ಮೆಟಾ ಕಂಪೆನಿಯು ಪರಿಚಯಿಸಿದ ಟ್ಯೂನ್ಡ್ ಆ್ಯಪ್ ಶೀಘ್ರದಲ್ಲೇ ಸ್ಥಗಿತಗೊಳಿಸಲಿದೆ. ಮೆಟಾ ಒಡೆತನದ ಫೇಸ್ಬುಕ್ ಹಾಗೂ ಇನ್ಸ್ಟಾಗ್ರಾಮ್ ಹೆಚ್ಚು ಜನಪ್ರಿಯವಾಗುತ್ತಿದ್ದಂತೆ, ಟ್ಯೂನ್ಡ್ ಹೆಸರಿನ ವಿಶೇಷ ಅಪ್ಲಿಕೇಶನ್ ಅನ್ನು ಕಂಪೆನಿ ಪರಿಚಯಿಸಿತ್ತು. ಅದರಂತೆ ಕಳೆದ ಎರಡು ವರ್ಷಗಳಿಂದ ಟ್ಯೂನ್ಡ್ ಆ್ಯಪ್ ಅನ್ನು 9 ಲಕ್ಷಕ್ಕೂ ಅಧಿಕ ಮಂದಿ ಬಳಸುತ್ತಿದ್ದಾರೆ. ಆದರೆ ಫೇಸ್ಬುಕ್ ಹಾಗೂ ಇನ್ಸ್ಟಾಗ್ರಾಮ್ ಜನಪ್ರಿಯತೆಗೆ ಹೋಲಿಸಿದರೆ ಇದು ತುಂಬಾ ಕಡಿಮೆ. ಹೀಗಾಗಿ ಕಂಪೆನಿಯು ತನ್ನ ನೂತನ ಆ್ಯಪ್ ಅನ್ನು ಸ್ಥಗಿತಗೊಳಿಸಲು ಮುಂದಾಗಿದೆ ಎಂದು ವರದಿಯಾಗಿದೆ.
ಕಪಲ್ಸ್ ಆ್ಯಪ್ ಎಂದೇ ಜನಪ್ರಿಯವಾಗಿದ್ದ ಟ್ಯೂನ್ಡ್ ಅಪ್ಲಿಕೇಶನ್ ಮೂಲಕ ದಂಪತಿಗಳು ದೂರವಿರುವಾಗಲೂ ಸಂಪರ್ಕದಲ್ಲಿರಲು ನೆರವಾಗುತ್ತಿತ್ತು. ಅಲ್ಲದೆ ಇದರಲ್ಲಿ ಕಪಲ್ಸ್ ಚಾಟಿಂಗ್, ಫೋಟೊ ಶೇರಿಂಗ್, ಮ್ಯೂಸಿಕ್ ಹಂಚಿಕೊಳ್ಳುವ ಆಯ್ಕೆಗಳನ್ನು ಇದರಲ್ಲಿ ನೀಡಲಾಗಿತ್ತು. ಅಂದರೆ ಇಲ್ಲಿ ಕಪಲ್ಸ್ಗಳು ತಮ್ಮ ವಿಚಾರಗಳನ್ನು ಖಾಸಗಿಯಾಗಿ ಹಂಚಿಕೊಳ್ಳಬಹುದಿತ್ತು. ಈ ಮೂಲಕ ಜೋಡಿಗಳು ಪರಸ್ಪರ ತಿಳಿದುಕೊಳ್ಳಲು, ಹೊಂದಾಣಿಕೆಯಿಂದ ಇರಲು ಇದು ಸಹಾಯ ಮಾಡಲಿದೆ ಎಂದು ನಿರೀಕ್ಷಿಸಲಾಗಿತ್ತು.
ಮೆಟಾದ ಹೊಸ ಉತ್ಪನ್ನ ಪ್ರಯೋಗ (NPE) ತಂಡವು ದಂಪತಿ ಹಾಗೂ ಜೋಡಿಗಳನ್ನು ಕೇಂದ್ರೀಕರಿಸಿ ಈ ವಿಶೇಷ ಆ್ಯಪ್ ಅನ್ನು ಪರಿಚಯಿಸಿತ್ತು. 2020 ರಿಂದ ಆ್ಯಪ್ ಚಾಲ್ತಿಯಲ್ಲಿದ್ದರೂ ಅತೀ ಹೆಚ್ಚು ಇಂಟರ್ನೆಟ್ ಬಳಕೆದಾರರನ್ನು ಹೊಂದಿರುವ ಭಾರತದಲ್ಲಿ ಈ ಅಪ್ಲಿಕೇಶನ್ ಜನಪ್ರಿಯವಾಗಿರಲಿಲ್ಲ ಎಂಬುದೇ ಇಲ್ಲಿ ವಿಶೇಷ.
ಇದೀಗ ಈ ಅಪ್ಲಿಕೇಶನ್ ಅನ್ನು ಸ್ಥಗಿತಗೊಳಿಸಲು ಮೆಟಾ ಕಂಪೆನಿ ಮುಂದಾಗಿದ್ದು, ಹೀಗಾಗಿ ಟ್ಯೂನ್ಡ್ ಬಳಕೆದಾರರಿಗೆ ಸೆಪ್ಟೆಂಬರ್ 19 ರ ಮೊದಲು ತಮ್ಮ ಡೇಟಾವನ್ನು ಡೌನ್‌ಲೋಡ್ ಮಾಡಿಟ್ಟುಕೊಳ್ಳುವಂತೆ ತಿಳಿಸಲಾಗಿದೆ. ಹೀಗಾಗಿ ಸೆ.19 ರ ಬಳಿಕ ಟ್ಯೂನ್ಡ್ ತನ್ನ ಕಾರ್ಯವನ್ನು ಸ್ಥಗಿತಗೊಳಿಸಲಿದೆ ಎಂದು ದಿ ವರ್ಜ್ ವರದಿ ಮಾಡಿದೆ.
9 ಮಿಲಿಯನ್ ಬಳಕೆದಾರರು:
ಟೆಕ್ಕ್ರಂಚ್ ಸೆನ್ಸಾರ್ ಟವರ್ ಡೇಟಾ ಪ್ರಕಾರ, ಟ್ಯೂನ್ಡ್ ಆ್ಯಪ್ ಅನ್ನು Android ಮತ್ತು iOS ನಲ್ಲಿ ಸುಮಾರು 900,000 ಮಂದಿ ಡೌನ್‌ಲೋಡ್ ಮಾಡಿದ್ದಾರೆ. ಅದರಲ್ಲೂ ವಿದೇಶಗಳಲ್ಲಿ ಈ ಆ್ಯಪ್ ಜನಪ್ರಿಯತೆ ಪಡೆಯುತ್ತಾ ಬಂದಿತ್ತು. ಆದರೀಗ ದಿಢೀರಣೆ ಸ್ಥಗಿತಗೊಳಿಸಲು ಮುಂದಾಗುತ್ತಿರುವುದು ಬಳಕೆದಾರರ ಅಚ್ಚರಿಗೆ ಕಾರಣವಾಗಿದೆ. ಇದಾಗ್ಯೂ ಇಂತಹದೊಂದು ನಿರ್ಧಾರಕ್ಕೆ ಕಾರಣವೇನು ಎಂಬುದಕ್ಕೆ ಮೆಟಾ ಕಂಪೆನಿ ಸ್ಪಷ್ಟನೆ ನೀಡಿಲ್ಲ. ಇಲ್ಲಿ ಕುತೂಹಲಕಾರಿ ವಿಷಯೆಂದರೆ, ಇದೀಗ ಟ್ಯೂನ್ಡ್ ಸ್ಥಗಿತಗೊಳ್ಳಲಿದೆ ಎಂಬ ಸುದ್ದಿಯ ಮೂಲಕ ಈ ಆ್ಯಪ್ ವಿಶ್ವದಾದ್ಯಂತ ಸೋಷಿಯಲ್ ಮೀಡಿಯಾ ಪ್ರಿಯರ ಗಮನ ಸೆಳೆದಿದೆ.