Updated on:Feb 16, 2022 | 2:01 PM
ನಿಮ್ಮ ಫೋನ್ನ ಹೋಮ್ ಸ್ಕ್ರೀನ್ನಲ್ಲಿ ಏನೇನಿದೆ, ಅಂದರೆ ಯಾವ್ಯಾವ ಆ್ಯಪ್ಗಳಿವೆ? ನಾವೇನಾದರೂ ಈ ಪ್ರಶ್ನೆಯನ್ನು ಕೇಳಿದರೆ ಇವರಿಗ್ಯಾಕೆ ಇಲ್ಲದ ಉಸಾಬರಿ ಅಂದುಕೊಳ್ತೀರಿ ಅಲ್ಲವಾ? ಇನ್ಫೋಸಿಸ್ನ ಸಹ ಸಂಸ್ಥಾಪಕರಲ್ಲಿ ಒಬ್ಬರಾದ ನಂದನ್ ನಿಲೇಕಣಿ ಮಂಗಳವಾರ ತಮ್ಮ ಫೋನ್ನ ಹೋಮ್ ಸ್ಕ್ರೀನ್ನಲ್ಲಿ ಏನೇನಿದೆ ಎಂಬುದನ್ನು ಹಂಚಿಕೊಂಡಿದ್ದಾರೆ. ಮತ್ತು ಅದರಲ್ಲಿ ವಾಟ್ಸಾಪ್ ಅಥವಾ ಇನ್ಯಾವುದೇ ಸಾಮಾಜಿಕ ಮಾಧ್ಯಮ ಆ್ಯಪ್ಗಳಿಲ್ಲ. iSPIRT ಫೌಂಡೇಷನ್ನ ತನುಜ್ ಭೋಜ್ವಾನಿ ಜತೆಗೂಡಿ ದ ಆರ್ಟ್ ಆಫ್ ಬಿಟ್ಫುಲ್ನೆಸ್ ಎಂಬ ಪುಸ್ತಕದ ಸಹ ಲೇಖಕರಾಗಿದ್ದಾರೆ ನಿಲೇಕಣಿ. ಪದೇಪದೇ "ತಂತ್ರಜ್ಞಾನದ ಜತೆಗಿನ ನಂಜಿನ ಸಂಬಂಧ"ದ ಬಗ್ಗೆ ಮಾತನಾಡಿದ್ದಾರೆ.
ಆಧಾರ್ನ ಯಶಸ್ವಿಯಾಗಿ ಜಾರಿಗೊಳಿಸುವಲ್ಲಿ ತಂತ್ರಜ್ಞಾನ ಪರವಾಗಿ ನಂದನ್ ನಿಲೇಕಣಿ ಅವರ ಆಲೋಚನೆಯದು ದೊಡ್ಡ ಪಾಲಿದೆ. ಮಂಗಳವಾರದಂದು ಟ್ವಿಟರ್ನಲ್ಲಿ ಪೋಸ್ಟ್ವೊಂದನ್ನು ಮಾಡಿದ್ದು, ತಮ್ಮ ಡಿಜಿಟಲ್ ಜೀವನವನ್ನು ವಿವಿಧ ಸಾಧನಗಳು (ಡಿವೈಸ್ಗಳ) ಮೂಲಕ ನಿರ್ವಹಿಸಲು ಬಯಸುವುದಾಗಿ ಹೇಳಿದ್ದಾರೆ. "ವಾಟ್ಸಾಪ್ ಇಲ್ಲ. ನೋಟಿಫಿಕೇಷನ್ ಬ್ಯಾಡ್ಜಸ್ ಇಲ್ಲ. ಕೇವಲ ಅಗತ್ಯ ಅಪ್ಲಿಕೇಷನ್ಗಳು ಮಾತ್ರ," ಎಂದು ಟ್ವೀಟ್ ಮಾಡಿದ್ದಾರೆ.
ನಂದನ್ ನಿಲೇಕಣಿ ಅವರು ಬಳಸುವ ಅಗತ್ಯ ಆ್ಯಪ್ಗಳು ಅಂದರೆ ಅದರಲ್ಲಿ ಉಬರ್, ಆಪಲ್ಟಿವಿ ಮತ್ತು ಇನ್ಫೋಸಿಸ್ ಲೆಕ್ಸ್ ಇವೆ. ಇನ್ನು ನೀವು ಸಹ ಹೋಮ್ ಸ್ಕ್ರೀನ್ ಷೇರ್ ಮಾಡಿ ಎಂದು ನಂದನ್ ನೀಡಿರುವ ಆಹ್ವಾನಕ್ಕೆ ಅವರ ಟ್ವಿಟರ್ ಖಾತೆಯ ಫಾಲೋವರ್ಗಳ ದೊಡ್ಡ ಮಟ್ಟದಲ್ಲೇ ಪ್ರತಿಕ್ರಿಯಿಸಿದ್ದಾರೆ. ತಾವು ಕೂಡ ನೋಟಿಫಿಕೇಷನ್ ಬ್ಯಾಡ್ಜ್ಗಳನ್ನು ಮತ್ತು ಸಾಮಾಜಿಕ ಮಾಧ್ಯಮ ಬಳಕೆಯನ್ನು ಮಿತಿಗೊಳಿಸುವುದಕ್ಕೆ ಯತ್ನಿಸುವುದಾಗಿ ಹೇಳಿದ್ದಾರೆ. ಭೋಜ್ವಾನಿ ಕೂಡ ತಮ್ಮ ಫೋನ್ನ ಹೋಮ್ ಸ್ಕ್ರೀನ್ನ ಹಂಚಿಕೊಂಡಿದ್ದು, ನಿಲೇಕಣಿ ಅವರಿಗಿಂತ ಹೆಚ್ಚು "ಕ್ರೂರ"ವಾಗಿ ತಾವೇ ನಡೆದುಕೊಂಡಿರುವುದಾಗಿ ಹೇಳಿದ್ದಾರೆ.
ನಂದನ್ ನಿಲೇಕಣಿ ಅವರು ಜನವರಿಯಲ್ಲಿ ಮನಿಕಂಟ್ರೋಲ್ ಜತೆ ಮಾತನಾಡುತ್ತಾ ಹೇಳಿದ್ದರು, ವಿವಿಧ ಸಾಧನಗಳನ್ನು ಬಳಸಿ ಹೇಗೆ ತಮ್ಮ ಡಿಜಿಟಲ್ ಜೀವನ ಹತೋಟಿ ಮಾಡುವುದಾಗಿ ತಿಳಿಸಿದ್ದರು. "ನನ್ನ ಲ್ಯಾಪ್ಟಾಪ್ ಉದ್ಯೋಗಕ್ಕಾಗಿ. ನನ್ನ ಫೋನ್ ಸಂವಹನಕ್ಕೆ. ನನ್ನ ಐಪ್ಯಾಡ್ ಕ್ಯುರೇಟೇಡ್ ಕಂಟೆಂಟ್ ಮತ್ತು ಮನರಂಜನೆಗಾಗಿ," ಎಂದಿದ್ದರು.
ತಂತ್ರಜ್ಞಾನ ಜತೆಗೆ ಆರೋಗ್ಯಕರ ಸಂಬಂಧ ಕುರಿತು ಮಾತನಾಡಿರುವ ನಂದನ್ ನಿಲೇಕಣಿ, ನಾನು ವಾಯ್ಸ್ ಕಾಲ್ ಮತ್ತು ಎಸ್ಸೆಮ್ಮೆಸ್ಗಷ್ಟೇ ಸೀಮಿತವಾಗಬೇಕು ಅಂದುಕೊಂಡಿದ್ದೆ. ಟ್ವಿಟರ್ವೊಂದನ್ನು ಹೊರತುಪಡಿಸಿ ಬೇರೆ ಯಾವುದೇ ಸಾಮಾಜಿಕ ಮಾಧ್ಯಮ ಬಳಸುವುದಿಲ್ಲ. ಏಕೆಂದರೆ ನಾನು ಅದನ್ನು ಫಾಲೋವರ್ಗಳ ಪ್ರಚಾರದ ಸಾಧನವಾಗಿ ಬಳಸುತ್ತೇನೆ. ಜತೆಗೆ ಝೀರೋ ಇನ್ಬಾಕ್ಸ್ ನೀತಿ ಅನುಸರಿಸುತ್ತೇನೆ.
Published On - 2:00 pm, Wed, 16 February 22