Google Algorithm: ಹುಡುಕು ಪದದಿಂದ ಫಟಾಫಟ್ ಫಲಿತಾಂಶ, ಗೂಗಲ್ ಸರ್ಚ್ ಎಂಜಿನ್ ಹೇಗೆ ಕೆಲಸ ಮಾಡುತ್ತೆ?
Google Search Engine: ಗೂಗಲ್, ಯಾಹೂ, ಬಿಂಗ್ ಮೊದಲಾದ ಸರ್ಚ್ ಎಂಜಿನ್ಗಳು ಆಲ್ಗಾರಿದಂ (Algorithm) ಮೇಲೆ ಕಾರ್ಯನಿರ್ವಹಿಸುತ್ತವೆ. ಗೂಗಲ್ ಸರ್ಚ್ ಎಂಜಿನ್ ಸ್ಪೈಡರ್ಸ್ (spiders) ಅಥವಾ ಕ್ರಾಲರ್ಸ್ (crawlers) ಎಂದು ಕರೆಯಲ್ಪಡುವ ಸ್ವಯಂಚಾಲಿತ ಪ್ರೋಗ್ರಾಂಗಳನ್ನು (automated programmes) ಬಳಸುತ್ತದೆ.
ಗೂಗಲ್ ಸರ್ಚ್ ಎಂಜಿನ್ನಲ್ಲಿ Ugliest language in India ಎಂದು ಸರ್ಚ್ ಮಾಡಿದಾಗ Kannada ಎಂಬ ಉತ್ತರ ಸಿಗುತ್ತಿತ್ತು. ಆದಾಗ್ಯೂ ಗೂಗಲ್‌ನ ಉತ್ತರ ಹೀಗಿತ್ತು: ‘ಭಾರತದ ಅತ್ಯಂತ ಕೊಳಕು ಭಾಷೆ ಯಾವುದು? ಇದಕ್ಕೆ ಉತ್ತರ – ಕನ್ನಡ. ದಕ್ಷಿಣ ಭಾರತದಲ್ಲಿ ಸುಮಾರು 40 ದಶಲಕ್ಷ ಜನರು ಮಾತನಾಡುವ ಭಾಷೆ ಇದು’. Debtconsolidationsquad.com ಹೆಸರಿನ ವೆಬ್‌ಸೈಟ್‌ನಲ್ಲಿನ ಪುಟದಿಂದ ಗೂಗಲ್ ಈ ಉತ್ತರವನ್ನು ಎತ್ತಿಕೊಂಡಿದ್ದು, ಗೂಗಲ್‌ನ ಈ ಸರ್ಚ್ ರಿಸಲ್ಟ್ ಅನ್ನು ಫೀಡ್ಬ್ಯಾಕ್ ಮೂಲಕ ರಿಪೋರ್ಟ್ ಮಾಡಿದ ಕಾರಣ ಈಗ ಆ ಪೇಜ್ ಇಲ್ಲದಾಗಿದೆ.
ನಿಮಗೆ ನೆನಪಿರಬಹುದು ಈ ಹಿಂದೆ best toilet paper in the world ಎಂದು ಸರ್ಚ್ ಮಾಡಿದಾಗ ಪಾಕಿಸ್ತಾನದ ಧ್ವಜ, Bhikari ಎಂದು ಸರ್ಚ್ ಮಾಡಿದಾಗ ಪಾಕ್ ಪ್ರಧಾನಿ ಇಮ್ರಾನ್ ಖಾನ್, Feku ಎಂದು ಸರ್ಚ್ ಮಾಡಿದರೆ ನರೇಂದ್ರ ಮೋದಿ, Pappu ಎಂದು ಸರ್ಚ್ ಮಾಡಿದಾಗ ರಾಹುಲ್ ಗಾಂಧಿ, idiot ಎಂದು ಸರ್ಚ್ ಮಾಡಿದಾಗ ಡೊನಾಲ್ಡ್ ಟ್ರಂಪ್ ಚಿತ್ರ ಡಿಸ್ಪ್ಲೇ ಆಗುತ್ತಿತ್ತು. ಇದೆಲ್ಲವೂ ಗೂಗಲ್ ಕರಾಮತ್ತು ಅಲ್ಲ. ಆದರೆ ಪ್ರತಿದಿನ ಗೂಗಲ್ ಬಳಸುವ ಹಲವರಿಗೂ ಈ ವಿಷಯ ಗೊತ್ತಿಲ್ಲ. ಗೂಗಲ್ ಎಂಬುದು ಒಂದು ಸರ್ಚ್ ಎಂಜಿನ್. ಕನ್ನಡದಲ್ಲಿ ನಾವು ಹುಡುಕುತಾಣ ಅನ್ನೋಣ. ಗೂಗಲ್ ಸರ್ಚ್ ಎಂಜಿನ್ ಹುಡುಕು ಪದಗಳ (Search Word) ಆಧಾರದ ಮೇಲೆ ವೆಬ್ ಪೇಜ್ಗಳನ್ನು ತೋರಿಸುತ್ತದೆ.
ಗೂಗಲ್ ಸರ್ಚ್ ಎಂಜಿನ್ ಕಾರ್ಯ ನಿರ್ವಹಿಸುತ್ತಿರುವುದು ಹೇಗೆ? ಗೂಗಲ್, ಯಾಹೂ, ಬಿಂಗ್ ಮೊದಲಾದ ಸರ್ಚ್ ಎಂಜಿನ್ಗಳು ಆಲ್ಗಾರಿದಂ (Algorithm) ಮೇಲೆ ಕಾರ್ಯನಿರ್ವಹಿಸುತ್ತವೆ. ಗೂಗಲ್ ಸರ್ಚ್ ಎಂಜಿನ್ ಸ್ಪೈಡರ್ಸ್ (spiders) ಅಥವಾ ಕ್ರಾಲರ್ಸ್ (crawlers) ಎಂದು ಕರೆಯಲ್ಪಡುವ ಸ್ವಯಂಚಾಲಿತ ಪ್ರೋಗ್ರಾಂಗಳನ್ನು (automated programme) ಬಳಸುತ್ತದೆ. ಇದು ಹುಡುಕುಪದಗಳ (key words) ಬೃಹತ್ ಸೂಚಿ (Index) ಹೊಂದಿದೆ. ಹುಡುಕಾಟ ಸೂಚ್ಯಂಕದಲ್ಲಿ ವೆಬ್‌ಪುಟಗಳು ಮತ್ತು ಸಾರ್ವಜನಿಕವಾಗಿ ಲಭ್ಯವಿರುವ ಇತರ ವಿಷಯಗಳಿಂದ ಮಾಹಿತಿಯನ್ನು ಒಪ್ಪವಾಗಿ ಒಂದೆಡೆ ಜೋಡಿಸಿಕೊಡಲು, ಸಂಘಟಿಸಲು ಗೂಗಲ್ ವೆಬ್ ಕ್ರಾಲರ್‌ಗಳನ್ನು ಬಳಸುತ್ತದೆ. ಬಳಕೆದಾರರಿಗೆ ಉಪಯುಕ್ತ ಮತ್ತು ಸಂಬಂಧಿತ ಫಲಿತಾಂಶಗಳನ್ನು ನೀಡಲು ಗೂಗಲ್ ಶ್ರೇಯಾಂಕ ವ್ಯವಸ್ಥೆಗಳು (Ranking) Search indexನಲ್ಲಿರುವ ಶತಕೋಟಿ ವೆಬ್‌ಪುಟಗಳ ಮೂಲಕ ಕ್ರಮೀಕರಿಸುತ್ತವೆ. ಆದ್ದರಿಂದ ಆರಂಭದಲ್ಲಿ ಜನರು ‘Ugliest language’ ಮತ್ತು ‘Kannada’ ಎಂಬ ಪದವನ್ನು ಒಟ್ಟಿಗೆ ಹುಡುಕಿದರೆ, ಗೂಗಲ್‌ನ ಆಲ್ಗಾರಿದಂ ಆ ಪದಗಳನ್ನು (ಒಟ್ಟಿಗೆ) ತಮ್ಮ ಕೀವರ್ಡ್ ಡೇಟಾಬೇಸ್ಗೆ ಸೇರಿಸಿಕೊಳ್ಳುತ್ತದೆ.
ಒಂದೇ ಪ್ರಶ್ನೆಯನ್ನು ಹೆಚ್ಚು ಹೆಚ್ಚು ಜನರು ಹುಡುಕುತ್ತಿದ್ದಂತೆ ಹುಡುಕಾಟ ಪದಗಳು ಹೆಚ್ಚು ಪ್ರಸ್ತುತವಾಗುತ್ತವೆ. ಅದರ ಆಲ್ಗಾರಿದಂ ಸಹಾಯದಿಂದ, ಜನರು ಹುಡುಕುತ್ತಿರುವ ಮಾಹಿತಿಯನ್ನು ತ್ವರಿತವಾಗಿ ಕಂಡುಹಿಡಿಯಲು ಜನರಿಗೆ ಸಹಾಯ ಮಾಡಲು ಲೇಖನಗಳು ಮತ್ತು ಚಿತ್ರಗಳ ಮೂಲಕ ಹುಡುಕಾಟ ಫಲಿತಾಂಶಗಳನ್ನು ಗೂಗಲ್ ನೀಡುತ್ತದೆ.
ಸರ್ಚ್ ಆಲ್ಗಾರಿದಂ ಹೇಗೆ ಕೆಲಸ ಮಾಡುತ್ತದೆ? ಗೂಗಲ್ ಪುಟದಲ್ಲಿ ನೀಡಿರುವ ವಿವರಣೆಯ ಪ್ರಕಾರ, ಈ Ranking Systems ಹಲವು ಆಲ್ಗಾರಿದಂಗಳ ಸರಣಿಯಿಂದ ಕೂಡಿದೆ. ನಿಮಗೆ ಹೆಚ್ಚು ಉಪಯುಕ್ತ ಮಾಹಿತಿಯನ್ನು ನೀಡಲು, ನಿಮ್ಮ ಪ್ರಶ್ನೆಯ ಪದಗಳು, ಪುಟಗಳ ಪ್ರಸ್ತುತತೆ ಮತ್ತು ಉಪಯುಕ್ತತೆ, ಮೂಲಗಳ ಪರಿಣತಿ ಮತ್ತು ನಿಮ್ಮ ಸ್ಥಳ ಮತ್ತು ಸೆಟ್ಟಿಂಗ್‌ಗಳು ಸೇರಿದಂತೆ ಹಲವು ಅಂಶಗಳನ್ನು ಸರ್ಚ್ ಆಲ್ಗಾರಿದಂ ಪರಿಗಣಿಸುತ್ತದೆ. ನಿಮ್ಮ ಪ್ರಶ್ನೆಯ ಸ್ವರೂಪವನ್ನು ಅವಲಂಬಿಸಿ ಪ್ರತಿಯೊಂದು ಅಂಶಕ್ಕೂ ಅನ್ವಯವಾಗುವ ನಿರೂಪಣೆ ಬದಲಾಗುತ್ತದೆ. ಉದಾಹರಣೆಗೆ, ಪ್ರಸ್ತುತ ಸುದ್ದಿ ವಿಷಯಗಳ ಕುರಿತ ಪ್ರಶ್ನೆಗಳಿಗೆ ಉತ್ತರಿಸುವಲ್ಲಿ ವಿಷಯದ ತಾಜಾತನವು ದೊಡ್ಡ ಪಾತ್ರವನ್ನು ವಹಿಸುತ್ತದೆ.
ಸರ್ಚ್ ಆಲ್ಗಾರಿದಂ ಪ್ರಸ್ತುತತೆ ಮತ್ತು ಉನ್ನತ ಗುಣಮಟ್ಟವನ್ನು ಪೂರೈಸುತ್ತವೆಯೇ ಎಂದು ಖಚಿತಪಡಿಸಿಕೊಳ್ಳಲು, ನಾವು ಕಠಿಣ ಪ್ರಕ್ರಿಯೆಯನ್ನು ಹೊಂದಿದ್ದೇವೆ. ಇದು ಲೈವ್ ಪರೀಕ್ಷೆಗಳು ಮತ್ತು ವಿಶ್ವದಾದ್ಯಂತ ಸಾವಿರಾರು ಬಾಹ್ಯ ಹುಡುಕಾಟ ಗುಣಮಟ್ಟದ ರೇಟರ್‌ಗಳನ್ನು (Quality Raters )ಒಳಗೊಂಡಿರುತ್ತದೆ. ಈ ರೇಟರ್‌ಗಳು ಸರ್ಚ್ ಅಲ್ಗಾರಿದಂಗಾಗಿ ನಮ್ಮ ಗುರಿಗಳನ್ನು ವ್ಯಾಖ್ಯಾನಿಸುವ ಕಟ್ಟುನಿಟ್ಟಾದ ಮಾರ್ಗಸೂಚಿಗಳನ್ನು ಅನುಸರಿಸುತ್ತವೆ. ಇವು ಸಾರ್ವಜನಿಕವಾಗಿ ಲಭ್ಯವಿದೆ ಎಂದು ಗೂಗಲ್ ಹೇಳುತ್ತದೆ.
ಇದನ್ನೂ ಓದಿ: Queen of all Languages ಎಂದು ಗೂಗಲ್ ಸರ್ಚ್ ಮಾಡಿದರೆ ಉತ್ತರವೇನು ಗೊತ್ತಾ?
(Google Algorithm how search engine giant Google will works and what are its functionalities details in Kannada)