ವಿಶ್ವದಲ್ಲಿ ಸೈಬರ್ ಕ್ರೈಮ್ (Cyber Fraud) ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಪ್ರತಿದಿನ ಹೊಸ ಹೊಸ ಪ್ರಕರಣಗಳು ವರದಿ ಆಗುತ್ತಲೇ ಇದೆ. ಸೈಬರ್ ವಂಚಕರು ಮೋಸ ಮಾಡಲು ಒಂದಲ್ಲ ಒಂದು ಹೊಸ ಮಾರ್ಗಗಳನ್ನು ಕಂಡುಹಿಡಿಯುತ್ತಿದ್ದಾರೆ. ಅನಾಮಿಕರ ಮಾತು ನಂಬಿ ಒಟಿಪಿ (OTP) ನಂಬರ್ ಹೇಳುತ್ತಿದ್ದಂತೆ ಬ್ಯಾಂಕ್ ಖಾತೆಯಲ್ಲಿದ್ದ ಹಣ ಮಂಗ ಮಾಯವಾದ ಸುದ್ದಿ ಹರಿದಾಡುತ್ತಲೇ ಇದೆ. ವಿದ್ಯುತ್ ಬಿಲ್, ಓಟಿಪಿ, ಕ್ರೆಡಿಟ್ ಕಾರ್ಡ್ ಸ್ಕ್ಯಾಮ್, ಮಿಸ್ಡ್‌ಕಾಲ್ (Missed Call) ಕೊಡುವ ಮೂಲಕ ಫೋನ್‌ಗೆ ಸಿಮ್ ಸ್ವ್ಯಾಪ್ ಮಾಡಿ ಹಣ ದೋಚಿಕೊಳ್ಳುತ್ತಿದ್ದಾರೆ. ಇದೀಗ ಗುರುಗ್ರಾಮ ಮಹಿಳೆ ಬ್ಯಾಂಕ್ ಎಸ್ಎಮ್ಎಸ್ ಮೇಲೆ ಕ್ಲಿಕ್ ಮಾಡಿ 1 ಲಕ್ಷ ರೂಪಾಯಿ ಕಳೆದುಕೊಂಡ ಘಟನೆ ವರದಿ ಆಗಿದೆ.
ಪಿಟಿಐ ಮಾಡಿರುವ ವರದಿಯ ಪ್ರಕಾರ, ಗುರುಗ್ರಾಮದಲ್ಲಿ ವಾಸಿಸುತ್ತಿರುವ ಮಾಧ್ವಿ ದತ್ತಾ ಎಂಬ ಮಹಿಳೆಗೆ ಜನವರಿ 21 ರಂದು ಇನ್ಬಾಕ್ಸ್ಗೆ ಒಂದು ಎಸ್ಎಮ್ಎಸ್ ಬಂದಿದೆ. ”ನಿಮ್ಮ ಹೆಚ್ಡಿಎಫ್ಸಿ ಖಾತೆಯ ಅವದಿ ಇಂದಿಗೆ ಮುಕ್ತಾಯಗೊಳ್ಳುತ್ತದೆ, ತಕ್ಷಣವೆ ಇಲ್ಲಿ ಕ್ಲಿಕ್ ಮಾಡುವ ಮೂಲಕ ನಿಮ್ಮ ಮೊಬೈಲ್ ನಂಬರ್ ಮತ್ತು ಪಾನ್ ಕಾರ್ಡ್ ನಂಬರ್ಗೆ ಲಿಂಕ್ ಮಾಡಿ”, ಎಂಬ ಸಂದೇಶ ಬಂದಿದೆ. ಇದು ಬ್ಯಾಂಕ್ನಿಂದ ಬಂದ ಮೆಸೇಜ್ ಎಂದು ನಂಬಿದ ಮಹಿಳೆ ಲಿಂಕ್ ತೆರೆದ ತಕ್ಷಣ ಒಂದು ವೆಬ್ ಪೇಜ್ ಓಪನ್ ಆಗಿದೆ. ಅಲ್ಲಿರುವ ಮಾಹಿತಿಯನ್ನು ಭರ್ತಿ ಮಾಡಿದ್ದಾರೆ. ನಂತರ ಓಟಿಪಿ ಹಾಕುವಂತೆ ಸೂಚಿಸಲಾಗಿದೆ. ಮಹಿಳೆ ಓಟಿಪಿ ಹಾಕಿದ ತಕ್ಷಣ ಖಾತೆಯಿಂದ 1 ಲಕ್ಷ ರೂ. ಕಳೆದುಕೊಂಡಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಹಿಳೆ, ”ನಾನು ಓಟಿಪಿ ಹಾಕಿದ ತಕ್ಷಣ 1 ಲಕ್ಷ ರೂಪಾಯಿ ನನ್ನ ಖಾತೆಯಿಂದ ಕಳೆದುಕೊಂಡಿದ್ದೇನೆ. ಕೂಡಲೆ ಸೈಬಲ್ ಸಹಾಯವಾಣಿ 1930 ಗೆ ಕರೆ ಮಾಡಿದೆ. ಆದರೆ, ಅವರು ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಬಳಿಕ ಸೈಬಲ್ ಠಾಣೆಗೆ ತೆರಳಿ ದೂರು ನೀಡಿದೆ,” ಎಂದು ಹೇಳಿದ್ದಾರೆ.
iPhone 14 Plus: ಐಫೋನ್ ಖರೀದಿಗೆ ಇದೇ ಬೆಸ್ಟ್ ಟೈಮ್: ಐಫೋನ್ 14 ಪ್ಲಸ್ ಮೇಲೆ ಬಂಪರ್ ಡಿಸ್ಕೌಂಟ್
ಇತ್ತೀಚೆಗಷ್ಟೆ ಮುಂಬೈ ಮೂಲದ ರಾಮ್ಸಿಂಗ್ ರಜಪೂತ್ ಎಂಬ 29 ವರ್ಷದ ವ್ಯಕ್ತಿ ಕೂಡ ಸೈಬರ್ ವಂಚನೆಗೆ ಗುರಿಯಾಗಿದ್ದರು. ಕೋಟಕ್ ಮಹೀಂದ್ರ ಕ್ರೆಡಿಟ್ ಕಾರ್ಡ್ನಲ್ಲಿ ಹಣವನ್ನು ಹೆಚ್ಚಿಸುವ ಆಮೀಷ ಒಡ್ಡಿ ಬಂದ ಕರೆಯಿಂದ ಇವರು 22,396 ರೂ. ಕಳೆದುಕೊಂಡಿದ್ದರು. ಜನವರಿ 15 ರಂದು ಪ್ರಿಯಾಂಕ ಧರ್ಮಾ ಎಂಬವರಿಂದ ರಾಮ್ಸಿಂಗ್ಗೆ ಕರೆಯೊಂದು ಬರುತ್ತದೆ. ನಿಮ್ಮ ಕ್ರೆಡಿಟ್ ಕಾರ್ಡ್ ಲಿಮಿಟ್ ಅನ್ನು ಹೆಚ್ಚಿಸಲಾಗುತ್ತದೆ ಎಂದು ಹೇಳುತ್ತಾರೆ. ಇದನ್ನು ನಂಬಿದ ರಾಮ್ಸಿಂಗ್ ತನಗೆ ಬಂದ ಒಟಿಪಿ ಅನ್ನು ಕರೆ ಮಾಡಿದವರೊಂದಿಗೆ ಹಂಚಿಕೊಂಡಿದ್ದಾರೆ. ಇದಾದ ತಕ್ಷಣ ತನ್ನ ಖಾತೆಯಲ್ಲಿದ್ದ ಹಣವನ್ನು ರಾಮ್ಸಿಂಗ್ ಕಳೆದುಕೊಂಡಿದ್ದಾರೆ.
ಆಗಸ್ಟ್ 2019 ರಿಂದ ಡಿಸೆಂಬರ್ 12, 2022 ರವರೆಗೆ ಭಾರತದಲ್ಲಿ ಸೈಬರ್ ವಂಚನೆಯ 6 ಲಕ್ಷಕ್ಕೂ ಅಧಿಕ ದೂರುಗಳು ದಾಖಲಾಗಿವೆ. 1 ಲಕ್ಷದ 11 ಸಾವಿರ ದೂರುಗಳಲ್ಲಿ 188 ಸಾವಿರ ಕೋಟಿ ರೂಪಾಯಿ ವಂಚನೆಯಿಂದ ಉಳಿಸಲಾಗಿದೆ. ಯಾರಾದರೂ ಸೈಬರ್ ವಂಚನೆ ಮೂಲಕ ಹಣ ಕಳೆದುಕೊಂಡರೆ ತಕ್ಷಣ ಪೊಲೀಸ್ ಕಂಟ್ರೋಲ್ ರೂಂ ಸಂಖ್ಯೆಯಾದ 1930ಕ್ಕೆ ಕರೆ ಮಾಡಿ ವಿಷಯ ತಿಳಿಸಿದರೆ ಸೈಬರ್ ಕ್ರೈಂ ವಿಭಾಗದ ಸಿಬ್ಬಂದಿ ಪ್ರಕರಣ ದಾಖಲಿಸಿಕೊಂಡು, ಕೆಲವೇ ನಿಮಿಷಗಳಲ್ಲಿ ನಿಮ್ಮ ಮಾಹಿತಿಯನ್ನು ಆಧರಿಸಿ ನಿಮ್ಮ ಬ್ಯಾಂಕ್ ಖಾತೆಯನ್ನು ಬ್ಲಾಕ್ ಮಾಡುತ್ತಾರೆ. ಇದರಿಂದ ನಿಮ್ಮ ಖಾತೆಯಿಂದ ಬೇರೆಯವರಿಗೆ ಹಣ ಡ್ರಾ ಮಾಡಲು ಸಾಧ್ಯವಾಗುವುದಿಲ್ಲ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:22 pm, Mon, 30 January 23