ಲಾರಾ ವಿಶ್ವ ದಾಖಲೆ ಮುರಿಯದಿರಲು ಕಾರಣ ತಿಳಿಸಿದ ಮುಲ್ಡರ್
Zimbabwe vs South Africa, 2nd Test: ಝಿಂಬಾಬ್ವೆ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸೌತ್ ಆಫ್ರಿಕಾ ತಂಡವು 5 ವಿಕೆಟ್ ನಷ್ಟಕ್ಕೆ 626 ರನ್ಗಳಿಸಿ ಡಿಕ್ಲೇರ್ ಘೋಷಿಸಿದೆ. ಇದಕ್ಕುತ್ತರವಾಗಿ ಬ್ಯಾಟ್ ಬೀಸಿದ ಝಿಂಬಾಬ್ವೆ ತಂಡವು ಮೊದಲ ಇನಿಂಗ್ಸ್ನಲ್ಲಿ 171 ರನ್ಗಳಿಸಿ ಆಲೌಟ್ ಆಗಿದ್ದು, ಇದೀಗ ಫಾಲೋಆನ್ನೊಂದಿಗೆ ದ್ವಿತೀಯ ಇನಿಂಗ್ಸ್ ಆರಂಬಿಸಿದೆ.

ಝಿಂಬಾಬ್ವೆ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಸೌತ್ ಆಫ್ರಿಕಾ ತಂಡದ ಹಂಗಾಮಿ ನಾಯಕ ವಿಯಾನ್ ಮುಲ್ಡರ್ ಅಜೇಯ 367 ರನ್ ಬಾರಿಸಿದ್ದರು. ಈ ವೈಯುಕ್ತಿಕ ಸ್ಕೋರ್ಗೆ 34 ರನ್ಗಳನ್ನು ಸೇರ್ಪಡೆಗೊಳಿಸಿದ್ದರೆ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಗರಿಷ್ಠ ರನ್ಗಳಿಸಿದ ವಿಶ್ವ ದಾಖಲೆ ಮುಲ್ಡರ್ ಪಾಲಾಗುತ್ತಿತ್ತು. ಆದರೆ ದಾಖಲೆಯ ಸನಿಹದಲ್ಲಿದಾಗಲೇ ದಿಢೀರ್ ನಿವೃತ್ತಿ ಘೋಷಿಸಿ ಮುಲ್ಡರ್ ಅಚ್ಚರಿ ಮೂಡಿಸಿದರು. ಕ್ರಿಕೆಟ್ ಪ್ರೇಮಿಗಳ ಆಶ್ಚರ್ಯಕ್ಕೆ ಕಾರಣವಾಗಿದ್ದ ಈ ನಿರ್ಧಾರದ ಬಗ್ಗೆ ವಿಯಾನ್ ಮುಲ್ಡರ್ ಮಾತನಾಡಿದ್ದಾರೆ. ಲೆಜೆಂಡ್ ಬ್ರಿಯಾನ್ ಲಾರಾ ಅವರ ವಿಶ್ವ ದಾಖಲೆಯನ್ನು ಮುರಿಯದಿರಲು ಕಾರಣ ಏನೆಂಬುದನ್ನು ಸಹ ತಿಳಿಸಿದ್ದಾರೆ.
ಈ ಪಂದ್ಯದ 2ನೇ ದಿನದಾಟದ ಮುಕ್ತಾಯದ ಬಳಿಕ ಮಾತನಾಡಿದ ವಿಯಾನ್ ಮುಲ್ಡರ್, ” ನಾನು ಬ್ಯಾಟಿಂಗ್ ಮಾಡುತ್ತಿದ್ದಾಗ, ನಾವು ತುಂಬಾ ರನ್ ಗಳಿಸಿದ್ದೇವೆ ಎಂದು ಭಾವಿಸಿದೆ. ಹೀಗಾಗಿ ಡಿಕ್ಲೇರ್ ಘೋಷಿಸಿ ಬೌಲಿಂಗ್ ಮಾಡುವುದು ಉತ್ತಮ ಎಂದೆನಿಸಿತು. ಇದರ ಹೊರತಾಗಿ ನನಗೆ ಬ್ರಿಯಾನ್ ಲಾರಾ ಅವರ ದಾಖಲೆ ಮುರಿಯಬೇಕೆಂದು ಅನಿಸುತ್ತಿರಲಿಲ್ಲ.
ಏಕೆಂದರೆ ಬ್ರಿಯಾನ್ ಲಾರಾ ಒಬ್ಬ ಉತ್ತಮ ಆಟಗಾರ. ಆ ಮಟ್ಟದ ಆಟಗಾರ ಈ ದಾಖಲೆಯನ್ನು ಕಾಯ್ದುಕೊಳ್ಳುವುದು ಸೂಕ್ತ. ಟೆಸ್ಟ್ ಪಂದ್ಯವೊಂದರಲ್ಲಿ 400 ರನ್ಗಳ ದಾಖಲೆ ಅವರ ಹೆಸರಿನಲ್ಲಿಯೇ ಇರಲಿ ಎಂದು ಭಾವಿಸಿದೆ. ಹೀಗಾಗಿ ನನ್ನ ದಾಖಲೆಯನ್ನು ಪಕ್ಕಕ್ಕಿಟ್ಟು ಇನಿಂಗ್ಸ್ ಡಿಕ್ಲೇರ್ ಘೋಷಿಸಿದ ಎಂದು ಮುಲ್ಡರ್ ಹೇಳಿದ್ದಾರೆ.
ಇನ್ನೊಮ್ಮೆ ಕೂಡ ನನಗೆ ಬ್ರಿಯಾನ್ ಲಾರಾ ಅವರ ವಿಶ್ವ ದಾಖಲೆ ಮುರಿಯುವ ಅವಕಾಶ ಸಿಕ್ಕರೂ, ಖಂಡಿತವಾಗಿಯೂ ನಾನು ಇದನ್ನೇ ಮಾಡುವೆ. ಏಕೆಂದರೆ ಬ್ರಿಯಾನ್ ಲಾರಾ ಒಬ್ಬ ದಂತಕಥೆ. ಅವರು ಈ ದಾಖಲೆಯನ್ನು ಕಾಯ್ದುಕೊಳ್ಳಲು ಅರ್ಹರು. ಹೀಗಾಗಿ ನನಗೆ ಆ ವಿಶ್ವ ದಾಖಲೆಯನ್ನು ಮುರಿಯುವ ಯಾವುದೇ ಆಸೆಯಿಲ್ಲ ಎಂದು ವಿಯಾನ್ ಮುಲ್ಡರ್ ಹೇಳಿದ್ದಾರೆ.
ಲಾರಾ ವಿಶ್ವ ದಾಖಲೆ:
ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಗರಿಷ್ಠ ವೈಯುಕ್ತಿಕ ಸ್ಕೋರ್ಗಳಿಸಿದ ವಿಶ್ವ ದಾಖಲೆ ಬ್ರಿಯಾನ್ ಲಾರಾ ಹೆಸರಿನಲ್ಲಿದೆ. 2004 ರಲ್ಲಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಅಜೇಯ 400 ರನ್ಗಳಿಸಿ ವೆಸ್ಟ್ ಇಂಡೀಸ್ ದಾಂಡಿಗ ವಿಶ್ವ ದಾಖಲೆ ನಿರ್ಮಿಸಿದ್ದರು. ಈ ದಾಖಲೆಯನ್ನು ಮುರಿಯುವ ಉತ್ತಮ ಅವಕಾಶವಿದ್ದರೂ, ವಿಯಾನ್ ಮುಲ್ಡರ್ ಲೆಜೆಂಡ್ ಆಟಗಾರನನ್ನು ಗೌರವಿಸುವ ಸಲುವಾಗಿ ತನ್ನ ವೈಯುಕ್ತಿಕ ಸಾಧನೆಯನ್ನು ಬದಿಗಿರಿಸಿರುವುದು ವಿಶೇಷ.
ಇದನ್ನೂ ಓದಿ: IPL 2026: RCB ತಂಡದಿಂದ ಪ್ರಮುಖ ಆಟಗಾರನಿಗೆ ಗೇಟ್ ಪಾಸ್ ಸಾಧ್ಯತೆ
ಸೌತ್ ಆಫ್ರಿಕಾ-ಝಿಂಬಾಬ್ವೆ ಟೆಸ್ಟ್:
ಬುಲವಾಯೊದ ಕ್ವೀನ್ಸ್ ಸ್ಪೋರ್ಟ್ಸ್ ಪಾರ್ಕ್ ಮೈದಾನದಲ್ಲಿ ನಡೆಯುತ್ತಿರುವ ಝಿಂಬಾಬ್ವೆ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸೌತ್ ಆಫ್ರಿಕಾ ತಂಡವು ವಿಯಾನ್ ಮುಲ್ಡರ್ (367) ಅವರ ಭರ್ಜರಿ ತ್ರಿಶತಕದ ನೆರವಿನೊಂದಿಗೆ ಪ್ರಥಮ ಇನಿಂಗ್ಸ್ ನಲ್ಲಿ 5 ವಿಕೆಟ್ ನಷ್ಟಕ್ಕೆ 626 ರನ್ ಗಳಿಸಿ ಡಿಕ್ಲೇರ್ ಘೋಷಿಸಿದೆ. ಇದಕ್ಕುತ್ತರವಾಗಿ ಪ್ರಥಮ ಇನಿಂಗ್ಸ್ ಆಡಿದ ಝಿಂಬಾಬ್ವೆ 170 ರನ್ ಗಳಿಗೆ ಆಲೌಟ್ ಆಗಿದೆ. ಇದರ ಬೆನ್ನಲ್ಲೇ ಸೌತ್ ಆಫ್ರಿಕಾ ತಂಡ ಫಾಲೋಆನ್ ಹೇರಿದ್ದು, ಅದರಂತೆ ದ್ವಿತೀಯ ಇನಿಂಗ್ಸ್ ಆರಂಭಿಸಿರುವ ಝಿಂಬಾಬ್ವೆ ತಂಡವು 2ನೇ ದಿನದಾಟದ ಮುಕ್ತಾಯದ ವೇಳೆಗೆ 1 ವಿಕೆಟ್ ಕಳೆದುಕೊಂಡು 51 ರನ್ ಕಲೆಹಾಕಿದೆ.
Published On - 9:02 am, Tue, 8 July 25
