VideoLAN ಯೋಜನೆಯಿಂದ ಅಭಿವೃದ್ಧಿಪಡಿಸಲಾದ ವಿಶ್ವದ ಅತ್ಯಂತ ಜನಪ್ರಿಯ ಮೀಡಿಯಾ ಪ್ಲೇಯರ್ ಸಾಫ್ಟ್‌ವೇರ್ ಮತ್ತು ಸ್ಟ್ರೀಮಿಂಗ್ ಮೀಡಿಯಾ ಸರ್ವರ್ ವಿಎಲ್‌ಸಿ ಪ್ಲೇಯರ್ (VLC Media Player) ನಿಷೇಧವನ್ನು ಭಾರತದ ಸರ್ಕಾರ ತೆಗದುಹಾಕಿದೆ. ಒಂಬತ್ತು ತಿಂಗಳ ಹಿಂದೆ ಕೆಲವು ಕಾರಣಾಂತರಗಳಿಂದ ಭಾರತ ಸರ್ಕಾರ ಈ ಆ್ಯಪ್‌ಗೆ ನಿರ್ಬಂಧ ವಿಧಿಸಿತ್ತು. ಆದರೀಗ ಭಾರತೀಯ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯವು ವಿಎಲ್‌ಸಿ ಮೀಡಿಯಾ ಪ್ಲೇಯರ್‌ನ ವೆಬ್‌ಸೈಟ್ ಮೇಲಿನ ನಿಷೇಧವನ್ನು (Ban) ತೆಗೆದುಹಾಕಿದೆ. ಈ ಮೂಲಕ ಭಾರತದಲ್ಲಿನ ಜನರು ಇನ್ಮುಂದೆ ವಿವಿಧ ಫೀಚರ್ಸ್ ಇರುವ ವಿಎಲ್‌ಸಿ ಆ್ಯಪ್ ಅನ್ನು ಇನ್ಸ್ಟಾಲ್ ಉಪಯೋಗಿಸಬಹುದು.
ಈ ವರ್ಷದ ಆರಂಭದಲ್ಲಿ ಭಾರತದಲ್ಲಿ ವಿಎಲ್‌ಸಿ ಮೀಡಿಯಾ ಪ್ಲೇಯರ್ ನಿರ್ಬಂಧಿಸಲಾಗಿತ್ತು. ನಿಷೇಧದ ಬಗ್ಗೆ ಕಂಪನಿ ಅಥವಾ ಭಾರತ ಸರ್ಕಾರ ಇದುವರೆಗೆ ಯಾವುದೇ ವಿವರಗಳನ್ನು ಬಹಿರಂಗಪಡಿಸಿರಲಿಲ್ಲ. ಮಾಹಿತಿ ತಂತ್ರಜ್ಞಾನ ಕಾಯ್ದೆ 2000 ಅಡಿಯಲ್ಲಿ www.videolan.org ವೆಬ್ ಸೈಟ್ ಅನ್ನು ಭಾರತ ಸರ್ಕಾರ ನಿರ್ಬಂಧಿಸಿರುವುದಾಗಿ ವಿವರಿಸಿತ್ತಷ್ಟೆ.
ಬಳಿಕ ಕಳೆದ ಅಕ್ಟೋಬರ್‌ನಲ್ಲಿ ವಿಎಲ್‌ಸಿ ಮಾಲೀಕರು ಭಾರತ ಸರ್ಕಾರಕ್ಕೆ ಒಂದು ಮನವಿ ಸಲ್ಲಿಸಿದ್ದರು. ಅದರಂತೆ ಭಾರತದಲ್ಲಿ ನಮ್ಮ ಸೇವೆಯನ್ನು ಏಕೆ ನಿಷೇಧಿಸಲಾಗಿದೆ?, ಈ ಬಗ್ಗೆ ವರ್ಚುವಲ್ ವಿಚಾರಣೆಯ ಮೂಲಕ ತನ್ನ ಪ್ರಕರಣವನ್ನು ಸಮರ್ಥಿಸಿಕೊಳ್ಳಲು ಅವಕಾಶ ನೀಡಿ ಎಂದು ಮನವಿ ಮಾಡಿದ್ದರು. ಸದ್ಯ ಈ ಮನವಿಗೆ ಸ್ಪಂದಿಸಿರುವ ಭಾರತ ಸುಮಾರು 73 ಮಿಲಿಯನ್ ಬಳಕೆದಾರರನ್ನು ಹೊಂದಿರುವ ವಿಎಲ್‌ಸಿ ಪ್ಲೇಯರ್ ಮೇಲಿನ ನಿಷೇಧವನ್ನು ತೆಗೆದು ಹಾಕಿದೆ.
VICTORY ?@GoI_MeitY has decided to remove its ban on the website of VLC media player. IFF provided legal support to @videolan throughout this process. (1/3)#WhatTheBlock pic.twitter.com/pW7APDAbIX
— Internet Freedom Foundation (IFF) (@internetfreedom) November 14, 2022
ಭಾರತದಲ್ಲಿ ವಿಎಲ್‌ಸಿ ಮೀಡಿಯಾ ಪ್ಲೇಯರ್ ನಿಷೇಧಕ್ಕೆ ಒಳಗಾಗುವ ಮುನ್ನ ಪ್ರತಿವರ್ಷ ಸುಮಾರು 25 ಮಿಲಿಯನ್ ಡೌನ್‌ಲೋಡ್‌ಗಳನ್ನು ನಿರಂತರವಾಗಿ ಪಡೆಯುತ್ತಿತ್ತು. ಇದರಲ್ಲಿರುವ ಸರಳ ಫೀಚರ್ಸ್ ಮತ್ತು ಅತ್ಯುತ್ತಮ ವೈಶಿಷ್ಟ್ಯಗಳು ದೇಶದ ಜನರನ್ನು ಆಕರ್ಷಿಸಿದ್ದವು. ಆದರೆ, ಪೂರ್ವ ನಿಷೇಧಿತ ಸಾಫ್ಟ್‌ವೇರ್‌ನ ಸರ್ವರ್‌ನೊಂದಿಗೆ ವಿಎಲ್‌ಸಿ ಮೀಡಿಯಾ ಪ್ಲೇಯರ್ ಸಂವಹನವಿದೆ ಎಂಬ ವದಂಗತಿ ಹಬ್ಬಿತ್ತು. ಇದರಿಂದಲೇ ವಿಎಲ್‌ಸಿ ಅಪ್ಲಿಕೇಷನ್ ಹಾಗೂ ವೆಬ್‌ಸೈಟ್ ನಿಷೇಧವಾಗಿದೆ ಎಂದು ಹೇಳಲಾಗಿತ್ತು.
ಅಲ್ಲದೆ ಚೀನಾ ಸರ್ಕಾರದ ರಹಸ್ಯ ಭಾಗವಾಗಿರುವ ಸಿಕಾಡಾ ಎಂಬ ಹೆಸರಿನ ಹ್ಯಾಕರ್ ಗಳ ಗುಂಪು ವಿಎಲ್‌ಸಿ ಮೀಡಿಯಾ ಪ್ಲೇಯರ್ ಅನ್ನು ಬಳಸಿಕೊಂಡು ಮಾಲ್ವೇರ್ ಮೂಲಕ ಸೈಬರ್ ದಾಳಿ ನಡೆಸುತ್ತಿವೆ ಎಂದು ಈ ಹಿಂದೆ ಸೈಬರ್ ಸೆಕ್ಯುರಿಟಿ ತಜ್ಞರು ಆರೋಪಿಸಿದ್ದರು. ಆದರೆ ಈ ಕೃತ್ಯದಲ್ಲಿ ಚೀನಾ ಸರ್ಕಾರ ಶಾಮೀಲಾಗಿದೆ ಎಂಬ ಬಗ್ಗೆ ಭಾರತ ಸರ್ಕಾರದಿಂದ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಈ ಕಾರಣದಿಂದಾಗಿಯೇ ವಿಎಲ್‌ಸಿ ಮೀಡಿಯಾ ಪ್ಲೇಯರ್ ವೆಬ್ ಸೈಟ್ ಅನ್ನು ಭಾರತದಲ್ಲಿ ನಿಷೇಧಿಸಲಾಗಿದೆ ಎಂದು ವರದಿ ಆಗಿತ್ತು.
Published On - 12:53 pm, Tue, 15 November 22