- Kannada News Photo gallery Cricket photos Wiaan Mulder smashes Record Breaker 367 runs on Test captaincy debut
೪೯ ಫೋರ್, ೪ ಸಿಕ್ಸ್: ಟೆಸ್ಟ್‌ನಲ್ಲಿ ವಿಶ್ವ ದಾಖಲೆ ನಿರ್ಮಿಸಿದ ವಿಯಾನ್ ಮುಲ್ಡರ್
ZIM vs SA 2nd Test: ಝಿಂಬಾಬ್ವೆ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸೌತ್ ಆಫ್ರಿಕಾ ತಂಡವು ವಿಯಾನ್ ಮುಲ್ಡರ್ ಅವರ ಭರ್ಜರಿ ತ್ರಿಶತಕದ ನೆರವಿನೊಂದಿಗೆ ಪ್ರಥಮ ಇನಿಂಗ್ಸ್ ನಲ್ಲಿ 5 ವಿಕೆಟ್ ನಷ್ಟಕ್ಕೆ 626 ರನ್ ಗಳಿಸಿ ಡಿಕ್ಲೇರ್ ಘೋಷಿಸಿದೆ. ಇದಕ್ಕುತ್ತರವಾಗಿ ಪ್ರಥಮ ಇನಿಂಗ್ಸ್ ಆಡಿದ ಝಿಂಬಾಬ್ವೆ 170 ರನ್ ಗಳಿಗೆ ಆಲೌಟ್ ಆಗಿದೆ.
Updated on: Jul 08, 2025 | 7:27 AM

ಬುಲವಾಯೊದ ಕ್ವೀನ್ಸ್ ಸ್ಪೋರ್ಟ್ಸ್ ಕ್ಲಬ್ ಮೈದಾನದಲ್ಲಿ ನಡೆಯುತ್ತಿರುವ ಝಿಂಬಾಬ್ವೆ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಸೌತ್ ಆಫ್ರಿಕಾ ತಂಡದ ಹಂಗಾಮಿ ನಾಯಕ ವಿಯಾನ್ ಮುಲ್ಡರ್ (Wiaan Mulder) ಹೊಸ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಅದು ಕೂಡ ಸ್ಫೋಟಕ ತ್ರಿಶತಕ ಸಿಡಿಸುವ ಮೂಲಕ ಎಂಬುದು ವಿಶೇಷ.

ಈ ಪಂದ್ಯದಲ್ಲಿ ಟಾಸ್ ಗೆದ್ದ ಝಿಂಬಾಬ್ವೆ ತಂಡದ ನಾಯಕ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಸೌತ್ ಆಫ್ರಿಕಾ ಪರ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ವಿಯಾನ್ ಮುಲ್ಡರ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು.

ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್ ಗೆ ಒತ್ತು ನೀಡಿದ ಮುಲ್ಡರ್ ಮೈದಾನದ ಮೂಲೆ ಮೂಲೆಗೂ ಫೋರ್ ಗಳನ್ನು ಬಾರಿಸಿದರು. ಈ ಮೂಲಕ ಕೇವಲ 297 ಎಸೆತಗಳಲ್ಲಿ ತ್ರಿಶತಕ ಪೂರೈಸಿದರು. ಇದರೊಂದಿಗೆ ಟೆಸ್ಟ್‌ನಲ್ಲಿ ನಾಯಕನಾಗಿ ಪಾದಾರ್ಪಣೆ ಮಾಡಿದ ಪಂದ್ಯದಲ್ಲಿ ತ್ರಿಶತಕ ಸಿಡಿಸಿದ ವಿಶ್ವದ ಮೊದಲ ಆಟಗಾರ ಎನಿಸಿಕೊಂಡರು.

ಇದಕ್ಕೂ ಮುನ್ನ ನಾಯಕನಾಗಿ ಪಾದಾರ್ಪಣೆ ಮಾಡಿದ ಪಂದ್ಯದಲ್ಲಿ ಅತ್ಯಧಿಕ ರನ್ ಕಲೆಹಾಕಿದ ದಾಖಲೆ ನ್ಯೂಝಿಲೆಂಡ್ ತಂಡದ ಮಾಜಿ ನಾಯಕ ಗ್ರಹಾಂ ಡೌಲಿಂಗ್ ಹೆಸರಿನಲ್ಲಿತ್ತು. 1968 ರಲ್ಲಿ ಟೀಮ್ ಇಂಡಿಯಾ ವಿರುದ್ಧ 239 ರನ್ ಬಾರಿಸಿ ಈ ದಾಖಲೆ ನಿರ್ಮಿಸಿದ್ದರು.

ಇದೀಗ 367 ರನ್ ಬಾರಿಸಿ ವಿಯಾನ್ ಮುಲ್ಡರ್ ನಾಯಕನಾಗಿ ಆಡಿದ ಮೊದಲ ಪಂದ್ಯದಲ್ಲಿ ಅತ್ಯಧಿಕ ರನ್ ಕಲೆಹಾಕಿದ ಬ್ಯಾಟರ್ ಎನಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಟೆಸ್ಟ್ ಪಂದ್ಯದಲ್ಲಿ ಸೌತ್ ಆಫ್ರಿಕಾ ಪರ ಗರಿಷ್ಠ ವೈಯಕ್ತಿಕ ಸ್ಕೋರ್ ಗಳಿಸಿದ ಬ್ಯಾಟರ್ ಎಂಬ ದಾಖಲೆಯನ್ನು ಸಹ ತಮ್ಮದಾಗಿಸಿಕೊಂಡಿದ್ದಾರೆ.

ಇನ್ನು ಈ ಪಂದ್ಯದಲ್ಲಿ 334 ಎಸೆತಗಳನ್ನು ಎದುರಿಸಿದ ವಿಯಾನ್ ಮುಲ್ಡರ್ ಅಂತಿಮವಾಗಿ 49 ಫೋರ್ ಹಾಗೂ 4 ಸಿಕ್ಸ್ ಗಳೊಂದಿಗೆ ಅಜೇಯ 367 ರನ್ ಬಾರಿಸಿದರು. ಇದಾಗ್ಯೂ ಬ್ರಿಯಾನ್ ಲಾರಾ ಅವರ 400 ರನ್ ಗಳ ವಿಶ್ವ ದಾಖಲೆ ಮುರಿಯದೇ ಡಿಕ್ಲೇರ್ ಘೋಷಿಸಿದ್ದು ಅಚ್ಚರಿ ಮೂಡಿಸಿತು.
