Audio- Only Forum Hotline: ಫೇಸ್ಬುಕ್ನಿಂದ ಲೈವ್ ಆಡಿಯೋ ಹಾಟ್ಲೈನ್ ಪ್ರಯೋಗ; ಇದೇನು, ಎತ್ತ?
ಫೇಸ್ಬುಕ್ನಿಂದ ಆಡಿಯೋ- ಓನ್ಲಿ ಫೋರಂ "ಹಾಟ್ಲೈನ್" ಅನ್ನು ಪ್ರಾಯೋಗಿಕವಾಗಿ ಆರಂಭಿಸಲಾಗಿದೆ. ಏನಿದು ಅಪ್ಲಿಕೇಷನ್, ಇದರ ಪ್ರಯೋಜನ ಹಾಗೂ ವಿಶೇಷಗಳೇನು ಎಂಬ ವಿವರ ಇಲ್ಲಿದೆ.
ಫೇಸ್ಬುಕ್ನಿಂದ ಬುಧವಾರದಂದು ಪ್ರಾಯೋಗಿಕವಾಗಿ ಹಾಟ್ಲೈನ್ ಎಂಬ ಆನ್ಲೈನ್ ಫೋರಂ ಆರಂಭಿಸಲಾಗಿದೆ. ಈಗಾಗಲೇ ಕ್ಲಬ್ಹೌಸ್ ಹೆಸರಿನಲ್ಲಿ ಶುರುವಾಗಿರುವ ಇಂಥದ್ದೇ ಲೈವ್ ಆಡಿಯೋ ಟ್ರೆಂಡ್ ಜನಪ್ರಿಯವಾಗಿದ್ದು, ಅದಕ್ಕೆ ಸ್ಪರ್ಧೆ ನೀಡಲು ಫೇಸ್ಬುಕ್ ಪ್ರಯತ್ನ ಆರಂಭಿಸಿದೆ. ಆಡಿಯೋ- ಓನ್ಲಿ (ಧ್ವನಿ- ಮಾತ್ರ) ಆನ್ಲೈನ್ ಪ್ರತಿಸ್ಪರ್ಧಿಯಿಂದ ತನ್ನ ಬಳಕೆದಾರರನ್ನು ಉಳಿಸಿಕೊಳ್ಳುವುದು ಫೇಸ್ಬುಕ್ಗೆ ಸವಾಲಾಗಿ ಪರಿಣಮಿಸಿದೆ. ರೆಡ್ಇಟ್ನ ಆಸ್ಕ್ ಮಿ ಎನಿಥಿಂಗ್ ಸೆಷನ್ಸ್ ಮತ್ತು ಕ್ಲಬ್ಹೌಸ್ಗೆ ಫೇಸ್ಬುಕ್ನ ಈಗಿನ ಅಪ್ಲಿಕೇಷನ್ ಸವಾಲು ಒಡ್ಡಲು ರೂಪಿಸುತ್ತಿರುವಂತಿದೆ.
ಆಡಿಯೋ- ಓನ್ಲಿ ಸಾಮಾಜಿಕ ಮಾಧ್ಯಮದ ಕೌತುಕವು ವರ್ಷದ ಹಿಂದೆ ಶುರುವಾಗಿದ್ದು, ಕೊರೊನಾ ಬಿಕ್ಕಟ್ಟಿನ ವೇಳೆಯಲ್ಲಿ ಭಾರೀ ಪ್ರಚಾರ ಗಿಟ್ಟಿಸಿದೆ. ಹಾಟ್ಲೈನ್ ಎಂಬುದು ಬಳಕೆದಾರರಿಗೆ ಧ್ವನಿ, ಟೆಕ್ಸ್ಟ್, ವಿಡಿಯೋ ಇವೆಲ್ಲವುಗಳ ಮೂಲಕ ಆಯೋಜಕರೊಂದಿಗೆ ಆನ್ಲೈನ್ನಲ್ಲಿ ಚರ್ಚೆಯಲ್ಲಿ ಭಾಗವಹಿಸುವುದಕ್ಕೆ ಅವಕಾಶ ನೀಡುತ್ತದೆ. ಬಳಕೆದಾರರು ಬರವಣಿಗೆಯಲ್ಲೂ ಪ್ರಶ್ನೆ ಕೇಳಬಹುದು. ಕ್ಲಬ್ಹೌಸ್ನಲ್ಲಿ ಇದು ಸಾಧ್ಯವಿಲ್ಲ. ಇದರ ಜತೆಗೆ ಭಾಷಣಕಾರರು ವೇದಿಕೆ ಮೇಲೆ ಯಾರು ಮಾತನಾಡಬೇಕು ಎಂದು ಕೂಡ ಆಯ್ಕೆ ಮಾಡಿಕೊಳ್ಳಬಹುದು.
ಸಂವಾದದಂತೆ, ಲೈವ್ ಮಲ್ಟಿಮೀಡಿಯಾ ಪ್ರಶ್ನೋತ್ತರದಂತೆ ತಮ್ಮ ಉದ್ಯಮವನ್ನು ಕಟ್ಟಲು ವೃತ್ತಿಪರ ಕೌಶಲ ಕಲಿಯುವುದಕ್ಕೆ ಹಾಟ್ಲೈನ್ ಮೂಲಕವಾಗಿ ಪ್ರಶ್ನೋತ್ತರ ಸಹಾಯ ಮಾಡಲಿದೆ ಎಂಬ ಭರವಸೆ ನಮ್ಮದು ಎಂದು ಫೇಸ್ಬುಕ್ ವಕ್ತಾರೆ ಮಾಧ್ಯಮ ಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ. ಸೆಷನ್ನಲ್ಲಿ ಭಾಗವಹಿಸಿದವರು ವೆಬ್ ಕ್ಯಾಮೆರಾಗಳನ್ನು ಬಳಸುವುದಕ್ಕೆ ಅವಕಾಶ ಇದೆ. ಟೆಕ್ಸ್ಟ್ ಚಾಟ್ಗಳಿಂದ ಬೈಗುಳ, ಬೆದರಿಕೆ ಸಂದೇಶಗಳನ್ನು ತೆಗೆದುಹಾಕಬಹುದು ಎಂದು ಫೇಸ್ಬುಕ್ ತಿಳಿಸಿದೆ.
ಫೇಸ್ಬುಕ್ ಸಿಬ್ಬಂದಿ ಹಾಟ್ಲೈನ್ ಕಾರ್ಯಕ್ರಮಗಳನ್ನು ನಿಗಾ ಮಾಡುತ್ತಾರೆ. ಯಾರು ನಿಯಮ ಉಲ್ಲಂಘನೆ ಮಾಡುತ್ತಾರೋ ಅಂಥವರನ್ನು ಹೊರಹಾಕಲಾಗುತ್ತದೆ ಎಂದು ಟೆಕ್ಕ್ರಂಚ್ ವರದಿ ಮಾಡಿದೆ. ಫೇಸ್ಬುಕ್ನಿಂದ ಇತರ ಹಲವು ಪ್ಲಾಟ್ಫಾರ್ಮ್ಗಳನ್ನು ಪರೀಕ್ಷಿಸುತ್ತಿರುವುದಾಗಿ ಕಂಪೆನಿಯ ವಕ್ತಾರೆ ಹೇಳಿದ್ದಾರೆ. ಪ್ರಶ್ನೋತ್ತರ ಪ್ರಾಡಕ್ಟ್ ವೆನ್ಯೂ, ಸಂಗೀತ ಅಪ್ಲಿಕೇಷನ್ ಕೊಲಾಬ್ ಮತ್ತು ಟಿಕ್ಟಾಕ್ನಂತೆ ಇರುವ ಬಾರ್ಸ್ ಪರೀಕ್ಷೆ ನಡೆಸುತ್ತಿದೆ.
ಇನ್ನು ಆಡಿಯೋ ಕಾಲಿಂಗ್ ಅಪ್ಲಿಕೇಷನ್ ಕ್ಯಾಚ್ಅಪ್ ಪರೀಕ್ಷೆ ಕಳೆದ ವರ್ಷ ಮುಕ್ತಾಯ ಆಗಿದೆ. ಝೂಮ್ ವಿಡಿಯೋ ಕಾನ್ಫರೆನ್ಸಿಂಗ್ ಸರ್ವೀಸ್ ಮತ್ತು ಕ್ಲಬ್ಹೌಸ್ ಯಶಸ್ಸಿನ ನಂತರದಲ್ಲಿ ಫೇಸ್ಬುಕ್ನಿಂದ ತನ್ನ ಮುಖ್ಯ ಸೈಟ್, ಅದರ ಸಹೋದರ ಸಂಸ್ಥೆ ಇನ್ಸ್ಟಾಗ್ರಾಮ್ನಲ್ಲಿ ಲೈವ್ ವಿಡಿಯೋ ಮತ್ತು ಆಡಿಯೋ ಸಾಮರ್ಥ್ಯ ಹೆಚ್ಚಿಸಿದೆ.
ಇದನ್ನೂ ಓದಿ: 13 ವರ್ಷದ ಒಳಗಿನ ಮಕ್ಕಳು ಕೂಡ ಇನ್ಸ್ಟಾಗ್ರಾಂ ಖಾತೆ ತೆರೆಯಬಹುದು.. ಫೇಸ್ಬುಕ್ನಿಂದ ಹೊಸ ಆ್ಯಪ್ ಲಾಂಚ್ ಸಾಧ್ಯತೆ
(Social media giant Facebook has experimentally launched audio-only forum Hotline on Wednesday.)
Published On - 5:10 pm, Thu, 8 April 21