3 ವರ್ಷಗಳ ಬಳಿಕ ಭಾರತಕ್ಕೆ ಕಮ್ಬ್ಯಾಕ್ ಮಾಡುತ್ತಿದೆ ಹಾನರ್: ರಿಲೀಸ್ ಮಾಡುತ್ತಿರುವ ಹೊಸ ಫೋನ್ ಯಾವುದು ನೋಡಿ
Honor confirms India comeback: 2020ರ ಬಳಿಕ ಹಾನರ್ ಕಂಪನಿ ಯಾವುದೇ ಸೂಚನೆ ನೀಡದೆ ಭಾರತದಲ್ಲಿ ಒಂದೂ ಪ್ರಾಡಕ್ಟ್ ಅನ್ನು ಲಾಂಚ್ ಮಾಡಿರಲಿಲ್ಲ. ಈಗ, ಮೂರು ವರ್ಷಗಳ ನಂತರ, ಭಾರತಕ್ಕೆ ಕಮ್ಬ್ಯಾಕ್ ಮಾಡುವುದಾಗಿ ಹಾನರ್ ಘೋಷಿಸಿದೆ.
ಭಾರತೀಯ ಮಾರುಕಟ್ಟೆಯಿಂದ ಕಳೆದ ಕೆಲವು ವರ್ಷಗಳಿಂದ ದೂರ ಉಳಿದಿದ್ದ ವಿದೇಶದ ಪ್ರಸಿದ್ಧ ಹಾನರ್ (Honor) ಕಂಪನಿ ಇದೀಗ ಅಧಿಕೃತವಾಗಿ ತನ್ನ ಪುನರಾಗಮನವನ್ನು ಘೋಷಿಸಿದೆ. ಭಾರತದಲ್ಲಿ ತನ್ನ ಸ್ಮಾರ್ಟ್‌ಫೋನ್ ವಿತರಣೆಗಾಗಿ ನೋಯ್ಡಾದ ಪಿಎಸ್‌ಎವಿ ಗ್ಲೋಬಲ್‌ನೊಂದಿಗೆ ಮೂರು ವರ್ಷಗಳ ಪಾಲುದಾರಿಕೆ ಮಾಡಿಕೊಂಡಿರುವ ಹಾನರ್ ಈ ವರ್ಷದ ಆರಂಭದಲ್ಲಿ ಚೀನಾದಲ್ಲಿ ಪರಿಚಯಿಸಲಾದ ಮಾಡೆಲ್‌ಗಳನ್ನು ಇದೀಗ ಭಾರತದಲ್ಲಿ ರಿಲೀಸ್ ಮಾಡಲು ಸಜ್ಜಾಗಿದೆ. ಹಾನರ್ ತನ್ನ ಕೊನೆಯ ಪ್ರೊಡಕ್ಟ್ ಅನ್ನು 2020 ರಲ್ಲಿ ಭಾರತದಲ್ಲಿ ಬಿಡುಗಡೆ ಮಾಡಿತ್ತು.
2020ರ ಬಳಿಕ ಕಂಪನಿ ಯಾವುದೇ ಸೂಚನೆ ನೀಡದೆ ಭಾರತದಲ್ಲಿ ಒಂದೂ ಪ್ರಾಡಕ್ಟ್ ಅನ್ನು ಲಾಂಚ್ ಮಾಡಿರಲಿಲ್ಲ. ಈಗ, ಮೂರು ವರ್ಷಗಳ ನಂತರ, ಭಾರತಕ್ಕೆ ಕಮ್ಬ್ಯಾಕ್ ಮಾಡುವುದಾಗಿ ಹಾನರ್ ಘೋಷಿಸಿದೆ. ವರದಿಗಳ ಪ್ರಕಾರ, ಚೀನಾದಲ್ಲಿ ಕೆಲವು ತಿಂಗಳ ಹಿಂದೆ ಬಿಡುಗಡೆಯಾದ 200 ಮೆಗಾ ಪಿಕ್ಸೆಲ್ ಕ್ಯಾಮೆರಾದ ಹಾನರ್ 90 ಸ್ಮಾರ್ಟ್ಫೋನನ್ನು ಮೊದಲನೆಯದಾಗಿ ದೇಶದಲ್ಲಿ ಬಿಡುಗಡೆ ಮಾಡಲಿದೆಯಂತೆ. ಇದರ ಜೊತೆಗೆ ಹಾಣರ್ ಮ್ಯಾಜಿಕ್ ಬುಕ್ X14 ಮತ್ತು X15 ಲ್ಯಾಪ್‌ಟಾಪ್‌ಗಳನ್ನು ಅಮೆಜಾನ್ ಇಂಡಿಯಾದಲ್ಲಿ ಪಟ್ಟಿ ಮಾಡಲಾಗಿದೆ.
ಶವೋಮಿಯ ಹೊಸ ಫೋಲ್ಡೆಬಲ್ ಸ್ಮಾರ್ಟ್‌ಫೋನ್ ಬಿಡುಗಡೆ: ಫೀಚರ್ಸ್ ಕೇಳಿ ದಂಗಾದ ಜನರು
ಇತ್ತೀಚಿಗೆ ರಿಯಲ್ ಮಿ ಕಂಪನಿಯಿಂದ ಹೊರ ನಡೆದಿರುವ ರಿಯಲ್ ಮಿ ಮಾಜಿ ಉಪಾಧ್ಯಕ್ಷ ಮಾಧವ್ ಶೇತ್ ಭಾರತದಲ್ಲಿ ಹೊಸ ಹಾನರ್ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸುವ ಬಗ್ಗೆ ತನ್ನ ಟ್ವಿಟ್ಟರ್ (ಪ್ರಸ್ತುತ X) ನಲ್ಲಿ ಪೋಸ್ಟ್ ಮಾಡಿದ್ದಾರೆ. ಚೀನಾದ ಸ್ಮಾರ್ಟ್‌ಫೋನ್ ಬ್ರಾಂಡ್‌ನೊಂದಿಗೆ ತನ್ನ ಕೆಲಸವನ್ನು ಒಪ್ಪಿಕೊಂಡಿರುವ ಅವರು, ಭಾರತದಲ್ಲಿ ಯಾವ ಮಾದರಿಯು ಮೊದಲು ಪಾದಾರ್ಪಣೆ ಮಾಡಲಿದೆ ಎಂಬುದರ ಕುರಿತು ಸ್ಪಷ್ಟತೆ ನೀಡಿಲ್ಲ.
ಹಾನರ್ ಕಮ್ಬ್ಯಾಕ್ ಬಗ್ಗೆ ಮಾಧವ್ ಶೇತ್ ಮಾಡಿರುವ ಟ್ವೀಟ್:
Exciting News Alert! Honor Smartphones will be launched soon in India. Join us on this incredible journey as we empower the future with Honor Tech. #FeelTheFreedom #FeelTheHonor #TechForIndians https://t.co/bdam3GZxhy
— Madhav Sheth (@MadhavSheth1) August 15, 2023
ಆದಾಗ್ಯೂ, ಪ್ರಸ್ತುತ ಸೋರಿಕೆ ಆಗಿರುವ ಮಾಹಿತಿಯ ಪ್ರಕಾರ ಹಾನರ್ 90 ಸಪ್ಟೆಂಬರ್ನಲ್ಲಿ ಬಿಡುಗಡೆಗೆ ಆಗಲಿದೆ ಎಂದು ಹೇಳಲಾಗಿದೆ. ಈ ಸ್ಮಾರ್ಟ್‌ಫೋನ್ ಈಗಾಗಲೇ ಚೀನಾದಲ್ಲಿ ಲಭ್ಯವಿದೆ. ಇದರಲ್ಲಿ ಹಾನರ್ 90 ಮತ್ತು ಹಾನರ್ 90 ಪ್ರೊ ಎಂಬ ಎರಡು ಫೋನುಗಳಿವೆ. ಹಾನರ್ 90 1200 x 2664 ಪಿಕ್ಸೆಲ್‌ಗಳೊಂದಿಗೆ 6.7-ಇಂಚಿನ ಪೂರ್ಣ-HD+ OLED ಡಿಸ್ ಪ್ಲೇ, 1,600 nits ಬ್ರೈಟ್ನೆಸ್ ಮತ್ತು 120Hz ರಿಫ್ರೆಶ್ ದರವನ್ನು ಹೊಂದಿದೆ.
ಇದು ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 7 Gen 1 SoC ಯಿಂದ 16GB ಯ RAM ನೊಂದಿಗೆ ಸೇರಿಕೊಂಡಿದೆ. ಫೋನ್ 512GB ವರೆಗಿನ ಅಂತರ್ಗತ ಸಂಗ್ರಹಣೆಯೊಂದಿಗೆ ಬರುತ್ತದೆ. ಈ ಫೋನ್ ಆಂಡ್ರಾಯ್ಡ್ 13-ಆಧಾರಿತ ಮ್ಯಾಜಿಕ್ಓಎಸ್ 7. 1 ಔಟ್-ಆಫ್-ದಿ-ಬಾಕ್ಸ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದು 66W ವೇಗದ ಚಾರ್ಜಿಂಗ್‌ಗೆ ಬೆಂಬಲದೊಂದಿಗೆ 5,000mAh ಬ್ಯಾಟರಿಯಿಂದ ಬೆಂಬಲಿತವಾಗಿದೆ.
ಈ ಫೋನಿನ ಪ್ರಮುಖ ಹೈಲೇಟ್ ಕ್ಯಾಮೆರಾ ಆಗಿದ್ದು, ಇದರಲ್ಲಿರುವ ಪ್ರಾಥಮಿಕ ಕ್ಯಾಮೆರಾ ಬರೋಬ್ಬರಿ 200-ಮೆಗಾಪಿಕ್ಸೆಲ್ನದ್ದಾಗಿದೆ. ಜೊತೆಗೆ 12-ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್-ಆಂಗಲ್ ಕ್ಯಾಮೆರಾ ಮತ್ತು 2-ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸಾರ್‌ನೊಂದಿಗೆ ಜೋಡಿಸಲಾಗಿದೆ. ಸೆಲ್ಫಿಗಾಗಿ ಮುಂಭಾಗದಲ್ಲಿ, 50-ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಒಳಗೊಂಡಿದೆ. ಕನೆಕ್ಟಿವಿಟಿ ಆಯ್ಕೆಯಲ್ಲಿ 5G, 4G LTE, WiFi 6, ಬ್ಲೂಟೂತ್ 5. 2, NFC, ಮತ್ತು USB ಟೈಪ್-C ಪೋರ್ಟ್ ಸೇರಿದೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ