ಕ್ಲಬ್ ಹೌಸ್ ಇತ್ತೀಚೆಗೆ ಜನರ ಗಮನ ಸೆಳೆಯುತ್ತಿರುವ ಅಪ್ಲಿಕೇಷನ್. ಹಲವರು ಈಗಾಗಲೇ ಕ್ಲಬ್ ಹೌಸ್ ಸೇರಿದ್ದರೆ, ಇನ್ನೂ ಕೆಲವರು ಕ್ಲಬ್ ಹೌಸ್ ಅಂದ್ರೇನು ಅಂತಾ ಕೇಳ್ತಾ ಇದ್ದಾರೆ. ಕ್ಲಬ್ ಹೌಸ್ ಅಪ್ಲಿಕೇಷನ್ ಬಗ್ಗೆ ಇರುವ ಹಲವು ಕುತೂಹಲಗಳಿಗೆ ಇಲ್ಲಿ ಮಾಹಿತಿ ನೀಡಲಾಗಿದೆ. ಸರಳವಾಗಿ ಹೇಳಬೇಕೆಂದರೆ, ಕ್ಲಬ್ ಹೌಸ್ ಎಂಬುದು ಒಂದು ಆಡಿಯೋ ಬೇಸ್ಡ್ ಅಪ್ಲಿಕೇಷನ್. ಇತ್ತೀಚೆಗಷ್ಟೇ 1 ಮಿಲಿಯನ್ ಡೌನ್ಲೋಡ್ ಕಂಡು ನೆಟ್ವರ್ಕ್ ಬೆಳೆಯುತ್ತಾ ಸಾಗುತ್ತಿರುವ ಅಪ್ಲಿಕೇಷನ್.
ಇದು ಇನ್ವೈಟ್ ಓನ್ಲಿ ಸೋಷಿಯಲ್ ಆಡಿಯೋ ಆ್ಯಪ್ ಆಗಿದೆ. ಅಂದರೆ, ಯಾರಾದರೂ ನಿಮಗೆ ಆ್ಯಪ್ ಒಳಹೋಗಲು ಅನುಮತಿ ನೀಡಿದರೆ ಅಥವಾ ಯಾರಾದರೂ ಆಮಂತ್ರಣ ನೀಡಿದರೆ ಮಾತ್ರ ನೀವು ಈ ಅಪ್ಲಿಕೇಷನ್ ಬಳಸಬಹುದು. ಕ್ಲಬ್ ಹೌಸ್ ನೆಟ್ವರ್ಕ್ ಸೇರಬಹುದು.
ಈ ಅಪ್ಲಿಕೇಷನ್ ಮಾರ್ಚ್ 2020ರಲ್ಲಿ ಆಂಡ್ರಾಯ್ಡ್ ಫೋನ್ಗಳಲ್ಲಿ ಲಾಂಚ್ ಆಗಿತ್ತು. ಇದೀಗ ಈ ಅಪ್ಲಿಕೇಷನ್, ಹೊಸ ಫೀಚರ್ಗಳನ್ನು ಸೇರಿಸಿಕೊಳ್ಳುತ್ತಿದೆ ಹಾಗೂ ಹಣ ಪಾವತಿಸಿ ಬಳಸುವಂತಾ ಸೌಲಭ್ಯಗಳನ್ನು ಪರಿಚಯಿಸಲು ತಯಾರಾಗಿದೆ. ಆಂಡ್ರಾಯ್ಡ್ ಅಪ್ಲಿಕೇಷನ್ನಲ್ಲಿಯೂ ಪೇಮೆಂಟ್ ಮಾಡುವ ಮೂಲಕ ಅಪ್ಲಿಕೇಷನ್ ಬಳಸುವಂತೆ ಆಗಬಹುದು ಎಂದು ಹೇಳಲಾಗಿದೆ.
ಕ್ಲೌಬ್ ಹೌಸ್ ಎಂದರೇನು?
ಕ್ಲಬ್ ಹೌಸ್ ಆಡಿಯೋ ಬೇಸ್ಡ್ ಅಪ್ಲಿಕೇಷನ್ ಆಗಿದೆ. ಅಂದರೆ, ಇದರಲ್ಲಿ ನಾವು ಗುಂಪಾಗಿ ಕುಳಿತು ಹರಟೆ ಹೊಡೆಯಬಹುದು, ಯಾವುದೇ ವಿಚಾರಗಳನ್ನು ಮಾತನಾಡಬಹುದು. ಆದರೆ, ಅದರಲ್ಲಿ ಯಾವುದೇ ಪ್ರೈವಸಿ ಇರುವುದಿಲ್ಲ. ಸಾರ್ವಜನಿಕ ಮಾತುಕತೆಗೆ ಅವಕಾಶ ಇದೆ. ಸುಲಭವಾಗಿ ಅರ್ಥಮಾಡಿಕೊಳ್ಳಲು ನಾವು ಹಳ್ಳಿಯ ಕಟ್ಟೆ ಪಂಚಾಯತಿಗಳನ್ನು ಉದಾಹರಿಸಬಹುದು.
ಈ ಅಪ್ಲಿಕೇಷನ್ ಮೊದಲು ಐಫೋನ್ ಬಳಕೆದಾರರಿಗೆ ಮಾತ್ರ ಲಭ್ಯವಿತ್ತು. ಈಗ ಆಂಡ್ರಾಯ್ಡ್ ಬಳಕೆದಾರರಿಗೆ ಕೂಡ ಸಿಗುತ್ತಿದೆ. ಒಮ್ಮೆ ಒಬ್ಬ ಬಳಕೆದಾರ ಈ ಅಪ್ಲಿಕೇಷನ್ಗೆ ಸೇರಿದ ಅಂತಾದರೆ, ಆ ವ್ಯಕ್ತಿ ಕ್ಲಬ್ ಹೌಸ್ನ ಯಾವುದೇ ‘ರೂಮ್’ಗಳನ್ನು ಸೇರಬಹುದು. ರೂಮ್ಗಳಲ್ಲಿ ಇತರ ಬಳಕೆದಾರರು ಗುಂಪಾಗಿ ಮಾತನಾಡುತ್ತಿರುತ್ತಾರೆ. ಬಳಕೆದಾರ ತನ್ನ ಆಯ್ಕೆಯ, ಆಸಕ್ತಿಯ ಯಾವುದೇ ರೂಮ್ಗೆ ಬೇಕಾದರೂ ಹೋಗಬಹುದು.
ಕ್ಲಬ್ ಹೌಸ್ ಸೇರುವುದು ಹೇಗೆ?
ಇದೊಂದು ಇನ್ವೈಟ್ ಓನ್ಲಿ ಅಪ್ಲಿಕೇಷನ್. ಅದರಂತೆ, ಒಬ್ಬ ಬಳಕೆದಾರ ಮತ್ತಷ್ಟು ಮಂದಿಗೆ ಕ್ಲಬ್ ಹೌಸ್ ಸೇರುವಂತೆ ಆಮಂತ್ರಣ ನೀಡಬಹುದು. ಆ ಲಿಂಕ್ ಮೂಲಕ ಮತ್ತೊಬ್ಬ ಕ್ಲಬ್ ಹೌಸ್ ಸೇರಬಹುದು. ಅಪ್ಲಿಕೇಷನ್ ಗೂಗಲ್ ಪ್ಲೇ ಸ್ಟೋರ್ನಲ್ಲಿ ಲಭ್ಯವಿದೆ. ಡೌನ್ಲೋಡ್ ಮಾಡಿಕೊಳ್ಳಬಹುದು. ಆಮೇಲೆ, ಆಯಾ ವ್ಯಕ್ತಿಯ ಯೂಸರ್ ನೇಮ್ ದಾಖಲು ಮಾಡಿ, ಕ್ಲಬ್ ಹೌಸ್ ಸೇರಲು ಕಾಯಬಹುದು.
ಕಂಪೆನಿ ಸ್ವತಃ ವಿವರಿಸಿದಂತೆ, ಈ ಅಪ್ಲಿಕೇಷನ್ ಹೊಸ ರೀತಿಯ ಸಾಮಾಜಿಕ ಮಾಧ್ಯಮ ಯೋಜನೆಯಾಗಿದೆ. ಇದರಲ್ಲಿ ಕೇವಲ ಆಡಿಯೋ ಮೂಲಕ, ಪರಸ್ಪರ ಮಾತುಕತೆಗಳ ಮೂಲಕ, ಬಳಕೆದಾರರು ಮಾತನಾಡಬಹುದು, ಕಥೆ ಹೇಳಬಹುದು, ಹೊಸ ಐಡಿಯಾಗಳನ್ನು ಬೆಳೆಸಬಹುದು, ಹೊಸ ಗೆಳೆಯರನ್ನು ಪಡೆಯಬಹುದು, ಗೆಳೆತನದ ಬಂಧ ಗಟ್ಟಿಯಾಗಿಸಬಹುದು.
ಕ್ಲಬ್ ಹೌಸ್ನಲ್ಲಿ ಏನೇನಾಗುತ್ತದೆ?
ಒಮ್ಮೆ ಒಬ್ಬ ಬಳಕೆದಾರ ಕ್ಲಬ್ ಹೌಸ್ಗೆ ಪ್ರವೇಶ ಪಡೆದಮೇಲೆ ತಮಗೆ ಬೇಕಾದವರನ್ನು ಫಾಲೋ ಮಾಡಬಹುದು. ವ್ಯಕ್ತಿ, ಯಾವುದೇ ಕ್ಲಬ್, ಗ್ರೂಪ್ ಅಥವಾ ಆಸಕ್ತ ವಿಚಾರಗಳನ್ನು ಫಾಲೋ ಮಾಡಬಹುದು. ಬಳಿಕ ಆಯಾ ಕಾರ್ಯಕ್ರಮಗಳಲ್ಲಿ ಭಾಗವಹಿಸಬಹುದು. ಯಾವುದೇ ಚಾಟ್ ರೂಮ್ನ ಕ್ರಿಯೇಟ್ ಮಾಡಿದವರು ಅಧಿಕಾರಸ್ತರಾಗಿರುತ್ತಾರೆ. ಯಾರು ಬೇಕಾದರೂ ಜಾಯಿನ್ ಆಗಿ ಮಾತು ಕೇಳಬಹುದು. ಆದರೆ, ಯಾರು ಮಾತನಾಡುತ್ತಾರೆ ಎಂಬುದನ್ನು ಗ್ರೂಪ್ ಕ್ರಿಯೇಟ್ ಮಾಡಿದವರು ತೀರ್ಮಾನಿಸುತ್ತಾರೆ. ಅನುಮತಿ ನೀಡುತ್ತಾರೆ.
ಅಪ್ಲಿಕೇಷನ್ನ ಲೋಗೋ ಮೇಲಿರುವ ಫೋಟೊ ಯಾರದ್ದು?
ಈಗ ಎಲ್ಲರಿಗೂ ಮೂಡಿರಬಹುದಾದ ಪ್ರಶ್ನೆ ಮತ್ತು ದೊಡ್ಡ ಕುತೂಹಲ ಎಂದರೆ. ಆ್ಯಪ್ನ ಲೋಗೋದಲ್ಲಿ ಇರುವ ಯುವತಿ ಯಾರು? ಯಾಕೆ ಆಕೆಯ ಫೋಟೊ ಇಲ್ಲಿದೆ? ಇತ್ಯಾದಿ. ಈ ಪ್ರಶ್ನೆಗೂ ಉತ್ತರ ಇಲ್ಲಿ ನೀಡಲಾಗಿದೆ.
ಸದ್ಯ ಕ್ಲಬ್ ಹೌಸ್ ಲೋಗೋ ಮೇಲಿರುವ ಯುವತಿಯ ಫೋಟೊ ಏಷ್ಯನ್ ಅಮೆರಿಕನ್ ಕಲಾವಿದೆ ಹಾಗೂ ಹೋರಾಟಗಾರ್ತಿ ಡ್ರು ಕಟವೊಕ (Drue Kataoka). ಆಕೆ ಆಪ್ನ ಲೋಗೋದಲ್ಲಿ ಸ್ಥಾನ ಪಡೆದ ಮೊದಲ ಏಷಿಯನ್ ಅಮೆರಿಕನ್ ಕಲಾವಿದೆ ಆಗಿದ್ದಾಳೆ ಹಾಗೂ ಈವರೆಗೆ ಕ್ಲಬ್ ಹೌಸ್ ಲೋಗೋದಲ್ಲಿ ಸ್ಥಾನ ಪಡೆದವರಲ್ಲಿ 8ನೇ ವ್ಯಕ್ತಿ ಆಗಿದ್ದಾಳೆ.
ಕಟವೊಕ, ಮಾರ್ಚ್ 2020 ಸಂದರ್ಭದಲ್ಲೇ ಈ ಅಪ್ಲಿಕೇಷನ್ನ ಸದಸ್ಯೆ ಕೂಡ ಆಗಿದ್ದಳು. ಹಾಗೂ ತನ್ನ ಕಲೆಯ ಮೂಲಕ ಏಷಿಯನ್ ವಿರೋಧ ತಡೆಯಲು #StopAsianHate ಮೂಲಕ ಸುಮಾರು 1 ಲಕ್ಷ ಡಾಲರ್ ಧನ ಪೇರಿಸಿದ್ದಳು. ಡಾ. ಬೆರ್ನಿಸ್ ಕಿಂಗ್ ಎಂಬುವವರ ಜತೆಯಾಗಿ ವರ್ಣಭೇದದ ವಿರುದ್ಧ #24HoursofLove ಎಂಬ ಕ್ಲಬ್ ಹೌಸ್ ಕಾರ್ಯಕ್ರಮ ಮಾಡಿದ್ದಳು. ಅಲ್ಲದೆ, ಅಪ್ಲಿಕೇಷನ್ ಅಭಿವೃದ್ಧಿಗೆ ಹಲವು ಸಲಹೆ, ಸೂಚನೆಗಳನ್ನು ಕೂಡ ನೀಡಿದ್ದಳು. ಆ್ಯಪ್ ಮೂಲಕ ಉತ್ತಮ ಯೋಜನೆಗಳಿಗೆ ನಿಧಿ ಸಂಗ್ರಹದಂಥ ಕೆಲಸವನ್ನೂ ಮಾಡಿದ್ದಳು.
ಇದನ್ನೂ ಓದಿ: Clubhouse App: ಕ್ಲಬ್ ಹೌಸ್ ಆ್ಯಪ್ಗೆ ಅಂತೂ ಬಂತು ಬಹು ಬೇಡಿಕೆಯ ಫೀಚರ್; ಗ್ರಾಹಕರ ಆ ಮನವಿ ಏನು?