ದೇಶದ ನಂಬರ್ ಒನ್ ಟೆಲಿಕಾಂ ಕಂಪನಿ ಮುಖೇಶ್ ಅಂಬಾನಿ ಒಡೆತನದ ರಿಲಯನ್ಸ್ ಜಿಯೋ (Reliance Jio) ಮೊಬೈಲ್ ನೆಟ್‌ವರ್ಕ್ ಡೌನ್ ಆಗಿದೆ ಎಂದು ವರದಿಯಾಗಿದೆ. ಮುಂಬೈನಲ್ಲಿರುವ ಅನೇಕ ಜಿಯೋ ಬಳಕೆದಾರರು ಕರೆಗಳನ್ನು ಮಾಡಲು ಅಥವಾ ಸ್ವೀಕರಿಸಲು ಸಾಧ್ಯವಾಗುತ್ತಿಲ್ಲ ಎಂದು ದೂರು ನೀಡಿದ್ದಾರೆ. ಈ ಸಮಸ್ಯೆ ಮುಂಬೈನಲ್ಲಿರುವ ಕೆಲವು ಬಳಕೆದಾರರಲ್ಲಿ ಮಾತ್ರ ಕಾಣಿಸಿಕೊಂಡಿದೆಯೇ ಅಥವಾ ದೇಶದ ಹಲವಡೆ ಕಾಣಿಸಿಕೊಂಡಿದೆಯೇ ಎಂಬುದು ಸ್ಪಷ್ಟವಾಗಿಲ್ಲ. ಹಲವಾರು ಮಂದಿ ಜಿಯೋ ಬಳಕೆದಾರರು ಟ್ವಿಟರ್ನಲ್ಲಿ ನೆಟ್‌ವರ್ಕ್ ಡೌನ್ ಆಗಿದೆ ಎಂದು ದೂರುಗಳನ್ನು ನೀಡಿದ್ದಾರೆ. #jiodown ಎಂಬುದು ಟ್ವಿಟರ್ ಟ್ರೆಂಡಿಂಗ್ (Twitter trending) ಕೂಡಾ ಆಗಿದ್ದು, ಕರೆಗಳು ಬರುತ್ತಿಲ್ಲ, ಕರೆ ಮಾಡಲು ಕೂಡ ಸಾಧ್ಯವಾಗುತ್ತಿಲ್ಲ, ಇಂಟರ್ನೆಟ್ ಕೆಲಸ ಮಾಡುತ್ತಿಲ್ಲ ಎಂದು ಬರೆದುಕೊಂಡಿದ್ದಾರೆ. ಕರೆ ಮಾಡಲು ಹೊರಟರೆ “Not registered on network” ಎಂಬ ಮೆಸೇಜ್ ತೋರಿಸುತ್ತದೆ ಎಂದು ಹೇಳಿಕೊಂಡಿದ್ದಾರೆ. ಆದರೆ, ರಿಲಯನ್ಸ್ ಜಿಯೋ ಮಾತ್ರ ಈ ಬಗ್ಗೆ ಯಾವುದೇ ಪ್ರಕಟಣೆ ಈವರೆಗೆ ಹೊರಡಿಸಿಲ್ಲ.
ಬಳಕೆದಾರರು ಫೋನ್ ಕರೆಗಳನ್ನು ಹಾಗೂ ಇಂಟರ್ನೆಟ್ ಬಳಸಲಾಗುತ್ತಿಲ್ಲ ಎಂದು ಟ್ವಿಟರ್ನಲ್ಲಿ ಪೋಸ್ಟ್ ಮಾಡುತ್ತಿದ್ದಾರೆ. ಕಂಪನಿಯ ಗ್ರಾಹಕ ಸೇವೆಯನ್ನು ಸಂಪರ್ಕಿಸಲೂ ಸಾಧ್ಯವಾಗುವುತ್ತಿಲ್ಲ. ಬೆಳಗ್ಗೆಯಿಂದಲೇ ಈ ಸಮಸ್ಯೆ ಕಾಣಿಸಿಕೊಂಡಿದೆಯಂತೆ. ಇತ್ತೀಚೆಗಷ್ಟೆ ಫೇಸ್‌ಬುಕ್, ಇನ್ಸ್ಟಾಗ್ರಾಮ್ ಮತ್ತು ವಾಟ್ಸ್‌ಆ್ಯಪ್‌ನ ಸರ್ವರ್‌ಗಳು ಸ್ಥಗಿತಗೊಂಡಿದ್ದು ದೊಡ್ಡ ಮಟ್ಟದಲ್ಲಿ ಸಂಚಲನ ಉಂಟಾಗಿತ್ತು.
ಇದೇ ಮೊದಲ ಬಾರಿಯಲ್ಲ:
ಜಿಯೋ ನೆಟ್‌ವರ್ಕ್ ಸಮಸ್ಯೆ ಎದುರಿಸುತ್ತಿರುವುದು ಇದೇ ಮೊದಲ ಬಾರಿಯೇನಲ್ಲ. ಈ ಹಿಂದೆ ಅನೇಕ ಸಲ ಜಿಯೋ ನೆಟ್‌ವರ್ಕ್ ಡೌನ್ ಆಗಿತ್ತು. ಕಳೆದ ಅಕ್ಟೋಬರ್ನಲ್ಲೂ ಜಿಯೋ ನೆಟ್‌ವರ್ಕ್ ಡೌನ್ ಆಗಿದೆ ಎಂದು ಅನೇಕ ಬಳಕೆದಾರರು ಟ್ವಿಟರ್ನಲ್ಲಿ ತಿಳಿಸಿದ್ದರು. ಇಂಟರ್ನೆಟ್ ಬಳಕೆ ಮಾಡಲು ಮತ್ತು ಕರೆ ಮಾಡಲು ಆಗುತ್ತಿಲ್ಲ ಎಂದು ದೂರಿನಲ್ಲಿ ಹೇಳಿಕೊಂಡಿದ್ದರು. ಆಗ ನೆಟ್‌ವರ್ಕ್ ಸ್ಥಗಿತದಿಂದಾಗಿ ಬಳಕೆದಾರರಿಗೆ ಆಗಿರುವ ನೆಟ್‌ವರ್ಕ್ ಸೇವೆಗಳ ನಷ್ಟ ಸರಿದೂಗಿಸಲು ರಿಲಾಯನ್ಸ್ ಜಿಯೋ ಭರ್ಜರಿ ಕೊಡುಗೆಯನ್ನು ಘೋಷಿಸಿತ್ತು. ಬಳಕೆದಾರರಿಗೆ 2 ದಿನಗಳ ಪೂರಕ ಸೇವೆಯನ್ನು ನೀಡುವುದಾಗಿ ತಿಳಿಸಿತ್ತು. ಹಾಗೆಯೇ ಬಳಕೆದಾರರಿಗೆ ತಡೆರಹಿತ ಸೇವಾ ಅನುಭವವನ್ನು ನೀಡುವುದು ತನ್ನ ಮೊದಲ ಆದ್ಯತೆಯಾಗಿದೆ ಎಂದು ಹೇಳಿತ್ತು. 2 ದಿನಗಳ ಪೂರಕ ಸೇವೆಯನ್ನು ಬಳಕೆದಾರರ ಅನಿಯಮಿತ ಯೋಜನೆಗಳಿಗೆ ಸ್ವಯಂಚಾಲಿತವಾಗಿ ಸೇರಿಸುವ ಆಫರ್ ಪ್ರಕಟ ಮಾಡಿತ್ತು.
Password: ನೀವು ಈ ಪಾಸ್ವರ್ಡ್ ಬಳಸುತ್ತಿದ್ದಲ್ಲಿ ತಕ್ಷಣೇ ಬದಲಾಯಿಸಿ: ನಾರ್ಡ್ಪಾಸ್ನಿಂದ ಎಚ್ಚರಿಕೆ ಸಂದೇಶ
Tecno Pova 5G: ಬಜೆಟ್ ಬೆಲೆಯ ಸಾಲಿಗೆ ಸೇರುತ್ತಿದೆ ಮತ್ತೊಂದು ಅದ್ಭುತ 5G ಸ್ಮಾರ್ಟ್ಫೋನ್: ಏನಿದರ ವಿಶೇಷತೆ?