Clubhouse app: ಕ್ಲಬ್ ಹೌಸ್ ಆ್ಯಪ್ ಈಗ ಭಾರತದಲ್ಲೂ ಲಭ್ಯ; ಏನಿದರ ವೈಶಿಷ್ಟ್ಯ, ಯಾವುದಕ್ಕೆ ಪ್ರಯೋಜನ ಎಂಬ ಮಾಹಿತಿ ಇಲ್ಲಿದೆ
ಭಾರತಕ್ಕೂ ಕಾಲಿಟ್ಟಿದೆ ಕ್ಲಬ್ ಹೌಸ್ ಆ್ಯಪ್. ಇದು ಆಡಿಯೋ ಓನ್ಲಿ ಸೋಷಿಯಲ್ ಮೀಡಿಯಾ ಚಾಟ್. 5000 ಮಂದಿ ತನಕದ ಗುಂಪು ಇದರಲ್ಲಿ ಭಾಗಿ ಆಗಬಹುದು. ಮಾತು ಆಡಬಹುದು ಹಾಗೂ ಕೇಳಿಸಿಕೊಳ್ಳಬಹುದು.
ಕ್ಲಬ್ ಹೌಸ್ ಆಂಡ್ರಾಯಿಡ್ ಆ್ಯಪ್ ಈಗ ಭಾರತದಲ್ಲೂ ಡೌನ್ಲೋಡ್ ಮಾಡಬಹುದಾಗಿದೆ. ಇದೊಂದು ಸೋಷಿಯಲ್ ಆಡಿಯೋ ಆ್ಯಪ್. ಈಗ ವಿಶ್ವದಾದ್ಯಂತ ಗೂಗಲ್ ಸ್ಟೋರ್ ಬಳಕೆದಾರರಿಗೆ ಸಿಗುತ್ತಿದೆ. ಇದರಲ್ಲಿ ದೃಢೀಕರಣ (ವೆರಿಫಿಕೇಷನ್) ಪ್ರಕ್ರಿಯೆ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಅನ್ನೋದು ಹಲವರ ದೂರಾಗಿದೆ. ಪ್ಲೇ ಸ್ಟೋರ್ನಲ್ಲಿನ ರೀವ್ಯೂಸ್ ವಿಭಾಗದಲ್ಲಿನ ಪ್ರಕಾರ, ಸೈನ್ ಅಪ್ ಮಾಡುವುದಕ್ಕೆ ಸಮಸ್ಯೆ ಆಗುತ್ತಿದೆ. ವೆರಿಫಿಕೇಷನ್ ಕೋಡ್ ದೊರೆಯುತ್ತಿಲ್ಲ ಮತ್ತು ಸಂಖ್ಯೆಯನ್ನು ಮರು ನಮೂದಿಸಲು ಮೊಬೈಲ್ನಲ್ಲಿ ಯತ್ನಿಸಿದಾಗ ಅಂಕಿಗಳು ತಪ್ಪಾಗಿವೆ ಅಥವಾ ಇದನ್ನು ಬೆಂಬಲಿಸುವುದಿಲ್ಲ ಎಂದ ಸಂದೇಶ ಬರುತ್ತಿದೆ. ಇನ್ನು iOSನಲ್ಲಿ ಕ್ಲಬ್ ಹೌಸ್ ಇನ್ವೈಟ್- ಓನ್ಲಿ. ಅಂದರೆ ಯಾರಾದರೂ ಆಹ್ವಾನ ನೀಡಿದರಷ್ಟೇ ಸಿಗುತ್ತದೆ. ಇದು ಆಂಡ್ರಾಯಿಡ್ ಬಳಕೆದಾರರಿಗೂ ಮುಂದುವರಿಯಲಿದೆ.
ಸೈನ್ ಅಪ್ ಮಾಡುವುದಕ್ಕೇ ಸಮಸ್ಯೆ ಆಗಿರುವುದರಿಂದ ಗೂಗಲ್ ಪ್ಲೇ ಸ್ಟೋರ್ನಲ್ಲಿ ಕ್ಲಬ್ ಹೌಸ್ ಆ್ಯಪ್ಗೆ 1 ಸ್ಟಾರ್ ರೇಟಿಂಗ್ ಸಿಕ್ಕಿದೆ. ಈ ಆ್ಯಪ್ ಅನ್ನು 1 ಲಕ್ಷಕ್ಕೂ ಹೆಚ್ಚು ಆ್ಯಂಡ್ರಾಯ್ಡ್ ಬಳಕೆದಾರರು ಡೌನ್ಲೋಡ್ ಮಾಡಿದ್ದಾರೆ. ಕೆಲವರು ಸೈನ್ ಅಪ್ಗೆ ಆಹ್ವಾನ ಪಡೆಯಲು ಒದ್ದಾಡುತ್ತಾ ಇದ್ದಾರೆ. ಕ್ಲಬ್ ಹೌಸ್ಗೆ ಲಾಗ್ ಇನ್ ಆಗಬೇಕು ಅಂದರೆ ಮತ್ತೊಬ್ಬ ಬಳಕೆದಾರರಿಂದ ಆಹ್ವಾನ ಬರಬೇಕು. ಇಲ್ಲಿ ಮುಖ್ಯವಾಗಿ ತಿಳಿದುಕೊಳ್ಳಬೇಕಾದದ್ದು ಏನೆಂದರೆ, ಇದು ಕ್ಲಬ್ ಹೌಸ್ನ ಪಬ್ಲಿಕ್ ಡೇಟಾ ವರ್ಷನ್. ಈ ಪ್ಲಾಟ್ಫಾರ್ಮ್ನಿಂದ ಇನ್ನೂ ಆಂಡ್ರಾಯಿಡ್ ಆ್ಯಪ್ಗೆ ಸ್ಥಿರವಾದ ವರ್ಷನ್ ಘೋಷಣೆ ಮಾಡಬೇಕಿದೆ.
ಈ ಕ್ಲಬ್ ಹೌಸ್ ಆ್ಯಪ್ ಅನ್ನು ಎಲಾನ್ ಮಸ್ಕ್, ಮಾರ್ಕ್ ಝುಕರ್ಬರ್ಗ್ ಅಂಥವರು ಬಳಸುತ್ತಿರುವುದರಿಂದ ಜನಪ್ರಿಯತೆ ಹೆಚ್ಚಾಗಿದೆ. ಕ್ಲಬ್ ಹೌಸ್ಗೆ ಆರಂಭದ ವರ್ಷದಲ್ಲೇ ಹತ್ತಾರು ಲಕ್ಷ ಬಳಕೆದಾರರು ಸಿಕ್ಕಿದ್ದಾರೆ. ಸಿಕ್ಕಾಪಟ್ಟೆ ಜನ ಆಡಿಯೋ ಆಧಾರಿಯ ಸೋಷಿಯಲ್ ಅಪ್ಲಿಕೇಷನ್ಗಳಲ್ಲಿ ಆಸಕ್ತರಾಗಿರುವುದರಿಂದ ಹಲವು ಸೋಷಿಯಲ್ ಮೀಡಿಯಾ ಪ್ಲಾಟ್ಫಾರ್ಮ್ಗಳು ತಮ್ಮದೇ ವರ್ಷನ್ನ ಕ್ಲಬ್ ಹೌಸ್ ಅಭಿವೃದ್ಧಿ ಮಾಡುವುದಕ್ಕೆ ಪ್ರಯತ್ನಿಸುತ್ತಿವೆ.
ಫೇಸ್ಬುಕ್ನಿಂದ ಆಡಿಯೋ ಚಾಟ್ ಆಧಾರಿತ ಫೀಚರ್ ಅಭಿವೃದ್ಧಿಗೆ ಪ್ರಯತ್ನ ನಡೆಯುತ್ತಿದೆ. ಅದನ್ನು ಮೆಸೆಂಜರ್ ಆ್ಯಪ್ಗೆ ಸೇರ್ಪಡೆ ಮಾಡಬಹುದು. ಅದೇ ರೀತಿ ಲಿಂಕ್ಡ್ಇನ್ ಕೂಡ ಅದೇ ರೀತಿಯ ಫೀಚರ್ ಮೇಲೆ ಕೆಲಸ ಮಾಡುತ್ತಿದೆ. ಕೆಲವು ಹೆಸರಾಂತ ಸೋಷಿಯಲ್ ಮೀಡಿಯಾ ಪ್ಲಾಟ್ಫಾರ್ಮ್ಗಳು ಈಗಾಗಲೇ ಕ್ಲಬ್ಹೌಸ್ಗೆ ಪರ್ಯಾಯವನ್ನು ತಂದಿವೆ. ಟ್ವಿಟ್ಟರ್ ಸ್ಪೇಸಸ್, ಡಿಸ್ಕಾರ್ಡ್ ಸ್ಟೇಜ್ ಚಾನೆಲ್, ಇನ್ಸ್ಟಾ ಗ್ರಾಮ್ ಲೈವ್ ರೂಮ್ಸ್, ಟೆಲಿಗ್ರಾಮ್ ಕೂಡ ವಾಯ್ಸ್ ಚಾಟ್ಸ್ 2.0 ತಂದಿವೆ.
ಕ್ಲಬ್ ಹೌಸ್ ಆ್ಯಪ್ ಬಗ್ಗೆ ಮಾಹಿತಿಯನ್ನು ಹುಡುಕಿದರೆ, ಇದು ಇನ್ವಿಟೇಷನ್ ಓನ್ಲಿ ಸೋಷಿಯಲ್ ಮೀಡಿಯಾ ಆ್ಯಪ್ ಅಂತಲೇ ಮಾಹಿತಿ ಸಿಗುತ್ತದೆ. ಇದರ ಮೂಲಕವಾಗಿ ಚಾಟ್ ರೂಮ್ಗಳಲ್ಲಿ ಬಳಕೆದಾರರು ಧ್ವನಿಯ ಮೂಲಕ ಸಂವಹನ ನಡೆಸಬಹುದು. ಇದರಲ್ಲಿ 5000 ಮಂದಿಯ ತನಕ ಒಂದು ಗುಂಪಾಗಿ ಚಾಟಿಂಗ್ಗೆ ಅವಕಾಶ ಇದೆ. ಇದು ಆಡಿಯೋ- ಓನ್ಲಿ ಆ್ಯಪ್. ನೇರ ಮಾತುಕತೆಗಳನ್ನು ಆಯೋಜಿಸುವುದಕ್ಕೆ ಈ ಪ್ಲಾಟ್ಫಾರ್ಮ್ ಬಳಸಿಕೊಳ್ಳಬಹುದು. ಮಾತನಾಡುವ ಹಾಗೂ ಕೇಳಿಸಿಕೊಳ್ಳುವ ಮೂಲಕ ಇದರಲ್ಲಿ ಭಾಗವಹಿಸಬಹುದು. ಈ ಆ್ಯಪ್ನಲ್ಲಿ ನಡೆಯುವ ಸಂಭಾಷಣೆಗಳ ರೆಕಾರ್ಡ್ ಮಾಡುವುದಕ್ಕೆ, ದಾಖಲಿಸುವುದಕ್ಕೆ, ಮತ್ತೊಮ್ಮೆ ಪ್ರಸಾರ ಮಾಡುವುದಕ್ಕೆ ಅವಕಾಶ ಇಲ್ಲ. ಆದ್ದರಿಂದ ಬೆದರಿಕೆ, ಜನಾಂಗೀಯ ನಿಂದನೆ ಇಂಥದ್ದು ಆಗಬಹುದು. ಆಗ ದೂರು ನೀಡಲು ಸಾಧ್ಯವಿಲ್ಲ ಎಂಬ ಆರೋಪ ಇದೆ. ಇನ್ನು ಈ ಆ್ಯಪ್ನ ಮೂಲದಲ್ಲೇ ಖಾಸಗಿತನ ಕಾಯ್ದುಕೊಳ್ಳುವುದರೂ ಸಮಸ್ಯೆ ಇದ್ದು, ಒಮನ್, ಜೋರ್ಡಾನ್, ಚೀನಾದಂಥ ದೇಶಗಳು ಈ ಆ್ಯಪ್ನ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಿವೆ.
ಇದನ್ನೂ ಓದಿ: Audio- Only Forum Hotline: ಫೇಸ್ಬುಕ್ನಿಂದ ಲೈವ್ ಆಡಿಯೋ ಹಾಟ್ಲೈನ್ ಪ್ರಯೋಗ; ಇದೇನು, ಎತ್ತ?
(Clubhouse audio only chat app now available in India. Know the features and other details of this app)