ ಸರಣಿಯಲ್ಲಿ ಅವರು ನಾವೆಲ್ಲ ಬೆರಗಾಗುವಂಥ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಅವರು ಟೀಮಿಗೆ ಬರುವ ಮೊದಲು ಭಾರತಕ್ಕೆ ಉತ್ತಮ ಆರಂಭಗಳು ದೊರೆತಿರಲಿಲ್ಲ. ಕ್ರೀಸ್ನಿಂದ ಹೊರಬಂದು ಚೆಂಡನ್ನು ನೇರವಾಗಿ ಎತ್ತಿ ಬಾರಿಸುವ ಮೂಲಕ ನೇಥನ್ ಲಿಯಾನ್ ಆವರನ್ನು ಹೇಗೆ ಆಡಬೇಕೆನ್ನುವುದನ್ನೂ ಅವರು ತೋರಿಸಿಕೊಟ್ಟಿದ್ದರು,’’ ಎಂದು ಸನ್ನಿ ವರ್ಚ್ಯುಯಲ್ ಸುದ್ದಿಗೋಷ್ಠಿಯೊಂದರಲ್ಲಿ ಹೇಳಿದರು.
ರೋಹಿತ್ ಅವರನ್ನು ಆಡಿಸಬೇಕಾದರೆ, ಗಿಲ್ರನ್ನು ಮಧ್ಯಮ ಕ್ರಮಾಂಕದಲ್ಲಿ ಆಡಿಸುವುದು ಉತ್ತಮ ಎನ್ನುವ ಉಪಾಯವನ್ನೂ ಸನ್ನಿ ನೀಡುತ್ತಾರೆ.
‘‘ನನ್ನನ್ನು ಕೇಳುವುದಾದರೆ, ಮಯಾಂಕ್ ಮತ್ತು ರೋಹಿತ್ ಅವರನ್ನು ಆರಂಭ ಆಟಗಾರರನ್ನಾಗಿ ಆಡಿಸಬೇಕು. ಗಿಲ್ ಇತ್ತೀಚಿಗಷ್ಟೇ ಓಪನರ್ ಆಗಿ ಆಡುತ್ತಿದ್ದಾರೆ. ಭಾರತದ ಅಂಡರ್-19 ಟೀಮಿಗೆ ಅವರು ಮೂರು ಇಲ್ಲವೇ ನಾಲ್ಕನೇ ಕ್ರಮಾಂಕದಲ್ಲಿ ಆಡುತ್ತಿದ್ದರು. ಹಾಗಾಗಿ, ಆರನೇ ಕ್ರಮಾಂಕದಲ್ಲಿ ಆಡುತ್ತಿರುವ ಹನುಮ ವಿಹಾರಿಯನ್ನು ಆಡುವ ಇಲೆವೆನ್ನಿಂದ ಡ್ರಾಪ್ ಮಾಡದೆ ವಿಧಿಯಿಲ್ಲ,’’ ಎಂದು ಗಾವಸ್ಕರ್ ಹೇಳಿದ್ದಾರೆ.
ಇತರ ಕೆಲ ಕಾಮೆಂಟೇಟರ್ಗಳು ಸಹವಿಹಾರಿಯನ್ನು ಕೈಬಿಡುವ ಬಗ್ಗೆ ಮಾತಾಡಿದ್ದಾರೆ. ಯಾಕೆಂದರೆ, ಮಾಯಾಂಕ್ ಅವರ ಟೆಸ್ಟ್ ಸರಾಸರಿ 48ರಷ್ಟಿದೆ ಮತ್ತು ಅತ್ಯಂತ ಕಿರು ಅವಧಿಯಲ್ಲೇ ಅವರು 1,000 ಟೆಸ್ಟ್ ರನ್ಗಳನ್ನು ಪೂರೈಸಿದ್ದಾರೆ. ಆದರೆ, 35ರನ್ ಸರಾಸರಿ ಹೊಂದಿರುವ ವಿಹಾರಿ ಆಸ್ಟ್ರೇಲಿಯಾದ ಬೌನ್ಸಿ ಪಿಚ್ಗಳ ಮೇಲೆ ರನ್ ಗಳಿಸಲು ಹೆಣಗುತ್ತಿದ್ದಾರೆ.

ಮಾಯಾಂಕ್ ಅಗರ್ವಾಲ್
ಬೌಲರ್ಗಳ ವಿಭಾಗದಲ್ಲೂ ಭಾರತಕ್ಕೆ ಸಮಸ್ಯೆ ಎದುರಾಗಿದೆ. ಮೊಹಮ್ಮದ್ ಶಮಿ ಮತ್ತು ಉಮೇಶ್ ಯಾದವ್ ಆನುಭವಿ ಬೌಲರ್ಗಳಾಗಿದ್ದರು. ಮೆಲ್ಬರ್ನ್ನಲ್ಲಿ ಶಮಿ ಸ್ಥಾನದಲ್ಲಿ ಆಡುವ ಅವಕಾಶ ಗಿಟ್ಟಿಸಿದ ಮೊಹಮ್ಮದ್ ಸಿರಾಜ್ 5 ವಿಕೆಟ್ಗಳನ್ನು ಪಡೆಯುವ ಮೂಲಕ ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಂಡರು. ಇನ್ನು ಸಿಡ್ನಿ ಟೆಸ್ಟ್ಗೆ ಯಾದವ್ ಸ್ಥಾನದಲ್ಲಿ ನವದೀಪ್ ಸೈನಿ ಇಲ್ಲವೇ ನಟರಾಜನ್ ಆವರನ್ನು ಆಡಿಸಬೇಕಾಗುತ್ತದೆ. ಇಬ್ಬರಿಗೂ ಟೆಸ್ಟ್ ಆಡಿರುವ ಅನುಭವ ಇಲ್ಲ. ಶಮಿ ಅನುಪಸ್ಥಿತಿಯಲ್ಲಿ ದುರ್ಬಲಗೊಂಡಿರುವ ಭಾರತದ ಬೌಲಿಂಗ್ ದಾಳಿಯನ್ನು ಸೈನಿ ಅಥವಾ ನಟರಾಜನ್ ಬಲಪಡಿಸುವರೆ ಎನ್ನುವುದು ಆತಂಕಕಾರಿ ಅಂಶ.
ಟೀಮಿನ ಅತ್ಯಂತ ವಿಶ್ವಾಸಾರ್ಹ ಬ್ಯಾಟ್ಸ್ಮನ್ ಚೇತೇಶ್ವರ್ ಪೂಜಾರಾ ಮೊದಲಿನೆರಡು ಪಂದ್ಯಗಳಲ್ಲಿ ರನ್ ಗಳಿಸಿದೆ ಹೋಗಿದ್ದು ಟೀಮ್ ಮ್ಯಾನೇಜ್ಮೆಂಟನ್ನು ಚಿಂತೆಗೀಡು ಮಾಡಿದೆ. ಎಲ್ಲ ನೆಗೆಟಿವ್ ಅಂಶಗಳನ್ನು ಬದಿಗೊತ್ತಿ ಮೆಲ್ಬರ್ನ್ ಪಂದ್ಯದಲ್ಲಿ ನೀಡಿದ ಪ್ರದರ್ಶನವನ್ನು ಅಜಿಂಕ್ಯಾ ರಹಾನೆ ಪಡೆ ಪುನರಾವರ್ತಿಸಲಿ ಅಂತ ಭಾರತದ ಕ್ರಿಕೆಟ್ ಪ್ರೇಮಿ ನಿರೀಕ್ಷಿಸುತ್ತಿದ್ದಾನೆ.

ಟಿ ನಟರಾಜನ್
Published On - 7:39 pm, Thu, 31 December 20
